Homeಮುಖಪುಟರೋಹಿತ್ ವೇಮುಲಾ ಪ್ರಕರಣ: ಪೊಲೀಸರ ವರದಿ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ; ಪ್ರತಿಕ್ರಿಯಿಸಿದ ಕುಟುಂಬ

ರೋಹಿತ್ ವೇಮುಲಾ ಪ್ರಕರಣ: ಪೊಲೀಸರ ವರದಿ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ; ಪ್ರತಿಕ್ರಿಯಿಸಿದ ಕುಟುಂಬ

- Advertisement -
- Advertisement -

ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಪೊಲೀಸರು ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ. ಇದಲ್ಲದೆ ವರದಿಯಲ್ಲಿ ರೋಹಿತ್‌ ವೇಮುಲಾ ‘ದಲಿತ ಅಲ್ಲ’, ತನ್ನ “ನಿಜವಾದ ಜಾತಿಯ ಗುರುತು” ಪತ್ತೆಯಾಗುತ್ತದೆ ಎಂದು ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಊಹಿಸಲಾಗಿದೆ ಎಂದು ಉಲ್ಲೇಖಿಸಲಾಗಿತ್ತು. ವರದಿಯನ್ನು ಮೇ.3ರಂದು ತೆಲಂಗಾಣ ಹೈಕೋರ್ಟ್‌ಗೆ ಸಲ್ಲಿಸಲಾಗಿದೆ. ಇದರ ಬೆನ್ನಲ್ಲಿ ಪ್ರಕರಣದ ಮರುತನಿಖೆಗೆ ಕೋರಿ ರೋಹಿತ್ ವೇಮುಲಾ ತಾಯಿ ರಾಧಿಕಾ ವೇಮುಲಾ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿಯನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದ್ದಾರೆ. ವರದಿಯ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.

ಈ ಮುಚ್ಚುವಿಕೆಯ ವರದಿಯು ಸುಳ್ಳಿನಿಂದ ಕೂಡಿದೆ ಮತ್ತು ಇದನ್ನು ಕಾನೂನುಬದ್ಧವಾಗಿ ಎದುರಿಸುತ್ತೇವೆ ಎಂದು ರೋಹಿತ್‌ ವೇಮುಲಾ ಕುಟುಂಬ ಹೇಳಿದೆ. ಇದಲ್ಲದೆ ಈ ಕುರಿತು ಹೆಚ್ಚಿನ ತನಿಖೆಗಾಗಿ ಕುಟುಂಬವು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಮುಂದಾಗಿದೆ.

ರೋಹಿತ್ ಅವರ ಸಹೋದರ ರಾಜಾ ವೇಮುಲ ಈ ಬಗ್ಗೆ ಮಾತನಾಡಿದ್ದು, ಇದು ಅತ್ಯಂತ ಆಘಾತಕಾರಿಯಾಗಿದೆ. ಅವರ ಸಂಶೋಧನೆಗಳಿಂದ ನಾವೆಲ್ಲಾ ಎದೆಗುಂದಿದ್ದೇವೆ, ಕುಟುಂಬದ ಎಸ್‌ಸಿ ಸ್ಥಾನಮಾನದ ಬಗ್ಗೆ ಜಿಲ್ಲಾಧಿಕಾರಿ ನಿರ್ಧರಿಸಬೇಕು ಮತ್ತು ಈ ವಿಷಯದ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುತ್ತೇವೆ. ಕೆಳ ನ್ಯಾಯಾಲಯದಲ್ಲಿ ಆಕ್ಷೇಪಣೆ ಅರ್ಜಿ ಸಲ್ಲಿಸಲು ತೆಲಂಗಾಣ ಹೈಕೋರ್ಟ್ ಅನುಮತಿ ನೀಡಿದೆ. ಮುಚ್ಚುವಿಕೆಯ ವರದಿಯು “ಸುಳ್ಳಿನಿಂದ ತುಂಬಿದೆ”, ಆತ್ಮಹತ್ಯೆಯ ಹಿಂದಿನ ಕಾರಣಗಳನ್ನು ತನಿಖೆ ಮಾಡುವ ಬದಲು, ಪೊಲೀಸರು ಅವರು ದಲಿತರಲ್ಲ ಎಂದು ಪ್ರಮಾಣೀಕರಿಸುವ ಮೂಲಕ ಪ್ರಕರಣವನ್ನು ಮುಕ್ತಾಯಗೊಳಿಸಿದೆ ಎಂದು ಹೇಳಿದ್ದಾರೆ.

2016ರಲ್ಲಿ ‘ಜಸ್ಟೀಸ್ ಫಾರ್ ವೇಮುಲಾ’ ಅಭಿಯಾನಕ್ಕೆ ಕಾಂಗ್ರೆಸ್ ಬೆಂಬಲ ನೀಡಿತ್ತು.  ಆತ್ಮಹತ್ಯೆಯ ನಂತರ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ನಮ್ಮ ಹೋರಾಟವನ್ನು ಬೆಂಬಲಿಸಿತು ಮತ್ತು ನ್ಯಾಯ ಸಿಗುವವರೆಗೂ ನಮ್ಮ ಬೆಂಬಲಕ್ಕೆ ನಿಲ್ಲುವುದಾಗಿ ಭರವಸೆ ನೀಡಿತು. ಆದರೆ ಅವರ ಪಕ್ಷವು ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದ ನಾಲ್ಕು ತಿಂಗಳೊಳಗೆ, ಪೊಲೀಸರು ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ. ಇದು ಅತ್ಯಂತ ಆಘಾತಕಾರಿಯಾಗಿದೆ ಎಂದು ರಾಜಾ ಹೇಳಿದ್ದಾರೆ.

2016ರಲ್ಲಿ ಸೈಬರಾಬಾದ್ ಪೊಲೀಸರು ರೋಹಿತ್‌ ವೇಮುಲಾ ಜಾತಿ ವಿವರಗಳನ್ನು ಕೋರಿ ಗುಂಟೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ತರುವಾಯ, ಜಿಲ್ಲಾಧಿಕಾರಿಗಳು ಜಾತಿ ಸ್ಥಿತಿಯ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (ಡಿಎಸ್ಎಲ್ಎ) ಸಮಿತಿಗೆ ಸೂಚಿಸಿದ್ದರು. 2017 ರಲ್ಲಿ ಅವರ ವರದಿಯನ್ನು ಆಧರಿಸಿ, ಜಿಲ್ಲಾಧಿಕಾರಿಗಳು ತಮ್ಮ ವಾದವನ್ನು ಮಂಡಿಸಲು ಕುಟುಂಬಕ್ಕೆ ಸಮನ್ಸ್ ನೀಡಿದ್ದರು. ನಮ್ಮ ಕುಟುಂಬ ಸದಸ್ಯರು ಮತ್ತು ಸ್ಥಳೀಯರು ಸೇರಿದಂತೆ ಸುಮಾರು 15 ಜನರು ಅಂದಿನ ಕಲೆಕ್ಟರ್ ಮುಂದೆ ಹಾಜರಾಗಿದ್ದರು. ಅವರು ಎರಡು ದಿನಗಳ ಕಾಲ ಸುಮಾರು 15 ಗಂಟೆಗಳ ಕಾಲ ನಮ್ಮ ಎಲ್ಲಾ ಹೇಳಿಕೆಗಳನ್ನು ದಾಖಲಿಸಿದರು. ನಂತರ ವರದಿಯನ್ನು ಪರಿಶೀಲನಾ ಸಮಿತಿಗೆ ನೀಡಲಾಯಿತು. ಅಲ್ಲಿ ಅದು ಇನ್ನೂ ಬಾಕಿ ಉಳಿದಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಅಂತಿಮ ವರದಿ ನೀಡದೆ, ಅವರು ಎಸ್‌ಸಿ ಅಲ್ಲ ಎಂದು ಹೇಳಿ ಪೊಲೀಸರು ಪ್ರಕರಣವನ್ನು ಹೇಗೆ ಮುಚ್ಚುತ್ತಾರೆ ಎಂದು ರಾಜಾ ಪ್ರಶ್ನಿಸಿದ್ದಾರೆ.

ರೋಹಿತ್ ವೇಮುಲಾ ಅವರ ಕುಟುಂಬದವರು ವ್ಯಕ್ತಪಡಿಸಿದ ಅನುಮಾನಗಳನ್ನು ಉಲ್ಲೇಖಿಸಿ ತೆಲಂಗಾಣ ಪೊಲೀಸ್ ಮಹಾನಿರ್ದೇಶಕ ರವಿ ಗುಪ್ತಾ ಹೇಳಿಕೆಯನ್ನು ನೀಡಿದ್ದು, ಮುಂದಿನ ತನಿಖೆಗೆ ಅನುಮತಿ ನೀಡುವಂತೆ ಮ್ಯಾಜಿಸ್ಟ್ರೇಟ್‌ಗೆ ಮನವಿ ಮಾಡಿ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಕರಣದ ತನಿಖಾಧಿಕಾರಿ ಮಾದಾಪುರದ ಸಹಾಯಕ ಪೊಲೀಸ್ ಆಯುಕ್ತರಾಗಿದ್ದು, ಕಳೆದ ನವೆಂಬರ್ 2023ರ ಮೊದಲು ಪ್ರಕರಣದ ಅಂತಿಮ ಮುಕ್ತಾಯ ವರದಿಯನ್ನು ಅವರು ನಡೆಸಿದ್ದ ತನಿಖೆಯ ಆಧಾರದ ಮೇಲೆ ಸಿದ್ಧಪಡಿಸಿದ್ದಾರೆ ಎಂದು ಡಿಜಿಪಿ ಹೇಳಿದ್ದಾರೆ.

ಇದನ್ನು ಓದಿ: ರೋಹಿತ್‌ ವೇಮುಲಾ ಪ್ರಕರಣ ಮರುತನಿಖೆ ನಡೆಸುವಂತೆ ತೆಲಂಗಾಣ ಸಿಎಂಗೆ ಭೇಟಿ ಮಾಡಿದ ರಾಧಿಕಾ ವೇಮುಲಾ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read