Homeಕರ್ನಾಟಕನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ನಿಧಿ ಅನ್ಯಕಾರ್ಯಕ್ಕೆ ಬಳಕೆ; ಬಿಜೆಪಿ ನಡೆಗೆ ವಿರೋಧ

ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ನಿಧಿ ಅನ್ಯಕಾರ್ಯಕ್ಕೆ ಬಳಕೆ; ಬಿಜೆಪಿ ನಡೆಗೆ ವಿರೋಧ

- Advertisement -
- Advertisement -

ನಂಜನಗೂಡು ಎಸ್‌ಸಿ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಿ.ಹರ್ಷವರ್ಧನ್ ಅವರು ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ನಿಧಿಯನ್ನು ಅನ್ಯ ಕಾರ್ಯಗಳಿಗೆ ಬಳಸಿದ್ದಾರೆಂಬ ಆರೋಪ ಕೇಳಿಬಂದಿದೆ.

ಈ ಕುರಿತು ವರದಿ ಮಾಡಿರುವ ‘ಪ್ರಜಾವಾಣಿ’ ದಿನಪತ್ರಿಕೆ, “ದೇವಸ್ಥಾನದ ಆದಾಯವನ್ನು ಅದೇ ದೇವಾಲಯದ ಜೀರ್ಣೋದ್ಧಾರಕ್ಕೆ ಮಾತ್ರ ಬಳಸಿಕೊಳ್ಳಬೇಕೆಂಬ ಕಾನೂನು ಇದ್ದರೂ ಅದನ್ನು ಉಲ್ಲಂಘಿಸಿ, ಬಿಜೆಪಿ ಶಾಸಕ ಬಿ. ಹರ್ಷವರ್ಧನ್ ಅವರು ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ನಿಧಿಯಿಂದ ವಿವಿಧ ಜನಾಂಗದವರ ಸಮುದಾಯ ಭವನಗಳನ್ನು ನಿರ್ಮಿಸಲು ₹ 8 ಕೋಟಿ ಮಂಜೂರು ಮಾಡಿಸಿಕೊಂಡಿದ್ದಾರೆ” ಎಂದು ವಿವರಿಸಿದೆ.

ಕಾಯ್ದೆಯನ್ನು ಉಲ್ಲಂಘಿಸಿ ಹಣ ಬಳಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನುಮೋದನೆ ನೀಡಿದ್ದಾರೆಂದು ವರದಿ ಗಮನ ಸೆಳೆದಿದೆ. “ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಕಾಯ್ದೆ 1997ರ ಕಲಂ 36ರ ಅಡಿ, ಆಯಾ ದೇಗುಲದ ಆದಾಯವನ್ನು ಅದೇ ದೇಗುಲದ ಅಭಿವೃದ್ಧಿಗೆ ಮಾತ್ರ ಬಳಸಿಕೊಳ್ಳಬೇಕು. ಹೀಗಾಗಿ, ವಿವಿಧ ಜನಾಂಗದವರ ಸಮುದಾಯ ಭವನಗಳಿಗೆ ದೇವಾಲಯ ನಿಧಿಯ ಬಳಕೆ ಸೂಕ್ತವಲ್ಲ ಎಂದು ಮುಜರಾಯಿ ಇಲಾಖೆ ಸ್ಪಷ್ಟವಾಗಿ ನಮೂದಿಸಿದ್ದರೂ, ಶಾಸಕರ ಮನವಿಗೆ ಮುಖ್ಯಮಂತ್ರಿ ಅನುಮೋದನೆ ನೀಡಿದೆ” ಎಂಬುದು ಬಯಲಾಗಿದೆ.

ಬಿಜೆಪಿ ಸರ್ಕಾರದ ಈ ನಡೆಗೆ ಟೀಕೆಗಳು ವ್ಯಕ್ತವಾಗಿವೆ. ಈ ಕುರಿತು ಪೋಸ್ಟ್ ಮಾಡಿರುವ ಕವಿ ರಾಜೇಂದ್ರ ಪ್ರಸಾದ್, “ದೇವಸ್ಥಾನದ ಹಣವನ್ನು ಬೇರೆ ಯಾವುದಕ್ಕೂ ಬಳಸಿಕೊಳ್ಳಬಾರದು ಎಂದು ಬೊಬ್ಬೆ ಹೊಡಿಯುವವರೂ ಇವರೇ ಕಡೆಗೆ ಅದನ್ನು ಬೇಕಾದ ಹಾಗೆ ಮುಜರಾಯಿ ಇಲಾಖೆಯ ಸೂಚನೆಯನ್ನು ಮೀರಿ ಬಳಸಿಕೊಳ್ಳುವರೂ ಇವರೇ. ಒಟ್ಟಿನಲ್ಲಿ ದೇವರು, ದೇವಸ್ಥಾನ ಮತ್ತು ಅಲ್ಲಿನ‌ ಹಣ ಎಲ್ಲವನ್ನೂ ತಮ್ಮ‌ ದುರುದ್ದೇಶಗಳಿಗೆ ಬಳಸಿಕೊಳ್ಳುವುದರಲ್ಲಿ ಈ ಪಕ್ಷದವರು ಎತ್ತಿದ ಕೈ” ಎಂದು ಟೀಕಿಸಿದ್ದಾರೆ.

“ಈ ಹತ್ತಾರು ಜಾತಿಗಳ ಹೆಸರಲ್ಲಿ ಸಮುದಾಯ ಭವನಗಳು ಏಕೆ ಬೇಕು? ಕಟ್ಟಡಗಳಲ್ಲಿ ಗುಣಮಟ್ಟವಿರುವುದಿಲ್ಲ, ಕಡೆಗೆ ಅಲ್ಲಿ ಕಾರ್ಯಕ್ರಮ ಮಾಡಲು ಬೇಕಾದಷ್ಟು ವ್ಯವಸ್ಥೆಗಳು ಇರುವುದಿಲ್ಲ. ಹೋಗಲಿ ಒಂದು ತಾಲೂಕು ಮಟ್ಟದಲ್ಲಿ ಇಷ್ಟು ಬಗೆಯ ಜಾತಿಗಳಿಗೆ ಸಮುದಾಯ ಭವನಗಳನ್ನು ಕಟ್ಟುವ ಅಗತ್ಯವಾದರೂ ಏನಿದೆ? ಅದಕ್ಕಾಗಿ ದೇವಸ್ಥಾನದ ಹಣವನ್ನು ಬಲವಂತವಾಗಿ ಏಕೆ ಪಡೆದುಕೊಳ್ಳಲಾಗುತ್ತಿದೆ? ಇದು ಅನ್ಯಾಯ ಅಕ್ರಮ ಎನಿಸುವುದಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

“ಅದೂ ಹೋಗಲಿ ದೇವಸ್ಥಾನ ಆವರಣದಲ್ಲಿ ಕಟ್ಟುತ್ತಿರುವ ಕೆಲವು ಕಟ್ಟಡ ಮತ್ತಿತರ ಸೌಲಭ್ಯಗಳಿಗೇ ಅಲ್ಲಿರುವ ಹಣ ಸಾಲುತ್ತಿಲ್ಲ ಎಂದು ಮುಜರಾಯಿ ಇಲಾಖೆಯೇ ಹೇಳುತ್ತಿದೆ, ಹಾಗಿರುವ ಬಲವಂತವಾಗಿ 8 ಕೋಟಿ ರುಪಾಯಿ ಪಡೆಯುವುದು ಅಧರ್ಮವಲ್ಲವೇ? ಹಾ! ಈ ಎಲ್ಲ ಯೋಜನೆಗಳಲ್ಲಿ ಎಷ್ಟು ಪರ್ಸೆಂಟು ಶಾಸಕರಿಗೆ / ಪಕ್ಷದವರಿಗೆ ಸಲ್ಲುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೆ? ಈಗಾಗಲೇ ಇದು ಎಷ್ಟು ಪರ್ಸೆಂಟ್ ಸರ್ಕಾರ ಎಂಬುದು ಜನಜನಿತವಾಗಿದೆ” ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read