ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಶನಿವಾರ (ಜೂನ್ 15) ಆದೇಶ ಹೊರಡಿಸಿದೆ.
ಇದರಿಂದ ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 3.02 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ಬೆಲೆ 3 ರೂ. ಹೆಚ್ಚಳವಾಗಿದೆ.
ಪೆಟ್ರೋಲ್ ಚಿಲ್ಲರೆ ಮಾರಾಟ ದರ ಪ್ರತಿ ಲೀಟರ್‌ಗೆ ಇಂದಿನಿಂದ 102.85 ರೂ. ಹಾಗೂ ಡೀಸೆಲ್ ದರ ಪ್ರತಿ ಲೀಟರ್‌ಗೆ 88.93 ರೂ. ಆಗಲಿದೆ. ಈ ದರವು ಸಾಗಣೆ ವೆಚ್ಚದ ಆಧಾರದಲ್ಲಿ ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ವ್ಯತ್ಯಾಸವಾಗಲಿದೆ.

ದರ ಪರಿಷ್ಕರಣೆಯ ಬಳಿಕ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 99.84 ರೂ.ನಿಂದ 103ಗೆ ರೂ. ಏರಿಕೆಯಾಗಿದೆ. ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 85.93 ರೂ.ನಿಂದ 89.20 ರೂ.ಗೆ ಏರಿಕೆ ಕಂಡಿದೆ.
ಸರ್ಕಾರ ಹೊರಡಿಸಿದ ರಾಜ್ಯ ಪತ್ರದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಬಗ್ಗೆ ತಿಳಿಸಲಾಗಿದೆ. ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು ಶೇ.25.92ರಿಂದ ಶೇ.29.84ಕ್ಕೆ ಹೆಚ್ಚಿಸಲಾಗಿದೆ. ಇದೇ ರೀತಿ ಡೀಸೆಲ್ ಮೇಲಿನ ವ್ಯಾಟ್ ಅನ್ನು ಶೇ.14.34ರಿಂದ ಶೇ.18.44ಕ್ಕೆ ಏರಿಕೆ ಮಾಡಲಾಗಿದೆ.
ಇದನ್ನೂ ಓದಿ : ಕೊಲೆ ಪ್ರಕರಣ: ನಟ ದರ್ಶನ್, ಪವಿತ್ರಾ ಗೌಡ ಸೇರಿ ಆರೋಪಿಗಳು ಮತ್ತೆ ಪೊಲೀಸ್ ಕಸ್ಟಡಿಗೆ


