ಏಪ್ರಿಲ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿದ್ದ ಅನಂತ್ ಮಹಾದೇವನ್ ನಿರ್ದೇಶನದ ‘ಫುಲೆ’ ಚಿತ್ರ ಬಿಡುಗಡೆಯನ್ನು ಎರಡು ವಾರಗಳ ಕಾಲ ಮುಂದೂಡಲಾಗಿದೆ.
19 ನೇ ಶತಮಾನದಲ್ಲಿ ಜಾತಿ ಮತ್ತು ಲಿಂಗ ತಾರತಮ್ಯದ ವಿರುದ್ಧ ಹೋರಾಡಿದ ಮಹಾನ್ ಸಮಾಜ ಸುಧಾರಕರಾದ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರ ಕಥೆ ಆಧರಿತ ಈ ಚಿತ್ರದಲ್ಲಿ ಪ್ರತೀಕ್ ಗಾಂಧಿ ಮತ್ತು ಪತ್ರಲೇಖಾ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಮಹಾರಾಷ್ಟ್ರದ ಬ್ರಾಹ್ಮಣ ಸಮುದಾಯದ ಒಂದು ವರ್ಗವು ಚಿತ್ರದಲ್ಲಿ ತಮ್ಮ ಚಿತ್ರಣದ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಮತ್ತು ಕೆಲ ಸಂಸ್ಥೆಗಳು ಇದು ತಮ್ಮ ಸಮುದಾಯವನ್ನು ಅವಮಾನಿಸುತ್ತದೆ ಎಂದು ಆರೋಪಿಸಿದೆ. ಇದು ಚಿತ್ರ ಬಿಡುಗಡೆ ಮುಂದೂಡಿಕೆಯಾಗಲು ಕಾರಣ ಎನ್ನಲಾಗಿದೆ.
ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಚಿತ್ರದಲ್ಲಿ ಜಾತಿ ವ್ಯವಸ್ಥೆಯ ಕುರಿತು ಹೇಳುವ ಧ್ವನಿಮುದ್ರಿಕೆ ತೆಗೆದು ಹಾಕುವುದು ಸೇರಿದಂತೆ ಹಲವಾರು ಬದಲಾವಣೆಗಳನ್ನು ಮಾಡಲು ಸೂಚಿಸಿದೆ. ‘ಮಹರ್’, ‘ಮಾಂಗ್’, ‘ಪೇಶ್ವೆ’ ಮತ್ತು ‘ಮನು ಜಾತಿ ವ್ಯವಸ್ಥೆ’ ಮುಂತಾದ ಪದಗಳನ್ನು ತೆಗೆದು ಹಾಕಲು ಮತ್ತು ಚಿತ್ರದ ಕೆಲವು ಸಂಭಾಷಣೆಗಳನ್ನು ಬದಲಾಯಿಸಲು ನಿರ್ಮಾಪಕರಿಗೆ ಸೂಚನೆ ನೀಡಿದೆ ಎಂದು ವರದಿಗಳು ಹೇಳಿವೆ.
‘ಪೊರಕೆ ಹೊತ್ತ ವ್ಯಕ್ತಿ, ಸಾವಿತ್ರಿ ಬಾಯಿ ಮೇಲೆ ಸಗಣಿ ಎಸೆಯುವ ಹುಡುಗರು’ ಈ ದೃಶ್ಯಗಳು ಮತ್ತು ಚಿತ್ರದ ಕೆಲ ಡೈಲಾಗ್‌ಗಳಲ್ಲಿ ಬದಲಾವಣೆಗಳನ್ನು ಮಾಡಲು ಸಿಬಿಎಫ್‌ಸಿ ಸೂಚಿಸಿದೆ ಎಂದು ವರದಿಯಾಗಿದೆ.

ನಿರ್ದೇಶಕ ಅನಂತ್ ಮಹಾದೇವನ್ ಅವರಿಗೆ ಬ್ರಾಹ್ಮಣ ಸಮುದಾಯಗಳು ಚಿತ್ರದ ಬಗ್ಗೆ ಕಳವಳ ವ್ಯಕ್ತಪಡಿಸಿ ಬರೆದ ಹಲವಾರು ಪತ್ರಗಳು ಬಂದಿವೆಯಂತೆ. ಮಿಡ್-ಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮಹಾದೇವನ್, “ಟ್ರೇಲರ್ ಬಿಡುಗಡೆಯಾದ ನಂತರ ಕೆಲವು ತಪ್ಪು ತಿಳುವಳಿಕೆಗಳು ಉಂಟಾಗಿವೆ. ವೀಕ್ಷಕರಿಗೆ ಯಾವುದೇ ತೊಂದರೆಯಾಗದಂತೆ ನಾವು ಗೊಂದಲಗಳನ್ನು ನಿವಾರಿಸುತ್ತೇವೆ ಎಂದು ಹೇಳಿದ್ದಾರೆ.
ಮಹಾದೇವನ್ ಮತ್ತು ಮುವಾಝಮ್ ಬೇಗ್ ಬರೆದ ಈ ಚಿತ್ರವು 19ನೇ ಶತಮಾನದಲ್ಲಿ ಜಾತೀಯತೆಯ ವಿರುದ್ಧ ಮತ್ತು ಮಹಿಳಾ ಶಿಕ್ಷಣವನ್ನು ಉತ್ತೇಜಿಸಲು ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಮಾಡಿದ ಹೋರಾಟ ಮತ್ತು ಈ ವೇಳೆ ಅವರಿಗೆ ಎದುರಾದ ಸವಾಲುಗಳನ್ನು ವಿವರಿಸುತ್ತದೆ.
ಚಿತ್ರದ ಕುರಿತು ತಮ್ಮ ಕಳವಳಗಳನ್ನು ವ್ಯಕ್ತಪಡಿಸಿದ ಸಂಘಟನೆಗಳಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಸಮಾಜ ಮತ್ತು ಪರಶುರಾಮ ಆರ್ಥಿಕ ವಿಕಾಸ ಮಹಾಮಂಡಲಗಳು ಸೇರಿವೆ.
ಜ್ಯೋತಿ ಬಾ ಫುಲೆ ಅವರ 20 ಶಾಲೆಗಳ ಸ್ಥಾಪನೆ ಮತ್ತು ಸತ್ಯಶೋಧಕ ಸಮಾಜದಂತಹ ಉಪಕ್ರಮಗಳನ್ನು ಕೆಲವು ಬ್ರಾಹ್ಮಣರು ಹೇಗೆ ಬೆಂಬಲಿಸಿದರು ಎಂಬುದನ್ನು ವಿವರಿಸಲು ತಾವು ಬ್ರಾಹ್ಮಣ ಸಮುದಾಯದ ಪ್ರತಿನಿಧಿಗಳನ್ನು ಭೇಟಿ ಮಾಡಿರುವುದಾಗಿ ಮಹಾದೇವನ್ ಹೇಳಿಕೊಂಡಿದ್ದಾರೆ.
ಈ ಚಿತ್ರವು ಅಜೆಂಡಾ ಆಧಾರಿತವಲ್ಲ, ಸತ್ಯವನ್ನು ಮಾತ್ರ ಹೇಳಲಾಗಿದೆ ಎಂದಿದ್ದಾರೆ.
ಚಿತ್ರದಲ್ಲಿ ಬದಲಾವಣೆಗಳನ್ನು ಮಾಡಲು ಸೂಚಿಸುವ ಮುನ್ನ, ಆರಂಭದಲ್ಲಿ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯೂ ಪ್ರಮಾಣಪತ್ರವನ್ನು ನೀಡಿತ್ತು. ಚಿತ್ರದಲ್ಲಿ ಮಾಡಲಾದ ಕೆಲವು ಐತಿಹಾಸಿಕ ವಾದಗಳನ್ನು ಬೆಂಬಲಿಸುವ ಸರಿಯಾದ ದಾಖಲೆಗಳನ್ನು ಕೂಡ ನಿರ್ಮಾಪಕರು ಸಲ್ಲಿಸಿದ್ದಾರೆ.


