ಸೆಂಟ್ರಲ್ ಫಿಲಿಪೈನ್ಸ್‌ನಲ್ಲಿ ಸಂಭವಿಸಿದ 6.9 ತೀವ್ರತೆಯ ಭೂಕಂಪದಲ್ಲಿ ಸಾವಿಗೀಡಾದವರ ಸಂಖ್ಯೆ 69ಕ್ಕೆ ಏರಿಕೆಯಾಗಿದೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಕುಸಿದ ಕಟ್ಟಡಗಳ ಅವಶೇಷಗಳಡಿ ಸಿಲುಕಿಕೊಂಡಿರುವ ಜನರನ್ನು ರಕ್ಷಿಸಲು ರಕ್ಷಣಾ ತಂಡಗಳು ಕಾರ್ಯಪ್ರವೃತ್ತವಾಗಿವೆ. ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ದುರಂತದಲ್ಲಿ 100ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಭೂಕಂಪದಿಂದ ಹಾನಿಗೊಳಗಾಗಿರುವ ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನು ಮರುಸ್ಥಾಪಿಸಲು ಸಂಬಂಧಪಟ್ಟ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದೆ.
ಫಿಲಿಪೈನ್ಸ್‌ನ ಸೆಬೂ ಪ್ರಾಂತ್ಯದ ಉತ್ತರ ಭಾಗದಲ್ಲಿರುವ ಬೊಗೊ ನಗರದ ಬಳಿ ಕಡಲ ತೀರದಲ್ಲಿ ಮಂಗಳವಾರ ರಾತ್ರಿ 10 ಗಂಟೆಯ ಸುಮಾರಿಗೆ ಕಂಪನ ಸಂಭವಿಸಿದೆ. ಇದರ ಕೇಂದ್ರ ಬಿಂದು ಬೊಗೊ ನಗರಕ್ಕೆ ಸಮೀಪದಲ್ಲೇ ಇದೆ. ಗಾಯಾಳುಗಳಿಂದ ಆಸ್ಪತ್ರೆಗಳು ತುಂಬಿವೆ, ಆಸ್ಪತ್ರೆ ಸಿಬ್ಬಂದಿ ಒತ್ತಡ ನಿಭಾಯಿಸಲು ಹರಸಾಹಸಪಡುತ್ತಿದ್ದಾರೆ ಎಂದು ರಫಿ ಅಲೆಜಾಂಡ್ರೊ ಎಂಬ ಅಧಿಕಾರಿಯೊಬ್ಬರು ಪತ್ರಕರ್ತರಿಗೆ ತಿಳಿಸಿದ್ದಾರೆ.
ಸೆಬೂ ಪ್ರಾಂತ್ಯದ ವಿಪತ್ತು ನಿರ್ವಹಣಾ ಕಚೇರಿಯ ಮಾಹಿತಿಯ ಆಧಾರದ ಮೇಲೆ 69 ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಈ ಸಂಖ್ಯೆಯನ್ನು ಇನ್ನೂ ದೃಢೀಕರಿಸಬೇಕಾಗಿದೆ ಎಂದು ಪ್ರಾದೇಶಿಕ ಸಿವಿಲ್ ಡಿಫೆನ್ಸ್ ಕಚೇರಿಯ ಮಾಹಿತಿ ಅಧಿಕಾರಿ ಜೇನ್ ಅಬಾಪೊ ಹೇಳಿದ್ದಾರೆ. ಮತ್ತೊಬ್ಬ ಅಧಿಕಾರಿಯ ಪ್ರಕಾರ, 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ರಾಯಿಟರ್ಸ್ ವರದಿ ಹೇಳಿದೆ.
ಫಿಲಿಪೈನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್, ಬದುಕುಳಿದವರಿಗೆ ಶೀಘ್ರ ಸಹಾಯ ಒದಗಿಸುವ ಭರವಸೆ ನೀಡಿದ್ದಾರೆ. ಕ್ಯಾಬಿನೆಟ್ ಕಾರ್ಯದರ್ಶಿಗಳು ಸ್ಥಳದಲ್ಲೇ ಇದ್ದು, ಪರಿಹಾರ ಕಾರ್ಯಾಚರಣೆಗಳನ್ನು ನಿರ್ದೇಶಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸಿದ್ದಾರೆ.
ಸೆಬೂ ನಗರ ಫಿಲಿಪೈನ್ಸ್‌ನ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ಇಲ್ಲಿ 34 ಲಕ್ಷ ಜನರು ವಾಸಿಸುತ್ತಾರೆ. ಭೂಕಂಪದಿಂದ ಆಗಿರುವ ಹಾನಿಯ ಹೊರತಾಗಿಯೂ, ದೇಶದ ಎರಡನೇ ಅತಿ ಜನ ನಿಬಿಡ ವಿಮಾನ ನಿಲ್ದಾಣ ಎನಿಸಿಕೊಂಡಿರುವ ಮ್ಯಾಕ್ಟಾನ್-ಸೆಬೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ.
ಸೆಬೂ ಬಳಿಕ ಭೂಕಂಪದಿಂದ ತೀವ್ರವಾಗಿ ಹಾನಿಗೊಳಗಾದ ಮತ್ತೊಂದು ನಗರವಾದ ಸ್ಯಾನ್ ರೆಮಿಜಿಯೊವನ್ನು ವಿಪತ್ತು ಘೋಷಿತ ಪ್ರದೇಶವೆಂದು ಗುರುತಿಸಲಾಗಿದೆ. ಇದರಿಂದ ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗೆ ಸಹಾಯವಾಗಲಿದೆ. ಸ್ಥಳಾಂತರಗೊಂಡವರಿಗೆ ಆಹಾರ ಮತ್ತು ನೀರಿನ ಅಗತ್ಯವಿದೆ, ಹಾಗೆಯೇ ಶೋಧ ಮತ್ತು ರಕ್ಷಣಾ ಕಾರ್ಯಕರ್ತರಿಗೆ ಸಹಾಯ ಮಾಡಲು ಭಾರೀ ಉಪಕರಣಗಳ ಅಗತ್ಯವಿದೆ ಎಂದು ನಗರದ ಉಪಮೇಯರ್ ಆಲ್ಫಿ ರೇನ್ಸ್ ಮನವಿ ಮಾಡಿದ್ದಾರೆ.
“ಭಾರೀ ಮಳೆಯಾಗುತ್ತಿದೆ ಮತ್ತು ವಿದ್ಯುತ್ ಇಲ್ಲ, ಆದ್ದರಿಂದ ನಮಗೆ ನಿಜವಾಗಿಯೂ ಸಹಾಯ ಬೇಕು. ವಿಶೇಷವಾಗಿ ನಗರದ ಉತ್ತರ ಭಾಗದಲ್ಲಿ, ಏಕೆಂದರೆ ಭೂಕಂಪದಿಂದ ನೀರಿನ ಪೂರೈಕೆ ಮಾರ್ಗಗಳು ಹಾನಿಗೊಳಗಾಗಿವೆ. ಇದರಿಂದ ನೀರಿನ ಕೊರತೆ ಎದುರಾಗಿದೆ” ಎಂದು ರೇನ್ಸ್ ಡಿಜೆಡ್‌ಎಂಎಂ ರೇಡಿಯೊಗೆ ತಿಳಿಸಿದ್ದಾರೆ.
ಸ್ಥಳೀಯ ಮಾಧ್ಯಮಗಳು, ಭೂಮಿ ಕಂಪಿಸುವಾಗ ಜನರು ತಮ್ಮ ಮನೆಗಳಿಂದ ಓಡಿಹೋಗುವ ಮತ್ತು ಕಟ್ಟಡಗಳು ಕುಸಿಯುವ ದೃಶ್ಯಗಳನ್ನು ತೋರಿಸಿವೆ. 100 ವರ್ಷಗಳಿಗಿಂತ ಹಳೆಯ ಚರ್ಚ್‌ವೊಂದು ಕುಸಿದ ದೃಶ್ಯಗಳನ್ನು ಪ್ರಕಟಿಸಿವೆ ಎಂದು ರಾಯಿಟರ್ಸ್ ವರದಿ ವಿವರಿಸಿದೆ.
ಭೂಕಂಪವು ಭೂಮಿಯಿಂದ 10 ಕಿಮೀ ಆಳದಲ್ಲಿ ಸಂಭವಿಸಿದೆ. 6.9 ತೀವ್ರತೆಯ ಪ್ರಬಲ ಕಂಪನದ ನಂತರ, 6.0 ತೀವ್ರತೆಯವರೆಗಿನ ಕೆಲವು ಸಣ್ಣ ಕಂಪನಗಳು ಆಗಿವೆ. ಆದರೆ, ಅವುಗಳಿಂದ ಸುನಾಮಿ ಅಪಾಯ ಇರಲಿಲ್ಲ. ಫಿಲಿಪೈನ್ಸ್‌ನಲ್ಲಿ ಭೂಕಂಪಗಳು ಮತ್ತು ಜ್ವಾಲಾಮುಖಿಗಳು ಸಾಮಾನ್ಯ. ಏಕೆಂದರೆ ಆ ದೇಶ “ರಿಂಗ್ ಆಫ್ ಫೈರ್” ಪ್ರದೇಶದಲ್ಲಿದೆ. ಈ ವರ್ಷದ ಜನವರಿಯಲ್ಲಿ ಎರಡು ದೊಡ್ಡ ಭೂಕಂಪಗಳು ಸಂಭವಿಸಿದ್ದವು. ಆದರೆ, ಯಾವುದೇ ಜೀವಹಾನಿ ಆಗಿರಲಿಲ್ಲ. 2023ರಲ್ಲಿ ಸಂಭವಿಸಿದ ಭೂಕಂಪದಿಂದ 8 ಜನರು ಸಾವನ್ನಪ್ಪಿದ್ದರು.
ಗಾಝಾ ಯುದ್ಧ ಕೊನೆಗೊಳಿಸಲು 20 ಅಂಶಗಳ ಯೋಜನೆ ಮುಂದಿಟ್ಟ ಅಮೆರಿಕ: ಇಸ್ರೇಲ್ ಒಪ್ಪಿಗೆ, ಇನ್ನೂ ನಿಲುವು ತಿಳಿಸದ ಹಮಾಸ್


