Homeಕರ್ನಾಟಕದಾವಣಗೆರೆ ಲೋಕಸಭಾ ಕ್ಷೇತ್ರ: ಚುನಾವಣಾ ಕಣದಲ್ಲಿ ’ಜಿ.ಮಲ್ಲಿಕಾರ್ಜುನಪ್ಪ- ಶಾಮನೂರು ಶಿವಶಂಕರಪ್ಪ’ ಕುಟುಂಬದ ಮಹಿಳಾ ಅಭ್ಯರ್ಥಿಗಳು; ’ಕುಟುಂಬ...

ದಾವಣಗೆರೆ ಲೋಕಸಭಾ ಕ್ಷೇತ್ರ: ಚುನಾವಣಾ ಕಣದಲ್ಲಿ ’ಜಿ.ಮಲ್ಲಿಕಾರ್ಜುನಪ್ಪ- ಶಾಮನೂರು ಶಿವಶಂಕರಪ್ಪ’ ಕುಟುಂಬದ ಮಹಿಳಾ ಅಭ್ಯರ್ಥಿಗಳು; ’ಕುಟುಂಬ ರಾಜಕಾರಣದ’ದ ವಿರುದ್ಧ ಬಂಡಾಯ ಸಾರಿದ ’ಕೈ’ ಬಂಡಾಯ ಅಭ್ಯರ್ಥಿ ವಿನಯ್ ಕುಮಾರ್

- Advertisement -
- Advertisement -

1991ರವರೆಗೂ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ನಂತರ ಬಿಜೆಪಿ ಅಲ್ಲಿ ನೆಲೆಯೂರಿ ಹಿಡಿತ ಸಾಧಿಸಿದೆ. 1996ರ ಸಾರ್ವತ್ರಿಕ ಚುನಾವಣೆಯ ನಂತರ ಕೇಸರಿ ಪಕ್ಷವು ಇಲ್ಲಿನ ತನ್ನ ಬಿಗಿ ಹಿಡಿತವನ್ನು ಸಡಿಲಗೊಳಿಸಿಲ್ಲ. ಮಾಜಿ ಸಂಸದ, ದಿವಂಗತ ಜಿ. ಮಲ್ಲಿಕಾರ್ಜುನಪ್ಪ ಅವರು 1996 ಮತ್ತು 1999ರಲ್ಲಿ ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾಗುವ ಮೂಲಕ ಇಡೀ ಕ್ಷೇತ್ರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು.

ಮಲ್ಲಿಕಾರ್ಜುನಪ್ಪನವರ ನಿಧನಾನಂತರ, ಪುತ್ರ ಜಿ.ಎಂ. ಸಿದ್ದೇಶ್ವರ ಅವರು 2004ರಿಂದ ನಾಲ್ಕು ಅವಧಿಗೆ, ಅಂದರೆ 2019ರ ಚುನಾವಣೆವರೆಗೂ ಬಿಜೆಪಿಯಿಂದ ನಿಂತು ನಿರಂತರವಾಗಿ ಗೆದ್ದಿದ್ದಾರೆ. 1996ರ ಲೋಕಸಭೆ ಚುನಾವಣೆಯ ನಂತರ, ಬಿಜೆಪಿಯ ಭದ್ರ ಕೋಟೆಯಾಗಿರುವ ದಾವಣಗೆರೆಯಲ್ಲಿ, ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷಕ್ಕೆ ಬಿಜೆಪಿಯನ್ನು ಸೋಲಿಸಲು ಸಾಧ್ಯವಾಗಿಲ್ಲ. ಆದರೆ, 2014ರ ಲೋಕಸಭಾ ಚುನಾವಣೆಯಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಸಿದ್ದೇಶ್ವರ್‌ಗೆ ಸೋಲಿನ ಭೀತಿ ಮೂಡಿಸಿದ್ದರು. ಕೇವಲ 17,607 ಮತಗಳ ಕಡಿಮೆ ಅಂತರದಲ್ಲಿ ಸಿದ್ದೇಶ್ವರ್ ಗೆಲುವಿನ ದಡ ಮುಟ್ಟಿದ್ದರು.

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ದಾವಣಗೆರೆ ಈ ಬಾರಿ ಭಾರೀ ಕುತೂಹಲ ಮೂಡಿಸಿದೆ. ಏಕೆಂದರೆ, ಪರಸ್ಪರ ಸಂಬಂಧಿಗಳೂ ಆಗಿರುವ ದಿವಂಗತ ಜಿ.ಮಲ್ಲಿಕಾರ್ಜುನಪ್ಪ ಮತ್ತು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಕುಟುಂಬಗಳ ಮಹಿಳಾ ಅಭ್ಯರ್ಥಿಗಳು ಚುನಾವಣಾ ಕಣಕ್ಕೆ ಇಳಿದಿದ್ದಾರೆ.

ವೃತ್ತಿಯಲ್ಲಿ ವೈದ್ಯರಾಗಿರುವ, ಶಾಸಕ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಹಾಲಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರೆ, ಹಾಲಿ ಸಂಸದ ಜಿಎಂ ಸಿದ್ದೇಶ್ವರ್ ಅವರ ಪತ್ನಿ ಗಾಯಿತ್ರಿ ಸಿದ್ದೇಶ್ವರ್ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಜತೆಗೆ, ಈ ಇಬ್ಬರೂ ಅಭ್ಯರ್ಥಿಗಳು ಉತ್ತರ ಕರ್ನಾಟಕದ ಪ್ರಬಲ ಲಿಂಗಾಯತ ಸಮುದಾಯದವರಾಗಿದ್ದಾರೆ. ಮತ್ತೊಂದೆಡೆ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಯುವ ರಾಜಕಾರಣಿ ವಿನಯ್ ಕುಮಾರ್ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ವಿನಯ್ ಕುರುಬ ಸಮುದಾಯಕ್ಕೆ ಸೇರಿದ್ದು, ಹಿಂದುಳಿದ ಜಾತಿಗಳ ಮತಗಳು ವಿಭಜನೆಯಾಗುವ ಆತಂಕವನ್ನು ಕಾಂಗ್ರೆಸ್ ನಾಯಕರು ಎದುರಿಸುತ್ತಿದ್ದಾರೆ.

ಯಾರ ಹಿಡಿತದಲ್ಲಿದೆ ಕ್ಷೇತ್ರ?

ಹಲವು ದಶಕಗಳಿಂದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪ್ರಭಾವ ಇದ್ದರೂ, ಇಡೀ ದಾವಣಗೆರೆ ಜಿಲ್ಲೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ರಾಜಕೀಯವಾಗಿ ಸಾಕಷ್ಟು ಹಿಡಿತ ಇಟ್ಟುಕೊಂಡಿದ್ದಾರೆ ಎನ್ನುತ್ತಾರೆ ಸ್ಥಳೀಯರು. ದಾವಣಗೆರೆಯಲ್ಲಿ ಹಲವು ಉದ್ಯಮಗಳನ್ನು ಸ್ಥಾಪಿಸುವ ಮೂಲಕ ಉದ್ಯೋಗ ಸೃಷ್ಟಿಗೆ ಕಾರಣವಾಗಿರುವ ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆ, ಕಲ್ಯಾಣಮಂಟಪಗಳ ಮೂಲಕ ಜನರಿಗೆ ನೆರವಾಗುತ್ತಿರುವ ಈ ಹಿರಿಯ ಕಾಂಗ್ರೆಸ್ ನಾಯಕ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿದ್ದಾರೆ. ಹತ್ತಿರದ ಸಂಬಂಧಿ ಎನ್ನುವ ಕಾರಣಕ್ಕೆ ಸಿದ್ದೇಶ್ವರ್ ಗೆಲುವಿಗೆ ಶಾಮನೂರು ಕುಟುಂಬ ಈ ಹಿಂದೆ ಹಲವು ಬಾರಿ ಶ್ರಮಿಸಿದೆ ಎಂಬ ಮಾತುಗಳು ಕೂಡ ಕ್ಷೇತ್ರದಲ್ಲಿ ಕೇಳಿಬರುತ್ತವೆ.

ಶಾಮನೂರು ಶಿವಶಂಕರಪ್ಪ

ಶಾಮನೂರು ಕುಟಂಬದ ಪರೋಕ್ಷ ಬೆಂಬಲ ಹಾಗೂ ’ಮೋದಿ ಅಲೆ’ಯ ಕಾರಣದಿಂದ ನಾಲ್ಕು ಅವಧಿಗೆ ಸಂಸದರಾಗಿರುವ ಸಿದ್ದೇಶ್ವರ್‌ಗೆ ಈ ಬಾರಿ ಬಿಜೆಪಿ ಹೈಕಮಾಂಡ್ ಟಿಕೆಟ್ ನಿರಾಕರಿಸಿರುವುದು, ಅವರ ರಾಜಕೀಯ ಪ್ರಭಾವ ಕಡಿಮೆ ಆಗಿದೆ ಎನ್ನುವುದಕ್ಕೆ ಸಾಕ್ಷಿ ಎನ್ನಲಾಗುತ್ತಿದ್ದು, ಅಂತಿಮವಾಗಿ ಗಾಯಿತ್ರಿ ಸಿದ್ದೇಶ್ವರ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿರುವ, ಕಾಂಗ್ರೆಸ್ ಹಿರಿಯ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರು ಲಿಂಗಾಯತ ಸಮುದಾಯದಲ್ಲಿ ಸಾಕಷ್ಟು ಪ್ರಭಾವಿ ನಾಯಕ. ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ ಈಗ ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಮಲ್ಲಿಕಾರ್ಜುನ ಅವರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಈ ಬಾರಿ ಕಾಂಗ್ರೆಸ್ ಕಣಕ್ಕಿಳಿಸಿದ್ದು, ಅವರು ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಆದರೆ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಯುವ ರಾಜಕಾರಣಿ ವಿನಯ್ ಕುಮಾರ್ ಸ್ಪರ್ಧೆ ಪ್ರಭಾ ಅವರ ಸುಲಭ ಗೆಲುವಿಗೆ ಅಡ್ಡಿಯಾಗುವ ಸಾಧ್ಯತೆ ದಟ್ಟವಾಗಿದೆ ಎನ್ನುತ್ತಾರೆ ಸ್ಥಳೀಯರು.

ಪ್ರಭಾ ಮಲ್ಲಿಕಾರ್ಜುನ್ ಅವರು ದಂತ ವೈದ್ಯರಾಗಿದ್ದು, ಎಸ್‌ಎಸ್ ಕೇರ್ ಟ್ರಸ್ಟ್‌ನ ಟ್ರಸ್ಟಿಯಾಗಿದ್ದಾರೆ. ಜೊತೆಗೆ, ಬಾಪೂಜಿ ಎಜುಕೇಷನಲ್ ಅಸೋಸಿಯೇಶನ್‌ನ ಆಡಳಿತ ಮಂಡಳಿಯ ಸದಸ್ಯೆ ಆಗಿದ್ದಾರೆ. ಅವರ ಪ್ರತಿಸ್ಪರ್ಧಿ ಗಾಯತ್ರಿ ಅವರು ಪಿಯುಸಿ ಓದಿದ್ದಾರೆ.

ಯಾರು ಈ ವಿನಯ್ ಕುಮಾರ್?

ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಔಟ್ ರೀಚ್ ವಿಭಾಗದ ರಾಜ್ಯ ಉಪಾಧ್ಯಕ್ಷ ಜಿ.ಬಿ. ವಿನಯ್ ಕುಮಾರ್, ಈ ಹಿಂದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಗಿದ್ದವರು.

ಜೆನೆಟಿಕ್ಸ್‌ನಲ್ಲಿ ಪದವಿ ಪೂರ್ಣಗೊಳಿಸಿದ ನಂತರ, ಅವರು ಐಎಎಸ್ ಅಧಿಕಾರಿಯಾಗಲು ನಿರ್ಧರಿಸಿದ್ದರು. ಮೈಸೂರಿನಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಮಾಡುತ್ತಿದ್ದ ಕೆಲಸಕ್ಕೆ ರಾಜೀನಾಮೆ ನೀಡಿ, ಯುಪಿಎಸ್‌ಸಿ ತಯಾರಿ ನಡೆಸುತ್ತಿರುವವರಿಗೆ ನೆರವಾಗಲು ಇನ್‌ಸೈಟ್ಸ್ ಐಎಎಸ್ ತರಬೇತಿ ಅಕಾಡೆಮಿ ತೆರೆದಿದ್ದಾರೆ. ಜತೆಗೆ, ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ಅವರು, ದಾವಣಗೆರೆ ಲೋಕಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಇದೀಗ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅವರಿಗೆ ಚುನಾವಣಾ ಆಯೋಗ ಗ್ಯಾಸ್ ಸಿಲಿಂಡರ್ ಗುರುತು ನೀಡಿದೆ.

ಜಿ.ಬಿ. ವಿನಯ್ ಕುಮಾರ್

ಕಾಂಗ್ರೆಸ್ ವಿರುದ್ಧದ ತಮ್ಮ ಬಂಡಾಯದ ಕುರಿತು ಮಾತನಾಡಿರುವ ಅವರು, “ನನ್ನದು ಪಾಳೇಗಾರಿಕೆ, ಕುಟುಂಬ ರಾಜಕಾರಣದ ವಿರುದ್ಧ ಹೋರಾಟ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರೇ ಹೇಳಿರುವಂತೆ ಅವರ ಪತ್ನಿಗೆ ಒಲ್ಲದ ಮನಸ್ಸಿನ ಟಿಕೆಟ್ ಸಿಕ್ಕಿದೆ. ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿ ಚುನಾವಣೆ ಎದುರಿಸುತ್ತೇವೆ ಎಂದಿರುವ ಸಚಿವರು, ನನಗೆ ಟಿಕೆಟ್ ಕೊಡಿಸಲಿ” ಎಂದು ಹೇಳಿದ್ದರು.

ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತು ಕುರುಬ ಸಮುದಾಯದ ಮುಖಂಡರು, ಸ್ವಾಮೀಜಿಗಳು ಮನವೊಲಿಸಿದರೂ ವಿನಯ್ ಕುಮಾರ್ ಮಾತ್ರ ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಕಾಂಗ್ರೆಸ್‌ನಿಂದ ’ಬಿ ಫಾರಂ’ ಸಿಕ್ಕೇ ಸಿಗುತ್ತದೆ ಎಂದು ಕೊನೆಕ್ಷಣದವರೆಗೂ ಕಾದಿದ್ದ ಅವರು, ಇದೀಗ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ ಅವರಿಗೆ ವಿನಯ್ ಕುಮಾರ್ ಬಂಡಾಯ ಹೊರತುಪಡಿಸಿದರೆ, ಬೇರೆಯಾವ ಅಡೆತಡೆಗಳೂ ಮೇಲ್ನೋಟಕ್ಕೆ ಕಾಣಿಸುತ್ತಿಲ್ಲ. ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಶಾಸಕರಿದ್ದು, ಅವರ ಪತಿ ಮಲ್ಲಿಕಾರ್ಜುನ ರಾಜ್ಯ ಸರ್ಕಾರದಲ್ಲಿ ಸಚಿವರಾಗಿರುವುದು ಗೆಲುವಿಗೆ ಸಹಕಾರಿಯಾಗಲಿದೆ ಎನ್ನಲಾಗುತ್ತಿದೆ.

ಕಾಂಗ್ರೆಸ್ಸಿಗೆ ಹಿನ್ನಡೆ ಆಗುವ ಅಂಶಗಳೇನು?

ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರರಲ್ಲಿ ಕಾಂಗ್ರೆಸ್ ಶಾಸಕರು ಸೇರಿದಂತೆ ಹರಪನಹಳ್ಳಿಯ ಪಕ್ಷೇತರ ಶಾಸಕಿ ಲತಾ ಮಲ್ಲಿಕಾರ್ಜುನ್ ಅವರ ಬೆಂಬಲ ಪಕ್ಷಕ್ಕಿದ್ದರೂ ಕಾಂಗ್ರೆಸ್‌ಗೆ ಗೆಲುವು ಸುಲಭವೇನಲ್ಲ ಎನ್ನುವ ಪರಿಸ್ಥಿತಿಯಿದೆ. ವಿನಯ್ ಕುಮಾರ್ ಬಂಡಾಯ ಸ್ಪರ್ಧೆಯ ಜತೆಗೆ, ಜಾತಿ ಗಣತಿಯ ಕುರಿತು ಶಾಮನೂರು ಶಿವಶಂಕರಪ್ಪ ಅವರ ವಿವಾದಾತ್ಮಕ ಹೇಳಿಕೆಗಳು ಕಾಂಗ್ರೆಸ್‌ಗೆ ಹಿನ್ನಡೆ ಉಂಟು ಮಾಡಲಿದೆ ಎನ್ನಲಾಗುತ್ತಿದೆ.

ರಾಜ್ಯದ ಅಹಿಂದ ಜಾತಿಗಳ ಬಹು ವರ್ಷಗಳ ಬೇಡಿಕೆಯಾಗಿರುವ ಜಾತಿ ಸಮೀಕ್ಷೆಯನ್ನು (ಕಾಂತರಾಜು ಆಯೋಗದ ವರದಿ) ಶಾಮನೂರು ಶಿವಶಂಕರಪ್ಪ ಬಹಿರಂಗವಾಗಿ ವಿರೋಧಿಸಿದ್ದಾರೆ. ಅವರ ಈ ಹೇಳಿಕೆಯು ಅಲ್ಪಸಂಖ್ಯಾತ, ದಲಿತ ಮತ್ತು ಹಿಂದುಳಿದ ಜಾತಿಗಳ ನಾಯಕರಲ್ಲಿ ಆಕ್ರೋಶ ಹುಟ್ಟುಹಾಕಿದ್ದು, ಚುನಾವಣೆಗೂ ಮೊದಲು ಅಹಿಂದ ನಾಯಕರನ್ನು ಶಾಮನೂರು ಕುಟುಂಬ ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳಲಿದೆ ಎಂಬುದು ಮುಖ್ಯವಾಗಲಿದೆ. ಇಲ್ಲದಿದ್ದರೆ, ಹಿಂದುಳಿದ ಸಮುದಾಯದ ಮತಗಳು ವಿನಯ್ ಕುಮಾರ್ ಅವರಿಗೆ ಚಲಾವಣೆಯಾಗಿ ಮತ ವಿಭಜನೆಯಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಬಿಜೆಪಿಯಲ್ಲಿ ಬಂಡಾಯ; ಸೋಲಿನ ಭೀತಿಯಲ್ಲಿ ಸಿದ್ದೇಶ್ವರ್

ಈ ಕ್ಷೇತ್ರದ ಮಟ್ಟಿಗೆ ಬಿಜೆಪಿಯಲ್ಲಿಯೂ ಅಸಮಾಧಾನ ಕಡಿಮೆ ಏನಿಲ್ಲ; ಮಾಜಿ ಸಚಿವರಾದ ಎಂ.ಪಿ. ರೇಣುಕಾಚಾರ್ಯ, ಎಸ್.ಎ. ರವೀಂದ್ರನಾಥ್, ಹಿರಿಯ ಮುಖಂಡ ಮಾಡಾಳ್ ವಿರೂಪಾಕ್ಷಪ್ಪ ಅವರು ಗಾಯತ್ರಿ ಸಿದ್ದೇಶ್ವರ್ ಅವರಿಗೆ ಟಿಕೆಟ್ ನೀಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕೊನೆ ಕ್ಷಣದವರೆಗೂ ಅಭ್ಯರ್ಥಿಯನ್ನು ಬದಲಾಯಿಸುವಂತೆ ಪಕ್ಷವನ್ನು ಒತ್ತಾಯಿಸಿದ್ದಾರೆ. ಅಲ್ಲದೆ ಜಿಲ್ಲೆಯ ಹಲವು ಪ್ರಮುಖ ಬಿಜೆಪಿ ನಾಯಕರು ಸಹ ಗಾಯತ್ರಿ ಸಿದ್ದೇಶ್ವರ್ ಅವರನ್ನು ವಿರೋಧಿಸುತ್ತಿರುವುದು ಸಿದ್ದೇಶ್ವರ್ ಸೋಲಿನ ಭೀತಿಗೆ ಕಾರಣವಾಗಿದೆ. ಕ್ಷೇತ್ರದ ಮಾಜಿ ಶಾಸಕರು, ಬಿಜೆಪಿಯ ಪ್ರಮುಖ ನಾಯಕರು ಗಾಯಿತ್ರಿ ಪರವಾಗಿ ಪ್ರಚಾರ ನಡೆಸದೆ ತಟಸ್ಥವಾಗಿ ಉಳಿದಿದ್ದಾರೆ.

ಇದನ್ನೂ ಓದಿ: ಅಮಿತ್‌ ಶಾ ಸ್ಪರ್ಧಿಸುವ ಗಾಂಧಿನಗರದಲ್ಲಿ ಸ್ಪರ್ಧಿಸದಂತೆ ಅಭ್ಯರ್ಥಿಗಳಿಗೆ ಬಿಜೆಪಿ ನಾಯಕರು ಮತ್ತು ಪೊಲೀಸರಿಂದ ಬೆದರಿಕೆ?

ಮತ್ತೊಂದು ಕಡೆ, ಕಾಂಗ್ರೆಸ್ ಕೂಡ ಈ ಬಾರಿ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿಗೆ ತೀವ್ರ ಪೈಪೋಟಿ ನೀಡಲು ನಿರ್ಧರಿಸಿದೆ. 2019ರಲ್ಲಿ ಜಿ.ಎಂ. ಸಿದ್ದೇಶ್ವರ್ ಅವರು 1.69 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, 20141ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ವಿರುದ್ಧ ಕೇವಲ 17,607 ಮತಗಳಿಂದ ಗೆದ್ದಿದ್ದರು. ಇದೀಗ ಡಾ. ಪ್ರಭಾ ಕಣಕ್ಕಿಳಿದಿರುವುದರಿಂದ ಬಿಜೆಪಿ ಗೆಲುವು ಅಷ್ಟು ಸುಲಭವಲ್ಲ ಎಂಬ ಮಾತುಗಳು ಸ್ಥಳೀಯವಾಗಿ ಕೆಳಿಬರುತ್ತಿವೆ.

ಜಿ.ಎಂ. ಸಿದ್ದೇಶ್ವರ

ಸಿದ್ದೇಶ್ವರ್ ವಿರುದ್ಧ ಆಡಳಿತ ವಿರೋಧಿ ಅಲೆಯೂ ಜೋರಾಗಿದೆ. ಇದೇ ಕಾರಣಕ್ಕೆ ಬಿಜೆಪಿ ಹೈಕಮಾಂಡ್ ಅವರಿಗೆ ಟಿಕೆಟ್ ನಿರಾಕರಿಸಿದೆ. ಕ್ಷೇತ್ರದ ಜನಗಳ ಪ್ರಮುಖ ಬೇಡಿಕೆಯಾದ ವಿಮಾನ ನಿಲ್ದಾಣ ಸ್ಥಾಪನೆ ಮತ್ತು ಉದ್ಯೋಗ ಸೃಷ್ಟಿಗೆ ಸಂಸದರು ಒತ್ತು ನೀಡಿಲ್ಲ ಎಂಬ ಸಿಟ್ಟು ಇಲ್ಲಿನ ಜನರಿಗಿದೆ.

’ವಿಮಾನ ನಿಲ್ದಾಣ ಮಂಜೂರು ಮಾಡಿಸಿ, ಜಿಲ್ಲೆಯಲ್ಲಿ ಸಾಫ್ಟ್‌ವೇರ್ ಪಾರ್ಕ್‌ಅನ್ನು ವಿಸ್ತರಿಸಬೇಕು’ ಎಂದು ಮತದಾರರು ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದಾರೆ. ಜತೆಗೆ, ಕ್ಷೇತ್ರದಲ್ಲಿ ವಿಶೇಷ ಆರ್ಥಿಕ ವಲಯಗಳನ್ನು ರಚಿಸಬೇಕು, ಆರೋಗ್ಯ ಸೌಲಭ್ಯಗಳನ್ನು ಸುಧಾರಿಸಬೇಕು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು ಎಂಬ ಪ್ರಮುಖ ಬೇಡಿಕೆಗಳಿಗೆ ಸಿದ್ದೇಶ್ವರ್ ಸ್ಪಂದಿಸದೇ ಇರುವುದು ಅವರ ಸೋಲಿನ ಭೀತಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಯಾರಿಗೆ ಮೇಲುಗೈ?

ದಾವಣಗೆರೆ ಲೋಕಸಭಾ ಕ್ಷೇತ್ರವು ಜಗಳೂರು, ಹರಪನಹಳ್ಳಿ, ಹರಿಹರ, ದಾವಣಗೆರೆ ದಕ್ಷಿಣ, ದಾವಣಗೆರೆ ಉತ್ತರ, ಮಾಯಕೊಂಡ, ಚನ್ನಗಿರಿ ಮತ್ತು ಹೊನ್ನಾಳಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. 2018ರಲ್ಲಿ ಬಿಜೆಪಿಯಿಂದ ಗೆದ್ದಿದ್ದ ಹಲವರು, 2023ರ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಹರಿಹರ ವಿಧಾನಸಭಾ ಕ್ಷೇತ್ರ ಬಿಟ್ಟರೆ, ಉಳಿದೆಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಕ್ಷೇತ್ರದ ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ, ಶಾಮನೂರು ಕುಟುಂಬದ ರಾಜಕೀಯ ಪ್ರಭಾವ ಮತ್ತು ಐದು ಗ್ಯಾರಂಟಿಗಳು ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಬಹುದು ಎನ್ನಲಾಗುತ್ತಿದೆ.

ಹಿಂದಿನ ಫಲಿತಾಂಶಗಳು

2019ರ ಲೋಕಸಭಾ ಚುನಾವಣೆಯಲ್ಲಿ, ದಾವಣಗೆರೆಯನ್ನು ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) ಜಿಎಂ ಸಿದ್ದೇಶ್ವರ್ ಅವರು 6,52,996 ಮತಗಳನ್ನು ಪಡೆಯುವ ಮೂಲಕ (ಶೇ.54.66) ಗೆಲುವನ್ನು ತಮ್ಮದಾಗಿಸಿಕೊಂಡಿದ್ದರು. ಕಾಂಗ್ರೆಸ್‌ನ ಎಚ್‌ಬಿ ಮಂಜಪ್ಪ ಅವರು 4,83,294 ಅಂದರೆ 40.46% ಮತದಾನದೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿದ್ದರು. ಒಟ್ಟು 11,95,225 ಮತಗಳು, ಅಂದರೆ ಶೇ.73.19ರಷ್ಟು ಮತದಾನವಾಗಿತ್ತು. ಈ ಚುನಾವಣೆಯಲ್ಲಿ ಶಾಮನೂರು ಕುಟುಂಬದ ಸದಸ್ಯರು ಸ್ಪರ್ಧೆ ಮಾಡಲು ನಿರಾಕರಿಸಿದ್ದರು.

ಎಸ್.ಎಸ್. ಮಲ್ಲಿಕಾರ್ಜುನ್

2014ರ ಚುನಾವಣೆಯಲ್ಲಿ ಸಿದ್ದೇಶ್ವರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್.ಎಸ್. ಮಲ್ಲಿಕಾರ್ಜುನ ಸ್ಪರ್ಧಿಸಿದ್ದರು. ಒಟ್ಟು 11,14,868 ಮತಗಳು ಚಲಾವಣೆ ಆಗಿದ್ದವು. ಅದರಲ್ಲಿ ಬಿಜೆಪಿಯ ಸಿದ್ದೇಶ್ವರ್ 5,18,894 ಮತಗಳನ್ನು ಪಡೆದರೆ, ಎಸ್.ಎಸ್ ಮಲ್ಲಿಕಾರ್ಜುನ ಅವರು 5,01,287 ಮತಗಳನ್ನು ತಮ್ಮದಾಗಿಕೊಂಡಿದ್ದರು. ಆ ಮೂಲಕ, ಬಿಜೆಪಿ ಅಭ್ಯರ್ಥಿಗೆ ತೀವ್ರ ಪೈಪೋಟಿ ನೀಡಿದ್ದರು. 2014ರ ಚುನಾವಣೆಯಲ್ಲಿ 46,911 ಮತಗಳನ್ನು ಪಡೆದುಕೊಂಡಿದ್ದ ಮಹಿಮಾ ಪಟೇಲ್ ಜೆಡಿಯುನಿಂದ ಸ್ಪರ್ಧೆ ಮಾಡದೇ ಇದ್ದಿದ್ದರೆ, ಮಲ್ಲಿಕಾರ್ಜುನ್ ಗೆಲುವು ಸುಲಭ ಆಗುತ್ತಿತ್ತು ಎನ್ನುತ್ತಾರೆ ಚುನಾವಣಾ ತಜ್ಞರು.

ಯಾವ ಪಕ್ಷಕ್ಕೆ ಎಷ್ಟು ಬಾರಿ ಗೆಲುವು?

ದಾವಣಗೆರೆ ಲೋಕಸಭಾ ಕ್ಷೇತ್ರದ 12 ಚುನಾವಣೆಯ ಪೈಕಿ 6 ಬಾರಿ ಕಾಂಗ್ರೆಸ್ ಹಾಗೂ 6 ಬಾರಿ ಬಿಜೆಪಿ ಜಯಗಳಿಸಿದೆ. 9 ಬಾರಿ ಲಿಂಗಾಯತ ಹಾಗೂ 3 ಬಾರಿ ಕುರುಬ ಸಮುದಾಯದ ನಾಯಕರು ಕ್ಷೇತ್ರದಲ್ಲಿ ಸಂಸದರಾಗಿ ಆಯ್ಕೆಯಾಗಿದ್ದು. ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಜಿ.ಮಲ್ಲಿಕಾರ್ಜುನಪ್ಪ ಮತ್ತು ಅವರ ನಿಧನಾನಂತರ ಜಿಎಂ ಸಿದ್ದೇಶ್ವರ ಹೆಚ್ಚು ಅವಧಿಗೆ ಸಂಸದರಾಗಿದ್ದಾರೆ.

ಜಾತಿ ಲೆಕ್ಕಾಚಾರ ಹೇಗಿದೆ?

ಕ್ಷೇತ್ರದಲ್ಲಿ 16 ಲಕ್ಷಕ್ಕೂ ಹೆಚ್ಚಿನ ಮತದಾರರಿದ್ದು, ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಲಿಂಗಾಯತ ಸಮುದಾಯವೇ ಅತಿಹೆಚ್ಚು ಜನಸಂಖ್ಯೆ ಹೊಂದಿದ್ದು ನಿರ್ಣಾಯಕವೆನಿಸಿದೆ. ಆರು ಲಕ್ಷ ಲಿಂಗಾಯತ, ಮೂರು ಲಕ್ಷ ಪರಿಶಿಷ್ಟ ಜಾತಿ, ಎರಡು ಲಕ್ಷ ಪರಿಶಿಷ್ಟ ಪಂಗಡ, ಒಂದೂವರೆ ಲಕ್ಷದಷ್ಟು ಅಲ್ಪಸಂಖ್ಯಾತ, ಒಂದು ಲಕ್ಷ ಎಪ್ಪತ್ತು ಸಾವಿರದಷ್ಟು ಕುರುಬ ಮತದಾರರಿದ್ದು, ಮರಾಠ, ವಿಶ್ವಕರ್ಮ, ನೇಕಾರ ಸೇರಿದಂತೆ ಹಿಂದುಳಿದ ವರ್ಗಗಳ ಎರಡು ಲಕ್ಷಕ್ಕೂ ಹೆಚ್ಚು ಮತದಾರರು ಇದ್ದಾರೆ.

ಕ್ಷೇತ್ರದ ಇತಿಹಾಸ ಮತ್ತು ವೈಶಿಷ್ಟ್ಯ

ಭೌಗೋಳಿಕವಾಗಿ ಸಾಕಷ್ಟು ಭಿನ್ನತೆ ಇರುವ ದಾವಣಗೆರೆಯು, ಕರ್ನಾಟಕ ಮಧ್ಯಭಾಗದಲ್ಲಿದೆ. ಜಗಳೂರು, ದಾವಣಗೆರೆ, ಹರಿಹರ, ಮಾಯಕೊಂಡ, ಚನ್ನಗಿರಿ, ಹೊನ್ನಾಳಿ ತಾಲೂಕುಗಳ ಜತೆಗೆ ವಿಜಯನಗರ ಜಿಲ್ಲೆಯ ಹರಪನಹಳ್ಳಿಯೂ ಇದೇ ಕ್ಷೇತ್ರಕ್ಕೆ ಸೇರುತ್ತದೆ. ಆಹಾರ ಸಂಸ್ಕೃತಿ, ಭಾಷಾ ಶೈಲಿ ಮತ್ತು ಕೃಷಿಯಲ್ಲಿ ಸಾಕಷ್ಟು ವೈವಿಧ್ಯತೆ ಇರುವ ಪ್ರದೇಶವಿದು.

1997ರಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್, ದಾವಣಗೆರೆಯನ್ನು ಸ್ವತಂತ್ರ ಜಿಲ್ಲೆಯಾಗಿ ಘೋಷಣೆ ಮಾಡಿದರು. ಇದಕ್ಕೂ ಮೊದಲು ದಾವಣಗೆರೆಯು ಚಿತ್ರದುರ್ಗ ಜಿಲ್ಲೆಯ ತಾಲ್ಲೂಕುಗಳಲ್ಲೊಂದಾಗಿತ್ತು. ದಾವಣಗೆರೆ ಜಿಲ್ಲೆಯು ಸದ್ಯ ಐದು ತಾಲ್ಲೂಕುಗಳಿಂದ ಕೂಡಿದ್ದು ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಡುತ್ತದೆ.

ಹಳೆ ಕುಂದವಾಡ ಕೆರೆಯು ನಗರದ ಜನರಿಗೆ ಅತ್ಯಂತ ಆಪ್ತ ಸ್ಥಳವಾಗಿದೆ. ಶಾಂತಿಸಾಗರ, ಕೊಂಡಜ್ಜಿಯ ಅರಣ್ಯಧಾಮ, ಪುರಾತನ ಬಾಗಳಿ ಕಲ್ಲೇಶ್ವರ ದೇವಾಲಯ, ನೀಲಗುಂದದ ಭೀಮೇಶ್ವರ ದೇವಾಲಯಗಳು, ಹರಿಹರದ ತುಂಗಭದ್ರೆ ಮತ್ತು ಪುರಾತನ ಹರಿಹರೇಶ್ವರ ದೇವಾಲಯ, ಉಕ್ಕಡಗಾತ್ರಿ ಕರಿಬಸವೇಶ್ವರ ಅಜ್ಜಯ್ಯ ದೇವಾಲಯ, ನಂದಿಗುಡಿಯ ಹಿಂದಿನ ಕಾಲದ ವೃಷಭಮಠ, ಸಂತೇಬೆನ್ನೂರಿನ ಪುರಾತನ ಪುಷ್ಕರಿಣಿ, ದೊಡ್ಡಬಾತಿ ಪವಿತ್ರವನ, ಆನೆಕೊಂಡದ ಪುರಾತನ ಬಸವೇಶ್ವರ ಹಾಗು ಈಶ್ವರ ದೇವಾಲಯಗಳು ಆಕರ್ಷಣೀಯ ಸ್ಥಳಗಳು.

ತುಂಗಭದ್ರ ನದಿ ಹೊನ್ನಾಳಿ ತಾಲ್ಲೂಕಿನಲ್ಲಿ ಹಾದುಹೋಗುತ್ತದೆ ಮತ್ತು ನಂತರ ಪಶ್ಚಿಮದಲ್ಲಿ ಹರಿಹರ ಮತ್ತು ಹರಪನಹಳ್ಳಿ ಗಡಿಗಳಲ್ಲಿ ನೈಸರ್ಗಿಕ ಗಡಿಗಳನ್ನು ರೂಪಿಸುತ್ತದೆ. ಇದು ಇಂದು ಜಿಲ್ಲೆಯಲ್ಲಿ ಬಹುತೇಕ ಕುಡಿಯುವ ನೀರಿನ ಮತ್ತು ರೈತರ ನೀರಾವರಿ ಮೂಲವಾಗಿದೆ. ದಾವಣಗೆರೆ ಮತ್ತು ಹರಿಹರ ಪಟ್ಟಣಗಳ ಮೂಲಕ ವಿಶಾಲವಾದ ರೈಲು ಮಾರ್ಗ ಹಾದುಹೋಗುತ್ತವೆ.

80ರ ದಶಕದಲ್ಲಿ ಕಾರ್ಮಿಕ ಸಂಘಟನೆಯ ಹೋರಾಟಗಳು ಇಲ್ಲಿ ಭದ್ರವಾಗಿ ಬೇರೂರಿದ್ದು, 80-90ರ ದಶಕದಲ್ಲಿ ಕಾರ್ಮಿಕರ ಮುಖಂಡರುಗಳು ರಾಜಕೀಯ ಪ್ರವೇಶ ಮಾಡಿ ಶಾಸಕರಾಗಿ, ನಗರಸಭೆ ಆಡಳಿತದಲ್ಲಿ ಬಿಗಿ ಹಿಡಿತ ಸಾಧಿಸಿದ್ದು ವಿಶೇಷವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...