Homeಮುಖಪುಟಪೆಪ್ಸಿ ಕಂಪೆನಿಯ ವಿರುದ್ದ ರೈತರಿಗೆ ಜಯ: ‘ಲೇಸ್‌ ಆಲೂಗಡ್ಡೆ’ಗಳ ಪೇಟೆಂಟ್ ರದ್ದು!

ಪೆಪ್ಸಿ ಕಂಪೆನಿಯ ವಿರುದ್ದ ರೈತರಿಗೆ ಜಯ: ‘ಲೇಸ್‌ ಆಲೂಗಡ್ಡೆ’ಗಳ ಪೇಟೆಂಟ್ ರದ್ದು!

- Advertisement -
- Advertisement -

ಪೆಪ್ಸಿ ಕಂಪೆನಿಯ ಜನಪ್ರಿಯ ಖಾದ್ಯ ‘ಲೇಸ್‌’‌ ಚಿಪ್ಸ್‌ಗೆ ಬಳಸುವ ವಿಶೇಷ ತಳಿಯ ಆಲೂಗೆಡ್ಡೆಯ ಪೇಟೆಂಟ್ ಅನ್ನು ಭಾರತ ರದ್ದುಗೊಳಿಸಿದೆ. ಸಸ್ಯ ಪ್ರಭೇದಗಳು ಮತ್ತು ರೈತರ ಹಕ್ಕುಗಳ ರಕ್ಷಣೆ (ಪಿಪಿವಿಎಫ್‌ಆರ್) ಪ್ರಾಧಿಕಾರವು ಶುಕ್ರವಾರ ಈ ಆದೇಶವನ್ನು ಹೊರಡಿಸಿದೆ.

2019 ರಲ್ಲಿ, ಪೆಪ್ಸಿ ಕಂಪೆನಿಯು ಗುಜರಾತ್ ಮೂಲದ ಕೆಲವು ಭಾರತೀಯ ರೈತರು ‘FC5’ ಆಲೂಗೆಡ್ಡೆ ತಳಿಯನ್ನು ಬೆಳೆಸಿದ್ದನ್ನು ವಿರೋಧಿಸಿ ಮೊಕದ್ದಮೆ ಹೂಡಿತ್ತು. ಆಲೂಗಡ್ಡೆ ತಳಿಯು ತಮ್ಮದಾಗಿದ್ದು, ಅದಕ್ಕೆ ಪೇಟೆಂಟ್‌ ಹೊಂದಿದ್ದೇವೆ ಎಂದು ಕಂಪೆನಿಯು ವಾದಿಸಿತ್ತು. FC5 ತಳಿಯ ಆಲೂಗಡ್ಡೆಯು ಕಡಿಮೆ ತೇವಾಂಶವನ್ನು ಹೊಂದಿದ್ದು ಚಿಪ್ಸ್‌ನಂತಹ ತಿಂಡಿಗಳನ್ನು ತಯಾರಿಸಲು ಉತ್ತಮವಾದ ಆಯ್ಕೆಯಾಗಿದೆ.

ಇದನ್ನೂ ಓದಿ:MSP ಕುರಿತ ಆರು ಸುಳ್ಳು ಪ್ರಚಾರಗಳು ಮತ್ತು ಅಸಲೀ ವಾಸ್ತವಗಳು: ಯೋಗೇಂದ್ರ ಯಾದವ್

ಕಂಪೆನಿಯು ನ್ಯಾಯಾಲಯದಲ್ಲಿ ದಾವೆ ಹೂಡಿದ ನಂತರ ರೈತರು ಅದರ ವಿರುದ್ದ ಸಿಡಿದೆದ್ದು, ಪೆಪ್ಸಿ ಕಂಪೆನಿಯನ್ನು ಬಹಿಷ್ಕಾರ ಮಾಡಿದ್ದರು. ಇದರಿಂದಾಗಿ ಕಂಪೆನಿಗೆ ನಷ್ಟವಾಗುತ್ತಿದ್ದಂತೆ ಎಚ್ಚೆತ್ತು, ಅದೇ ವರ್ಷ ಮೊಕದ್ದಮೆಗಳನ್ನು ಹಿಂತೆಗೆದುಕೊಂಡು, ಸಮಸ್ಯೆಯನ್ನು ಸೌಹಾರ್ದಯುತವಾಗಿ ಇತ್ಯರ್ಥಗೊಳಿಸುವುದಾಗಿ ಹೇಳಿತ್ತು.

ಆದರೆ, ಪೆಪ್ಸಿ ಪಂಪೆನಿಯ ‘ಎಫ್‌ಸಿ 5’ ಆಲೂಗೆಡ್ಡೆ ಪ್ರಭೇದಕ್ಕೆ ನೀಡಲಾದ ಪೇಟೆಂಟ್‌ ಅನ್ನು ಹಿಂಪಡೆಯಲು ಪಿಪಿವಿಎಫ್ಆರ್ ಪ್ರಾಧಿಕಾರಕ್ಕೆ ರೈತ ಹಕ್ಕುಗಳ ಹೋರಾಟಗಾರ್ತಿ ಕವಿತಾ ಕುರುಗಂಟಿ ಅರ್ಜಿ ಸಲ್ಲಿಸಿದ್ದರು. ಅವರು ಅರ್ಜಿಯಲ್ಲಿ, ಭಾರತದ ನಿಯಮಗಳು ಬೀಜ ಪ್ರಭೇದಗಳ ಮೇಲೆ ಪೇಟೆಂಟ್ ಅನ್ನು ಅನುಮತಿಸುವುದಿಲ್ಲ ಎಂದು ಉಲ್ಲೇಖಿಸಿದ್ದರು.

ಇದೀಗ, ಬೀಜ ವೈವಿಧ್ಯದ ಮೇಲೆ ಪೆಪ್ಸಿ ಕಂಪೆನಿಯು ಪೇಟೆಂಟ್ ಪಡೆಯಲು ಸಾಧ್ಯವಿಲ್ಲ ಎಂಬ ಕವಿತಾ ಕುರುಗಂಟಿಯವರ ವಾದವನ್ನು PPVFR ಪ್ರಾಧಿಕಾರವು ಒಪ್ಪಿಕೊಂಡಿದೆ.

“ಪೆಪ್ಸಿ ಕಂಪೆನಿಗೆ ನೀಡಲಾದ ನೋಂದಣಿ ಪ್ರಮಾಣಪತ್ರವನ್ನು…ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ” ಎಂದು ಪಿಪಿವಿಎಫ್ಆರ್ ಪ್ರಾಧಿಕಾರದ ಅಧ್ಯಕ್ಷ ಕೆ.ವಿ. ಪ್ರಭು ಆದೇಶದಲ್ಲಿ ತಿಳಿಸಿದ್ದಾರೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಕವಿತಾ ಕುರುಗಂಟಿ, “ರೈತರಿಗೆ ಎರೆಡೆರೆಡು ವಿಜಯ ಸಿಕ್ಕಿದೆ. ಮೊದಲನೆಯದು ಈ ಹಿಂದೆ ರೈತರ ಮೇಲೆ ದಾವೆ ಹೂಡಿ ವಾಪಾಸು ಪಡೆದುಕೊಂಡಿರುವುದು. ಇನ್ನೊಂದು ಬೀಜದ ಮೇಲಿನ ಪೇಟೆಂಟ್ ವಾಪಾಸು ಪಡೆದಿರುವುದು. ಈ ದೇಶದಲ್ಲಿ ರೈತನೊಬ್ಬ ತಾನು ತನ್ನ ಗದ್ದೆಯಲ್ಲಿ ಯಾವ ಬೆಳೆ ಬೆಳೆಯ ಬೇಕು ಎಂಬ ನಿರ್ಧಾರ ಹಕ್ಕು ರೈತನ ಬಳಿಯಲ್ಲೇ ಉಳಿಯಬೇಕು. ಯಾವುದೇ ಬೆಳೆಯನ್ನು ಬೆಳೆಯಲು ರೈತ ಸ್ವತಂತ್ರ ಆಗಿರಬೇಕು. ಅದಕ್ಕಾಗಿ ನಾವು ಎಲ್ಲಿಯವರೆಗೆ ಕೂಡಾ ಹೋರಾಟ ನಡೆಸುತ್ತೇವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ:ಇದು ಫ್ಯಾಸಿಸ್ಟರು, ಬಂಡವಾಳಿಗರು V/S ದಮನಿತರ ಸ್ವಾಭಿಮಾನದ ನಡುವಿನ ಹೋರಾಟ…!

ಪಿಪಿವಿಎಫ್ಆರ್ ಆದೇಶಕ್ಕೆ ಪ್ರತಿಕ್ರಿಯಿಸಿದ ಪೆಪ್ಸಿ ಕಂಪೆನಿಯ ಇಂಡಿಯಾ ವಕ್ತಾರರು, “PPVFR ಪ್ರಾಧಿಕಾರವು ಜಾರಿಗೊಳಿಸಿದ ಆದೇಶವನ್ನು ನಾವು ನೋಡಿದ್ದೇವೆ. ಈ ಬಗ್ಗೆ ಅದನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿದ್ದೇವೆ” ಎಂದು ತಿಳಿಸಿದ್ದಾರೆ.

FC5 ಪ್ರಭೇದದ ಆಲೂಗಡ್ಡೆಯನ್ನು ತಾನು ಅಭಿವೃದ್ಧಿಪಡಿಸಿದ್ದಾಗಿ ಪೆಪ್ಸಿ ಕಂಪೆನಿಯು ವಾದಿಸಿದೆ. ಜೊತೆಗೆ 2016 ರಲ್ಲಿ ಅದರ ಗುಣಲಕ್ಷಣವನ್ನು ನೋಂದಾಯಿಸಿದ್ದೇವೆ ಎಂದು ಅದು ಸಮರ್ಥಿಸಿಕೊಂಡಿದೆ.

ಪೆಪ್ಸಿ ಕಂಪೆನಿಯು 1989 ರಲ್ಲಿ ಭಾರತದಲ್ಲಿ ತನ್ನ ಮೊದಲ ಆಲೂಗೆಡ್ಡೆ ಚಿಪ್ಸ್ ಸ್ಥಾವರವನ್ನು ಸ್ಥಾಪಿಸಿತ್ತು. ಕಂಪನಿಯು FC5 ಬೀಜದ ಪ್ರಭೇದವನ್ನು ರೈತರಿಗೆ ಪೂರೈಸುತ್ತದೆ ಮತ್ತು ನಂತರ ಅವರಿಂದ ಉತ್ಪನ್ನಗಳನ್ನು ನಿಗದಿತ ಬೆಲೆಗೆ ಖರೀದಿ ಮಾಡುತ್ತದೆ.

PPVFR ಪ್ರಾಧಿಕಾರದ ತೀರ್ಪನ್ನು ಶ್ಲಾಘಿಸಿದ ಗುಜರಾತ್‌ನ ಆಲೂಗಡ್ಡೆ ರೈತರು ಇದು ರೈತರ ​​ವಿಜಯ ಎಂದು ಕರೆದಿದ್ದಾರೆ.

“ಇದು ಭಾರತದ ರೈತರಿಗೆ ದೊಡ್ಡ ವಿಜಯವಾಗಿದೆ. ದೇಶದಲ್ಲಿ ಯಾವುದೇ ಬೆಳೆಗಳನ್ನು ಬೆಳೆಯುವ ಅವರ ಹಕ್ಕನ್ನು ಈ ಆದೇಶವು ಪುನರುಚ್ಚರಿಸುತ್ತದೆ” ಎಂದು 2019 ರಲ್ಲಿ ಪೆಪ್ಸಿ ಕಂಪೆನಿಯು ಮೊಕದ್ದಮೆ ಹೂಡಿದ್ದ ಗುಜರಾತ್ ಮೂಲದ ರೈತರಲ್ಲಿ ಒಬ್ಬರಾದ ಬಿಪಿನ್ ಪಟೇಲ್ ಹೇಳಿದ್ದಾರೆ ಎಂದು ದಿ ವೈರ್‌ ವರದಿ ಮಾಡಿದೆ.

ಇದನ್ನೂ ಓದಿ:ಎಂಎಸ್‌ಪಿ ಕಾನೂನು ಜಾರಿಗೆ ಸಮಿತಿ ರಚಿಸಲು ಕೇಂದ್ರ ನಿರ್ಧಾರ: 5 ಜನ ರೈತ ಪ್ರತಿನಿಧಿಗಳಿರಲು ಒತ್ತಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಂದುವರಿದ ಬಿಜೆಪಿ ನಾಯಕರ ದ್ವೇಷ ಭಾಷಣ; ‘ಕಾಂಗ್ರೆಸ್ ದೇಶದಲ್ಲಿ ಷರಿಯಾ ಕಾನೂನು ಜಾರಿಗೆ ತರಲಿದೆ’...

0
ಸಂಪತ್ತು ಮರು ಹಂಚಿಕೆ ಕುರಿತು ದ್ವೇಷ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರ ನಂತರ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಮಂಗಳವಾರ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 'ಕಾಂಗ್ರೆಸ್...