Homeಕರ್ನಾಟಕಕೆ.ಎಸ್.ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಣೆ; ಎಎನ್‌ಐ ಟ್ವೀಟ್‌

ಕೆ.ಎಸ್.ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಣೆ; ಎಎನ್‌ಐ ಟ್ವೀಟ್‌

- Advertisement -
- Advertisement -

“ಕರ್ನಾಟಕ ಬಿಜೆಪಿಯ ಹಿರಿಯ ನಾಯಕ, 40% ಕಮಿಷನ್ ಆರೋಪದಲ್ಲಿ ಸಚಿವ ಸ್ಥಾನ ಕಳೆದುಕೊಂಡಿದ್ದ ಕೆ.ಎಸ್.ಈಶ್ವರಪ್ಪನವರು ರಾಜಕೀಯ ನಿವೃತ್ತ ಘೋಷಿಸಿದ್ದಾರೆ” ಎಂದು ಎಎನ್‌ಐ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿರುವ ಈಶ್ವರಪ್ಪ, “ಸ್ವ-ಇಚ್ಛೆಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗಲು ಬಯಸಿದ್ದೇನೆ” ಎಂದು ತಿಳಿಸಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

“ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಕ್ಷೇತ್ರಕ್ಕೆ ನನ್ನ ಹೆಸರನ್ನು ಪರಿಗಣಿಸಬಾರದು” ಎಂದು ಅವರು ವಿನಂತಿಸಿಕೊಂಡಿದ್ದಾರೆ.

“ಕಳೆದ 40ಕ್ಕೂ ಹೆಚ್ಚು ವರ್ಷದ ರಾಜಕೀಯ ಜೀವನದಲ್ಲಿ ಬೂತ್ ಮಟ್ಟದಿಂದ ರಾಜ್ಯದ ಉಪಮುಖ್ಯಮಂತ್ರಿಯವರೆಗೆ ಗೌರವದ ಸ್ಥಾನಮಾನಗಳನ್ನು ನೀಡಿದ ಪಕ್ಷದ ಹಿರಿಯರಿಗೆ ನನ್ನ ಅನಂತ ಧನ್ಯವಾದಗಳು” ಎಂದು ಈಶ್ವರಪ್ಪನವರ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈಶ್ವರಪ್ಪನವರು ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸುವ ಪ್ರಯತ್ನದಲ್ಲಿದ್ದರು. ಆದರೆ ಅವರಿಗೆ ಟಿಕೆಟ್ ನೀಡಲು ಹೈಕಮಾಂಡ್ ಒಪ್ಪಿರಲಿಲ್ಲ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿವೆ.

ಮತ್ತೊಂದೆಡೆ ಬಿಜೆಪಿಯ ಮುಖಂಡ ಆಯನೂರು ಮಂಜುನಾಥ್ ಅವರು ಈಶ್ವರಪ್ಪನವರ ವಿರುದ್ಧ ನಿಲುವು ತಾಳಿದ್ದಾರೆ. “ಕೋಮು ಜ್ವಾಲೆಯನ್ನು ತಗ್ಗಿಸುವ ಬದಲು ಶಾಸಕ ಕೆ.ಎಸ್.ಈಶ್ವರಪ್ಪ ಅವರು ದ್ವೇಷದ ಪ್ರಚಾರ ಮಾಡುತ್ತಿದ್ದಾರೆ” ಎಂದು  ಆಯನೂರು ಮಂಜುನಾಥ್  ಆರೋಪಿಸಿದ್ದರು. ಕ್ಷೇತ್ರದಿಂದ ಪಕ್ಷದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಂಜುನಾಥ್‌, ತಮಗೆ ಟಿಕೆಟ್ ಸಿಗುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈಶ್ವರಪ್ಪ ಅವರು ತಮ್ಮ ಪುತ್ರ ಕೆ.ಇ.ಕಾಂತೇಶ್‌ಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದು, ಇದಕ್ಕೆ ಆಯನೂರು ಮಂಜುನಾಥ್‌ ಬಹಿರಂಗವಾಗಿಯೇ ಸವಾಲು ಹಾಕಿದ್ದರು. ಈಶ್ವರಪ್ಪ ವಂಶ ರಾಜಕಾರಣವನ್ನು  ಮುಂದುವರಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಬಿಜೆಪಿಯ ಆಂತರಿಕ ಕಲಹ ಕಾಂಗ್ರೆಸ್‌ನಲ್ಲಿ ನಿರೀಕ್ಷೆ ಹೆಚ್ಚಿಸಿದೆ,  ಪಕ್ಷದಲ್ಲಿ 11 ಮಂದಿ ಆಕಾಂಕ್ಷಿಗಳಿದ್ದು, ಅಚ್ಚರಿಯ ನಡೆಯಲ್ಲಿ ಕೆಲವರು ಇತ್ತೀಚೆಗೆ ಬಹಿರಂಗವಾಗಿ ಮಂಜುನಾಥ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ಕೋರಿದ್ದಾರೆ. ತಮ್ಮ ಸ್ಪರ್ಧೆ ಕುರಿತು ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದೂ  ಆಕಾಂಕ್ಷಿಗಳು ಹೇಳಿದ್ದಾರೆ.

ಕುರುಬ ಸಮುದಾಯದವರಾದ ಈಶ್ವರಪ್ಪನವರು ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು. ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಖಾತೆಯ ಸಚಿವರಾಗಿ, ಜೊತೆಗೆ ರಾಜ್ಯದ ಉಪಮುಖ್ಯಮಂತ್ರಿಯಾಗಿ ಗಮನ ಸೆಳೆದಿದ್ದರು. ರಾಜ್ಯ ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪನವರ ಹೆಸರು ಕೇಳಿಬಂದಿತ್ತು. 40% ಕಮಿಷನ್‌ ಪೀಡನೆಯಿಂದಾಗಿ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಆರೋಪಗಳನ್ನು ಪ್ರತಿಪಕ್ಷಗಳು ಮಾಡಿದ್ದರಿಂದ ಈಶ್ವರಪ್ಪ ರಾಜೀನಾಮೆ ನೀಡಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ರೇವಣ್ಣ ಸಹಚರ ಸತೀಶ್ ಬಾಬಣ್ಣಗೆ ನ್ಯಾಯಾಂಗ ಬಂಧನ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾದ ಬೆನ್ನಲ್ಲಿ ಮೈಸೂರಿನಲ್ಲಿ ಮಹಿಳೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬಣ್ಣ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14...