ಮುಂದಿನ ಎಂಟರಿಂದ ಹತ್ತು ವರ್ಷಗಳವರೆಗೆ ಪೆಟ್ರೋಲ್ ಮತ್ತು ಡೀಸೆಲ್‌ಗಳನ್ನು ಜಿಎಸ್‌ಟಿ ಅಡಿಯಲ್ಲಿ ತರಲು ಸಾಧ್ಯವಿಲ್ಲ, ಯಾಕೆಂದರೆ ಇದು ಎಲ್ಲಾ ರಾಜ್ಯಗಳಿಗೆ ವಾರ್ಷಿಕ 2 ಲಕ್ಷ ಕೋಟಿ ಆದಾಯ ನಷ್ಟವನ್ನುಂಟು ಮಾಡುತ್ತದೆ ಎಂದು ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿ ಬುಧವಾರ ಹೇಳಿದ್ದಾರೆ.
ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 5 ಲಕ್ಷ ಕೋಟಿ ರೂ.ಗಳ ತೆರಿಗೆಯನ್ನು ವಸೂಲಿ ಮಾಡುತ್ತವೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ಅಡಿಯಲ್ಲಿ ತಂದರೆ, ಅವುಗಳ ಮೇಲೆ ಶೇಕಡಾ 28 ಕ್ಕಿಂತ ಜಾಸ್ತಿ ತೆರಿಗೆ ವಸೂಲಿ ಮಾಡಲಾಗುವುದಿಲ್ಲ, ಏಕೆಂದರೆ ಇದು ಜಿಎಸ್‌ಟಿಯ ಅತ್ಯುನ್ನತ ತೆರಿಗೆ ಆಗಿದೆ ಎಂದು ಹಣಕಾಸು ಮಸೂದೆ 2021 ಕುರಿತು ಚರ್ಚೆಯಲ್ಲಿ ಭಾಗವಹಿಸಿ ಸುಶಿಲ್ ಮೋದಿ ರಾಜ್ಯಸಭೆಗೆ ತಿಳಿಸಿದ್ದಾರೆ.
ಪ್ರಸ್ತುತ, ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಶೇಕಡಾ 60 ರಷ್ಟು ತೆರಿಗೆ ಸಂಗ್ರಹಿಸಲಾಗುತ್ತಿದೆ. ಇದರಿಂದಾಗಿ ಕೇಂದ್ರ ಮತ್ತು ರಾಜ್ಯಗಳಿಗೆ 2 ಲಕ್ಷ ಕೋಟಿ ರೂ.ಗಳಿಂದ 2.5 ಲಕ್ಷ ಕೋಟಿಗಳಷ್ಟು ಕೊರತೆ ಉಂಟಾಗುತ್ತದೆ ಎಂದು ಅವರು ಸದನದಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ: ಕೇರಳದಲ್ಲಿ ಸಾಕ್ಷರತೆಯಿದೆ, ಜನ ಯೋಚಿಸುತ್ತಾರೆ ಹಾಗಾಗಿ ಪಕ್ಷ ಬೆಳೆದಿಲ್ಲ: ಬಿಜೆಪಿಯ ಏಕೈಕ ಶಾಸಕ
ಕಳೆದ ಒಂದು ವರ್ಷದಿಂದ ಪೆಟ್ರೋಲ್ ದರ ಏರಿಕೆಯಾಗುತ್ತಿದ್ದು, ಈ ದೃಷ್ಟಿಯಿಂದ ಸುಶಿಲ್ ಮೋದಿಯ ಹೇಳಿಕೆಯು ಮಹತ್ವವನ್ನು ಪಡೆದುಕೊಂಡಿದೆ. ಪೆಟ್ರೋಲ್ ಈಗಾಗಲೇ ಕೆಲವು ರಾಜ್ಯಗಳಲ್ಲಿ ಪ್ರತಿ ಲೀಟರ್‌ಗೆ 100 ರೂ.ಗಳಾಗಿದೆ.
ಒಂದು ವರ್ಷದ ಅವಧಿಯಲ್ಲಿ ಮಾಡಲಾದ ಬೆಲೆಗಳ ಮೊದಲ ಕಡಿತದಲ್ಲಿ, ಫೆಬ್ರವರಿಯ ಆರಂಭದಿಂದ ಅಂತರರಾಷ್ಟ್ರೀಯ ತೈಲ ಬೆಲೆಗಳು ಅತ್ಯಂತ ಕೆಳಮಟ್ಟಕ್ಕೆ ಇಳಿದಿದ್ದರಿಂದ ಬುಧವಾರ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 18 ಪೈಸೆ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 17 ಪೈಸೆ ಕಡಿತಗೊಳಿಸಲಾಯಿತು.
ಇದರಿಂದಾಗಿ ದೇಶಾದ್ಯಂತ ದರಗಳನ್ನು ಕಡಿಮೆ ಮಾಡಲಾಗಿದೆ ಮತ್ತು ಸ್ಥಳೀಯ ತೆರಿಗೆ ವಿಧಿಸುವಿಕೆಯನ್ನು (ವ್ಯಾಟ್) ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ಇದು ಬದಲಾಗುತ್ತದೆ. ಒಂದು ವರ್ಷದಲ್ಲಿ ಇಂಧನ ಬೆಲೆಯಲ್ಲಿ ಮಾಡಲಾದ ಮೊದಲ ಕಡಿತವಾಗಿದೆ. ಬೆಲೆಗಳನ್ನು ಕೊನೆಯದಾಗಿ ಮಾರ್ಚ್ 16, 2020 ರಂದು ಕಡಿಮೆಗೊಳಿಸಲಾಗಿತ್ತು.
ಇದನ್ನೂ ಓದಿ: ದಶಕಗಳಿಂದ ದುಡಿದರೂ ಕನಿಷ್ಟ ಭದ್ರತೆಯಿಲ್ಲ: ಕೂಲಿ ನೇಕಾರ ಕಾರ್ಮಿಕರ ಗೋಳು ಕೇಳುವವರ್ಯಾರು?


