ಪರೇಶ್ ರಾವಲ್ ಅವರ ಮುಂಬರುವ ಚಿತ್ರ ‘ದಿ ತಾಜ್ ಸ್ಟೋರಿ’ ಕೋಮು ಸಾಮರಸ್ಯವನ್ನು ಹಾಳು ಮಾಡುತ್ತದೆ ಎಂದು ಆರೋಪಿಸಿ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಈಗಾಗಲೇ ವಿವಾದಾತ್ಮಕ ಪೋಸ್ಟರ್ ಬಿಡುಗಡೆ ಮಾಡಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದ ‘ದಿ ತಾಜ್ ಸ್ಟೋರಿ’ ಚಿತ್ರದ ವಿರುದ್ಧ ಐತಿಹಾಸಿಕ ಸಂಗತಿಗಳನ್ನು ವಿರೂಪಗೊಳಿಸಿದೆ ಮತ್ತು ಕೋಮು ಸಾಮರಸ್ಯವನ್ನು ಕದಡಬಹುದು ಎಂದು ಆರೋಪಿಸಿ, ಅದರ ಬಿಡುಗಡೆಯ ವಿರುದ್ಧ ರಕ್ಷಣೆ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಲಾಗಿದೆ.
ವಕೀಲ ಶಕೀಲ್ ಅಬ್ಬಾಸ್ ಸಲ್ಲಿಸಿರುವ ಅರ್ಜಿಯಲ್ಲಿ, ಅಕ್ಟೋಬರ್ 31 ರಂದು ರಾಷ್ಟ್ರವ್ಯಾಪಿ ಬಿಡುಗಡೆಯಾಗಲಿರುವ ಈ ಚಿತ್ರವು “ಸಂಪೂರ್ಣವಾಗಿ ಕಲ್ಪಿತ ಸಂಗತಿಗಳನ್ನು ಆಧರಿಸಿದೆ” ಮತ್ತು “ಭಾರತದ ವಿವಿಧ ಸಮುದಾಯಗಳ ನಡುವೆ ಕೋಮು ಗಲಭೆಯನ್ನು ಸೃಷ್ಟಿಸುವ ಒಂದು ಹೆಜ್ಜೆ” ಎಂದು ವಾದಿಸಲಾಗಿದೆ.
“ಚಿತ್ರದ ಟೀಸರ್ ಮತ್ತು ಪ್ರಚಾರದ ಪೋಸ್ಟರ್‌ಗಳು ತಾಜ್ ಮಹಲ್ ಗುಮ್ಮಟವನ್ನು ಎತ್ತಿ ಅದರಿಂದ ಹೊರಹೊಮ್ಮುವ ಶಿವನ ಆಕೃತಿಯನ್ನು ಬಹಿರಂಗಪಡಿಸುವ ಚಿತ್ರಣವನ್ನು ತೋರಿಸುತ್ತವೆ. ಈ ಅಂಶಗಳು ಕೋಮು ಸಾಮರಸ್ಯ ಮತ್ತು ಐತಿಹಾಸಿಕ ಹಕ್ಕುಗಳ ಸತ್ಯಾಸತ್ಯತೆಯ ಬಗ್ಗೆ ಸಾಕಷ್ಟು ಸಾರ್ವಜನಿಕ ಚರ್ಚೆ ಮತ್ತು ಕಳವಳವನ್ನು ಹುಟ್ಟುಹಾಕಿವೆ” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಅರ್ಜಿದಾರರು ಭಾರತ ಒಕ್ಕೂಟ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC), ಚಿತ್ರದ ನಿರ್ಮಾಪಕರು, ಸ್ವರ್ಣಿಮ್ ಗ್ಲೋಬಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ನಿರ್ಮಾಪಕ ಸಿಎ ಸುರೇಶ್ ಝಾ, ನಿರ್ದೇಶಕ ತುಷಾರ್ ಅಮರೀಶ್ ಗೋಯೆಲ್, ಬರಹಗಾರ ಸೌರಭ್ ಎಂ ಪಾಂಡೆ, ಜೀ ಮ್ಯೂಸಿಕ್ ಕಂಪನಿ ಮತ್ತು ನಟ ಪರೇಶ್ ರಾವಲ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ.
“ಪ್ರತಿವಾದಿಗಳು ತಾಜ್ ಮಹಲ್ ಬಗ್ಗೆ ತಪ್ಪು ಮಾಹಿತಿಯನ್ನು ಹರಡುವ ಮೂಲಕ ನಿಖರವಾದ ಇತಿಹಾಸವನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಆದಾಗ್ಯೂ, ಸಿಬಿಎಫ್‌ಸಿ ಮತ್ತು ಇತರ ಅಧಿಕಾರಿಗಳು ಸದರಿ ಚಿತ್ರದ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಲಾಗಿದೆ.
ಜೊತೆಗೆ ಈ ಚಿತ್ರವು ‘ಊಹಾತ್ಮಕ ಸಿದ್ಧಾಂತಗಳನ್ನು ಉತ್ತೇಜಿಸುತ್ತದೆ’ ಎಂದು ತಿಳಿಸಿದ್ದಾರೆ. ಅರ್ಜಿದಾರರ ಪ್ರಕಾರ ಈ ಚಿತ್ರವು “ತಾಜ್ ಮಹಲ್ ಮೂಲದ ಬಗ್ಗೆ ಸಾಂಪ್ರದಾಯಿಕ ನಿರೂಪಣೆಯನ್ನು ಪ್ರಶ್ನಿಸುವ ಉದ್ದೇಶವನ್ನು ಹೊಂದಿದೆ” ಮತ್ತು ದಿವಂಗತ ಇತಿಹಾಸಕಾರ ಪಿ.ಎನ್. ಓಕ್ ಅವರೊಂದಿಗೆ ಸಂಬಂಧಿಸಿದ “ಊಹಾತ್ಮಕ ಅಥವಾ ಸುಳ್ಳು ಸಿದ್ಧಾಂತಗಳನ್ನು” ಉತ್ತೇಜಿಸುತ್ತದೆ ತಿಳಿಸಿದ್ದಾರೆ.


