ಭೋಪಾಲ್: ಪಿತಾಮ್‌ಪುರದಲ್ಲಿ ಯೂನಿಯನ್ ಕಾರ್ಬೈಡ್ ತ್ಯಾಜ್ಯ ವಿಲೇವಾರಿ ಮಾಡುವುದರಿಂದ ಹತ್ತಿರದ ಪ್ರದೇಶಗಳ ಜನರಿಗೆ ತೊಂದರೆಯಾಗುವುದಿಲ್ಲ ಎಂದು ಮಧ್ಯಪ್ರದೇಶ ಸರ್ಕಾರದಿಂದ ಭರವಸೆ ನೀಡುವಂತೆ ಕೋರಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್ ಜಿಟಿ)ದ ಭೋಪಾಲ್ ಪೀಠದಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಜಬಲ್‌ಪುರ ಮೂಲದ ಸಾಮಾಜಿಕ ಸಂಘಟನೆಯೊಂದು ಸಲ್ಲಿಸಿರುವ ಅರ್ಜಿಯಲ್ಲಿ, ತ್ಯಾಜ್ಯವನ್ನು ವಿಲೇವಾರಿ ಮಾಡಲು ಸಾಗಿಸಲಾಗಿರುವ ಧಾರ್ ಜಿಲ್ಲೆಯ ಪಿತಾಂಪುರ್‌ನಲ್ಲಿನ ಜನರ ಸುರಕ್ಷತೆಯ ಪ್ರಮಾಣ ಮಾಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡುವಂತೆ ಎನ್‌ಜಿಟಿಯನ್ನು ಒತ್ತಾಯಿಸಲಾಗಿದೆ.
ಡಿಸೆಂಬರ್ 2-3, 1984ರ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿರುವ ಯೂನಿಯನ್ ಕಾರ್ಬೈಡ್ ಕೀಟನಾಶಕ ಕಾರ್ಖಾನೆಯಿಂದ ಮೀಥೈಲ್ ಐಸೊಸೈನೇಟ್ (MIC) ಅನಿಲ ಸೋರಿಕೆಯಾಗಿತ್ತು. ಆಗ ಕನಿಷ್ಠ 5,479 ಜನರು ಸಾವನ್ನಪ್ಪಿದ್ದರು ಮತ್ತು ಸಾವಿರಾರು ಜನರು ಗಂಭೀರವಾದ ಗಾಯಗಳು ಮತ್ತು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
ಮಧ್ಯಪ್ರದೇಶ ಹೈಕೋರ್ಟ್‌ನ ಆದೇಶದ ಮೇರೆಗೆ ಸುಮಾರು 337 ಟನ್‌ಗಳಷ್ಟು ಯೂನಿಯನ್ ಕಾರ್ಬೈಡ್ ತ್ಯಾಜ್ಯವು ಗುರುವಾರದಂದು ಭೋಪಾಲ್‌ನಿಂದ ಪಿತಾಂಪುರ್‌ಗೆ ವಿಲೇವಾರಿಯಾಗಿದೆ.
ಈ ತ್ಯಾಜ್ಯವನ್ನು ವಿಲೇವಾರಿ ಮಾಡುವುದರಿಂದ ಆ ಪ್ರದೇಶದ ನಿವಾಸಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಪ್ರಮಾಣ ಮಾಡುವಂತೆ ಧಾರ್‌ನಲ್ಲಿರುವ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಎನ್‌ಜಿಟಿಯ ಮುಂದೆ ಸಲ್ಲಿಸಿದ ಅರ್ಜಿಯಲ್ಲಿ ಕೋರಲಾಗಿದೆ.
ಇದಲ್ಲದೆ, ಸಾರ್ವಜನಿಕ ಕಳವಳವನ್ನು ನಿವಾರಿಸಲು ಈ ತ್ಯಾಜ್ಯವನ್ನು ವಿಲೇವಾರಿ ಮಾಡುವ ಬಗ್ಗೆ ನಿರ್ದಿಷ್ಟ ವರದಿಯನ್ನು ಹಿಂದಿ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟಿಸಲು ಮಧ್ಯಪ್ರದೇಶ ಸರ್ಕಾರಕ್ಕೆ ನಿರ್ದೇಶಿಸುವಂತೆ ಮನವಿಯಲ್ಲಿ ಕೋರಲಾಗಿದೆ ಎಂದು ನಾಗರೀಕ ಉಪಭೋಕ್ತ ಮಾರ್ಗದರ್ಶಕ ಮಂಚ್‌ನ ಪಿ.ಜಿ.ನಾಜಪಾಂಡೆ ಮತ್ತು ಸಾಮಾಜಿಕ ಕಾರ್ಯಕರ್ತ ಸುನೀಲ್ ಭಾರ್ಗವ್ ಹೇಳಿದ್ದಾರೆ.
ಸಾಮಾಜಿಕ ಸಂಘಟನೆಯು ಶುಕ್ರವಾರ ಎನ್‌ಜಿಟಿಗೆ ಅರ್ಜಿ ಸಲ್ಲಿಸಿದೆ ಎಂದು ನಜಪಾಂಡೆ ಪಿಟಿಐಗೆ ತಿಳಿಸಿದ್ದಾರೆ.
ಡಿಸೆಂಬರ್ 1984 ರಲ್ಲಿ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ವಿಷಕಾರಿ ಮೀಥೈಲ್ ಐಸೊಸೈನೇಟ್ ಅನಿಲ ಸೋರಿಕೆಯಿಂದ ಸಾವಿರಾರು ಜನರು ಸಾವನ್ನಪ್ಪಿದ ಕಾರಣ ನಿವಾಸಿಗಳಲ್ಲಿ ಆತಂಕವುಂಟಾಗಿದೆ ಎಂದು ಅವರು ಹೇಳಿದ್ದಾರೆ.
ಆದ್ದರಿಂದ, ಅವರ ಕಳವಳಗಳನ್ನು ನಿವಾರಿಸಲು ಈ ಅರ್ಜಿಯನ್ನು ನಾವು ಎನ್‌ಜಿಟಿಗೆ ವರ್ಗಾಯಿಸಿದ್ದೇವೆ ಎಂದು ನಜಪಾಂಡೆ ತಿಳಿಸಿದರು.
ನಮ್ಮ ಪ್ರದೇಶದಲ್ಲಿ ಈ ವಿಷಕಾರಿ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಬೇಡ ಎಂದು ಪಿತಾಂಪುರದ ತ್ಯಾಜ್ಯ ದಹನ ಘಟಕದ ಪಕ್ಕದ ತಾರ್ಪುರದ ಹಳ್ಳಿಯ ಸ್ಥಳೀಯರ ಒತ್ತಾಯವಾಗಿದೆ. ಅಲ್ಲಿಗೆ ದೊಡ್ಡ ಪ್ರಮಾಣದ ತ್ಯಾಜ್ಯವನ್ನು ವಿಲೇವಾರಿ ಮಾಡಲು ತರಲಾಗಿದೆ. ವಿಶ್ವದ ಅತ್ಯಂತ ಭೀಕರ ಕೈಗಾರಿಕಾ ದುರಂತಗಳಲ್ಲಿ ಒಂದಾದ 1984ರ ಭೋಪಾಲ್ ಅನಿಲ ದುರಂತಕ್ಕೆ ಸಂಬಂಧಿಸಿದ ತ್ಯಾಜ್ಯವನ್ನು ವಿಲೇವಾರಿ ಮಾಡುವ ಯೋಜನೆಯು ಈ ಪ್ರದೇಶದಲ್ಲಿ ಪ್ರತಿಭಟನೆಯನ್ನು ಹುಟ್ಟುಹಾಕಿದೆ.
ಅಪಾರ ಪ್ರಮಾಣದ ವಿಷಕಾರಿ ತ್ಯಾಜ್ಯವನ್ನು ಸುಡುವುದರಿಂದ ಮನುಷ್ಯರಿಗೆ ಹಾಗೂ ಪರಿಸರಕ್ಕೆ ಅಪಾಯಕಾರಿಯಾಗಲಿದೆ. ಯಾವುದೇ ಹಾನಿಕಾರಕ ಪರಿಣಾಮಗಳಿಲ್ಲ ಎಂದು ಮಧ್ಯಪ್ರದೇಶ ಸರ್ಕಾರ ಭರವಸೆ ನೀಡಲು ಪ್ರಯತ್ನಿಸಿದರೂ ಈಗ ಗ್ರಾಮಸ್ಥರು ಭಯಪಡುತ್ತಿದ್ದಾರೆ. ಸ್ಥಳೀಯ ಆಡಳಿತವು ಪಿತಾಂಪುರದ ತ್ಯಾಜ್ಯ ವಿಲೇವಾರಿ ಘಟಕದ ಸುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ ಮತ್ತು ಹೆಚ್ಚಿನ ಪೊಲೀಸ್ ಪಡೆಯನ್ನು ನಿಯೋಜಿಸಿದೆ.
ತಾರ್ಪುರದ ಅನೇಕ ನಿವಾಸಿಗಳು ಪಿತಾಂಪುರದ ಕೈಗಾರಿಕಾ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಲಕ್ಷಾಂತರ ರೈತರ ಜೀವಕ್ಕಿಂತ ನನ್ನ ಜೀವ ಮುಖ್ಯವಲ್ಲ – ರೈತ ನಾಯಕ ದಲ್ಲೆವಾಲ್


