Homeಮುಖಪುಟಬಿಹಾರ ರಾಜಕೀಯ: ನಿತೀಶ್ ಹೊಸ ಪಟ್ಟು; ದೆಹಲಿ ರಾಜಕೀಯದಲ್ಲಿ ಬೀಸುವುದೇ ಹೊಸ ಗಾಳಿ?

ಬಿಹಾರ ರಾಜಕೀಯ: ನಿತೀಶ್ ಹೊಸ ಪಟ್ಟು; ದೆಹಲಿ ರಾಜಕೀಯದಲ್ಲಿ ಬೀಸುವುದೇ ಹೊಸ ಗಾಳಿ?

- Advertisement -
- Advertisement -

ಬಿಹಾರದ ರಾಜಕೀಯ ಮತ್ತೊಮ್ಮೆ ನಾಟಕೀಯ ತಿರುವು ಪಡೆದುಕೊಂಡಿದೆ. ಬಿಜೆಪಿಯೊಂದಿಗೆ ಮತ್ತೊಮ್ಮೆ ಸಂಬಂಧ ಹರಿದುಕೊಂಡ ನಿತೀಶ್ ಕುಮಾರ್ ಎನ್‌ಡಿಎ ಮೈತ್ರಿಕೂಟದಿಂದ ಹೊರಬಿದ್ದು ಮಹಾಘಟಬಂಧನ್ ಮೈತ್ರಿಕೂಟಕ್ಕೆ ಹಾರಿದ್ದಾರೆ. ರಾಷ್ಟ್ರೀಯ ಜನತಾದಳ, ಕಾಂಗ್ರೆಸ್ ಹಾಗೂ ಇನ್ನಿತರ ಪಕ್ಷಗಳ ಜೊತೆ ಸೇರಿ ಹೊಸದಾಗಿ ಸರ್ಕಾರ ರಚಿಸಿದ್ದಾರೆ. ಈ ಹೊಸ ಮೈತ್ರಿಕೂಟದಲ್ಲೂ ಮುಖ್ಯಮಂತ್ರಿ ಹುದ್ದೆಯನ್ನು ಪಡೆದುಕೊಳ್ಳುವಲ್ಲಿ ನಿತೀಶ್ ಯಶಸ್ವಿಯಾಗಿದ್ದಾರೆ. ನಿನ್ನೆಮೊನ್ನೆಯವರೆಗೆ ಅಧಿಕಾರದಲ್ಲಿದ್ದ ಬಿಜೆಪಿ ರಾತ್ರೋರಾತ್ರಿ ಕುರ್ಚಿ ಕಳೆದುಕೊಂಡು ದಿಗ್ಭ್ರಮೆಯಲ್ಲಿದೆ.

ಬಿಹಾರದ ಈಗಿನ ನಾಟಕೀಯ ರಾಜಕಾರಣದಲ್ಲಿ ಕೆಲವು ವಿಶೇಷ ಅಂಶಗಳಿವೆ. ಮೊದಲನೆಯದು ನಿತೀಶ್ ನಡೆಸಿದ ಕ್ಷಿಪ್ರ ಕಾರ್ಯಾಚರಣೆ. ಸಾಮಾನ್ಯವಾಗಿ ಇಂತಹ ರಾಜಕೀಯ ನಾಟಕದ ಘಟನಾವಳಿ ವಾರ, ತಿಂಗಳುಗಳ ಕಾಲ ನಡೆದು ಸುದ್ದಿ ಮಾಧ್ಯಮಗಳಿಗೆ ಭರ್ಜರಿ ಟಿಆರ್‌ಪಿ ಸೃಷ್ಟಿಸುತ್ತಿತ್ತು. ಮೊನ್ನೆಮೊನ್ನೆ ಮಹಾರಾಷ್ಟ್ರದಲ್ಲಿ ಬಿಜೆಪಿ ನಡೆಸಿದ ರಾಜಕೀಯ ನಾಟಕದ ದೃಶ್ಯಾವಳಿಗಳು ಗೋವಾದಿಂದ ಹಿಡಿದು ಅಸ್ಸಾಂವರೆಗೂ ವಾರಾನುಗಟ್ಟಲೆ ಎಳೆದಾಡಿದ್ದನ್ನು ಕಂಡಿದ್ದೇವೆ. ಕರ್ನಾಟಕದ ಕಾಂಗ್ರೆಸ್ಜೆಡಿಎಸ್ ಮೈತ್ರಿ ಸರ್ಕಾರ ಬೀಳಿಸಿದಾಗಲೂ ಮುಂಬೈನ ರೆಸಾರ್ಟ್‌ಗಳಲ್ಲಿ ರಂಗಿನ ರಾಜಕೀಯದ ಧಾರಾವಾಹಿಯೇ ನಡೆದಿತ್ತು.

ಆದರೆ ನಿತೀಶ್ ನಡೆಸಿದ್ದು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಕಾರ್ಯಾಚರಣೆ. ಆಗಸ್ಟ್ 9ನೇ ತಾರೀಕು ನಿತೀಶ್ ಕುಮಾರ್ ದಿಢೀರ್ ರಾಜೀನಾಮೆ ನೀಡಿ ತಮ್ಮ ಸಚಿವ ಸಂಪುಟವನ್ನೇ ಬರ್ಕಾಸ್ತು ಮಾಡಿಬಿಟ್ಟರು. ಅಷ್ಟೇ ವೇಗದಲ್ಲಿ ಆರ್‌ಜೆಡಿ, ಕಾಂಗ್ರೆಸ್, ಕಮ್ಯುನಿಸ್ಟ್ ಇನ್ನಿತರ ಪಕ್ಷಗಳ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿ ಮರುದಿನವೇ ನಿತೀಶ್ ಮುಖ್ಯಮಂತ್ರಿಯಾಗಿ ಹಾಗೂ ಆರ್‌ಜೆಡಿಯ ತೇಜಸ್ವಿ ಯಾದವ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದೀಗ 31 ಮಂದಿಯ ಸಚಿವ ಸಂಪುಟವನ್ನೂ ರಚಿಸಿದ್ದಾರೆ. ಎಲ್ಲವೂ ಶರವೇಗದಲ್ಲಿ ನಡೆದುಹೋಗಿದೆ.

ತರಹೇವಾರಿ ರಾಜಕೀಯ ಪಕ್ಷಗಳು ಹಾಗೂ ನಾನಾ ರಾಜಕೀಯ ಸಮೀಕರಣಗಳಿರುವ ಬಿಹಾರದಲ್ಲಿ ಈಗ ರಚಿತವಾಗಿರುವ ನಿತೀಶ್ ಸರ್ಕಾರ ಹಿಂದೆಂದಿಗಿಂತಲೂ ಹೆಚ್ಚು ಮಜಬೂತಾಗಿದೆ ಎಂಬುದು ಮತ್ತೊಂದು ವಿಶೇಷ. ಒಟ್ಟು 243 ಸದಸ್ಯರಿರುವ ವಿಧಾನಸಭೆಯಲ್ಲಿ ಹಿಂದಿನ ಬಿಜೆಪಿ-ಜೆಡಿಯು ಒಳಗೊಂಡ ಮೈತ್ರಿಕೂಟ ಸರ್ಕಾರಕ್ಕೆ 125 ಶಾಸಕರ ಬೆಂಬಲವಿತ್ತು. ಈಗಿನ ಸರ್ಕಾರ ಒಟ್ಟು 164 ಶಾಸಕರ ಬೆಂಬಲ ಪಡೆದು ಮತ್ತಷ್ಟು ಸದೃಢ-ವಾಗಿದೆ. ಆರ್‌ಜೆಡಿ – 79, ಜೆಡಿಯು – 45, ಕಾಂಗ್ರೆಸ್ – 19, ಸಿಪಿಐ(ಎಂಎಲ್) – 12, ಸಿಪಿಐ ಮತ್ತು ಸಿಪಿಐ(ಎಂ) ತಲಾ 2, ಎಚ್‌ಎಎಂ – 4 ಹಾಗೂ ಒಬ್ಬರು ಪಕ್ಷೇತರರು ಎಲ್ಲರೂ ಒಟ್ಟುಗೂಡಿದ್ದಾರೆ. ಈ ಹಿಂದೆ ಎನ್‌ಡಿಎ ಮೈತ್ರಿಕೂಟದಲ್ಲಿದ್ದ ಎಚ್‌ಎಎಮ್ ಪಕ್ಷ ಕೂಡ ಮಹಾಘಟಬಂಧನ ಮೈತ್ರಿಕೂಟ ಸೇರಿಕೊಂಡಿರುವುದು ಮತ್ತೊಂದು ವಿಶೇಷ.

ಮೋದಿ ಮತ್ತು ಶಾ ಕ್ರೊನಾಲಜಿಎದ್ದು ಕಾಣುತ್ತಿರುವ ಮತ್ತೊಂದು ಅಂಶವೆಂದರೆ ವಿರೋಧ ಪಕ್ಷದ ಸ್ಥಾನದಲ್ಲಿ ಈಗ ಉಳಿದಿರುವುದು ಮತೀಯ ರಾಜಕಾರಣ ಮಾಡುವ ಪಕ್ಷಗಳು ಮಾತ್ರ. ‘ಹಿಂದುತ್ವ’ ಅನ್ನೋ ಹೆಸರಿನಲ್ಲಿ 77 ಸದಸ್ಯ ಬಲ ಹೊಂದಿರುವ ಬಿಜೆಪಿ ಮತ್ತು ಮುಸ್ಲಿಮರ ಉದ್ಧಾರದ ಹೆಸರಿನಲ್ಲಿ ಒಬ್ಬನೇ ಸದಸ್ಯನನ್ನು ಹೊಂದಿರುವ ಎಐಎಂಐಎಂ ಪಕ್ಷಗಳು ಮಾತ್ರ. ತೀರಾ ಇತ್ತೀಚಿನ ತಿಂಗಳುಗಳಲ್ಲಿ ಎಐಎಂಐಎಂನ 4 ಶಾಸಕರು ಆರ್‌ಜೆಡಿಯೊಂದಿಗೆ ವಿಲೀನವಾಗಿದ್ದಾರೆ. ಉಳಿದ ಎಲ್ಲರೂ ಈಗ ಆಡಳಿತಾರೂಢ ಸರ್ಕಾರವನ್ನು ಬೆಂಬಲಿಸಿದ್ದಾರೆ.

ಆದರೆ ಅಪರಿಮಿತ ಹಣಕಾಸು ಬಲ, ಯಾರೂ ಊಹಿಸಲಿಕ್ಕಾಗದ ಹುನ್ನಾರ ಷಡ್ಯಂತ್ರಗಳಲ್ಲಿ ನಿಸ್ಸೀಮರಾಗಿರುವ ಮೋದಿ-ಶಾ ಜೋಡಿ ಸುಲಭಕ್ಕೆ ಸೋಲು ಒಪ್ಪಿ ಕೂರುವವರಲ್ಲ. ಸಂವಿಧಾನಿಕ ಸಂಸ್ಥೆಗಳನ್ನು ಬಗಲಲ್ಲಿ ಇಟ್ಟುಕೊಂಡಿರುವ ಬಿಜೆಪಿಯ ದಾಳಿಯನ್ನು ಎದುರಿಸಿಯೂ ಹೊಸ ಸರ್ಕಾರ ದಡ ಮುಟ್ಟುತ್ತದೆಯೇ ಎಂಬುದನ್ನು ಕಾದು ನೋಡಬೇಕು. ಇಡಿ, ಸಿಬಿಐ, ಐಟಿ ಮೊದಲಾದ ಕೇಂದ್ರ ತನಿಖಾ ಏಜೆನ್ಸಿಗಳು ಲಾಲೂ ಕುಟುಂಬದ ಕಡತಗಳನ್ನು ತಡಕಾಡುತ್ತಿವೆಯಂತೆ. ಏನಾದರೊಂದು ಕುಂಟು ಕಾರಣ ಸಿಕ್ಕ ಕೂಡಲೆ ಬಿಹಾರದಲ್ಲಿ ಬಿಡಾರ ಹೂಡಲಿವೆ ಎಂಬ ರಾಜಕೀಯ ವದಂತಿ ದಟ್ಟವಾಗಿದೆ.

ನಿತೀಶ್ ಸಾಗಿ ಬಂದ ಹಾದಿ

2020ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗಿಂತ ಕಡಿಮೆ ಸೀಟುಗಳನ್ನು ಪಡೆದು ನಿತೀಶ್ ತೀವ್ರ ಮುಖಭಂಗ ಎದುರಿಸಿದ್ದರು. 2015ರಲ್ಲಿ 71 ಸೀಟು ಗೆದ್ದಿದ್ದ ಜೆ.ಡಿ.ಯು 2020ರಲ್ಲಿ 43ಕ್ಕೆ ಕುಸಿದಿತ್ತು. ನಿತೀಶ್ ಅವರಿಂದ ಹಿರಿಯಣ್ಣನ ಸ್ಥಾನವನ್ನು ಕಿತ್ತುಕೊಂಡಿದ್ದ ಬಿಜೆಪಿ ಹಂತಹಂತವಾಗಿ ಅವರ ಕೈಕಾಲುಗಳನ್ನು ಕಟ್ಟಿ ಹಾಕಿದ್ದು ಈಗ ಇತಿಹಾಸ. ಹೆಚ್ಚು ಸೀಟುಗಳನ್ನು ಗೆದ್ದಿರುವ ತನಗೇ ಮುಖ್ಯಮಂತ್ರಿ ಸ್ಥಾನ ದಕ್ಕಬೇಕೆಂದು ಬಿಜೆಪಿಯು ನಿತೀಶ್ ಮೇಲೆ ಹಲವು ಬಗೆಗಳಲ್ಲಿ ಒತ್ತಡ ಹೇರುತ್ತಾ ತನ್ನ ರಾಜಕೀಯ ದಾಳಗಳನ್ನು ಉರುಳಿಸುತ್ತಲೇ ಇತ್ತು.

ಮಹಾರಾಷ್ಟ್ರದಲ್ಲಿ ಶಿವಸೇನೆ ಕೂಡ ಒಂದು ಕಾಲದಲ್ಲಿ ಬಿಜೆಪಿ ಮೈತ್ರಿಕೂಟದ ದೊಡ್ಡಣ್ಣನ ಸ್ಥಾನದಲ್ಲಿತ್ತು. ಆದರೆ ನಿತೀಶ್ ಅವರನ್ನು ಕತ್ತರಿಸಿದಂತೆ ಸೇನೆಯನ್ನೂ ಕತ್ತರಿಸಿ ಮಹಾರಾಷ್ಟ್ರದಲ್ಲಿ ದೊಡ್ಡಣ್ಣನ ಸ್ಥಾನದಲ್ಲಿ ಬಿಜೆಪಿ ಕುಳಿತಿದೆ. ಈ ಹಂಚಿಕೆಯ ವಿರುದ್ಧ ಬಂಡೆದ್ದ ಸೇನೆ ಕಾಂಗ್ರೆಸ್-ಎನ್.ಸಿ.ಪಿ. ಜೊತೆ ಕೈಜೋಡಿಸಿ ಸರ್ಕಾರ ರಚಿಸಿ ಬಿಜೆಪಿಗೆ ಸೆಡ್ಡುಹೊಡೆದಿತ್ತು. ಇಡಿ, ಐಟಿಗಳನ್ನು ತನ್ನ ಆಯುಧಗಳಂತೆ ಬಳಸುತ್ತಾ ಸಮಯ ಕಾಯುತ್ತಿದ್ದ ಬಿಜೆಪಿ, ಶಿವಸೇನೆಯನ್ನು ಒಡೆದು ಉದ್ಧವ ಠಾಕ್ರೆ ಅವರಿಗೆ ‘ಪಾಠ’ ಕಲಿಸಿದೆ. ಇಂತಹುದೇ ಷಡ್ಯಂತ್ರದ ಆಟ ಇಂದಲ್ಲ ನಾಳೆ ಬಿಹಾರದಲ್ಲೂ ಅನಾವರಣ ಆಗುವುದೆಂಬ ಖಚಿತ ಸುಳಿವನ್ನು ಗ್ರಹಿಸುವುದು ನಿತೀಶ್ ಅವರಂತಹ ಪಳಗಿದ ರಾಜಕಾರಣಿಗೆ ಕಷ್ಟವೇನೂ ಆಗಿರಲಿಲ್ಲ.

ಇಂಥ ಸ್ಪಷ್ಟ ಸಂದೇಶ ಬಹಳ ಹಿಂದೆಯೇ ನಿತೀಶ್‌ಗೆ ರವಾನಿಸಿ ಆಗಿತ್ತು. ನಿತೀಶ್ ಅವರೊಂದಿಗೆ ಸಮಾಲೋಚಿಸದೆಯೇ ಜೆಡಿಯು ಪಕ್ಷದ ಆರ್.ಸಿ.ಪಿ. ಸಿಂಗ್ ಅವರನ್ನು ಕೇಂದ್ರ ಮಂತ್ರಿಮಂಡಲಕ್ಕೆ ಸೇರಿಸಿಕೊಂಡಾಗಲೇ ನಿತೀಶ್‌ಗೆ ಬಿಜೆಪಿಯ ಮುಂದಿನ ಆಟದ ಅರಿವಾಗಿತ್ತು. ಶಿವಸೇನೆಯಲ್ಲಿ ಶಿಂಧೆ ಅವರನ್ನು ಉದ್ಧವ್ ವಿರುದ್ಧ ಎತ್ತಿಕಟ್ಟಿ ಆ ಪಕ್ಷವನ್ನು ಒಡೆದಂತೆಯೇ ಸಿಂಗ್ ಅವರನ್ನು ನಿತೀಶ್ ವಿರುದ್ಧ ಎತ್ತಿಕಟ್ಟಿ ಸಂಯುಕ್ತ ಜನತಾದಳವನ್ನು ಹೋಳು ಮಾಡುವ ಯೋಜನೆಯೊಂದು ಸಿದ್ಧಗೊಂಡಿದೆಯೆಂದು ರಾಜಕೀಯ ವಲಯದಲ್ಲಿ ಕೆಲವು ತಿಂಗಳುಗಳಿಂದಲೇ ವದಂತಿ ಹರಿದಾಡುತ್ತಿತ್ತು. ಜೆಡಿಯು ವತಿಯಿಂದ ರಾಜ್ಯಸಭಾ ಸದಸ್ಯರಾಗಿದ್ದರೂ ಬಿಜೆಪಿಯ ಪರ ಬ್ಯಾಟಿಂಗ್‌ನಲ್ಲಿದ್ದ ಸಿಂಗ್ ಅವರಿಗೆ ಮೊನ್ನೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡದೆ ನಿತೀಶ್ ಪ್ರತಿದಾಳ ಉರುಳಿಸಿದ್ದರು. ಕೆಲವು ವಾರಗಳ ಹಿಂದೆ ತಮ್ಮ ಪಕ್ಷದ ಮಂತ್ರಿಗಳಿಗೆ ಮತ್ತು ಶಾಸಕರಿಗೆ ಕೇಂದ್ರದ ಮಂತ್ರಿಯೊಬ್ಬರು ಕೋಟ್ಯಂತರ ರೂಪಾಯಿಗಳ ಆಮಿಷ ಒಡ್ಡಿ ಜೆಡಿಯುಅನ್ನು ಒಡೆಯುವ ಷಡ್ಯಂತ್ರ ರಚಿಸಿದ್ದರೆಂದು ಇದೀಗ ನಿತೀಶ್ ಆರೋಪಿಸಿದ್ದಾರೆ. ಆದರೆ ಅದರ ವಿವರಗಳನ್ನು ಬಹಿರಂಗಪಡಿಸಿಲ್ಲ. ಸೂಕ್ತ ಸಮಯದಲ್ಲಿ ದಾಖಲೆ ಸಮೇತ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಇತ್ತೀಚಿನ ಬಿಹಾರ ಭೇಟಿಯಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಆಘಾತ ಉಂಟು ಮಾಡುವಂತಹ ಹೇಳಿಕೆ ನೀಡಿದ್ದರು. ‘ಸಣ್ಣಪುಟ್ಟ ಪಕ್ಷಗಳೆಲ್ಲಾ ಕ್ರಮೇಣ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತವೆ, ಅಂತಿಮವಾಗಿ ಬಿಜೆಪಿ ಮಾತ್ರ ಉಳಿಯುತ್ತದೆ’ ಎಂಬರ್ಥದ ಮಾತುಗಳನ್ನಾಡಿದ್ದರು. ಈ ಮಾತುಗಳು ನಿತೀಶ್ ಕುಮಾರ್‌ಗೆ ಎಚ್ಚರಿಕೆಯ ಗಂಟೆಯಾಗಿತ್ತು.

ದೇಶದಲ್ಲಿ ಎಲ್ಲೆಡೆ ಬಿಜೆಪಿ ನಡೆಸುತ್ತಿರುವ ರಾಜಕೀಯ ಮಾದರಿಯನ್ನು ಗಮನಿಸಿದರೆ ಈ ಹುನ್ನಾರ ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ. ಆದರೆ ಬಿಜೆಪಿ ಹೆಣೆದಿದ್ದ ತಂತ್ರವನ್ನು ಮುಂದಾಗಿಯೇ ಗ್ರಹಿಸಿದ್ದ ನಿತೀಶ್ ಕೂಡ ಸಾಕಷ್ಟು ಪೂರ್ವ ತಯಾರಿ ನಡೆಸಿದ್ದರು. ಆರು ತಿಂಗಳ ಹಿಂದೆಯೇ ಲಾಲೂ ಕುಟುಂಬದ ಖಾಸಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಕಾಂಗ್ರೆಸ್ ಮತ್ತಿತರ ಪಕ್ಷಗಳ ಜೊತೆಗೂ ತೆರೆಮರೆಯ ಸಂಧಾನ ನಡೆದೇ ಇತ್ತು. ಮೋದಿ-ಶಾ ಜೋಡಿಯ ಮಹಾರಾಷ್ಟ್ರ ಮಾದರಿ ಕಾರ್ಯಾಚರಣೆಗೆ ಟಕ್ಕರ್ ಕೊಟ್ಟು ನಿತೀಶ್ ಮಹಾಘಟಬಂಧನ ಸರ್ಕಾರ ರಚಿಸಿ ಸದ್ಯಕ್ಕೆ ಬೀಸುವ ಕತ್ತಿಗೆ ಗುರಾಣಿ ಹಿಡಿದಿದ್ದಾರೆ. ಅದೇನೋ ಹೇಳ್ತಾರಲ್ಲ, ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಅಂತ.

ಆರ್.ಸಿ.ಪಿ. ಸಿಂಗ್

ಹಾಗೆ ನೋಡಿದರೆ, ಎನ್.ಡಿ.ಎ. ಮೈತ್ರಿಕೂಟದ ಹಿರಿಯಣ್ಣ ನಿತೀಶ್ ರೆಕ್ಕೆಪುಕ್ಕಗಳನ್ನು ಕತ್ತರಿಸುವ ತಂತ್ರಗಳನ್ನು ಬಿಜೆಪಿ 2020ರ ವಿಧಾನಸಭಾ ಚುನಾವಣೆಯಲ್ಲೇ ಕಾರ್ಯಗತಗೊಳಿಸಿತ್ತು. ಚಿರಾಗ್ ಪಾಸ್ವಾನ್ ಅವರ ಲೋಕಜನಶಕ್ತಿಯೊಂದಿಗೆ ಒಳಒಪ್ಪಂದ ಮಾಡಿಕೊಂಡು ಸಂಯುಕ್ತ ಜನತಾದಳಕ್ಕೆ ಮರ್ಮದ ಪೆಟ್ಟು ಕೊಟ್ಟಿತ್ತು. ಲೋಕಜನಶಕ್ತಿ ಪಾರ್ಟಿಯ ಸ್ಪರ್ಧೆಯು ಎರಡಲಗಿನ ಕತ್ತಿಯಂತೆ ಒಂದೆಡೆ ಸಂಯುಕ್ತ ಜನತಾದಳ ಹಾಗೂ ಮತ್ತೊಂದೆಡೆ ರಾಷ್ಟ್ರೀಯ ಜನತಾದಳ ಎರಡೂ ಪಕ್ಷಗಳಿಗೆ ತೀವ್ರ ಪೆಟ್ಟುಕೊಟ್ಟಿತ್ತು. ಪರಿಣಾಮವಾಗಿ 30-35 ಸೀಟುಗಳಲ್ಲಿ ನಿತೀಶ್ ಪಕ್ಷ ಸೋಲುಂಡು 43 ಸ್ಥಾನಗಳಿಗೆ ಕುಸಿದಿತ್ತು. ಬಿಜೆಪಿಯ ಒಳ ಏಟಿಗೆ ತಲೆಬಾಗದೆ ನಿತೀಶ್ ಬಳಿ ಬೇರೆ ದಾರಿಯೇ ಉಳಿದಿರಲಿಲ್ಲ.

ಇನ್ನು ಬಿಜೆಪಿಯ ಷಡ್ಯಂತ್ರದ ದಾಳವಾಗಿದ್ದ ಚಿರಾಗ್ ತಮ್ಮ ಚುನಾವಣಾ ಭವಿಷ್ಯಕ್ಕೇ ಬೆಂಕಿ ಇಟ್ಟುಕೊಂಡಿದ್ದರು. ಅವರಿಗೆ ಒಂದು ಸೀಟೂ ದಕ್ಕಲಿಲ್ಲ. ಆದರೆ ಈ ಸೋಲಿಗೆ ಪರಿಹಾರಾರ್ಥವಾಗಿ ಮೋದಿ-ಶಾ ಜೋಡಿ ಚಿರಾಗ್ ಪಾಸ್ವಾನ್‌ರಿಗೆ ರಾಜಕೀಯ ಪುನರ್ವಸತಿ ಕಲ್ಪಿಸುವ ಆಶ್ವಾಸನೆ ನೀಡಿದ್ದಾರೆ ಎಂಬ ಸುದ್ದಿಯಿದೆ. ಇವೆಲ್ಲ ಒತ್ತಟ್ಟಿಗಿರಲಿ.

ತನ್ನ ಮಿತ್ರಪಕ್ಷಗಳನ್ನು ಭಕ್ಷಿಸಿ ಕಾಲಕ್ರಮೇಣ ಅವುಗಳ ರಾಜಕೀಯ ಆವರಣವನ್ನು ತಾನೇ ಆಕ್ರಮಿಸುವ ಆಕ್ರಮಣಕಾರಿ ರಾಜಕಾರಣ ಬಿಜೆಪಿಯದು. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳು ಈ ಮಾತಿಗೆ ಉದಾಹರಣೆ. ಈಗಿನ ಮೋದಿ-ಶಾ ಹಿಡಿತದಲ್ಲಿರುವ ಬಿಜೆಪಿಯದು ಲವಲೇಶ ಕರುಣೆಯಿಲ್ಲದ ಕಾಠಿಣ್ಯ. 2015ರಲ್ಲಿ ನಿತೀಶ್ ದೂರವಾಗಿ ರಾಷ್ಟ್ರೀಯ ಜನತಾದಳ- ಕಾಂಗ್ರೆಸ್ ಸಖ್ಯ ಬೆಳೆಸಿದಾಗ ಬಿಜೆಪಿ ಶೋಚನೀಯ ಸೋಲನ್ನು ಎದುರಿಸಿತ್ತು. ಅಂದಿನಿಂದಲೇ ನಿತೀಶ್ ಅವರನ್ನು ಹೇಗೋ ತಮ್ಮ ತೆಕ್ಕೆಗೆ ಸೆಳೆದು, ಕ್ರಮೇಣ ಜೆಡಿಯು ಪಕ್ಷವನ್ನು ಭಕ್ಷಿಸಿ ಬಿಹಾರದಲ್ಲಿ ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳುವ ಲೆಕ್ಕಾಚಾರ ಮೋದಿ-ಶಾ ನೇತೃತ್ವದ ಬಿಜೆಪಿಯದು. ಆ ದೂ(ದು)ರಾಲೋಚನೆಯ ಪ್ರಕಾರವೇ ಹಂತಹಂತವಾಗಿ ನಿತೀಶ್ ಶಕ್ತಿಯನ್ನು ಕುಂದಿಸುವ ಆಟ ನಡೆದದ್ದು. ಇತ್ತೀಚೆಗೆ ಉಪರಾಷ್ಟ್ರಪತಿ ಹುದ್ದೆಯ ಆಮಿಷ ಒಡ್ಡಿ ನಿತೀಶ್‌ರನ್ನು ಬಿಹಾರದ ಸಕ್ರಿಯ ರಾಜಕಾರಣದಿಂದ ದೂರ ಮಾಡುವ ಪ್ರಯತ್ನಗಳು ನಡೆದವು. ಆದರೆ ಇಂತಹ ವರಸೆಗಳನ್ನು ಕಂಡುಂಡಿರುವ ಪಳಗಿದ ರಾಜಕಾರಣಿ ನಿತೀಶ್ ಈ ಪ್ರಸ್ತಾಪಕ್ಕೆ ಸೊಪ್ಪು ಹಾಕಲಿಲ್ಲ ಎಂಬುದು ಬೇರೆ ಮಾತು.

ಕಳೆದ ಮೂರು ವರ್ಷಗಳಲ್ಲಿ ಬಿಜೆಪಿಯೊಂದಿಗೆ ಸಂಬಂಧ ಕಡಿಕೊಂಡಿರುವ ಮೂರನೆಯ ಪಕ್ಷ ಜೆ.ಡಿ.(ಯು). ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬಿನ ಶಿರೋಮಣಿ ಅಕಾಲಿದಳ, ಮುಖ್ಯಮಂತ್ರಿ ಹುದ್ದೆ ನೀಡುವ ವಚನ ಭಂಗವಾಗಿದೆಯೆಂದು ಪ್ರತಿಭಟಿಸಿ ಮಹಾರಾಷ್ಟ್ರದ ಶಿವಸೇನೆ ಬಿಜೆಪಿಯಿಂದ ದೂರವಾಗಿದ್ದವು. ಇದೀಗ ನಿತೀಶ್ ಪಕ್ಷದ ಸರದಿ. ಹಾಗೆ ನೋಡಿದರೆ ಈಗ ಎನ್‌ಡಿಎ ಎಂದು ಕರೆಯಬಹುದಾದ ಮೈತ್ರಿಯಲ್ಲಿ ಯಾವೊಂದು ಪ್ರಬಲ ಪ್ರಾದೇಶಿಕ ಪಕ್ಷವೂ ಉಳಿದಿಲ್ಲ. ಏನಿದ್ದರೂ ದನಿಯೆತ್ತಲೂ ಶಕ್ತಿಯಿಲ್ಲದ ಸಣ್ಣಪುಟ್ಟ ಪಕ್ಷಗಳು ಮಾತ್ರ ಉಳಿದುಕೊಂಡಿವೆ ಎಂಬುದು ಬಿಜೆಪಿಯ ಮೈತ್ರಿ ರಾಜಕಾರಣಕ್ಕೆ ಪ್ರಬಲವಾದ ಪೆಟ್ಟು.

ಒಂದು ಕಾಲದಲ್ಲಿ ಮೋದಿ ಮತ್ತು ಬಿಜೆಪಿಯನ್ನು ವಿರೋಧಿಸಿ ವಿರೋಧಿ ಪಾಳಯದಲ್ಲಿದ್ದ ನಿತೀಶ್, ಮೈತ್ರಿ ತೊರೆದು ಪುನಃ ಬಿಜೆಪಿ ಸಖ್ಯಮಾಡಿ ಸರ್ಕಾರ ರಚಿಸಿದ್ದರು. ನಂತರದಲ್ಲಿ 2019ರ ಲೋಕಸಭೆ ಮತ್ತು 2020ರ ವಿಧಾನಸಭೆ ಚುನಾವಣೆಗಳನ್ನು ಎನ್‌ಡಿಎ ಮೈತ್ರಿಯಲ್ಲೇ ಎದುರಿಸಿದ್ದರು. ನಿರ್ದಿಷ್ಟವಾಗಿ 2020ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕೊಟ್ಟ ಒಳಪೆಟ್ಟಿನಿಂದಾಗಿ ಶಕ್ತಿಹೀನರಾಗಿ ಬಿಜೆಪಿಯ ಒತ್ತಡಗಳಿಗೆ ಮಣಿದವರಂತೆ ಕಾಣುತ್ತಿದ್ದರು. ಇದೀಗ ಪುನಃ ಹಳೇ ಗಂಡನ ಪಾದವೇ ಗತಿಯೆಂದು ರಾಷ್ಟ್ರೀಯ ಜನತಾದಳ ಮತ್ತು ಕಾಂಗ್ರೆಸ್ಸನ್ನು ಆಲಿಂಗಿಸಿಕೊಂಡು ಸರ್ಕಾರ ರಚಿಸಿದ್ದಾರೆ. ಈ ರೀತಿಯ ಉಲ್ಟಾಪಲ್ಟಾ ನಡೆಗಳಿಂದ ನಿತೀಶ್ ಕುಮಾರ್ ಅವರ ರಾಜಕೀಯ ವಿಶ್ವಾಸನೀಯತೆಗೆ ದೊಡ್ಡ ಪೆಟ್ಟು ಬಿದ್ದಿರುವುದು ದಿಟ. ನಿತೀಶ್ ಸರ್ಕಾರದ ಪಾಲುದಾರ ಹಾಗೂ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಇವರನ್ನು ‘ಪಲ್ಟು ಚಾಚಾ’ ಎಂತಲೇ ಲೇವಡಿ ಮಾಡುತ್ತಿದ್ದುದು. ಬಹುಶಃ ಕೆಲವಾರು ವರ್ಷಗಳಿಂದ ನಿತೀಶ್ ಅವರ ಹೆಸರನ್ನು ತೇಜಸ್ವಿ ಬಳಸಿಯೇ ಇಲ್ಲವೇನೋ! ಆ ಮಟ್ಟಕ್ಕೆ ‘ಪಲ್ಟು ಚಾಚಾ’ ಎಂಬ ಅಡ್ಡ ಹೆಸರನ್ನು ಜನಜನಿತಗೊಳಿಸಿದ್ದರು. ಆದರೆ ಅದೇ ಪಲ್ಟು ಚಾಚಾನ ಜೊತೆಗೆ ತೇಜಸ್ವಿ ಕೆಲವಾರು ತಿಂಗಳುಗಳಿಂದ, ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ ಉತ್ತರಪ್ರದೇಶದ ಚುನಾವಣೆಯ ಸಂದರ್ಭದಿಂದಲೂ ತೆರೆಮರೆಯ ಮಾತುಕತೆಯಲ್ಲಿ ತೊಡಗಿದ್ದರು ಎಂಬುದು ಗುಟ್ಟೇನೂ ಅಲ್ಲ.

ಚಿರಾಗ್ ಪಾಸ್ವಾನ್‌

ರಾಜಕೀಯದಲ್ಲಿ ಶಾಶ್ವತ ಶತ್ರುಗಳೂ ಇಲ್ಲ, ಮಿತ್ರರೂ ಇಲ್ಲ ಅಂತಾರಲ್ಲಾ ಹಾಗೆ. ಇಲ್ಲಿ ಬಿಜೆಪಿಯ ರಾಕ್ಷಸ ರಾಜಕಾರಣಕ್ಕೆ ಮತ್ತೊಂದು ಇಕ್ಕಟ್ಟಿದೆ. ಇಡಿ, ಐಟಿ, ಸಿಬಿಐ ಆಯುಧಗಳನ್ನು ಯದ್ವಾತದ್ವಾ ಬಳಕೆ ಮಾಡಿದ್ದೇ ಆದಲ್ಲಿ, ವಿಧಾನಸಭೆಯನ್ನು ವಿಸರ್ಜಿಸಿ ಮರುಚುನಾವಣೆಗೆ ಹೋಗುವ ಅಸ್ತ್ರವನ್ನು ಮಹಾಘಟಬಂಧನ್ ರೂಪಿಸಿಕೊಂಡಿದೆ ಎಂಬ ಸುದ್ದಿ ಸೋರಿಕೆಯಾಗಿದೆ. ಒಂದುವೇಳೆ ಈಗಲೇ ಅಕಾಲಿಕ ಚುನಾವಣೆ ಎದುರಾದಲ್ಲಿ, ಸರಿಯಾದ ಸ್ಥಳೀಯ ನಾಯಕತ್ವವೂ ಇಲ್ಲದೇ, ಹೇಳಿಕೊಳ್ಳುವ ಯಾವ ಸಾಧನೆಯೂ ಇಲ್ಲದೆ, ಹಲವು ಜನವಿರೋಧಿ ನೀತಿಗಳ ಕಾರಣಕ್ಕೆ ಆಡಳಿತ ವಿರೋಧಿ ವಾತಾವರಣ ಇರುವುದರಿಂದ ಬಿಜೆಪಿ ನೆಲಕಚ್ಚುವುದು ಖಚಿತ. ಬಿಹಾರದ ರಾಜಕೀಯದ ಸನ್ನಿವೇಶ ಇರುವುದೇ ಹಾಗೆ. ಹೀಗಾಗಿ ಮೋದಿ-ಶಾ-ನಡ್ಡಾಗಳಿಗೆ ಇದು ನುಂಗಲಾರದ ತುತ್ತಾಗಿದೆ. ಕೈಮೀರಿ ಹೋಗಿರುವ ಬಿಹಾರದ ಪ್ರತಿಕೂಲ ಪರಿಸ್ಥಿತಿಯನ್ನು ನಿಭಾಯಿಸಲಾಗದೆ ಪರದಾಡುತ್ತಿರುವ ಬಿಜೆಪಿ-ಆರೆಸ್ಸೆಸ್ ನಾಯಕರು ಸರಣಿ ಸಭೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಯಾವ ರೀತಿಯ ಷಡ್ಯಂತ್ರ ರೂಪಿತವಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ನಿತೀಶ್ ರಾಜಕಾರಣದ ತಳಹದಿ

ಬಿಹಾರ ಚುನಾವಣಾ ರಾಜಕಾರಣದಲ್ಲಿ ಹಿಂದುಳಿದ ವರ್ಗಗಳು ಮತ್ತು ದಲಿತರ ಮತಬ್ಯಾಂಕ್‌ಗಳನ್ನು ವರ್ಷಗಳ ಕಾಲ ಕಟ್ಟಿ ಬೆಳೆಸಿ ಗಟ್ಟಿ ಮಾಡಿಕೊಂಡವರು ನಿತೀಶ್. ರಾಮವಿಲಾಸ ಪಾಸ್ವಾನ್ ಅವರ ಪಾಸ್ವಾನ್ ಸಮುದಾಯದ ಶೇಕಡಾವಾರು ಮತಗಳ ಪ್ರಮಾಣ ಐದನ್ನು ದಾಟುವುದಿಲ್ಲ. ಉಳಿದ ಶೇ.12ರಷ್ಟು ದಲಿತ ಮತಗಳು ಮೂಸಾಹರ, ರವಿದಾಸ್ ಜಾತಿಗಳಲ್ಲಿ ಹಂಚಿಹೋಗಿದ್ದವು. ಅವುಗಳನ್ನು ಒಗ್ಗೂಡಿಸುವ ನಿಚ್ಚಳ ನಾಯಕ ಇರಲಿಲ್ಲ. ಮಹಾದಲಿತ ಎಂಬ ಹೊಸ ಹೆಸರನ್ನು ಚಾಲ್ತಿಗೆ ತಂದರು ನಿತೀಶ್. ಈ ಹೆಸರಿನಡಿ ಅತ್ಯಂತ ದೀನ ದಲಿತರನ್ನು ಸೆಳೆದುಕೊಂಡರು. ಅವರಿಗೆ ಉದ್ಯೋಗಗಳು, ನಿವೇಶನಗಳು, ರೇಡಿಯೋ ಸೆಟ್‌ಗಳು, ವೃದ್ಧರಿಗೆ ಕನ್ನಡಕಗಳನ್ನು ನೀಡಿದರು, ಅವರ ಹಳ್ಳಿಗಳು-ಕೇರಿಗಳಿಗೆ ರಸ್ತೆಗಳು- ಸಭಾಭವನಗಳನ್ನು ನಿರ್ಮಿಸಿ ಒಲಿಸಿಕೊಂಡರು. ಕಳೆದ ಮೂರು ಚುನಾವಣೆಗಳಲ್ಲಿ ಮಹಾದಲಿತರು ನಿತೀಶ್ ಬೆನ್ನಿಗೆ ನಿಂತರು. ಮಹಾದಲಿತರ ಮಾದರಿಯಲ್ಲಿ ಅತ್ಯಂತ ಹಿಂದುಳಿದ ವರ್ಗಗಳ ನಾಮಧೇಯದಡಿ 130 ಹಿಂದುಳಿದ ಜಾತಿಗಳನ್ನು ಒಟ್ಟಿಗೆ ತಂದರು. ಬಿಹಾರದ ಜನಸಂಖ್ಯೆಯಲ್ಲಿ ಇವರ ಶೇಕಡಾವಾರು ಪ್ರಮಾಣ ಶೇ.28-30ರಷ್ಟು ಎಂದು ಅಂದಾಜು ಮಾಡಲಾಗಿದೆ. ನಿಶಾದರು, ಮಂಗಣಿ, ಮಂಡಲ, ಕಹರ್ ಮುಂತಾದ ಜಾತಿಗಳು ಈ ಗುಂಪಿನಲ್ಲಿವೆ. ಮಹಾನ್ ಸಮಾಜವಾದಿ ಕರ್ಪೂರಿ ಠಾಕೂರ್ ಅವರು ಬಿಹಾರದ ಹಿಂದುಳಿದ ವರ್ಗಗಳ ಅತಿ ಎತ್ತರದ ನಾಯಕರಾಗಿದ್ದರು. ಅವರ ನಂತರ ಅದೇ ಬಗೆಯ ಪ್ರಯತ್ನ ಮಾಡಿದವರು ನಿತೀಶ್. ರಾಜ್ಯಾದ್ಯಂತ ಹರಿದು ಹಂಚಿಹೋಗಿರುವ ಈ ಗುಂಪಿನ ಜನರೇ 2014ರ ಲೋಕಸಭಾ ಚುನಾವಣೆಗಳಲ್ಲಿ ನಿತೀಶ್- ಮೋದಿ ಮೈತ್ರಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸಿದ್ದು.

ಈ ಜನರಿಗೆ ವಿದ್ಯಾರ್ಥಿ ವೇತನಗಳು, ಪಂಚಾಯಿತಿ ಸಂಸ್ಥೆಗಳಲ್ಲಿ ಶೇ.20ರಷ್ಟು ಮೀಸಲಾತಿ ಮುಂತಾದ ಸೌಲಭ್ಯಗಳನ್ನು ನಿತೀಶ್ ನೀಡಿದರು.

ಹಾಗೆಯೇ ನಿತೀಶ್ ಒಲಿಸಿಕೊಂಡ ಮೂರನೆಯ ವರ್ಗ ಮಹಿಳಾ ಮತದಾರರದು. ಈ ದಿಸೆಯಲ್ಲಿ ಪಾನನಿಷೇಧ ಜಾರಿ ಮಹಿಳೆಯರಿಗಾಗಿಯೇ ರೂಪಿಸಿದ ಕಲ್ಯಾಣ ಕಾರ್ಯಕ್ರಮಗಳು ಮುಖ್ಯವಾದವು. ಶಾಲಾ ಬಾಲಕಿಯರಿಗೆ ಬೈಸಿಕಲ್ ವಿತರಿಸಿದರು. ಪಂಚಾಯತಿ ಸಂಸ್ಥೆಗಳಲ್ಲಿ ಶೇ.50ರಷ್ಟು ಮೀಸಲನ್ನೂ ಮಹಿಳೆಯರಿಗೆ ಕಲ್ಪಿಸಿದರು. ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಸೀಟುಗಳನ್ನು ಮೀಸಲಿಟ್ಟರು. ಪೊಲೀಸ್ ನೇಮಕದಲ್ಲಿ ಶೇ.35ರಷ್ಟು, ಪ್ರಾಥಮಿಕ ಶಾಲಾ ಶಿಕ್ಷಕರ ಉದ್ಯೋಗಗಳಲ್ಲಿ ಶೇ.50ರಷ್ಟು ಮೀಸಲನ್ನು ಮಹಿಳೆಯರಿಗೆ ಕಲ್ಪಿಸಿದರು.

ಮೋದಿ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಸಾವಿರಾರು ಬಿಹಾರಿ ಯುವಕರು ಬೀದಿಗಿಳಿದು ಅಗ್ನಿಸ್ಪರ್ಶದಲ್ಲಿ ತೊಡಗಿದ್ದು ತೀರಾ ಇತ್ತೀಚಿನ ಇತಿಹಾಸ. ಸೇನೆಯಲ್ಲಿ ಯುವಜನರ ಉದ್ಯೋಗವಕಾಶವನ್ನು ಮೊಟಕುಗೊಳಿಸುವ ಈ ಯೋಜನೆಯನ್ನು ವಾಪಸು ಪಡೆಯುವಂತೆ ಅಂದಿನ ನಿತೀಶ್ ಸರ್ಕಾರ ಕೂಡ ಕೇಂದ್ರವನ್ನು ಅಗ್ರಹಪಡಿಸಿತ್ತು. ಜೆಡಿಯು ಪಕ್ಷ ಹೀಗೆ ಹಲವು ವಿಚಾರಗಳಲ್ಲಿ ಬಿಜೆಪಿಯೊಂದಿಗೆ ಭಿನ್ನಮತ ಹೊಂದಿತ್ತು. ಜನಸಂಖ್ಯಾ ನಿಯಂತ್ರಣ ಕಾಯಿದೆ, ಜಾತಿ ಜನಗಣನೆ, ಬಿಹಾರಕ್ಕೆ ಸಂವಿಧಾನದ ಪ್ರಕಾರ ವಿಶೇಷ ಸ್ಥಾನಮಾನ ನೀಡಿಕೆ ಹಾಗೂ ಅಗ್ನಿಪಥ್ ಯೋಜನೆ ಮೊದಲಾದ ವಿಷಯಗಳಲ್ಲಿ ನಿತೀಶ್ ಸರ್ಕಾರ ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ನೀತಿಗಳನ್ನು ಟೀಕಿಸುತ್ತಾ ಬಂದಿದ್ದನ್ನು ನಾವು ಗಮನಿಸಬಹುದು. ತನ್ನ ರಾಜಕೀಯ ಅಸ್ಮಿತೆಯ ಅಂಶಗಳಿಗೆ ಕೊಡಲಿ ಪೆಟ್ಟುಕೊಡುವಂತ ನೀತಿಗಳನ್ನು ಅನುಸರಿಸುತ್ತಿರುವ ಬಿಜೆಪಿ ಜೊತೆಗೆ ಮುಂದುವರೆಯುವುದು ತನ್ನ ರಾಜಕೀಯ ಭವಿಷ್ಯವನ್ನು ಹಾಳುಗೈಯುತ್ತದೆ ಎಂಬುದು ನಿಚ್ಚಳವಾಗುತ್ತಿದ್ದಂತೆ ‘ಪಲ್ಟು ಚಾಚಾ’ ಮತ್ತೊಮ್ಮೆ ಪಲ್ಟಿ ಹೊಡೆದಿದ್ದು.

ರಾಷ್ಟ್ರ ರಾಜಕಾರಣದ ಒಳಸುಳಿ

ಇಂತಹ ರಾಜಕಾರಣಿಗಳಿಂದ, ಅಥವ ರಾಜಕೀಯ ವಿದ್ಯಮಾನಗಳಿಂದ ಕ್ರಾಂತಿಕಾರಕವಾದುದೇನೋ ಸಂಭವಿಸಿಬಿಡುತ್ತದೆ ಎಂಬ ಭ್ರಮೆ ಯಾರಿಗೂ ಇಲ್ಲ. ಆದರೂ ಈ ಹೊಸ ಸಮೀಕರಣ ಬಿಹಾರದ ರಾಜಕೀಯದಲ್ಲಿ ಹೇಗೋ ಹಾಗೆಯೇ ರಾಷ್ಟ್ರ ರಾಜಕಾರಣದಲ್ಲಿ ತನ್ನದೇ ಪರಿಣಾಮಗಳನ್ನು ಬೀರಲಿದೆ ಎಂಬುದು ಸ್ಪಷ್ಟ.

ಮುಂಬರುವ ಚುನಾವಣೆಗಳಲ್ಲಿ ಸಂಯುಕ್ತ ಜನತಾದಳ ಮತ್ತು ರಾಷ್ಟ್ರೀಯ ಜನತಾದಳ ಚುನಾವಣಾ ಒಪ್ಪಂದ ಮಾಡಿಕೊಂಡಲ್ಲಿ ಅದು ಬಿಜೆಪಿಗೆ ನುಂಗಲಾರದ ತುತ್ತಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ವ್ಯತಿರಿಕ್ತ ಬೆಳವಣಿಗೆಗಳು ಸಂಭವಿಸಿ ಒಂದರ ವಿರುದ್ಧ ಮತ್ತೊಂದು ಸ್ಪರ್ಧಿಸಿದರೆ ಬಿಜೆಪಿಗೆ ಮತ್ತೆ ಮೇಲುಗೈ ಆಗುವಲ್ಲಿ ಸಂದೇಹವಿಲ್ಲ. ಆದರೆ ಸಂಯುಕ್ತ ಜನತಾದಳ- ರಾಷ್ಟ್ರೀಯ ಜನತಾದಳ- ಕಾಂಗ್ರೆಸ್ ಮತ್ತಿತರೆ ಸಣ್ಣ ಪಕ್ಷಗಳು ಒಟ್ಟಾದರೆ ಬಿಜೆಪಿಯನ್ನು ತಡೆದು ನಿಲ್ಲಿಸುವುದು ಬಿಹಾರದಲ್ಲಂತೂ ಕಠಿಣವಲ್ಲ.

ತೇಜಸ್ವಿ ಯಾದವ್

ಲೋಕಸಭೆಗೆ ಬಿಹಾರದಿಂದ 40 ಎಂಪಿಗಳು ಆರಿಸಿ ಬರುತ್ತಾರೆ ಎಂಬುದನ್ನು ಗಮನಿಸಬೇಕು. 2019ರ ಚುನಾವಣೆಯಲ್ಲಿ 40ರ ಪೈಕಿ 39 ಸೀಟುಗಳನ್ನು ಎನ್‌ಡಿಎ ಪಡೆದುಕೊಂಡಿತ್ತು. (ಬಿಜೆಪಿ 17, ಜೆಡಿಯು 16 ಮತ್ತು ಎಲ್‌ಜೆಪಿ 6 ಸ್ಥಾನಗಳು). ಈಗ ಎಲ್‌ಜೆಪಿ ಕ್ಷೀಣಿಸಿ ರಾಜಕೀಯ ಅಸ್ತಿತ್ವಕ್ಕಾಗಿ ಪರದಾಡುತ್ತಿದೆ. ಜೊತೆಗೆ ಜೆಡಿಯು ಕೂಡ ಇಲ್ಲವಾದರೆ ಬಿಜೆಪಿಗೆ 2024ರಲ್ಲಿ ಭಾರೀ ನಷ್ಟ ಕಟ್ಟಿಟ್ಟ ಬುತ್ತಿ.

ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿಗೆ ಪರ್ಯಾಯವಾಗಿ, ನಿರ್ದಿಷ್ಟವಾಗಿ ಮೋದಿಗೆ ಪರ್ಯಾಯವಾಗಿ ನಾಯಕನೊಬ್ಬನ ಶೋಧದಲ್ಲಿರುವ ಕೆಲವು ವಿರೋಧ ಪಕ್ಷಗಳಿಗೆ ನಿತೀಶ್ ಒಂದು ಆಯ್ಕೆಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ಆ ನಿಟ್ಟಿನಲ್ಲಿ ಮಾತುಕತೆಗಳು ಸಾಗಿವೆ ಎಂಬ ಸುದ್ದಿಗಳೂ ಹರಿದಾಡುತ್ತಿವೆ. ಮೋದಿಯನ್ನು ಹಿಂದುಳಿದ ಜಾತಿ ಹಿನ್ನೆಲೆಯ ನಾಯಕ ಎಂಬಂತೆ ಬಿಂಬಿಸಿ ರಾಜಕೀಯ ಲಾಭ ಪಡೆಯುತ್ತಿರುವ ಬಿಜೆಪಿಗೆ ಹಿಂದುಳಿದ ವರ್ಗದ ಅಸಲಿ ನಾಯಕನಾಗಿಯೇ ದಶಕಗಳ ಕಾಲ ರಾಜಕೀಯ ಮಾಡುತ್ತಾ ಬಂದಿರುವ ನಿತೀಶ್ ಸ್ಪರ್ಧೆ ಪೆಟ್ಟು ಕೊಡಬಲ್ಲುದು ಎಂಬುದು ಕೆಲವರ ಲೆಕ್ಕಾಚಾರ. ನಿತೀಶ್ ಕೂಡ ಪ್ರಧಾನಿ ಪಟ್ಟದ ಆಸೆಯನ್ನು ಒಳಗೊಳಗೇ ಪೋಷಿಸಿಕೊಂಡು ಬಂದವರು.

ಆದರೆ ತಾನು ಯಾವ ಸ್ಥಾನಕ್ಕೂ ಸ್ಪರ್ಧಿಯಲ್ಲ ಎನ್ನುತ್ತಿದ್ದಾರೆ ನಿತೀಶ್. ಆದರೆ 2014ರಲ್ಲಿ ಗೆದ್ದು ಅಧಿಕಾರಕ್ಕೆ ಬಂದಿರುವ ವ್ಯಕ್ತಿ 2024ರ (ಲೋಕಸಭಾ) ಚುನಾವಣೆಯ ನಂತರ ಉಳಿಯುತ್ತಾರೆಯೇ ಎಂಬುದೇ ಅಸಲು ಪ್ರಶ್ನೆ ಎಂದು ಪತ್ರಕರ್ತರ ಪ್ರಶ್ನೆಗೆ ಮಾರ್ಮಿಕ ಉತ್ತರ ಕೊಟ್ಟಿದ್ದಾರೆ. ಇವೆಲ್ಲಾ ಯಾವ ರೀತಿಯಲ್ಲಿ ಪರ್ಯಾವಸನವಾಗುತ್ತದೆ ಎಂದು ಈಗಲೇ ಹೇಳಲಾಗದು.


ಇದನ್ನೂ ಓದಿ: 2014 ರಲ್ಲಿ ಗೆದ್ದಂತೆ 2024 ಗೆಲ್ಲುತ್ತಾರೆಯೆ?: ಮೋದಿಗೆ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಸವಾಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೆಳಗಾವಿ: ಕಾಲೇಜಿನಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ -ಕರವೇ ಪ್ರತಿಭಟನೆ

0
ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಅದು ಕಾಲೇಜು ಹಂತದವರೆಗೂ ವ್ಯಾಪಿಸಿರುವುದು ದುರಂತ. ನಿನ್ನೆ ಬೆಳಗಾವಿಯ ಗೋಗ್ಟೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಬಾವುಟ ಹಿಡಿದು ಸಂಭ್ರಮಿಸಿದ ದ್ವಿತೀಯ ಪಿಯುಸಿ...