Homeಅಂಕಣಗಳುಗಾಂಧಿ, ನೆಹರೂ, ಪಟೇಲ್ ಬಾಂಧವ್ಯದ ಬಗ್ಗೆ ಮೋದಿಗೇನು ಗೊತ್ತು....

ಗಾಂಧಿ, ನೆಹರೂ, ಪಟೇಲ್ ಬಾಂಧವ್ಯದ ಬಗ್ಗೆ ಮೋದಿಗೇನು ಗೊತ್ತು….

- Advertisement -
- Advertisement -

ಎಸ್.ಎಸ್.ದೊರೆಸ್ವಾಮಿ |

ಪ್ರಧಾನಿ ಮೋದಿ ಗುಜರಾತಿನ ನಾಯಕರತ್ನಗಳಾದ ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಾಯಿ ಪಟೇಲ್ ಇಬ್ಬರಲ್ಲಿ ಒಬ್ಬರನ್ನು ಮರೆಸುವ ಕುತಂತ್ರ ಮಾಡುತ್ತಿರುವುದು ಮತ್ತು ಮತ್ತೊಬ್ಬರನ್ನು ತಮ್ಮ ಪ್ರತಿಷ್ಠೆ ಬೆಳೆಸಿಕೊಳ್ಳಲು ದುರುಪಯೋಗಪಡಿಸಿಕೊಳ್ಳುತ್ತಿರುವುದು ನಿಜಕ್ಕೂ ಹೇಯವಾದ ಕೆಲಸ.

ಮಹಾತ್ಮ ಗಾಂಧಿಯವರು ಜವಹರಲಾಲ್‌ರನ್ನು ಬೆಳೆಯಲು ಅವಕಾಶ ಮಾಡಿಕೊಟ್ಟು ಸರ್ದಾರ್ ಪಟೇಲರನ್ನು ಕಡೆಗಣಿಸಿದರು ಎಂಬ ಸುಳ್ಳು ಆಪಾದನೆ ಮೂಲಕ ಜನತೆಯ ಮೆಚ್ಚುಗೆ ಗಳಿಸಲು ಹಾಗೂ ಮತಗಳನ್ನು ಕಸಿಯಲು ಸಂಚು ಮಾಡಿದ್ದಾರೆ. ಗುಜರಾತ್‌ನಲ್ಲಿ ಪಟೇಲರ ಎತ್ತರ ಪ್ರತಿಮೆ ಸ್ಥಾಪಿಸಿದ್ದು ಕೂಡಾ ಇದರದೇ ಒಂದು ಭಾಗ.

ಇತಿಹಾಸದ ಕುರಿತು ಮೋದಿಯ ಹುಸಿಗಳನ್ನು ಅರ್ಥಮಾಡಿಕೊಳ್ಳಬೇಕೆಂದರೆ ನಾವು ಮೊದಲು ಗಾಂಧೀಜಿ, ನೆಹರು, ಪಟೇಲರ ಸಂಬಂಧ ಹೇಗಿತ್ತು ಎಂಬುದನ್ನು ಅರಿಯಬೇಕು. ಗಾಂಧೀಜಿ ಸೆರೆಮನೆಗೆ ಹೋದಾಗಲೆಲ್ಲ ವಲ್ಲಭಭಾಯಿ ಅವರ ಜೊತೆಗೇ ಇರುತ್ತಿದ್ದರು. ಸೆರೆಮನೆಯಲ್ಲಿ ಗಾಂಧೀಜಿಯವರ ನೆರವಿಗೆಂದು ಹಾಗೆ ಮಾಡುತ್ತಿದ್ದರು. ಹೀಗಾಗಿ ಅವರಿಬ್ಬರ ಸ್ನೇಹ-ಸಂಬಂಧ ಗಾಢವಾಗಿತ್ತು. ಸರ್ದಾರ್ ಪಟೇಲರ ಧೈರ್ಯ, ಸಾಹಸ, ರಾಜಕೀಯ ಚಾಣಾಕ್ಷತನ, ಹಿಡಿದ ಕೆಲಸ ಮುಗಿಸುವ ಛಲ ಎಲ್ಲದರ ಬಗ್ಗೆ ಗಾಂಧೀಜಿಗೆ ಅಪಾರ ಮೆಚ್ಚುಗೆಯಿತ್ತು.

ಸ್ವಾತಂತ್ರ್ಯ ಪ್ರಾಪ್ತವಾದ ಕೂಡಲೇ ಸ್ವತಂತ್ರ ಭಾರತದ ಆಡಳಿತ ನಡೆಸಲು ದಕ್ಷರಾದ ನಾಯಕರನ್ನು ಗಾಂಧೀಜಿಯವರು ಹುಡುಕಿಕೊಳ್ಳಬೇಕಾಗಿತ್ತು. ಜವಾಹರ್‌ಲಾಲ್ ನೆಹರು ಸ್ವಾತಂತ್ರ್ಯ ಪೂರ್ವದಲ್ಲೇ ಪಾಶ್ಚಿಮಾತ್ಯ ದೇಶಗಳಲ್ಲಿ ನಡೆಯುತ್ತಿದ್ದ ಅಂತರರಾಷ್ಟ್ರೀಯ ಸಮಾರಂಭಗಳಲ್ಲಿ, ಸೆಮಿನಾರ್‌ಗಳಲ್ಲಿ ಭಾಗವಹಿಸುತ್ತಿದ್ದರು. ಅಂದಿನ ವಿಶ್ವದ ಅನೇಕ ರಾಷ್ಟ್ರಗಳ ನಾಯಕರ ಸ್ನೇಹವನ್ನು ಬೆಳೆಸಿಕೊಂಡಿದ್ದರು. ಅಲ್ಲದೆ ನೆಹರು ಅಂತರಾಷ್ಟ್ರೀಯ ಸಮಸ್ಯೆಗಳ ಅಧ್ಯಯನ ಮಾಡಿದ್ದರು. ಇದೆಲ್ಲವನ್ನೂ ತಿಳಿದ ಗಾಂಧೀಜಿ ನೆಹರು ಅವರನ್ನು ಪ್ರಧಾನಿಯನ್ನಾಗಿ ಮಾಡಲು ಬಯಸಿದರು. ಬಿಗಿಯಾಗಿ ಆಡಳಿತ ನಡೆಸುವ ಸರ್ದಾರ್ ಪಟೇಲರ ದಕ್ಷತೆಯು ಹೊಸದಾಗಿ ರೂಪುಗೊಳ್ಳುತ್ತಿರುವ ಸ್ವದೇಶಿ ಸರ್ಕಾರದ ಕೈಬಲಗೊಳಿಸಲು ಅನಿವಾರ್ಯ ಎಂಬುದನ್ನರಿತೇ ಪಟೇಲರನ್ನು ಗೃಹಮಂತ್ರಿಯಾಗಿಸಬೇಕೆಂದು ಇಚ್ಛಿಸಿದರು.

ಅದಕ್ಕೆ ಕಾರಣವೂ ಇತ್ತು. ಭಾರತದಿಂದ ಟಿಸಿಲೊಡೆದು ಪಾಕಿಸ್ತಾನ ಎಂಬ ಹೊಸ ದೇಶ ಅಸ್ತಿತ್ವಕ್ಕೆ ಬಂದೊಡನೆ ಅಲ್ಲಿದ್ದ ಮುಸ್ಲಿಮೇತರರನ್ನು ಹೊರಗಟ್ಟುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯಿತು. ಹಿಂದೂಗಳು, ಸಿಖ್ಖರು ಮುಂತಾದವರ ಆಸ್ತಿಗಳನ್ನು ವಶಪಡಿಸಿಕೊಳ್ಳುವುದು ಅವರ ಮೇಲೆ ದೌರ್ಜನ್ಯ ಮಾಡುವುದು, ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡುವುದು ಕ್ರೂರವಾಗಿ ನಡೆದುಕೊಳ್ಳುವುದು ಒಂದೇ ಸಮನೆ ನಡೆಯಿತು. ಇತ್ತ ಭಾರತದಲ್ಲೂ ಅಂತದ್ದೇ ಸನ್ನಿವೇಶಗಳು ಪ್ರತಿಫಲನಗೊಂಡವು. ದೌರ್ಜನ್ಯಕ್ಕೊಳಗಾದ ಈ ಜನ ಸಹಸ್ರಾರು ಸಂಖ್ಯೆಯಲ್ಲಿ ಜೀವ ಉಳಿಸಿಕೊಳ್ಳುವ ಏಕೈಕ ಕಾರಣಕ್ಕಾಗಿ ಪಾಕಿಸ್ತಾನದಿಂದ ಭಾರತದ ಕಡೆಗೆ, ಭಾರತದಿಂದ ಪಾಕಿಸ್ತಾನದ ಕಡೆಗೆ ಹರಿದಾಡಿದರು. ಹೀಗೆ ಭಾರತಕ್ಕೆ ಪ್ರವಾಹದೋಪಾದಿಯಲ್ಲಿ ಧಾವಿಸಿ ಬಂದ ಈ ನತದೃಷ್ಟರನ್ನು ಸಾಂತ್ವನಗೊಳಿಸುವುದು ಅವರಿಗೆ ನಿಲ್ಲಲು ನೆಲೆ ಕಲ್ಪಿಸುವುದು, ಊಟ ಉಪಚಾರಗಳ ಏರ್ಪಾಟು ಮಾಡುವುದು ಒಂದುಕಡೆಗಾದರೆ, ಭಾರತದಲ್ಲಿ ಹೊತ್ತಿ ಉರಿಯುತ್ತಿದ್ದ ಕೋಮುದಳ್ಳುರಿ ನಂದಿಸುವ ಕೆಲಸ ಮತ್ತೊಂದು ಕಡೆ ಏಕಕಾಲದಲ್ಲಿ ನಡೆಯಬೇಕಿತ್ತು. ನಿರಾಶ್ರಿತರೆಲ್ಲ ಬೆಂದು ಬೆಂಡಾದ ಜ್ವಾಲೆಯ ತುಣುಕುಗಳಂತೆ ಕಾಣುತ್ತಿದ್ದರು. ಅವರಲ್ಲಿ ಶಾಂತಿ ಮೂಡಿಸಿ ಅವರ ಉದ್ರೇಕ, ಉನ್ಮಾದಗಳನ್ನು ಸಹಿಸಿಕೊಂಡು ಅವರಿಗೆ ಸಾಂತ್ವನ ಹೇಳಿ ನಿಜ ಜೀವನಕ್ಕೆ ಅವರನ್ನು ತೊಡಗಿಸುವ ಮಹತ್ಕಾರ್ಯವನ್ನು ಜವಹರಲಾಲ್ ನೆಹರು ಮತ್ತು ಸರ್ದಾರ್ ಪಟೇಲರು ಬಹಳ ಯಶಸ್ವಿಯಾಗಿ ನಿರ್ವಹಿಸಿದರು. ಕುರುಕ್ಷೇತ್ರದಲ್ಲಿ ಈ ನಿರಾಶ್ರಿತರಿಗೆಲ್ಲ ಊಟ, ವಸತಿ, ವೈದ್ಯಕೀಯ ಸಹಾಯ, ರಕ್ಷಣೆ ಎಲ್ಲವನ್ನೂ ಒದಗಿಸಿಕೊಟ್ಟ ಕೀರ್ತಿ ಇವರಿಬ್ಬರು ಮಹಾನುಭಾವರಿಗೆ ಸಂದಾಯವಾಗಬೇಕು.

ಇಂಗ್ಲಿಷರು ಸ್ವಾತಂತ್ರ್ಯ ಘೋಷಿಸಿ ಹೋಗುವ ಮುನ್ನ ಭಾರತದಲ್ಲಿರುವ 562 ರಾಜ ಮಹಾರಾಜರು, ನವಾಬರು ಸ್ವತಂತ್ರ ರಾಜ್ಯಗಳನ್ನು ರಚಿಸಿಕೊಂಡು ಇರಬಹುದು ಎಂದು ಘೋಷಿಸಿ ಹೋಗಿದ್ದರು. ಸರ್ದಾರ್ ಪಟೇಲರು ಗೃಹ ಸಚಿವರಾಗಿ ಮಾಡಿದ ಮಹತ್ತರವಾದ ಕೆಲಸ ಎಂದರೆ ಈ ೫೬೨ ಸಂಸ್ಥಾನಗಳನ್ನೂ ಸ್ವತಂತ್ರ ಭಾರತದೊಳಗೆ ವಿಲೀನಮಾಡಿದ್ದು. ಆ ಮೂಲಕ ಸಾವಿರಾರು ವರ್ಷಗಳಿಂದ ಹೋಳುಹೋಳಾಗಿದ್ದ ಭಾರತವನ್ನು ಒಂದು ಆಡಳಿತ ಘಟಕವನ್ನಾಗಿ ರೂಪಿಸಿದರು. ಪ್ರಧಾನಿ ಜೊತೆ ಅವರಿಗೆ ಸಮನ್ವಯ ಇರದೇ ಹೋಗಿದ್ದರೆ ಇದು ಸಾಧ್ಯವಾಗುತ್ತಿತ್ತೇ?

ಜವಹರ್‌ಲಾಲ್ ನೆಹರು ವಿಶ್ವಶಾಂತಿ ಹಾಗೂ ನಿರ್ಲಿಪ್ತ ನೀತಿಗಳಿಗೆ ಹೆಸರಾದವರು. ವಿಶ್ವಶಾಂತಿ ನೆಲೆಸಬೇಕಾದರೆ ಎಲ್ಲ ರಾಷ್ಟ್ರಗಳೂ ಯುದ್ಧಗಳನ್ನು ನಿಷೇಧಿಸಬೇಕು, ರಾಷ್ಟ್ರರಾಷ್ಟ್ರಗಳಲ್ಲಿ ಸಖ್ಯ ಬೆಳೆಯಬೇಕು, ಒಂದು ರಾಷ್ಟ್ರದ ಕೊರತೆಯನ್ನು ಮತ್ತೊಂದು ರಾಷ್ಟ್ರ ನೀಗಬೇಕು ಎಂಬುದು ಜವಹರಲಾಲ್‌ರ ಧ್ಯೇಯವಾಗಿತ್ತು. ಅಮೆರಿಕ ಮುಂತಾದ ಎಲ್ಲ ಪ್ರಬಲ ರಾಷ್ಟ್ರಗಳೂ ಬಾಂಬುಗಳನ್ನು ತಯಾರಿಸಿ ಪೇರಿಸಿಡುವ ಕೆಲಸದಲ್ಲಿ ತೊಡಗಿದ್ದಾಗ ಭಾರತ ಬಾಂಬು ತಯಾರಿಕೆಗೆ ವಿರೋಧ ವ್ಯಕ್ತಪಡಿಸಿದ ಏಕೈಕ ರಾಷ್ಟ್ರ. Bomb is no detterant ಎಂದು ನೆಹರು ಘೋಷಣೆ ಮಾಡಿದರು.

ಜವಾಹರಲಾಲ್ ನೆಹರೂರವರ ಅಲಿಪ್ತ ನೀತಿ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮನ್ನಣೆ ತಂದುಕೊಟ್ಟಿತು. ಅವರ ಆಡಳಿತ ಕಾಲದಲ್ಲಿ ಅಮೆರಿಕ ಮತ್ತು ರಷ್ಯ ಎರಡು ಪ್ರತ್ಯೇಕ ಶಕ್ತಿ ಕೇಂದ್ರಗಳಾಗಿದ್ದವು. ಯಾವುದೇ ರಾಷ್ಟ್ರದ ನೆರವಿಗೆ ಯುದ್ಧದಲ್ಲಿ ಅಮೆರಿಕ ಕೈ ಜೋಡಿಸಿದರೆ ಅದರ ವಿರುದ್ಧ ಹೋರಾಡುವ ರಾಷ್ಟ್ರದ ನೆರೆವಿಗೆ ರಷ್ಯಾ ಧಾವಿಸುತ್ತಿತ್ತು. ಯುದ್ಧದಾಹಿ ರಾಷ್ಟ್ರಗಳು ಈ ಬಲಿಷ್ಠ ರಾಷ್ಟ್ರಗಳ ಬೆಂಬಲ ಕೋರುತ್ತಿದ್ದವು. ಜವಹರ್‌ಲಾಲ್ ನೆಹರೂರವರು ಈ ಸಂದರ್ಭದಲ್ಲಿ ಭಾರತ, ಅಮೆರಿಕ ಅಥವಾ ರಷ್ಯಾದ ಜೊತೆಗೆ ಸೇರಿಕೊಳ್ಳದೆ ತಟಸ್ಥ ರಾಷ್ಟ್ರವಾಗಿ ಉಳಿಯುವಂತೆ ನೋಡಿಕೊಂಡರು.

ಮೋದಿಯವರು ನೆಹರು, ಪಟೇಲರ ಅಧಿಕಾರದ ಅವಧಿಯ ಇತಿಹಾಸವನ್ನು ಓದಿಲ್ಲ. ಮನಸೋ ಇಚ್ಛೆ ಮಾತನಾಡಿ ನೆಹರು-ಪಟೇಲ್ ಇಬ್ಬರೂ ಶತ್ರುಗಳು; ಗಾಂಧೀಜಿಯವರು ಪಟೇಲರನ್ನು ಕಡೆಗಣಿಸಿದರು ಎನ್ನುವ ಸುಳ್ಳು ಆಪಾದನೆ ಮೂಲಕ ಈಗ ತಾವು ಸರ್ದಾರ್ ಪಟೇಲರಿಗೆ ಸಲ್ಲಬೇಕಾದ ಸ್ಥಾನವನ್ನು ಕೊಡಿಸಲು ಹೊರಟವರಂತೆ ನಡೆದುಕೊಳ್ಳುತ್ತಿದ್ದಾರೆ.

ಪ್ರಧಾನಿ ಮತ್ತು ಗೃಹಮಂತ್ರಿಯ ನಡುವೆ ತಾಳಮೇಳ ಇಲ್ಲದೇ ಹೋಗಿದ್ದರೆ, ವೈರತ್ವ ಮನೆ ಮಾಡಿಕೊಂಡಿದ್ದರೆ ಬ್ರಿಟೀಷರು ಕೋಮು ಬಾಣಲೆಯಲ್ಲಿ ಎಸೆದುಹೋಗಿದ್ದ ಭಾರತವನ್ನು ಮೇಲಕ್ಕೆತ್ತಿ ಪರಿಸ್ಥಿತಿಯನ್ನು ನಿಭಾಯಿಸಲು ಒಂದು ಅನನುಭವಿ ಸರ್ಕಾರಕ್ಕೆ ಸಾಧ್ಯವಾಗುತ್ತಿತ್ತೇ? ಸರ್ಕಾರದ ಒಳಗೇ ಆಂತರಿಕ ಸಂಘರ್ಷವಿದ್ದಿದ್ದರೆ ೫೨೬ ಪ್ರಾಂತ್ಯಗಳ ಮೇಲೆ ಹಿಡಿತ ಸಾಧಿಸಿ, ಭಾರತದಲ್ಲಿ ವಿಲೀನ ಮಾಡಿಸಲು ಸಾಧ್ಯವಿತ್ತೆ? ಇಂಥಾ ಸಾಮಾನ್ಯ ಜ್ಞಾನವೂ ಪ್ರಧಾನಿ ಮೋದಿಗಿಲ್ಲವೇ ಅಥವಾ ಇದ್ದೂ ಇಲ್ಲದಂತೆ ವರ್ತಿಸುತ್ತಿದ್ದಾರೆಯೇ..

ಈ ಎಲ್ಲ ಕಿತಾಪತಿಯ ಉದ್ದೇಶ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಪ್ರಧಾನಿ ಹುದ್ದೆಯನ್ನು ಉಳಿಸಿಕೊಳ್ಳುವುದೇ ಆಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅದೃಶ್ಯ ಮತದಾರರಿಗೆ ಮೋದಿ ಹೆದರುತ್ತಾರೆ, ಅದಕ್ಕಾಗಿಯೇ ಅವರು ಕಾಂಗ್ರೆಸ್‌ನ್ನು ಟೀಕಿಸುತ್ತಾರೆ: ಮಲ್ಲಿಕಾರ್ಜುನ ಖರ್ಗೆ

0
'ಲೋಕಸಭೆ ಚುನಾವಣೆಯ ಮೊದಲ ಸುತ್ತಿನ ಮತದಾನ ಮುಗಿದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದೃಶ್ಯ ಮತದಾರರ ಭಯವಿದೆ, ಅದಕ್ಕಾಗಿಯೇ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಿದ್ದಾರೆ' ಎಂದು ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಬುಧವಾರ...