ನ್ಯಾಯಾಂಗದಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ನೀಡಬೇಕು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್.ವಿ.ರಮಣ ಅವರು ಕರೆ ನೀಡಿದ್ದು, ದೇಶದ್ಯಾಂತ ಇರುವ ಕಾನೂನು ಕಾಲೇಜುಗಳಲ್ಲಿಯೂ ಮಹಿಳೆಯರಿಗೆ ಅರ್ಧದಷ್ಟು ಮೀಸಲಾತಿ ನೀಡಬೇಕೆಂಬ ಒತ್ತಾಯವನ್ನು ಬೆಂಬಲಿಸಿದ್ದಾರೆ.
ಹೊಸದಾಗಿ ಸುಪ್ರೀಂಕೋರ್ಟ್‌ಗೆ ನೇಮಕವಾದ ಒಂಬತ್ತು ಮಂದಿ ನ್ಯಾಯಮೂರ್ತಿಗಳು ಹಾಗೂ ಸಿಜೆಐ ಅವರಿಗೆ ಸುಪ್ರೀಂಕೋರ್ಟ್‌ನ ಮಹಿಳಾ ಅಡ್ವೊಕೇಟ್‌ಗಳು ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಇದು ನಿಮ್ಮ ಹಕ್ಕು, ಅದಕ್ಕಾಗಿ ನೀವು ಒತ್ತಾಯಿಸಬಹುದು” ಎಂದಿದ್ದಾರೆ.
“ಮಹಿಳೆಯರಿಗೆ ನ್ಯಾಯಾಂಗದಲ್ಲಿ ಶೇ. 50ರಷ್ಟು ಮೀಸಲಾತಿ ನೀಡುವ ಅಗತ್ಯತೆ ಇದೆ. ಇದು ಸಾವಿರ ವರ್ಷಗಳ ದಬ್ಬಾಳಿಕೆಯ ವಿಷಯ. ಪ್ರಾಥಮಿಕ ಹಂತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಶೇ. 30ಕ್ಕಿಂತ ಕಡಿಮೆ ಮಹಿಳಾ ನ್ಯಾಯಾಧೀಶರಿದ್ದಾರೆ. ಇದು ಹೈಕೋರ್ಟ್‌ನಲ್ಲಿ ಶೇ. 11.5ರಷ್ಟಿದ್ದು, ಸುಪ್ರೀಂಕೋರ್ಟ್‌ನಲ್ಲಿ ಶೇ. 11-12ರಷ್ಟಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.
“17 ಲಕ್ಷ ವಕೀಲರಲ್ಲಿ ಶೇ. 15ರಷ್ಟು ಮಾತ್ರ ಮಹಿಳೆಯರಿದ್ದಾರೆ. ರಾಜ್ಯ ಮಟ್ಟದ ಬಾರ್ ಕೌನ್ಸಿಲ್‌ಗಳಲ್ಲಿ ಶೇಕಡಾ ಎರಡರಷ್ಟು ಮಾತ್ರ ಆಯ್ಕೆಯಾದ ಮಹಿಳಾ ಪ್ರತಿನಿಧಿಗಳಿದ್ದಾರೆ. ಬಾರ್ ಕೌನ್ಸಿಲ್ ಆಫ್ ಇಂಡಿಯಾ ಸಮಿತಿಯಲ್ಲಿ ಒಬ್ಬರೇ ಒಬ್ಬರು ಮಹಿಳಾ ಪ್ರತಿನಿಧಿಗಳು ಯಾಕಿಲ್ಲ ಎಂದು ಕೇಳಬಯಸುತ್ತೇನೆ. ಈ ತಪ್ಪನ್ನು ತಿದ್ದುವ ಅಗತ್ಯವಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ಜಗತ್ತಿನ ಕಾರ್ಮಿಕರೆಲ್ಲರೂ ಒಂದಾಗಿ, ಕಳೆದುಕೊಳ್ಳುವಂತಹದ್ದೇನೂ ಇಲ್ಲ, ನಿಮ್ಮ ಸಂಕೋಲೆಗಳನ್ನು ಹೊರತುಪಡಿಸಿ’ ಎಂದು ಕಾರ್ಲ್ ಮಾರ್ಕ್ಸ್ ಹೇಳಿದ್ದ. ಅದನ್ನು ಸ್ವಲ್ಪ ಬದಲಾಯಿಸಿ ಹೇಳುತ್ತೇನೆ. ‘ಜಗತ್ತಿನ ಮಹಿಳೆಯರೆಲ್ಲರೂ ಒಂದಾಗಿ, ಕಳೆದುಕೊಳ್ಳುವಂತಹದ್ದೇನೂ ಇಲ್ಲ, ನಿಮ್ಮ ಸಂಕೋಲೆಗಳನ್ನು ಹೊರತುಪಡಿಸಿ” ಎಂದಿದ್ದಾರೆ.


