Homeಸಾಹಿತ್ಯ-ಸಂಸ್ಕೃತಿಕಥೆಕೊರೊನಾ ಕಾಲದ ನೀಳ್ಗತೆ; ಪುಟ್ಟ ದೇವತೆಯ ಪಾರಿವಾಳ - ಅಮರೇಂದ್ರ ಹೊಲ್ಲಂಬಳ್ಳಿ

ಕೊರೊನಾ ಕಾಲದ ನೀಳ್ಗತೆ; ಪುಟ್ಟ ದೇವತೆಯ ಪಾರಿವಾಳ – ಅಮರೇಂದ್ರ ಹೊಲ್ಲಂಬಳ್ಳಿ

- Advertisement -
- Advertisement -

ಅವಳು ತನ್ನ ಪಾಡಿಗೆ ತಾನು ಹೂಗಳನ್ನು ನೆಲಕ್ಕೆ ಹಾಕುವುದು ಮತ್ತೆ ಉಡಿಗೆ ತುಂಬಿಕೊಳ್ಳುವುದೂ ಮಾಡುತ್ತಿದ್ದಳು. ಕೊನೆಗೂ ಮೌನ ಮುರಿದು ‘ನಮ್ಮಪ್ಪ ಆಸ್ಪತ್ರಾಗವ್ನೆ’ ಎಂದಳು. ಅಚ್ಚರಿ ಆತಂಕ ಬೆರೆತ ದನಿಯಲ್ಲಿ ‘ಏನಾಯ್ತು ನಿಮ್ಮಪ್ಪಂಗೆ’ ಎಂದೆ. ‘ಅವ್ವನ್ ತಾವ ಕಾಸಿಲ್ಲಂತೆ. ಬದಿಕ್ಕಂಡ್ರೆ ಬತ್ತೀನಿ, ಯಾರೂ ಬರ್ಬ್ಯಾಡಿ ಅಂದ ಅಪ್ಪ’ ಎಂದವಳು ಎದ್ದು ನಿಂತು ಸಪೋಟಕಾಯಿಗಳನ್ನು ಉಡಿಯಲ್ಲಿ ತುಂಬಿಕೊಂಡು ಒಂದು ಕೈಯಲ್ಲಿ ಜೋಪಾನವಾಗಿ ಹಿಡಿದುಕೊಂಡಳು.

ಕೊರೋನಾ ವೈರಸ್ ಹಬ್ಬುವ ಭೀತಿಯಿಂದ ಸರ್ಕಾರ ದೇಶವನ್ನೇ ಲಾಕ್‍ಡೌನ್ ಮಾಡಿ ಜನರನ್ನು ಮನೆಯಲ್ಲಿಯೇ ಉಳಿಯುವಂತೆ ಮಾಡಿದ್ದರಿಂದ ರಸ್ತೆಗಳು ಖಾಲಿಖಾಲಿಯಾಗಿ ಭಣಗುಡುತ್ತಿದ್ದವು. ಎಲ್ಲೆಡೆ ವಿಲಕ್ಷಣ ಮೌನ ಆವರಿಸಿತ್ತು. ನಿಶ್ಯಬ್ದ ಹಗಲಿನ ಎದೆಗೂಡಲ್ಲಿ ಹಕ್ಕಿಗಳ ಕಲರವ ಕೇಳುತ್ತಿತ್ತು. ಬೀದಿಯ ನಾಯಿಗಳೂ ಮೌನಕ್ಕೆ ಜಾರಿ ರಸ್ತೆ ಬದಿಯಲ್ಲಿದ್ದ ಕಾರಿನಡಿಯಲ್ಲಿ ಮಲಗಿ ತೂಕಡಿಸುತ್ತಿದ್ದವು. ಮನೆಯ ತಾರಸಿಯ ಮೇಲೆ ನಿಂತು ನಿಸ್ತೇಜ ಕಣ್ಣುಗಳಿಂದ ಸುತ್ತ ನೋಡುತ್ತಲಿದ್ದ ಯುವಕನೊಬ್ಬ ಏಕಾಏಕಿ ಸಿಕ್ಕಿದ ಬಿಡುವು ಸುಖವೋ ಅಸುಖವೋ ಅರ್ಥವಾಗದೆ ಗೊಂದಲಗೊಂಡಂತಿದ್ದ. ಮನೆಯೆದುರಿನ ಮಳೆ ಮರ ಈಗಷ್ಟೇ ನಿದ್ದೆಯಿಂದ ಎದ್ದು ಆಕಳಿಸುತ್ತಿದ್ದ ಸೋಮಾರಿ ಹುಡುಗನಂತೆ ಕಾಣುತ್ತಿತ್ತು. ಪಕ್ಕದ ಮನೆಯಲ್ಲಿ ಕೂಸೊಂದು ಒಂದೇ ಸಮನೆ ಅಳುವ ಸದ್ದು ಕೇಳುತ್ತಿತ್ತು. ಅದರ ಅಮ್ಮ ಎದೆಗಾನಿಸಿಕೊಂಡಿತೇನೋ ಅದರ ಅಳು ನಿಂತಿತು. ಮನೆಯ ಹೂಕುಂಡಗಳಿಗೆ ಎರಡು ದಿನದಿಂದ ನೀರು ಹಾಕಿರಲಿಲ್ಲ. ಪಾಪ ಗಿಡಗಳು ಸೊರಗಿದ್ದವು. ಗೊತ್ತಿರದೆ ಫ್ಯೂರಿಫೈಯರ್‍ನ ವೇಸ್ಟ್ ನೀರು ಹಾಕಿದ್ದಕ್ಕೋ ಏನೋ ಹಸಿರಿನಿಂದ ನಳನಳಿಸುತ್ತಿದ್ದ ತುಳಸಿ ಗಿಡ ಬಾಡಿತ್ತು. ಅಲೋವೆರಾದ ಜೊತೆಗೆ ಬೆಳೆಯುತ್ತಿರುವ ನೇರಳೆ ಗಿಡಕ್ಕೆ ಎಲ್ಲಾದರೂ ಒಂದು ಅನುಕೂಲದ ಜಾಗ ಮಾಡಬೇಕಾಗಿತ್ತು. ಈಗಾಗಲೇ ಅಲೋವೆರಾದ ತಳಕ್ಕೆಲ್ಲ ಬೇರು ಇಳಿಬಿಟ್ಟಿರುವ ನೇರಳೆ ಇನ್ನೂ ದೊಡ್ಡದಾಗಿಬಿಟ್ಟರೆ ಕೀಳುವುದೇ ಕಷ್ಟವಾಗಬಹುದು. ಕಿತ್ತರೂ ಅದು ಅಲೋವೆರಾವನ್ನು ಜೊತೆಗೇ ಎಳೆದು ತರುವ ಸಂಭವ ಇತ್ತು.

ವೀಳ್ಯದೆಲೆಯ ಬಳ್ಳಿ ನೆಡಲು ಪಾಟಿಗೆ ಮಣ್ಣು ತುಂಬುತ್ತಿದ್ದ ನನ್ನವಳಿಗೆ ಕೊರೋನಾ ಬಗ್ಗೆ ಯಾವುದೋ ಚಾನೆಲ್ಲಿನ ಸುದ್ದಿಯನ್ನು ಹೇಳಲೆತ್ನಿಸಿದೆ. ಅವಳು ನನ್ನ ಮಾತಿಗೆ ಕಿಂಚಿತ್ತೂ ಗಮನ ಕೊಡಲಿಲ್ಲ. ಅವಳಿಗೆ ಸುದ್ದಿ ಚಾನೆಲ್ ಅಂದರೆ ಭಯಂಕರ ಕೋಪ. ಅದ್ಯಾವುದೋ ಚಾನೆಲ್ಲಿನ ನಿರೂಪಕಿಯ ಹಾವಭಾವ ಕಂಡರಂತೂ ಅವಳಿಗಾಗುವುದೇ ಇಲ್ಲ. ಅವಳ ಮೇಲಿನ ಕೋಪ ಎಲ್ಲ ಚಾನೆಲ್ಲುಗಳ ಬಗೆಗೂ ವಿಸ್ತರಿಸಿತ್ತು. ಇನ್ನು ಅವಳು ಕೋಪಿಸಿಕೊಂಡರೆ ಸಂಜೆಯವರೆಗೂ ಮಾತು ಅಸಾಧ್ಯ ಅನ್ನಿಸಿ ಸುಮ್ಮನೆ ಅಲ್ಲಿಂದೆದ್ದು ಹೋಗಿ ಪುಟ್ಟದಾಗಿ ಮೈ ಚಾಚತೊಡಗಿದ್ದ ಕುಂಬಳದ ಬಳ್ಳಿಯ ಬುಡಕ್ಕೆ ಪ್ಲಾಸ್ಟಿಕ್ ಚೀಲದಲ್ಲಿದ್ದ ಕುರಿಗೊಬ್ಬರ ಬೆರೆಸಿದ ಮಣ್ಣನ್ನು ಒಂದು ಹಿಡಿಯಷ್ಟು ಹರಡಿದೆ. ರಸ್ತೆಯಲ್ಲಿ ಬಿದ್ದಿದ್ದ ಒಣಗಿದ ಕೋಲೊಂದನ್ನು ತಂದು ವೀಳ್ಯದೆಲೆಯ ಅಂಗುಲದುದ್ದದ ಬಳ್ಳಿಗೆ ಆಸರೆ ಕೊಟ್ಟೆ. ಯಾಕೋ ಕಣಗಿಲೆ ಗಿಡಗಳು ಯಾವುದೂ ಉದ್ದಾರ ಆಗ್ತಿಲ್ಲ. ವರ್ಷಗಟ್ಟಲೆಯಿಂದ ಇದೇ ಗೋಳಾಯ್ತು ಎಂದು ಅಲವತ್ತುಕೊಂಡವಳಿಗೆ ಈ ಬಂದ್ ಅವಾಂತರ ಎಲ್ಲ ಮುಗೀಲಿ ಲಾಲ್‍ಬಾಗಿಗೆ ಹೋಗಿ ಒಳ್ಳೇ ಗಿಡ ತರಾಣ ಇರು ಎಂದು ಹೇಳಿ ಅಲ್ಲಿಂದ ಹೊರಡಲು ನಿಂತೆ. ಎಲ್ಲಿಗೆ ಎಂದಳು. ಹೀಗೇ ಸ್ವಲ್ಪ ಅಡ್ಡಾಡಿ ಬರ್ತೇನೆ ಎಂದೆ. ಯಾರೂ ಮನೆಯಿಂದ ಆಚೆ ಹೋಗ್ಬಾರ್ದು ಅಂತ ಆರ್ಡರಾಗಿಲ್ವ. ಊರಿಗೆಲ್ಲ ಒಂದು ದಾರಿ ಆದ್ರೆ ಯಡವಟ್ಟನಿಗೇ ಒಂದು ದಾರಿಯಂತೆ ಎಂದಳು. ಕೋಪ ಬಂತು. ನಿಮ್ಮಪ್ಪ ಯಡವಟ್ಟ ಅದಕ್ಕೆ ನಿನ್ನನ್ನು ಕಟ್ಟಿದ್ದು ನನಗೆ ಎಂದೆ. ನಿಮ್ಮನ್ನೇ ಬೈಕೊಳ್ತಿದ್ದೀರಲ್ರೀ ಎಂದು ನಕ್ಕಳು. ಇನ್ನೂ ಕೋಪ ಬಂತು. ಸರಸರ ಮೆಟ್ಟಿಲಿಳಿದು ರಸ್ತೆ ಸೇರಿದೆ. ಮಾಸ್ಕೂ, ಸ್ಯಾನಿಟೈಸರ್ ತರಬೇಕಲ್ವಾ? ಬೆಳಿಗ್ಗೆ ಮಾತಾಡಿಲ್ವಾ ಅದರ ಬಗ್ಗೆ, ಈಗ ಬೇಡ ಅಂತೀಯ ಅಂದೆ. ಆಯ್ತು ಹುಷಾರಾಗಿ ಹೋಗ್ಬನ್ನಿ. ಯಾರ ಸಮೀಪಕ್ಕೂ ಹೋಗ್ಬೇಡಿ. ಯಾರನ್ನೂ ಟಚ್ ಕೂಡ ಮಾಡ್ಬೇಡಿ ಎಂದು ಕೂಗಿ ಹೇಳಿದಳು. ಆಯ್ತು ಬಿಡು ಎನ್ನುತ್ತ ಮುಂದೆ ಹೊರಟೆ.

ನೀರುಕಾಯಿ ಮರದಲ್ಲಿ ಪುಟ್ಟ ಪುಟ್ಟ ಎಲೆಗಳು ಕಾಣುತ್ತಿದ್ದವು. ಭಾರೀ ಗಾತ್ರದ ಮರದ ಮೈ ಮುಚ್ಚಲು ಆ ಚಿಗುರೆಲೆಗಳು ಯಾತಕ್ಕೂ ಸಾಲುತ್ತಿರಲಿಲ್ಲ. ಬಿಗಿ ಅಂಗಿ ತೊಟ್ಟು ಕಿರಿಕಿರಿಪಡುವ ಸೋಗುಗಾರನಂತೆ ಆ ಮರ ಕಾಣುತ್ತಿತ್ತು. ರಸ್ತೆಯುದ್ದಕ್ಕೂ ಯಾರೂ ಕಾಣಲಿಲ್ಲ. ಜನಕ್ಕೆ ದೇವರ ಭಯ ಧರ್ಮದ ಭಯ ಕಾನೂನಿನ ಭಯ ಎಲ್ಲವೂ ತೋರಿಕೆಯ ಭಯಗಳು ಮಾತ್ರ. ಅವರಲ್ಲಿರುವ ಜೀವ ಭಯ ಮಾತ್ರ ಅಪ್ಪಟ ಸತ್ಯ. ಇಲ್ಲದಿದ್ದರೆ ಹೀಗೆ ಕಾಯಿಲೆಗೆ ಹೆದರಿ ಮನೆಯೊಳಗೆ ತೂರಿಕೊಳ್ಳುತ್ತಿದ್ದರೇ ಎನಿಸಿತು. ಸದ್ದಾಗದಷ್ಟು ಮೆಲ್ಲನೆ ಮನೆಯ ಗೇಟು ತೆರೆದು ಆಚೆ ಬಂದ ವೃದ್ಧರೊಬ್ಬರು ಅತ್ತಿತ್ತ ನೋಡಿ ಕೈ ಬೀಸುತ್ತ ವಿಚಿತ್ರವಾಗಿ ನಡೆಯುತ್ತಿದ್ದ ನನ್ನನ್ನು ಕಂಡು ಹೆದರಿಕೊಂಡರೇನೋ ಗೇಟು ಮುಚ್ಚಿ ಮನೆಯೊಳಕ್ಕೆ ಸೇರಿಕೊಂಡರು. ಅಳಿಲಿನ ಜಿಗಿದಾಟಕ್ಕೆ ಮರದ ಸಣ್ಣ ಒಣಕೊಂಬೆಯೊಂದು ಮುರಿದು ಮೈ ತುಂಬ ಕವರ್ ಹೊದೆದುಕೊಂಡು ಮಲಗಿದ್ದ ಕಾರಿನ ಮೇಲೆ ದಡಾರೆಂದು ಬಿದ್ದು ಕೋಮಾದಲ್ಲಿದ್ದ ಕಾರು ಬೆಚ್ಚಿ ಎಚ್ಚರಗೊಂಡಿತು.

ಆ ರಸ್ತೆಯಲ್ಲಿ ಒಂದಿಷ್ಟು ದೂರ ಸಾಗಿದರೆ ಅಲ್ಲೊಂದು ಆಕಾಶ ಮಲ್ಲಿಗೆಯ ಮರ ಕಾಣುತ್ತದೆ. ಅದು ಮರವೂ ಅಲ್ಲದ ಗಿಡವೂ ಅಲ್ಲದ ಗಾತ್ರದ್ದು. ಮನೆಗಳ ನೆರಳಿನ ಪ್ರಭಾವದಿಂದ ಸ್ವಲ್ಪ ಉದ್ದಕ್ಕೆ ಬೆಳೆದ ಅದನ್ನು ಮರ ಎಂದೇ ಕರೆಯೋಣ. ನಾನಲ್ಲಿಗೆ ಬಂದಾಗ ಆ ಮರದಡಿ ಉದುರಿದ ಹೂವುಗಳನ್ನು ನನಗೆ ಪರಿಚಯವಿದ್ದ ಒಂದು ಹರಕಲು ಬಟ್ಟೆಯ ಹುಡುಗಿಯೊಂದು ಆಯುತ್ತಿತ್ತು. ಆಕಾಶ ಮಲ್ಲಿಗೆಯ ಮರಕ್ಕೆ ಆತುಕೊಂಡಂತೆಯೇ ಸಂಪಿಗೆಯ ಮರವೂ ಇತ್ತು. ಮನೆಯೊಂದರ ಕಾಂಪೌಡಿನಲ್ಲಿ ಬೆಳೆದಿದ್ದ ಸಪೋಟ ಗಿಡದಲ್ಲಿ ಹಾಕಿ ಚೆಂಡಿನ ಗಾತ್ರದ ಕಾಯಿಗಳು ತೂಗುತ್ತಿದ್ದವು. ಆ ಹುಡುಗಿಗೆ ಕಾಣದಂತೆ ಒಂದು ಮರೆಯಲ್ಲಿ ಅವಳನ್ನು ನೋಡುತ್ತ ನಿಂತೆ. ಅವಳಿಗೆ ಆಕಾಶ ಮಲ್ಲಿಗೆ ಹೂಗಳನ್ನು ಆಯ್ದಿದ್ದು ಸಾಕಾಯಿತೇನೋ ಸಂಪಿಗೆಯನ್ನು ಆಯತೊಡಗಿದಳು. ಅವಳ ಕೈ ಚಾಚು ದೂರದಲ್ಲಿ ಬಂದು ಕುಳಿತ ಗೊರವಂಕಗಳನ್ನೂ ನೋಡದೆ ಅವಳು ಹೂ ಆಯುತ್ತಿದ್ದಳು. ಕಾಗೆಯಿಂದ ತಪ್ಪಿಸಿಕೊಂಡು ಬಂದ ಒಂದು ಪಾರಿವಾಳದ ಮರಿ ತಟ್ಟಾಡುತ್ತ ಅವಳ ಬಳಿ ಬಿತ್ತು. ಕಾಗೆ ಕಂಡು ಹೆದರಿದ ಗೊರವಂಕಗಳು ಪುಳಕ್ಕನೆ ಹಾರಿ ಹೋದವು. ಅವಳು ಕ್ಷಣಾರ್ಧದಲ್ಲಿ ಪಾರಿವಾಳದ ಮರಿಯನ್ನೆತ್ತಿ ಮಡಿಲಲ್ಲಿದ್ದ ಹೂವಿನ ನಡುವೆ ಹಾಕಿಕೊಂಡಳು. ಅದನ್ನು ಬೆನ್ನತ್ತಿ ಬಂದ ಕಾಗೆ ಕೊಂಚ ದೂರದಲ್ಲಿಯೇ ಕುಳಿತು ಅವಳ ಮಡಿಲಲ್ಲಿದ್ದ ಪಾರಿವಾಳದ ಕಡೆಗೆ ತೀಕ್ಷ್ಣ ಕಣ್ಣುಗಳಿಂದ ನೋಡುತ್ತಿತ್ತು. ತನ್ನ ಬೇಟೆ ಕೈ ತಪ್ಪಿತಲ್ಲ ಎನ್ನುವಂತೆ ಕ್ರಾಕ್ರಾ ಎಂದು ನಿರಾಸೆಯ ದನಿಯನ್ನು ಮಾಡುತ್ತಿತ್ತು. ಪಾರಿವಾಳದ ಕತ್ತಿನ ಬಳಿ ಕಾಗೆ ಕುಕ್ಕಿದ್ದರಿಂದ ಆಳವಾದ ಗಾಯವಾಗಿತ್ತು. ಅಲ್ಲಿಂದ ತೊಟ್ಟಿಕ್ಕಿದ ರಕ್ತ ಹೂಗಳ ಮೇಲೆ ಬಿದ್ದು ಕೆಂಪು ಬಣ್ಣ ಎರಚಾಡಿದಂತಿತ್ತು. ಅದರ ರಕ್ತ ಹುಡುಗಿಯ ಕೈಗೂ ಹತ್ತಿ ಅದನ್ನು ಏನು ಮಾಡುವುದೆಂದು ತೋಚದೆ ಕೊನೆಗೆ ತನ್ನ ಪೃಷ್ಟಭಾಗದ ಲಂಗಕ್ಕೆ ಒರೆಸಿಕೊಂಡು ಮತ್ತೆ ಪಾರಿವಾಳದ ಮೈ ನೇವರಿಸಿದಳು. ಕಾಗೆ ಜಿಗಿಯುತ್ತ ಹತ್ತಿರ ಬರಲು ಹವಣಿಸಿದಾಗ ಮುಷ್ಟಿಯಲ್ಲಿ ಹೂ ತುಂಬಿಕೊಂಡು ಅದರೆಡೆಗೆ ಎಸೆದಳು. ಕಿಲಾಡಿ ಕಾಗೆಗೆ ಅದು ಗೊತ್ತಾಗದಿರುತ್ತದೆಯೇ? ಅದು ಹೂವಿಗೆ ಮೈಯೊಡ್ಡಿ ಇದ್ದಲ್ಲಿಯೇ ಇತ್ತು. ಹುಡುಗಿಗೆ ಕೋಪ ಬಂತು. ಇದ್ದಲ್ಲಿಂದಲೇ ಸ್ವಲ್ಪ ಕೈ ಚಾಚಿ ಕಲ್ಲೊಂದನ್ನು ಎಟುಕಿಸಿಕೊಂಡು ಹೂ ತುಂಬಿದ ಮಡಿಲಲ್ಲಿ ಒಂದು ಗಳಿಗೆ ಇಟ್ಟುಕೊಂಡು ನಂತರ ಕಾಗೆಗೆ ಎಸೆದಳು. ಕಾಗೆ ಕಲ್ಲನ್ನೂ ಮೊದಲಿನಂತೆ ಹೂವೆಂದುಕೊಂಡಿತೋ ಏನೋ. ಅಲ್ಲಿಂದ ದೂರ ಸರಿಯದೆ ಇದ್ದಲ್ಲಿಯೇ ಇತ್ತು. ಆದರೆ ಕಲ್ಲು ನೇರ ಅದರ ಕೊಕ್ಕಿಗೇ ಬಿದ್ದು ಅದು ತಬ್ಬಿಬ್ಬಾಗಿ ನೋವಿನಿಂದ ಒರಲುತ್ತ ದೂರ ಹಾರಿಹೋಯಿತು.

ಕಾಗೆ ಹಾರಿ ಹೋದ ದಿಕ್ಕನ್ನೇ ನೋಡುತ್ತಿದ್ದ ಹುಡುಗಿ ಅದು ಪೂರ ಕಾಣೆಯಾದಾಗ ನೋವಿನಿಂದ ಗೂಕರಿಸುತ್ತಿದ್ದ ಪಾರಿವಾಳದ ಮೈ ಸವರಿದಳು. ಒಮ್ಮೆಲೇ ಏನೋ ನೆನಪಾದವಳಂತೆ ಮಡಿಲಲ್ಲಿದ್ದ ಹೂವನ್ನು ತೆಗೆದು ನೆಲದಲ್ಲಿ ಗುಡ್ಡೆ ಸುರುವಿ ಅದರ ನಡುವೆ ಪಾರಿವಾಳವನ್ನು ಕೂರಿಸಿ ಎದ್ದು ನಿಂತಳು. ಸ್ವಲ್ಪ ಮೇಲಕ್ಕೆ ನೆಗೆನೆಗೆದು ಸಂಪಿಗೆಯ ಪುಟ್ಟ ರೆಂಬೆಯನ್ನು ಕೈಗೆಟುಕಿಸಿಕೊಂಡು ಅಲುಗಿಸಿದಳು. ಒಂದೆರಡು ಹಣ್ಣಾದ ಹೂಗಳು ಬಿದ್ದವು. ಆ ಹೂಗಳನ್ನು ಆಯ್ದುಕೊಳ್ಳದೆ ಚಕ್ಕಳಮಕ್ಕಳ ಹಾಕಿ ಕುಳಿತು ನೆಲದಲ್ಲಿ ಹಾಕಿದ್ದ ಆಕಾಶ ಮಲ್ಲಿಗೆ ಹೂಗಳನ್ನು ಮತ್ತೆ ಉಡಿಗೆ ತುಂಬಿಕೊಂಡು ಪಾರಿವಾಳವನ್ನು ಹೂಗಳ ನಡುವೆ ಇಟ್ಟುಕೊಂಡಳು. ಅದರ ನಡುವೆ ಒಮ್ಮೆ ಮನೆಯ ಕಾಂಪೌಂಡಿನಲ್ಲಿದ್ದ ಸಪೋಟ ಗಿಡದ ಕಡೆ ನೋಡಿದಳು. ಅವಳು ಸಪೋಟ ಕಿತ್ತುಕೊಳ್ಳಲಿ ಎಂದು ನನಗೆ ಆಸೆಯಾಯಿತು. ಆ ಹುಡುಗಿ ಅಷ್ಟೆತ್ತರದ ಕಾಂಪೌಂಡ್ ಹಾರಲಾರಳಲ್ಲ ಎಂದು ಬೇಸರವೂ ಆಯಿತು. ಅವಳಿಗೂ ಸಪೋಟದ ಆಸೆ ಇದ್ದಂತೆ ಕಾಣಲಿಲ್ಲ. ಸಂಪಿಗೆಯ ಎಲೆಗಳ ನಡುವೆ ತೂರಿ ಬರುತ್ತಿದ್ದ ಬೆಳಕು ಅವಳ ಮುಖದ ಮೇಲೆ ಬೀಳುತ್ತಿತ್ತು. ಆ ಬೆಳಕಿನಲ್ಲಿ ಅವಳ ಮುಖದ ಮೇಲಿನ ದೂಳು ಹಾಗೂ ಕಣ್ಣಂಚಿನ ಕಿಸುರು ಕಾಣುತ್ತಿತ್ತು. ಮೂಗಿನ ಹೊಳ್ಳೆಯಿಂದ ಇಳಿದ ಸಿಂಬಳ ಮೇಲ್ತುಟಿಯ ಮೇಲೆ ಕರೆಗಟ್ಟಿತ್ತು. ಅವಳ ಕೆದರಿದ ಕೂದಲಿನಲ್ಲಿ ಕುಳಿತ ನಾಲ್ಕಾರು ಆಕಾಶ ಮಲ್ಲಿಗೆ ಹೂಗಳು ಅವಳಿಗೆ ತೊಡಿಸಿದ ಪುಟ್ಟ ಕಿರೀಟದಂತೆ ಕಾಣುತ್ತಿದ್ದವು. ಯಾರೋ ತನ್ನನ್ನು ನೋಡುತ್ತಿರುವ ಅನುಮಾನ ಬಂದು ಅವಳು ಅತ್ತಿತ್ತ ತಿರುಗಿದಾಗ ಅವಳ ಬಟ್ಟಲುಗಣ್ಣುಗಳಲ್ಲಿ ತುಳುಕಿ ಫಳಕ್ಕೆಂದು ಹೊಳೆದ ಬೆಳಕು ಅವಳ ಚೆಲುವಿಗೆ ಕಟ್ಟಿದ ಪ್ರಭಾವಳಿಯಂತೆ ಭಾಸವಾಗುತ್ತಿತ್ತು. ಸಪೋಟ ಗಿಡದ ಮನೆಯ ಹಿತ್ತಲ ಬಾಗಿಲಿನಿಂದ ಹೆಂಗಸೊಬ್ಬಳು ಆಚೆ ಬಂದಳು. ಆಗಷ್ಟೇ ಅಡುಗೆ ಕೆಲಸ ಮುಗಿದಿರಬೇಕು. ಮುಖದಲ್ಲಿ ತೆಳುವಾದ ದಣಿವು ಕಾಣುತ್ತಿತ್ತು. ಸಪೋಟ ಗಿಡದಲ್ಲಿ ಹುಡುಕಿ ಹುಡುಕಿ ನಾಲ್ಕಾರು ಹಣ್ಣು ಕಿತ್ತು ಬೊಗಸೆಯಲ್ಲಿ ತುಂಬಿ ತಂದು ಆ ಹುಡುಗಿಯ ಮಡಿಲಿಗೆ ಹಾಕಿ ಬಂದಷ್ಟೇ ವೇಗದಲ್ಲಿ ಮನೆ ಸೇರಿಕೊಂಡಳು. ಅಚ್ಚರಿಗೊಂಡ ಹುಡುಗಿ ಹಣ್ಣು ನೀಡಿ ಹೋಗುತ್ತಿದ್ದ ಹೆಂಗಸನ್ನೇ ನೋಡುತ್ತಿದ್ದವಳು ಮನೆಯ ಕದ ಮುಚ್ಚಿಕೊಂಡಾಗ ಕಾಯಿಗಳನ್ನು ನೆಲದಲ್ಲಿ ಹಾಕಿ ಎಣೆಸಲಾರಂಭಿಸಿದಳು.

ಪೌರಕಾರ್ಮಿಕರ ಕಸದ ಬಂಡಿಯಲ್ಲಿ ಪ್ಲಾಸ್ಟಿಕ್ ಮತ್ತು ಬಾಟಲಿಗಳನ್ನು ಹೆಕ್ಕುವ ಈ ಹುಡುಗಿಯನ್ನು ಅನೇಕ ದಿನಗಳಿಂದ ನೋಡಿ ಬಲ್ಲೆ. ಯಾರೋ ಸಂಭಾವಿತರು ರಾತ್ರಿ ಗಡದ್ದಾಗಿ ಕುಡಿದು ಗುಟ್ಟಾಗಿ ಪ್ಲಾಸ್ಟಿಕ್ ಕವರಿನಲ್ಲಿ ಸುತ್ತಿ ಕಸದ ಬಂಡಿಗೆ ಹಾಕಿ ಹೋಗಿದ್ದ ಬಾಟಲಿಗಳನ್ನು ಒಂದೊಂದೇ ತೆಗೆದು ಜೋಪಾನವಾಗಿ ಅವಳು ತನ್ನ ಚೀಲಕ್ಕೆ ಪೇರಿಸಿಟ್ಟುಕೊಳ್ಳುವಾಗ ನಾನು ಮನೆಯ ಬಾಲ್ಕನಿಯಲ್ಲಿ ಅಡ್ಡಾಡುತ್ತ ಬೆಳಗಿನ ಕಾಫಿಯನ್ನು ಹೀರುತ್ತಿದ್ದೆ. ಆಗೊಮ್ಮೆ ಈಗೊಮ್ಮೆ ಅವಳು ನನ್ನೆಡೆಗೆ ನೋಡಿದಾಗ ಬೇಕಾ ಎನ್ನುವಂತೆ ಒಮ್ಮೆ ಕಾಫಿ ಲೋಟ ತೋರಿಸಿದ್ದೆ. ಬೇಡವೆನ್ನುವಂತೆ ಅವಳು ಮೂತಿ ಸೊಟ್ಟ ಮಾಡಿದ್ದಳು. ಆಮೇಲೆ ನಾನವಳನ್ನು ಕೆಣಕಲು ಹೋಗಲಿಲ್ಲ. ಬಹುಶಃ ಒಂದು ವಾರದಿಂದ ಇರಬೇಕು. ಅವಳು ಕಾಣಲಿಲ್ಲ. ಕಸ ಗುಡಿಸುವ ಹೆಂಗಸನ್ನು ‘ಆ ಹುಡುಗಿ ಯಾಕೆ ಬರುತ್ತಿಲ್ಲ’ ಎಂದು ಕೇಳಿದೆ. ‘ಗೊತ್ತಿಲ್ಲಣ್ಣ’ ಎಂದವಳು ಮರುಕ್ಷಣವೇ ಹುಸಿ ನಗು ಕಾಣಿಸುತ್ತ ‘ಯಾಕಣ್ಣ’ ಎಂದು ಕೇಳಿ ವಿಚಿತ್ರ ಕುತೂಹಲ ತೋರಿದ್ದಳು. ‘ಯಾಕೂ ಇಲ್ಲಮ್ಮ ಸುಮ್ನೆ ಕೇಳ್ದೆ ಅಷ್ಟೆ’ ಎಂದುತ್ತರಿಸಿ ಏನೋ ಅರ್ಜೆಂಟ್ ಕೆಲಸ ಇದ್ದವನಂತೆ ಸುಳ್ಳುಸುಳ್ಳೇ ಮೊಬೈಲ್ ಕಿವಿಗಿಟ್ಟುಕೊಂಡು ಮನೆಯೊಳಗೆ ಬಂದಿದ್ದೆ. ‘ಒಂದು ಸಣ್ಣ ಪ್ರಶ್ನೆಗೂ ಉತ್ತರ ಕೊಡೋಕಾಗದೆ ಮುಖ ಮರೆಸಿಕೊಂಡು ಓಡಿ ಬರ್ತೀರಲ್ಲ ನೀವು. ಆ ಮಗು ಅಂದ್ರೆ ಇಷ್ಟಾಂತ ಹೇಳಿ. ನಿಮ್ಮ ಗಂಟೇನೂ ಹೋಗೋದಿಲ್ಲ. ಹೆಣ್ಣು ಮಗು ಇಲ್ಲದ ಮನೆ ನಮ್ಮದು’ ಎಂದು ಹೆಂಡತಿ ಜಾಡಿಸಿದ್ದಳು.

ಮರೆಯಲ್ಲಿ ನಿಂತು ಆ ಪುಟಾಣಿ ಹುಡುಗಿಯನ್ನು ನೋಡುತ್ತಿದ್ದವನು ಇದ್ದಲ್ಲಿಂದ ಹೊರಬಂದು ಆ ಹುಡುಗಿಯನ್ನು ಸಮೀಪಿಸಿದೆ. ಪರಿಚಿತ ಮುಖವಾದ್ದರಿಂದ ಅವಳೇನೂ ಹೆದರಲಿಲ್ಲ. ನಿರ್ಭಾವುಕ ಕಣ್ಣಿಂದ ನೋಡಿದಳು. ‘ಯಾಕಮ್ಮ ಹುಡುಗಿ ನಮ್ಮ ಮನೆ ಕಡೆ ಬರ್ತಾನೆ ಇಲ್ಲ’ ಅಂದೆ. ಅವಳಿಗೆ ನನ್ನ ಮಾತು ವಿಚಿತ್ರ ಎನಿಸಿರಬೇಕು. ಸುಮ್ಮನೆ ತನ್ನ ಕೆಲಸ ಮುಂದುವರೆಸಿದಳು. ಅವಳು ಏನಾದರೂ ಹೇಳಲಿ ಎಂದು ನಾನು ಅಲ್ಲೇ ನಿಂತಿದ್ದೆ. ಅವಳು ನನ್ನನ್ನು ಲೆಕ್ಕಕ್ಕೇ ಇಟ್ಟಂತೆ ಕಾಣಲಿಲ್ಲ. ಆದರೂ ನಾನು ಅವಳು ಏನಾದರೂ ಹೇಳಲಿ ಎಂದು ಅಲ್ಲಿ ನಿಂತೇ ಇದ್ದೆ. ಅದೆಲ್ಲಿಂದಲೋ ಅತ್ತ ಕಡೆ ಬಂದ ಅಪರಿಚಿತನೊಬ್ಬ ಪುಟ್ಟ ಹುಡುಗಿಯ ಬಳಿ ನಿಂತಿದ್ದ ನನ್ನನ್ನು ನೋಡಿ ಅನುಮಾನಗೊಂಡು ‘ಏನ್ರೀ ಮಾಡ್ತಿದ್ದೀರಿ ಆ ಹುಡುಗಿ ಹತ್ರ ನಿಂತ್ಕೊಂಡು’ ಎಂದು ದಬಾಯಿಸಿದ. ‘ಸುಮ್ನೆ ನಿಂತಿದ್ದೀನಿ. ಅವಳು ಎಷ್ಟು ಚೆನ್ನಾಗಿ ಹೂ ಆರಿಸ್ತಿದ್ದಾಳೆ ನೋಡಿ’ ಎಂದೆ. ಅವನ ಅನುಮಾನ ಹೆಚ್ಚಾಯಿತು. ‘ಯೇಯ್ ಏನು ಡ್ರಾಮ ಮಾಡ್ತಿದ್ದೀಯ? ಏನು ಆ ಮಗು ಹತ್ರ ಕೆಲಸ ನಿಂಗೆ? ಏನೋ ಹಿಕ್ಮತ್ ಮಾಡ್ತಾ ಇದ್ದೀಯ. ನಡೀ ಇಲ್ಲಿಂದ’ ಎನ್ನುತ್ತ ಕೋಲೋ ಕಲ್ಲೋ ಎನಾದರೂ ಸಿಗುತ್ತದೆಯೇ ಎಂದು ಹುಡುಕಲಾರಂಭಿಸಿದ. ನನಗೆ ಪಿತ್ತ ನೆತ್ತಿಗೇರಿತು. ‘ಮುಚ್ಕೊಂಡು ಹೋಗಯ್ಯ ನಮ್ಮ ಮಗೂನೆ ಇದು’ ಎಂದು ಜೋರಾಗಿ ಅರಚಿದೆ. ನನ್ನ ಅರಚಾಟಕ್ಕೆ ಅವನು ಹೆದರಿದ. ಆದರೆ ಅವನ ಅನುಮಾನ ಇನ್ನೂ ಹಾಗೆಯೇ ಇತ್ತು. ಕೊಂಚ ದೂರ ಓಡಿದವನು ಮತ್ತೆ ನಿಂತು ಏನು ಮಾಡುವುದೆಂದು ಯೋಚಿಸತೊಡಗಿದ. ನನಗೆ ಇನ್ನಷ್ಟು ರೇಗಿತು. ರಸ್ತೆಯ ತುದಿಯಲ್ಲಿದ್ದ ಇಟ್ಟಿಗೆ ಚೂರೊಂದನ್ನು ಎತ್ತಿಕೊಂಡು ಅವನೆಡೆಗೆ ಗುರಿ ಮಾಡಿ ‘ಇಲ್ಲಿಂದ ಹೋಗ್ತೀಯಾ ಒದೆ ಬೀಳ್ಬೇಕಾ?’ ಎಂದು ಅಬ್ಬರಿಸುತ್ತ ಕಲ್ಲೆಸೆದೆ. ಇವನ್ಯಾವನೋ ಹುಚ್ಚ ನನ್ಮಗ ಎಂದು ಬೈದುಕೊಳ್ಳುತ್ತ ದೂರ ಓಡಿದ. ಪೋಲೀಸರಿಗೆ ಹೇಳ್ತೀನಿ ಎಂದು ಕೂಗಾಡುತ್ತ ಮತ್ತಷ್ಟು ದೂರ ಓಡಿ ಕಣ್ಮರೆಯಾದ. ನಮ್ಮ ಕಿರುಚಾಟದ ಸದ್ದಿಗೆ ಒಂದೆರಡು ಬಾಗಿಲುಗಳ ಚಿಲಕಗಳು ತೆರೆದುಕೊಂಡು ಹಾಗೆಯೇ ಹಿಂದೆ ಸರಿದವು. ಮನೆಗಳ ಮೌನ ರಸ್ತೆಯ ಮೌನ ಎರಡೂ ಹಾಗೆಯೇ ಉಳಿಯಿತು.

ಅವಳು ತನ್ನ ಪಾಡಿಗೆ ತಾನು ಹೂಗಳನ್ನು ನೆಲಕ್ಕೆ ಹಾಕುವುದು ಮತ್ತೆ ಉಡಿಗೆ ತುಂಬಿಕೊಳ್ಳುವುದೂ ಮಾಡುತ್ತಿದ್ದಳು. ಕೊನೆಗೂ ಮೌನ ಮುರಿದು ‘ನಮ್ಮಪ್ಪ ಆಸ್ಪತ್ರಾಗವ್ನೆ’ ಎಂದಳು. ಅಚ್ಚರಿ ಆತಂಕ ಬೆರೆತ ದನಿಯಲ್ಲಿ ‘ಏನಾಯ್ತು ನಿಮ್ಮಪ್ಪಂಗೆ’ ಎಂದೆ. ‘ಅವ್ವನ್ ತಾವ ಕಾಸಿಲ್ಲಂತೆ. ಬದಿಕ್ಕಂಡ್ರೆ ಬತ್ತೀನಿ, ಯಾರೂ ಬರ್ಬ್ಯಾಡಿ ಅಂದ ಅಪ್ಪ’ ಎಂದವಳು ಎದ್ದು ನಿಂತು ಸಪೋಟಕಾಯಿಗಳನ್ನು ಉಡಿಯಲ್ಲಿ ತುಂಬಿಕೊಂಡು ಒಂದು ಕೈಯಲ್ಲಿ ಜೋಪಾನವಾಗಿ ಹಿಡಿದುಕೊಂಡಳು. ಆನಂತರ ನನ್ನೆಡೆಗೆ ಅರ್ಥವೇ ಆಗದಂತಹ ನೋಟ ಬೀರಿ ಎದ್ದು ಹೊರಡಲನುವಾದಳು. ಅವಳು ನೆಲದಲ್ಲಿ ಚೆಲ್ಲಾಡಿದ ಹೂಗಳು ತಮ್ಮನ್ನು ಬಿಟ್ಟುಹೋಗುತ್ತಿದ್ದ ಅವಳನ್ನೇ ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದವು. ಅವಳು ತನ್ನ ಇನ್ನೊಂದು ಕೈಯಿಂದ ಎದೆಗವಚಿಕೊಂಡ ಪಾರಿವಾಳದ ಮರಿ ನೋವಿನಿಂದ ಕ್ರೂಕ್ ಎಂದು ನರಳಿತು. ಹೊರಟಿದ್ದ ಅವಳನ್ನು ತಲೆದಡವಿ ಸಂತೈಸಬೇಕೆನಿಸಿತು. ಆದರೆ ಯಾಕೋ ಮಾತು ಹೊರಡಲಿಲ್ಲ. ಅವಳು ಬಿಸಿಲಿಗೆ ಕಣ್ಣು ಪಿಳುಕಿಸುತ್ತ ಹೊರಟೇಬಿಟ್ಟಳು. ರಸ್ತೆಯಂಚಿನ ಇನ್ನೊಂದು ತಿರುವಿನಲ್ಲಿ ಸೇರಿ ಇತ್ತಕಡೆ ತಿರುಗಿ ಕೂಡ ನೋಡದೆ ಮರೆಯಾದಳು. ಅವಳಿರುವುದೆಲ್ಲಿ? ಅವಳಪ್ಪನಿಗೆ ನಿಜವಾಗಿಯೂ ಏನಾಗಿದೆ? ನನ್ನಿಂದಾಗುವ ಸಹಾಯ ಏನು? ಆ ಪುಟ್ಟ ಹುಡುಗಿ ಬೆಳಿಗ್ಗೆಯಿಂದ ಏನಾದರೂ ತಿಂದಿದ್ದಾಳಾ ಇಲ್ಲವಾ? ಕಾಯಿಲೆ ಬಿದ್ದು ಮನೆಗೇ ಬಾರದ ಸ್ಥಿತಿಯ ಅಪ್ಪ, ಎಲ್ಲೆಡೆ ಬಂದ್ ಇರುವುದರಿಂದ ಕೂಲಿಯೂ ಇಲ್ಲದೆ ಕುಟುಂಬ ಪೋಷಣೆಗಾಗಿ ಪರಿತಪಿಸುತ್ತಿರುವ ಅವಳ ಅಮ್ಮ ಏನು ಪಡಿಪಾಟಲು ಪಡುತ್ತಿರಬಹುದು. ಅವರ ಕಷ್ಟವನ್ನು ನಾನು ಊಹಿಸಿಕೊಳ್ಳಬಹುದಾಗಿತ್ತು. ಊಟಕ್ಕೇನು ಮಾಡ್ತಿದ್ದೀರಿ, ಏನಾದರೂ ಸಹಾಯ ಬೇಕಾ ಎಂದಾದರೂ ಕೇಳಬಹುದಾಗಿತ್ತು. ನಮ್ಮ ಮನೆಗೆ ಬಾ ಎನ್ನಬಹುದಾಗಿತ್ತು. ಸ್ವಲ್ಪ ಕಾಸು ಕೊಡಲೇ ಅನ್ನಬಹುದಾಗಿತ್ತು. ಆದರೆ ಏನೂ ಕೇಳದೆ ಅವಳನ್ನು ಹೋಗಲು ಬಿಟ್ಟು ಅವಳು ಮರೆಯಾದ ನಂತರ ಹುಟ್ಟಿದ ವಿಷಣ್ಣತೆಯನ್ನು ನೇವರಿಸುತ್ತ ಇದ್ದುಬಿಟ್ಟೆನಲ್ಲ ಎನ್ನಿಸಿ ನಾಚಿಕೆಯಾಯಿತು. ಅವಳ ಕಣ್ಣ ತಾರೆಗಳ ಬೆಳಕಿನ ನೆನಹು ಎದೆಯಲ್ಲಿ ತುಂಬಿ ಉಸಿರು ಕಟ್ಟಿದಂತಾಯಿತು. ಅವಳ ಕೈಯಲ್ಲಿ ಸುಖಿಸುತ್ತಿದ್ದ ಹೂಗಳು ಈಗ ರಸ್ತೆಯಲ್ಲಿ ದಿಕ್ಕೆಟ್ಟಂತೆ ಮುಲುಗುತ್ತಿದ್ದವು. ಅವಳು ಕುಳಿತಿದ್ದ ಜಾಗದಲ್ಲಿ ಅವಳ ಗುರುತು ಹಾಗೆಯೇ ಉಳಿದಿತ್ತು. ಅವಳು ಹೋದ ಮೇಲೆ ನಾನು ಬಂದ ಕೆಲಸದ ನೆನಪಾಯಿತು. ಅಲ್ಲಿಂದ ಹೊರಟೆ.

ದಿನಸಿ ಅಂಗಡಿಯ ಮುಂದೆ ಎಂದಿನಂತೆ ಜನ ಇದ್ದರು. ಕೊರೋನಾ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡದಿರಲಿ ಎಂದು ಜನ ಒಂದೊಂದು ಮೀಟರ್ ಅಂತರದಲ್ಲಿ ನಿಲ್ಲಲು ಅನುವಾಗುವಂತೆ ಮಾರ್ಕಿಂಗ್ ಮಾಡಿದ್ದರು. ಆದರೂ ಜನ ಅದನ್ನು ಲೆಕ್ಕಿಸದೆ ಒತ್ತೊತ್ತಾಗಿಯೇ ನಿಂತಿದ್ದರು. ಮನೆಗೆ ದಿನಸಿಯನ್ನು ಮಾಮೂಲಿಗಿಂತ ಎರಡು ದಿನ ಮುಂಚೆಯೇ ತರಿಸಿಕೊಂಡಿದ್ದೆ. ಹಾಗಾಗಿ ಈಗ ಪರದಾಡುವ ಸಮಸ್ಯೆ ಇರಲಿಲ್ಲ. ಆದರೂ ಕಾಫಿಪುಡಿ ತರಿಸಲು ಮರೆತಿದ್ದರಿಂದ ನಿನ್ನೆ ಅಂಗಡಿಗೆ ಹೋಗಿದ್ದೆ. ವರ್ಷಾನುಗಟ್ಟಲೆಯಿಂದ ಲೆಕ್ಕ ಬರೆಸಿ ತಿಂಗಳ ದಿನಸಿ ಒಯ್ಯುತ್ತಿದ್ದವರಿಗೆ ದಿನಸಿ ಅಂಗಡಿಯವನು ಸಾಲ ಕೊಡುವುದಿಲ್ಲ ಎಂದು ನಿರ್ದಾಕ್ಷಿಣ್ಯವಾಗಿ ವಾಪಸ್ಸು ಕಳಿಸುತ್ತಿದ್ದ. ಮುಂಗೋಪದ ಹಿರಿಯರೊಬ್ಬರು ‘ನಾನು ಸತ್ತೋಗಿಬಿಡ್ತೀನಿ ನಿನ್ನ ಸಾಲ ತೀರಿಸಲ್ಲಾಂತ ಹೆದರಿಕೊಂಡು ಬಿಟ್ಟಿದ್ದೀಯ? ಯಾವತ್ತಾರ ಮೋಸ ಮಾಡಿದ್ದೀನಾ? ಹೆಂಗದಂತೆ ಗೊತ್ತೇನಯ್ಯ ಈ ಕಾಯಿಲೆ ನಾನೂ ಉಳಿಯಲ್ಲ ನೀನೂ ಉಳಿಯಲ್ಲ ಇವರ್ಯಾರೂ ಉಳಿಯಲ್ಲ. ಅಮೇರಿಕಾದಂತ ಅಮೇರಿಕಾದಾಗೇನೆ ಜನ ಬೀದಿ ಹೆಣ ಆಗ್ತಾವ್ರಂತೆ. ಏನ್ ನೀನೇನ್ ಶಾಸ್ವತ ಅಂದ್ಕೊಂಡಿದ್ದೀಯ. ಸತ್ತರೆ ಹೆಣಾನೂ ನಿನ್ ಮನೇವರಿಗೆ ಸಿಗಲ್ಲ ತಿಳ್ಕೋ….ಮಗನೆ’ ಎಂದು ಬೈದಾಡಿಕೊಳ್ಳುತ್ತ ಬರಿಚೀಲವನ್ನು ಜಾಡಿಸುತ್ತ ಹೊರಟಿದ್ದರು.

ಮೆಡಿಕಲ್ ಸ್ಟೋರಿನವನು ನಿನ್ನೆ ಇದೇ ಹೊತ್ತಲ್ಲಿ ಬಾಗಿಲು ಹಾಕಿದ್ದ. ಹೋಗಿ ವಾಪಸ್ಸು ಬಂದಿದ್ದೆ. ಮಾಸ್ಕ್ ಬೇಕಾಗಿತ್ತು. ಸ್ಯಾನಿಟೈಸರ್ ಕೂಡ ಇದ್ದರೆ ತನ್ನಿ ಅಂದಿದ್ದಳು ನನ್ನವಳು. ‘ಅಪ್ಪ ಕೇಳಿದೆಯಾ ಚಿಕ್ಕಪೇಟೇಲಿ ಅದ್ಯಾರೋ ಡೂಪ್ಲಿಕೇಟ್ ಸ್ಯಾನಿಟೈಸರ್ ಮಾಡಿ ಮಾರ್ತಾ ಇದ್ರಂತೆ. ಪೋಲೀಸ್ನೋರು ಅರೆಸ್ಟ್ ಮಾಡಿ ಎಲ್ಲ ಮಾಲನ್ನೂ ಸೀಜ್ ಮಾಡಿದ್ದಾರಂತೆ. ಒಳ್ಳೆ ಬ್ರಾಂಡೆಡ್ ಸ್ಯಾನಿಟೈಸರ್ ಇದ್ರೆ ತಗೊಂಡು ಬಾ. ಇಲ್ಲಾಂದ್ರೆ ತರ್ಬೇಡ. ಮಾಮೂಲಿ ಸೋಪಲ್ಲಿ ತೊಳೆದರೆ ಸಾಕು’ ಎಂದು ಬುದ್ದಿ ಹೇಳಿದ ಮಗ. ‘ಮತ್ತೆ ಮಾಸ್ಕ್ ಡೂಪ್ಲಿಕೇಟ್ ಇರಲ್ವಾ’ ಅಂದೆ. ‘ಎಲ್ಲಾನೂ ಡೂಪ್ಲಿಕೇಟೇ ನೋಡ್ಕೊಂಡು ತಗೊಂಡ್ಬಾ ಅಷ್ಟೆ’ ಎಂದು ಮಾತು ಮುಗಿಸಿದ್ದ. ಔಷಧಿ ಅಂಗಡಿಯ ಬಾಗಿಲು ತೆಗೆದಿತ್ತು. ನನ್ನನ್ನು ನೋಡಿದರೆ ಅಂಗಡಿಯವನಿಗೆ ಮಾತನಾಡುವ ಉಮೇದು ಜಾಸ್ತಿ. ‘ದೇಶ ಮೊದಲು ಆಮೇಲೆ ನಾವು ಅಲ್ವಾ ಸಾರ್’ ಎನ್ನುತ್ತಿದ್ದ. ನಾನು ಕೂಡ ಮುಗುಳ್ನಕ್ಕು ಹೌದು ಎನ್ನುತ್ತಿದ್ದೆ. ಇವತ್ತು ನಾನೇ ಮಾತು ಶುರು ಮಾಡಿದೆ. ‘ಹೇಗಿದೆ ವ್ಯಾಪಾರ?’ ಎಂದೆ. ಕೈ ಅಗಲಿಸಿ ಆಕಾಶ ತೋರಿದ. ‘ಯಾಕೆ?’ ಎಂದೆ. ‘ಜನ ಮನೆ ಬಿಟ್ಟು ಆಚೆ ಬರ್ತಿಲ್ಲ. ಇನ್ನೆಲ್ಲಿ ವ್ಯಾಪಾರ’ ಎನ್ನುತ್ತ ಮತ್ತದೇ ನಿರಾಸೆಯ ಭಂಗಿ ಮಾಡಿದ. ‘ಅದೂ ಸರೀನೆ. ಆದ್ರೂ ಸರ್ಕಾರದ್ದೇ ತೀರ್ಮಾನ ಅಲ್ವಾ? ಜನ ತಾನೇ ಏನ್ಮಾಡ್ತಾರೆ?’ ಎಂದೆ. ಅವನಿಗೆ ಕೋಪ ಬಂತು. ‘ಏನು ಸರ್ಕಾರಾನೋ ಏನೋ. ಒಂದು ಕಡೆ ಶ್ರೀಮಂತರನ್ನ ಫಾರಿನ್ನಿಂದ ಸ್ಪೆಷಲ್ ಫ್ಲೈಟಲ್ಲಿ ಕರ್ಕೊಂಡು ಬಂದು ದೇಶಕ್ಕೆ ಕಾಯಿಲೇನ ತುಂಬುತ್ತೆ. ಇನ್ನೊಂದ್ಕಡೆ ಈ ದೇಶಾನೇ ನಂಬ್ಕೊಂಡು ಬದುಕ್ತಾ ಇರೋ ಬಡವರು ದಿಕ್ಕೆಟ್ಟು ನೂರಾರು ಮೈಲಿ ಕಾಲ್ನಡಿಗೇಲಿ ಹೋಗಿ ಸಾಯೋ ಹಂಗೆ ಮಾಡುತ್ತೆ. ಶ್ರೀಮಂತರಿಗೊಂದು ನ್ಯಾಯ ಬಡವರಿಗೊಂದು ನ್ಯಾಯ’ ಎಂದು ಆಕ್ರೋಶ ತೋರಿದ.

ಇನ್ನೂ ಮಾತಾಡತಾ ನಿಂತುಕೊಂಡರೆ ನನ್ನವಳು ಎಲ್ಲಿದ್ದೀರಿ ಹೊರಟು ಬನ್ನಿ ಎಂದು ಫೋನ್ ಮಾಡುತ್ತಾಳೆಂದು ಯೋಚಿಸಿ ಅಲ್ಲಿಂದ ಬೇಗ ಹೊರಡಲು ಯೋಚಿಸಿದೆ. ಒಂದೆರಡು ಮಾಸ್ಕ್ ಮತ್ತು ಒಂದು ಸ್ಯಾನಿಟೈಸರ್ ಕೊಡಿ ಎಂದು ಕೇಳಿದೆ. ಎರಡನ್ನೂ ಕೊಟ್ಟ. ಐದಾರು ರೂಪಾಯಿಯ ಮಾಸ್ಕಿಗೆ ನಲವತ್ತು ರೂಪಾಯಿ ಹೇಳಿದ. ಅಂಟಂಟಾದ ದ್ರವದಂತಿದ್ದ ಯಾವ ಲೇಬಲ್ಲೂ ಇಲ್ಲದ ಬಾಟಲಿನಲ್ಲಿದ್ದ ಯಾವುದನ್ನೋ ಸ್ಯಾನಿಟೈಸರ್ ಎಂದ. ಎಷ್ಟು ಎಂದರೆ ನೂರ ಎಂಬತ್ತು ಎಂದ. ‘ಜಾಸ್ತಿ ಅಲ್ಲವೇ? ಬ್ರಾಂಡೆಡ್ ಸ್ಯಾನಿಟೈಸರ್ರೇ ನೂರು ನೂರಿಪ್ಪತ್ತಕ್ಕೆಲ್ಲ ಸಿಗುತ್ತೆ’ ಎಂದೆ. ‘ನೀವೇ ಆ ರೇಟಿಗೆ ಒಂದು ಕಾರ್ಟನ್ನಷ್ಟು ತಂದ್ಕೊಡಿ ಸರ್ ನಾನೇ ತಗೊಳ್ತೀನಿ. ನಮಗೆ ಐದು ರೂಪಾಯಿ ಲಾಭ ಸಿಗುತ್ತೆ ಅಷ್ಟೆ. ಏನೋ ಜನ ಕಷ್ಟದಲ್ಲಿದ್ದಾರೆ ಅಂತ ಅಂಗಡಿ ತೆಗೆದಿದ್ದೀನಿ. ಒಂಥರಾ ಸಮಾಜ ಸೇವೆ ಸಾರ್ ಇದೂ’ ಎಂದು ರಾಗ ತೆಗೆದ. ‘ಅಲ್ಲರೀ ಮಾರೋದು ಡೂಪ್ಲಿಕೇಟ್. ಸಾಲದೂಂತ ಒಂದಕ್ಕೆ ನಾಲ್ಕು ರೇಟು ಬೇರೆ. ಸ್ಯಾನಿಟೈಸರ್ ಬೇಡ. ಮಾಸ್ಕ್ ಮಾತ್ರ ಕೊಡಿ ಸಾಕು. ಅದೂ ದುಬಾರಿ ರೇಟೇ. ಆದರೆ ಏನ್ಮಾಡೋದು ಬೇಕೇ ಬೇಕಲ್ಲ’ ಎಂದು ಕಾಸು ಕೊಟ್ಟು ಹೊರಟೆ. ಹಿಂದಿನಿಂದ ಅಂಗಡಿಯವನು ಏನೋ ಬೈಯುತ್ತಿರುವುದು ಕೇಳಿತು. ನಾನು ವಾಪಸ್ಸು ಹೋದರೆ ಜಗಳ ಗ್ಯಾರಂಟಿ. ಅವನು ಇಲ್ಲಿಯವರೆಗೆ ನಯವಾಗಿ ಸುಭಗನಂತೆ ಮಾತಾಡುತ್ತಿದ್ದವನು ಪ್ರಶ್ನೆ ಮಾಡಿದ ಕೂಡಲೇ ತನ್ನ ನಿಜ ರೂಪ ತೋರಿಸಲಾರಂಭಿಸಿದ್ದ. ಆ ಕೊಳಕನ ಜೊತೆ ಇನ್ನೆಂಥ ಮಾತು ಅಂದುಕೊಳ್ಳುತ್ತ ಸುಮ್ಮನಾದೆ.

ರಸ್ತೆಗಿಳಿದು ಒಂದೆರಡು ಹೆಜ್ಜೆ ನಡೆದಿರಬೇಕು. ಅಷ್ಟರಲ್ಲಿ ಪೋಲೀಸನೊಬ್ಬ ಭರಭರನೆ ಲಾಠಿ ಬೀಸುತ್ತ ಬಂದ. ‘ಲಾಕ್ ಡೌನ್ ಅಂತ ಗೊತ್ತಿಲ್ವೇನಯ್ಯಾ ನಿಂಗೆ? ಯಾಕ್ಬಂದಿದ್ದೀಯ? ನೋಡೋಕೆ ಅಫಿಷಿಯಲ್ ತರಾ ಕಾಣ್ತಿದ್ದೀಯ. ಮಾನಮರ್ಯಾದೆ ಬೇಡ್ವಾ?’ ಎಂದು ಉಗ್ರವಾಗಿ ಗರ್ಜಿಸಿದ. ಮೆಡಿಸಿನ್ಸ್ ಎಂದು ಹೇಳುತ್ತ ಬ್ಯಾಗಿನಲ್ಲಿದ್ದುದನ್ನು ತೋರಿಸಲೆತ್ನಿಸಿದರೆ ಅವನಿಗೆ ಕೇಳುವಷ್ಟು ತಾಳ್ಮೆ ಇರಲಿಲ್ಲ. ಏನಾದರೂ ಹೇಳುವ ಮುಂಚೆಯೇ ಲಾಠಿ ಬೀಸಿದ. ಕೈಲಿದ್ದ ದಪ್ಪ ಬಟ್ಟೆಯ ಬ್ಯಾಗನ್ನು ಲಾಠಿಗೆ ಅಡ್ಡ ಹಿಡಿದೆ. ಇಲ್ಲದಿದ್ದರೆ ಏಟು ಮೊಣಕಾಲು ಗಂಟಿಗೆ ಬೀಳುತ್ತಿತ್ತು. ಮೊದಲೇ ಮಂಡಿ ನೋವಿತ್ತು. ಪೆಟ್ಟು ಬಿದ್ದಿದ್ದರೆ ತಿಂಗಳುಗಟ್ಟಲೆ ನರಳಬೇಕಾಗಿತ್ತು. ಅಂಗಡಿಯವನ ಕಡೆ ನೋಡಿದೆ. ಅವನು ಹುಳ್ಳಗೆ ನಗುತ್ತಿದ್ದ. ಅವನನ್ನು ಸಾಕ್ಷಿಗೆ ಕರೆಯಲು ಇಷ್ಟವಾಗಲಿಲ್ಲ. ಪೋಲೀಸಿನವನ ಲಾಠಿಗೆ ಮತ್ತೆ ಬ್ಯಾಗನ್ನು ತಡೆಯಾಗಿ ಒಡ್ಡುತ್ತ ‘ಆಯ್ತು ಬಿಡಿ ಸಾರ್ ಇನ್ನೊಂದು ಸಲ ಬರಲ್ಲ’ ಎಂದು ನಯವಾಗಿ ಹೇಳಿದೆ. ‘ಆಯ್ತು ಹೋಗ್. ಇನ್ನೊಂದ್ಸಲ ಕಾಣಿಸಿದ್ರೆ ಮೂಳೆ ಮುರಿದುಬಿಡ್ತೀನಿ’ ಎಂದ ಏಕವಚನದಲ್ಲಿ. ಅವಮಾನದಿಂದ ಮನಸ್ಸು ಬೆಂಕಿಯಾಯಿತು. ಕೋಪ ನುಂಗಿಕೊಳ್ಳುತ್ತ ‘ಆಯ್ತು ಸ್ವಾಮಿ ಹೋಗ್ತೀನಿ’ ಎನ್ನುತ್ತ ಅಲ್ಲಿಂದ ಹೊರಟೆ. ಅಂಗಡಿಯವನ ನೀಚತನ ಪೋಲೀಸನ ದರ್ಪ ನೆನಪಾಗಿ ಮನಸ್ಸು ತುಂಬ ವ್ಯಾಕುಲಗೊಳ್ಳುತ್ತಿತ್ತು. ಮುಖ್ಯರಸ್ತೆಯನ್ನು ದಾಟಿ ಮನೆಯ ಕಡೆಗೆ ತಿರುಗಿದಾಗ ದೂರದಲ್ಲಿ ಮತ್ತೆ ಪೋಲೀಸನ ಆರ್ಭಟ ಕೇಳಿತು. ಇನ್ನಾರ ಮೇಲೆ ದಂಡ ಪ್ರಯೋಗವೋ ಎಂದು ಕಳವಳವಾಯಿತು. ಹಾಗೆಯೇ ಕೊರೋನಾಗೆ ಹೆದರಿ ಎಲ್ಲರೂ ಮನೆಯಲ್ಲಿ ಅಡಗಿರುವಾಗ ಲಾಠಿಯನ್ನು ವಜ್ರಾಯುಧವೆಂಬಂತೆ ಭ್ರಮಿಸುವ ಪೋಲೀಸನಿಗೂ ಕೂಡ ದೂರದ ಊರಲ್ಲೆಲ್ಲೋ ಸಾವಿರ ಕಣ್ಣುಗಳಿಂದ ಕಾಯುತ್ತಿರುವ ಹೆತ್ತವರು, ಹೆಂಡತಿ ಮಕ್ಕಳು, ಪ್ರೀತಿಪಾತ್ರರು ನೆನಪಾಗಿ ವೇದನೆಯಿಂದ ಹೃದಯ ಒದ್ದೆಯಾಗುತ್ತಿರಬಹುದಲ್ಲವೇ ಎನಿಸಿತು. ಆ ಭಾವನೆ ಎದೆಗೆ ಹೊಕ್ಕ ಕೂಡಲೇ ಪೋಲೀಸಪ್ಪನ ಬಗೆಗಿನ ಕ್ರೋಧವೆಲ್ಲ ಖಾಲಿಯಾಯಿತು. ಆದರೂ ಪೋಲೀಸಪ್ಪನ ಹೊಡೆತದಿಂದ ತಪ್ಪಿಸಿಕೊಳ್ಳಲೆತ್ನಿಸಿದಾಗ ಮೊಣಕಾಲ ಮಂಡಿಯ ಬಳಿ ಕಳಕ್ಕೆಂದಿದ್ದರಿಂದ ಹುಟ್ಟಿದ ಅಸಹನೀಯ ನೋವು ಹೆಜ್ಜೆಯನ್ನು ಮುಂದಿಡಲಾಗದಂತೆ ಮಾಡಿತ್ತು.

ನಿಧಾನವಾಗಿ ನಡೆಯುತ್ತ ಮತ್ತದೇ ಆಕಾಶ ಮಲ್ಲಿಗೆ ಮರದ ಬಳಿ ತಲುಪಿದ್ದೆ. ನನ್ನ ಕಣ್ಣನ್ನೇ ನಂಬಲಾಗಲಿಲ್ಲ. ಹೂ ಆಯುವ ಪುಟ್ಟ ದೇವತೆ ಮತ್ತೆ ಅಲ್ಲಿಯೇ ಇದ್ದಳು. ಕಾಲು ಚಾಚಿ ಕುಳಿತುಕೊಂಡು ಲಂಗದ ಬಟ್ಟೆಯಲ್ಲಿ ತುಂಬಿಕೊಂಡ ಹೂವುಗಳನ್ನು ನಿಧಾನವಾಗಿ ಮಗುಚುತ್ತಿದ್ದಳು. ಕಾಲಿನ ಸಪ್ಪಳ ಮಾಡಿದೆ. ನಿಧಾನವಾಗಿ ತಲೆಯೆತ್ತಿದಳು. ಅವಳ ಕಣ್ಣಿನಿಂದ ಹೂಗಳು ಉದುರಲಾರಂಭಿಸಿದವು. ಅವಳು ಅದನ್ನು ಲಂಗದಲ್ಲಿ ತುಂಬುತ್ತ ನೆಲದ ಮೇಲೆಲ್ಲ ಹರಡುತ್ತ ‘ಹೂ ಕಟ್ಟಬೇಕು ದಾರ ಇದೆಯಾ?’ ಎಂದಳು. ‘ಅಯ್ಯೋ ದಾರ ಇಲ್ಲವಲ್ಲ. ಮಾಸ್ಕ್ ಇದೆ. ಬೇಕೂಂದ್ರೆ ಅದರ ದಾರ ಹರಿದು ಕೊಡ್ತೇನೆ’ ಎಂದೆ. ‘ಥೂ ಅದು ಬೇಡ’ ಎಂದು ಮುಖ ಸಿಂಡರಿಸಿದಳು. ‘ಮತ್ತೇನು ಬೇಕು?’ ಎಂದೆ. ‘ನಿನ್ನ ಮೈಯ ನರ ಕೊಡು. ನಿನ್ನ ಕರುಳು ಕೊಡು. ಹೂ ಪೋಣಿಸ್ತೀನಿ’ ಎಂದಳು. ‘ಅಷ್ಟೇ ತಾನೇ ನಾನು ರೆಡಿ’ ಎಂದೆ. ‘ಹೌದಾ ಕೊಡು ಹಾಗಾದರೆ’ ಎನ್ನುತ್ತ ಕೈ ಚಾಚಿದಳು. ಕೊಡುವ ಉತ್ಸಾಹವನ್ನೇನೋ ತೋರಿದ್ದೆ. ಆದರೆ ನರ ಕೊಡುವುದು ಹೇಗೆ ಕರುಳು ಕೀಳುವುದು ಹೇಗೆ ಎಂದು ಗೊಂದಲವಾಯಿತು. ನಾನು ಗೊಂದಲದಲ್ಲಿದ್ದಾಗಲೇ ಅವಳಿದ್ದ ಜಾಗದಲ್ಲಿ ಏನೋ ಸದ್ದಾಯಿತು. ನೋಡ ನೋಡುತ್ತಿದ್ದಂತೆಯೇ ಅಲ್ಲಿದ್ದ ಹೂಗಳೆಲ್ಲ ಕಣ್ಮರೆಯಾಗಿ ಅವಳು ಮಾತ್ರ ಉಳಿದಳು. ಮರುಕ್ಷಣವೇ ಹೂವಿನ ಗುಪ್ಪೆಯಿದ್ದ ಜಾಗದಲ್ಲಿ ಅವಳೇ ಒಂದು ಹೂವಾಗಿ ಮೂಡಿ ಗಾಳಿಯಲ್ಲಿ ತೇಲುತ್ತ ತೇಲುತ್ತ ಸಾಗಿ ರಸ್ತೆಯಂಚಿಗೆ ತಲುಪಿ ತಿರುವಿಗೆ ಹೊರಳಿ ತಟಕ್ಕನೆ ಕಣ್ಮರೆಯಾದಳು. ಏನಾಯಿತೆಂದು ಅರ್ಥವಾಗದೆ ನಾನು ಬೆಕ್ಕಸ ಬೆರಗಾಗಿ ನಿಂತಿದ್ದೆ. ನೋಡಿದರೆ ಅವಳಿದ್ದ ಜಾಗದಲ್ಲಿ ಅವಳ ಗುರುತಿರಲಿಲ್ಲ. ನಾನಿದ್ದ ಜಾಗದಲ್ಲಿ ಈಗ ನೆರಳಿರಲಿಲ್ಲ. ಸೂರ್ಯ ನೇರ ನೆತ್ತಿಯ ಮೇಲಿದ್ದ. ಆಕಾಶ ರೋಷಗೊಂಡಂತಿತ್ತು. ಅವಳು ಸಾಗಿದ ದಾರಿಯುದ್ದಕ್ಕೂ ಬಿಸಿಲಿನ ಅಲೆಗಳು ಏರಿಳಿಯುತ್ತಿದ್ದವು. ಬಿಸಿಲಿನ ಅಲೆಗಳ ನಡುವೆ ಅವಳಿರಬಹುದಾ ಎಂದು ಅವಳು ಹೋದ ದಿಕ್ಕಿನ ಕಡೆ ನೋಡುತ್ತಲೇ ಇದ್ದೆ. ಅವಳ ಮೋಹಕ ಮುಗುಳ್ನಗುವಿನ ಚಿತ್ರ ಮಾತ್ರ ತುಸುವೇ ಮೂಡಿ ಮರೆಯಾಯಿತು. ನಾನು ಅವಳಲ್ಲಿ ಪರವಶಗೊಂಡಿದ್ದೆ. ನನಗಾವುದರ ಪರಿವೆಯೂ ಇರಲಿಲ್ಲ. ಅದೆಷ್ಟು ಹೊತ್ತು ಅಲ್ಲಿಯೇ ನಿಂತಿದ್ದೆನೋ ಏನೋ? ಮೈಮರೆತವನಿಗೆ ನನ್ನವಳ ಫೋನ್ ಕರೆಯಿಂದ ಎಚ್ಚರವಾಗಿತ್ತು. ಪುಟ್ಟ ದೇವತೆಯಿದ್ದ ಆಕಾಶ ಮಲ್ಲಿಗೆ ಮರದಡಿ ಎಂದಾದರೂ ಯಾರಾದರೂ ಇದ್ದರೆನ್ನುವ ಸುಳಿವೇ ಇಲ್ಲದಂತೆ ಹಸನಾಗಿ ಹಾಸಿದಂತೆ ಹೂವುಗಳು ಹರಡಿಕೊಂಡು ನಗುತ್ತಿದ್ದವು. ಯಾಕೋ ಅಯೋಮಯವಾದಂತೆನಿಸಿ ತೊಡರು ಹೆಜ್ಜೆ ಹಾಕುತ್ತ ಮನೆಯತ್ತ ಹೊರಟೆ.

ಆಕಾಶ ಮಲ್ಲಿಗೆಯನ್ನು ಕಂಡಾಗ ಮೊದಲು ನನಗೆ ಸಾರಾ ನೆನಪಾಗಬೇಕಾಗಿತ್ತು. ಆದರೆ ಹೂ ಆಯುತ್ತಿದ್ದ ಪುಟ್ಟ ಹುಡುಗಿ ಎಲ್ಲವನ್ನೂ ಆವರಿಸಿಕೊಂಡುಬಿಟ್ಟಿದ್ದರಿಂದ ಬೇರೆ ಯಾವುದೂ ಅಲ್ಲಿ ನೆನಪಿಗೆ ಬರಲಿಲ್ಲ. ಕಾಲೇಜಿನಲ್ಲಿ ಒಟ್ಟಿಗೇ ಓದುತ್ತಿದ್ದ ಸಾರಾ ಹಾಡುತ್ತಿದ್ದುದು ಕೂಡ ಆಕಾಶ ಮಲ್ಲಿಗೆ ಮರದಡಿಯಲ್ಲಿಯೇ. ಮೈತುಂಬ ಹೂಗಳನ್ನೂ ಹೀಚು ಕಾಯಿಗಳನ್ನೂ ತೊಟ್ಟ ಮಾವಿನ ಮರ ಸನಿಹದಲ್ಲೇ ಇದ್ದರೂ ಅವಳಿಗದು ಪ್ರಿಯವಲ್ಲ. ಕೋಗಿಲೆಗೆ ಪ್ರಿಯವಾದ ಮರವಲ್ಲವೇ ನೀನೂ ಕೋಗಿಲೆ ಅದರ ಕೆಳಗೆ ಕುಳಿತು ಹಾಡಿದರೆ ಎಷ್ಟು ಚೆನ್ನ ಎಂದರೆ ಕೋಗಿಲೆಗೆ ಹೊಟ್ಟೆ ಕಿಚ್ಚಾಗುತ್ತೆ ಅಲ್ಲಿ ಹಾಡಿದರೆ ಎಂದು ನಗುತ್ತಿದ್ದಳು. ಇತ್ತೀಚೆಗೆ ಅವಳ ಬೇಟಿಯೇ ಆಗಿರಲಿಲ್ಲ. ಆದರೆ ಹದಿನೈದು ದಿನಗಳ ಹಿಂದೆ ಅನಿರೀಕ್ಷಿತವಾಗಿ ಬಿಗ್‍ಬಜಾರಿನಲ್ಲಿ ಎದುರಾಗಿದ್ದಳು. ಆಗ ಹೇಗಿದ್ದಿಯೋ ಈಗಲೂ ಹಾಗೇ ಸಪೂರ ಇದ್ದೀಯ ಎಂದಾಗ ಹಿತವಾಗಿ ನಕ್ಕಿದ್ದಳು. ಬೈತಲೆಯಲ್ಲಿ ಬಿಳಿ ಕೂದಲು ಇಣುಕಿತ್ತು. ಹಣೆ ಮತ್ತು ಕತ್ತಿನ ಬಳಿ ಸುಕ್ಕು ಗೆರೆ ಕಂಡಿತ್ತು. ಐವತ್ತಾಯಿತಲ್ಲವೇ ಎಂದಿದ್ದೆ. ಮತ್ತೊಮ್ಮೆ ಕೆನ್ನೆಯಲ್ಲಿ ಗುಳಿ ಮೂಡಿಸಿ ನಕ್ಕು ಒಂದು ಪುಸ್ತಕ ಕೈಗಿಟ್ಟು ‘ನನ್ನ ಪುಸ್ತಕ ಇದು. ಓದಿ ಅಭಿಪ್ರಾಯ ಹೇಳು’ ಎಂದು ಅದರೊಳಗೆ ವಿಶ್ವಾಸದಿಂದ ಎಂದು ಒಕ್ಕಣೆ ಹಾಕಿದ್ದಳು. ಅದಾದ ಒಂದು ವಾರಕ್ಕೆ ಅವಳಿಗೆ ಕೊರೋನಾ ಸೋಂಕು ಆಗಿರುವ ವಿಚಾರ ಗೆಳೆಯರ ವಾಟ್ಸಾಪ್ ಗ್ರೂಪಿನಲ್ಲಿ ಗೊತ್ತಾಯಿತು. ಯಾವ ಆಸ್ಪತ್ರೆಯಲ್ಲಿ ಇದ್ದಾಳೆ ಎನ್ನುವುದು ಗೊತ್ತಾಗಲಿಲ್ಲ. ಅವಳ ಸಂಪರ್ಕದಲ್ಲಿ ಬಂದವರ ಮಾಹಿತಿ ಕಲೆ ಹಾಕುತ್ತಿದ್ದಾರೆ ಎನ್ನುವ ವಿಷಯ ತಿಳಿದು ಅವಳಿಂದ ಪುಸ್ತಕ ಪಡೆದಿದ್ದು ನೆನಪಾಗಿ ಸಣ್ಣಗೆ ನಡುಕ ಬಂದಿತ್ತು. ಸಧ್ಯ ನಾನು ಆರೋಗ್ಯವಾಗಿಯೇ ಇದ್ದೆ.

ಬದುಕು ಎಂತೆಂತಹುದೋ ವಿಚಿತ್ರಗಳನ್ನು ತಂದು ಮುಖದ ಮೇಲೆ ಎಸೆಯುತ್ತದೆ ಎನ್ನುವುದು ನನಗೆ ನಿನ್ನೆ ಶರತ್ ಕರೆ ಮಾಡಿದಾಗ ಮತ್ತೊಮ್ಮೆ ಅನಿಸಿತ್ತು. ಎಷ್ಟು ವರ್ಷಗಳಾಗಿ ಹೋಯಿತು ಅವನೊಂದಿಗೆ ಮಾತನಾಡಿ. ಅವನು ಯಾರ ಸಂಪರ್ಕಕ್ಕೂ ಸಿಗದೆ ತನ್ನಷ್ಟಕ್ಕೆ ತಾನಿದ್ದುಬಿಡಲು ತೀರ್ಮಾನಿಸಿದ್ದ. ಅವನಿಗೆ ಅದೇ ನೆಮ್ಮದಿಯೆನಿಸಿದರೆ ಹಾಗೆಯೇ ಇರಲು ಬಿಡಿ ಎಂದು ಗೆಳೆಯರಿಗೂ ಆಗಲೇ ಹೇಳಿಬಿಟ್ಟಿದ್ದೆ. ಇಪ್ಪತ್ತೈದು ವರ್ಷಗಳ ನಂತರವೂ ಅವನ ಧ್ವನಿ ಚೆನ್ನಾಗಿ ನೆನಪಿತ್ತು. ‘ಎಲ್ಲ ಕಡೆ ಕೊರೋನಾ ಸುದ್ದಿ ಅಲ್ವಾ? ಇವತ್ತು ಇದ್ದವರು ನಾಳೆ ಇರ್ತೀವೋ ಅಲ್ವೋ ಅನ್ನಿಸ್ತು. ಒಬ್ಬೊಬ್ಬರನ್ನೇ ನೆನಪು ಮಾಡ್ಕೊಂಡು ಮಾತಾಡ್ತಿದ್ದೀನಿ’ ಅಂದ. ಕೆಲವು ಕ್ಷಣಗಳು ಸುಮ್ಮನಿದ್ದವನು ‘ಅವಳು ಸಿಕ್ಕಿದ್ದಳಾ’ ಎಂದ. ಯಾರು ಎಂದು ವಿಶೇಷವಾಗಿ ಹೇಳಬೇಕಾಗಿರಲಿಲ್ಲ. ‘ಅವತ್ತು ಅವಳಿಗೆ ಹೇಳ್ಬೇಕಾಗಿತ್ತು. ಹೇಳಿದ್ದರೆ ನನ್ನ ಪ್ರೀತಿಯನ್ನು ಒಪ್ಕೊಳ್ತಿದ್ದಳಲ್ವಾ? ಏನನಿಸುತ್ತೆ ನಿನಗೆ?’ ಎಂದ. ನನಗೇನಿಸುತ್ತೆ ಅನ್ನೋದನ್ನು ಈಗ ಹೇಗೆ ಹೇಳೋದು. ಅವಳ ಪ್ರಕಾರ ಅವಳು ಹೋದಳು. ಅವಳ ಹೆಜ್ಜೆಯ ಗತಿ ಅರಿಯದ ಇವನು ದಾರಿ ಬದಿಯ ಒಂಟಿ ಗಿಡದ ಹಾಗೆ ನಿಂತುಬಿಟ್ಟಿದ್ದ. ‘ಒಳ್ಳೆ ಸೋರೇಕಾಯಿ ಬಳ್ಳಿ ಇದ್ದಂಗಿದ್ದಾಳಲ್ಲೋ’ ಎನ್ನುವುದು ಸಾರಾಳ ಬಗೆಗೆ ಅವನ ಉದ್ಗಾರ. ಆ ವಯಸ್ಸಿಗೇ ಸಿಕ್ಕಾಪಟ್ಟೆ ಓದು, ಸಂಗೀತದಲ್ಲಿ ಸೀನಿಯರ್ ಪಾಸಾಗಿದ್ದುದು, ಆಶಾ ಬೋಂಸ್ಲೆಯ ಹಾಡುಗಳನ್ನು ಹಾಡಿದಷ್ಟೇ ತನ್ಮಯತೆಯಿಂದ ಅಡಿಗರ ಯಾವ ಮೋಹನ ಮುರಳಿಯನ್ನು ಹಾಡುತ್ತಿದ್ದುದು, ಪ್ರತಿದಿನವೂ ಮನೆಯಿಂದ ತಂದ ಊಟವನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದುದು ಹೀಗೆ ಅನೇಕ ಕಾರಣಕ್ಕಾಗಿ ಅವಳು ಇಷ್ಟವಾಗುತ್ತಿದ್ದಳು. ಅವನು ಅವಳನ್ನು ಸೋರೇಕಾಯಿ ಬಳ್ಳಿಗೆ ಯಾಕೆ ಹೋಲಿಸುತ್ತಿದ್ದ ಎನ್ನುವುದು ನಮಗ್ಯಾರಿಗೂ ಅರ್ಥವಾಗುತ್ತಿರಲಿಲ್ಲ. ಇವತ್ತಿಗೂ ಅರ್ಥವಾಗಿಲ್ಲ ಅಂದರೂ ಸರಿಯೇ. ಅವಳಿಗೂ ಸೋರೇಕಾಯಿ ಬಳ್ಳಿಯ ಮಾತು ತಿಳಿಯಿತು. ಉಪಮಾಲೋಲ ಎಂದು ಮನಸಾರೆ ನಕ್ಕಿದ್ದಳು.

‘ಅವಳು ಆಸ್ಪತ್ರೇಲಿದ್ದಾಳಂತೆ. ಇವತ್ತು ಗೊತ್ತಾಯ್ತು’ ಎಂದು ಬಿಕ್ಕಿದ. ‘ಯಾರು ಹೇಳಿದ್ದು?’ ಎಂದೆ. ‘ಅವಳಿಗೇನೂ ಆಗ್ಬಾರ್ದು ಅಂತ ಮನೆ ದೇವರ ಕೋಣೇಲಿ ದೇವರ ಪಟಕ್ಕೆ ಕೈ ಮುಗೀತಾ ಕೂತಿದ್ದೆ. ನನ್ನ ಹೆಂಡತಿ ನೋಡಿ ಇದೇನಿವತ್ತು ವಿಶೇಷ. ಯಾವತ್ತೂ ದೇವರಿಗೆ ಕೈ ಮುಗಿದೋರಲ್ಲ ಅಂತ ನಗಾಡಿಕೊಂಡು ಹೋದಳು’ ಎಂದು ಮತ್ತೆ ಬಿಕ್ಕಿದ. ನಾನೂ ಅವನೂ ಕುವೆಂಪುರವರ ನೂರು ದೇವರನೆಲ್ಲ ನೂಕಾಚೆ ದೂರ ಎನ್ನುವ ಮಾತನ್ನು ಅದರೆಲ್ಲ ವಾಚ್ಯಾರ್ಥದಲ್ಲಿ ಪಾಲಿಸುವ ಉತ್ಸಾಹದಲ್ಲಿದ್ದವರು. ನಾವೆಲ್ಲ ಒಂದೊಂದು ದಿಕ್ಕಿಗೆ ಒಬ್ಬೊಬ್ಬರು ಚದುರಿ ಹೋದ ಮೇಲೆ ಯಾರ್ಯಾರು ಏನೇನೋ ಉಳಿಸಿಕೊಂಡರೋ ಏನೇನು ಬಿಟ್ಟರೋ ಗೊತ್ತಾಗಲಿಲ್ಲ. ಆದ್ದರಿಂದ ಅವನು ಸಾರಾಳಿಗಾಗಿ ದೇವರ ಕೋಣೆಯಲ್ಲಿ ಕುಳಿತಿದ್ದೆ ಎಂದಾಗ ಏನು ಹೇಳಲೂ ಕೊಂಚ ಕಷ್ಟವಾಯಿತು. ಆದರೆ ಅವನು ದುಃಖದಿಂದ ಬಿಕ್ಕಿದ್ದನ್ನು ಮಾತ್ರ ಪೂರ್ತಿ ನಂಬಬೇಕೆನಿಸಿತು. ‘ಅವಳಿದ್ದಾಳಲ್ಲ, ಆ ಆಸ್ಪತ್ರೆಗೇನಾದ್ರೂ ಹೋಗುವ ಚಾನ್ಸ್ ಸಿಕ್ಕರೆ ನಾನು ಹೋಗಿ ಅವಳ ಸೇವೆ ಮಾಡ್ತೀನಿ ಪ್ರಕಾಶ್’ ಎಂದ. ಇತ್ತೀಚೆಗೆ ನಾನು ಅವಳನ್ನು ಬೇಟಿ ಮಾಡಿದ್ದನ್ನು ಹೇಳಬೇಕೆನಿಸಿತು. ಅವಳ ಗುಳಿ ಕೆನ್ನೆಯ ನಗುವಿನಲ್ಲಿ ಕುಳಿತಂತಿದ್ದ ನೋವಿನ ಚಿತ್ರ ನೆನಪಾಗಿ ಹೇಳುವುದು ಬೇಡವೆನಿಸಿತು. ಅವನ ಮಾತಿಗೆ ಏನಾದರೂ ಹೇಳಬೇಕಿತ್ತು. ಅವನು ಆಸ್ಪತ್ರೆಗೆ ಹೋಗುವುದು ಅಸಾಧ್ಯವೆಂದು ಗೊತ್ತಿದ್ದರೂ ‘ಹಾಗೇ ಮಾಡು ಶರತ್’ ಎಂದೆ ತಣ್ಣಗೆ. ಅವನು ತೀವ್ರ ವೈರಲ್ ಜ್ವರಕ್ಕೆ ತುತ್ತಾಗಿ ಹಾಸ್ಟೆಲಿನಲ್ಲಿ ನರಳುತ್ತ ಮಲಗಿದ್ದಾಗ ಅವನನ್ನು ಆಸ್ಪತ್ರೆಗೆ ಸೇರಿಸಲು ಒತ್ತಾಯಿಸಿದ್ದು ಅವಳೇ. ನರ್ಸಿಂಗ್ ಹೋಮಿಗೆ ಸೇರಿಸಿದಾಗ ಒಂದಿಡೀ ವಾರ ಅವನ ಆರೈಕೆ ಮಾಡಿದ್ದೂ ಅವಳೇ. ಒಂದರ್ಥದಲ್ಲಿ ಅವಳು ಅವನನ್ನು ಸಾವಿನ ದವಡೆಯಿಂದ ಸೆಳೆದು ತಂದಿದ್ದಳು. ಅವನು ಚೇತರಿಸಿಕೊಂಡ ನಂತರ ಅವಳ ತ್ಯಾಗವನ್ನು ಅವನು ಎಲ್ಲರೆದುರು ಆಡಿ ಹೊಗಳುವಾಗ ಅವಳು ಮಾತ್ರ ಏನೂ ನಡೆದೇ ಇಲ್ಲ ಎನ್ನುವಂತೆ ಇದ್ದುಬಿಟ್ಟಿದ್ದಳು. ಅವನು ಎಂದೂ ತನಗೆ ಇತರರಿಗಿಂತ ವಿಶೇಷವಲ್ಲ ಎನ್ನುವುದನ್ನು ಅವಳು ಪ್ರಜ್ಞಾಪೂರ್ವಕವಾಗಿಯೇ ತೋರುತ್ತಿದ್ದುನ್ನು ಗಮನಿಸಿದ್ದೆ. ಆದರೆ ಎಂತಹ ಗದ್ದಲದ ಗುಂಪಿನಲ್ಲಿಯೂ ಅವಳ ಬಟ್ಟಲಗಣ್ಣು ಅವನನ್ನು ಸದ್ದಿಲ್ಲದೆ ತುಂಬಿಕೊಳ್ಳುತ್ತಿದ್ದುದನ್ನು ಕೂಡ ನಾನು ಬಲ್ಲೆ.

ಪ್ರೇಮವೆನ್ನುವುದು ಮನುಷ್ಯನನ್ನು ಎಲ್ಲೆಲ್ಲಿಯೋ ಸುತ್ತಿಸಿ ಎಲ್ಲೆಲ್ಲಿಗೋ ತಲುಪಿಸುವ ಬಗೆ ಕಂಡರೆ ಅಚ್ಚರಿಯಾಗುತ್ತದೆ. ‘ಏನಯ್ಯಾ ಸಕಲೇಶಪುರದ ಶರತ್ ಬೆಂಗಳೂರಿಗೆ ಬಂದು ಕಾಲೇಜಿಗೆ ಸೇರಿ ಸುಮ್ಮನೆ ಓದಿ ಕಾಪೀನೋ ಗೀಪೀನೋ ಮಾಡಿ ಪಾಸಾಗಿ ಊರಿಗೆ ವಾಪಸ್ಸು ಹೋಗಿ ನಿಮ್ಮಪ್ಪನ ಕಾಫಿ ತೋಟದ ಉಸ್ತುವಾರಿ ಮಾಡಬೇಕು. ಇಲ್ಲಾಂದ್ರೆ ಬೆಂಗಳೂರಿನಲ್ಲಿ ಯಾವುದೋ ಕೆಲಸಕ್ಕೆ ಸೇರಿ ಯೋಗ್ಯತೆಗೆ ತಕ್ಕ ಸಂಬಳ ಪಡೆದು ವಾರಕ್ಕೊಂದು ಸಿನಿಮಾ ನೋಡಿ, ಖುಷಿಯಿದ್ದರೆ ಸಂಜೆ ಒಂದೇ ಒಂದು ಬಿಯರ್ ಕುಡಿದು ಅದರ ಅರೆಬರೆ ಮತ್ತಿನಲ್ಲಿ ಸುಳ್ಳುಸುಳ್ಳೆ ಪ್ರೇಮದ ಕತೆಗಳನ್ನು ಹೊಸೆದು ಬುರ್ನಾಸು ಕಣ್ಣೀರು ಸುರಿಸಿ ವಿರಹ ತಪ್ತ ಹೃದಯವನ್ನು ಮಲಗಿಸಿ ನಿದ್ದೆ ಮಾಡಿದರೆ ಆ ವಾರದ ಕತೆ ಮುಗಿಯಿತು. ಹಾಗೆ ನಾಲ್ಕು ವಾರಗಳನ್ನು ಒದ್ದರೆ ಒಂದು ತಿಂಗಳು. ತಿಂಗಳ ಸಂಬಳದಲ್ಲಿ ನಾಲ್ಕು ಕಾಸು ಎರಡನೇ ವಾರದವರೆಗೆ ಉಳಿಯಿತೋ ಅಮ್ಮನ ಹೆಸರಿಗೆ ಕೊಂಚ ಹಣ ಮನಿಯಾರ್ಡರ್ ಕಳಿಸು. ಊರಿಗೆಲ್ಲ ಗೊತ್ತಾಗಿ ಮನೆ ಉದ್ದಾರಕನ ಪಟ್ಟ ಸಿಕ್ಕೀತು. ಇಲ್ಲಾಂದರೆ ಕಷ್ಟ ಕೋಟಲೆಗಳನ್ನ ಸೇಫಾಗಿ ಇನ್‍ಲ್ಯಾಂಡ್ ಲೆಟರಿನಲ್ಲಿ ಬರೆದು ಪೋಸ್ಟಿಗೆ ಹಾಕು. ಅಪ್ಪ ಕರುಣೆ ತೋರಿ ನಾಲ್ಕು ಕಾಸು ಕಳಿಸಿದರೆ ಅದನ್ನೂ ಉಡಾಯಿಸಿ ನಿನ್ನ ಸತ್ಯಸಂಧತೆ ಸಾಬೀತು ಮಾಡಲು ಅಪ್ಪನಿಗೆ ಮಾರುದ್ದದ ಪತ್ರ ಬರೆ. ಅದರಾಚೆಗೆ ಬೇರೇನೂ ಯೋಚಿಸಬೇಡ ಮಗನೆ. ದಿಕ್ಕಾಪಾಲಾಗಿ ಬಿಡ್ತೀಯ’ ಎಂದು ಅವನು ಸಾರಾಳನ್ನು ಪ್ರೀತಿಸುತ್ತಿರುವುದಾಗಿ ಹೇಳಿದಾಗ ಇನ್ನೊಬ್ಬ ಗೆಳೆಯ ಕೃಷ್ಣಮೂರ್ತಿ ಬೋಧಿಸಿದ ತಮಾಷೆಯ ಹಿತೋಪದೇಶ. ನಾನೂ ಅದನ್ನೇ ಬೇರೆ ತರದಲ್ಲಿ ಹೇಳಿದ್ದೆ. ಅವನು ಯಾರ ಮಾತೂ ಕೇಳಲಿಲ್ಲ. ಸಾರಾಳ ಹುಚ್ಚು ಹತ್ತಿಸಿಕೊಂಡ. ನಾನು ಅಂದಾಜಿಸಿದಂತೆಯೇ ಅವಳು ಯಾವ ನಂಟಿಗೂ ಅಂಟಿಕೊಳ್ಳದೆ ಹಕ್ಕಿ ಪುಕ್ಕದಂತೆ ಹಗೂರಕ್ಕೆ ಹಾರುತ್ತಲೇ ಇದ್ದಳು. ಅವನು ಅವಳಿಗಾಗಿ ಹಂಬಲಿಸುತ್ತಲೇ ಇದ್ದ. ಅವನ ಒದ್ದಾಟ ನೋಡಲಾಗದೆ ನಾವು ಗೆಳೆಯರೆಲ್ಲ ಅವನ ಪ್ರೇಮವನ್ನು ಅವಳಿಗೆ ತಲುಪಿಸಲು ಹೋದಾಗ ಅವಳ ಕಣ್ಣ ಆಳದಲ್ಲಿ ಇಣುಕುತ್ತಿದ್ದುದು ನೋವೋ ಪ್ರೇಮವೋ ಅರ್ಥವಾಗದೆ ಮಾತು ಮರೆತು ಹಿಂದಿರುಗುತ್ತಿದ್ದೆವು.

ಅವನು ಫೋನಿನಲ್ಲಿ ಕೊನೆಯದಾಗಿ ಹೇಳಿದ ಮಾತು ನನ್ನನ್ನು ಕಾಡಿಬಿಟ್ಟವು. ‘ನಾನವಳನ್ನು ಮರೆತು ಬದುಕು ಕಟ್ಟಿಕೊಂಡಿದ್ದೆ. ಇಲ್ಲಾಂತಲ್ಲ. ಆಗೊಮ್ಮೆ ಈಗೊಮ್ಮೆ ನೆನಪಾಗ್ತಾ ಇದ್ದಳು. ಅದೂ ಕೂಡ ಜೀವ ಕದಡುವಂಥ ನೆನಪೇನಾಗಿರ್ಲಿಲ್ಲ. ಬದುಕಿನ ಅನೇಕ ಸಂಗತಿಗಳ ಹಾಗೆ ನನಗವಳು ಗುರುತೇ ಸಿಗದಷ್ಟು ಮಾಸಿಹೋದ ಚಿತ್ರವಾಗಿಬಿಟ್ಟಿದ್ದಳು. ಆದರೆ ಅವಳು ಆಸ್ಪತ್ರೆಗೆ ಸೇರಿದ್ದಾಳೇಂತ ತಿಳಿದ ಮೇಲೆ ಅವಳು ನಾನು ಪ್ರೀತಿಸಿದ ಜೀವ. ಅವಳು ಬದುಕಬೇಕು, ಅವಳಿಗೇನೂ ಆಗಬಾರದು ಅಂತ ತೀವ್ರವಾಗಿ ಅನ್ನಿಸಿಬಿಡ್ತು. ಅವಳಿಗೆ ನನ್ನ ಬಗ್ಗೆ ಪ್ರೀತಿಯಿತ್ತೋ ಇಲ್ಲವೋ ನನಗ್ಗೊತ್ತಿಲ್ಲ. ಇದ್ದರೂ ಇದ್ದಿರಬಬಹುದೇನೋ. ಆದರೆ ಈಗ ನನಗನ್ನಿಸ್ತಿದೆ. ಅವಳನ್ನು ಅರ್ಥಮಾಡಿಕೊಳ್ಳುವಷ್ಟು ಸೂಕ್ಷ್ಮತೆ ನನಗಿರಲಿಲ್ಲಾಂತ. ಅದಕ್ಕೇ ಅವಳನ್ನ ಕಳ್ಕೊಂಡೆ. ಈಗಂತೂ ಅವಳಿಗೆ ಒಳ್ಳೆಯದಾದರೆ ಸಾಕೂಂತ ಪ್ರತಿಕ್ಷಣ ಪ್ರಾರ್ಥಿಸ್ತಾ ಇದ್ದೀನಿ’ ಎನ್ನುತ್ತ ಅವನು ಮತ್ತೊಮ್ಮೆ ಬಿಕ್ಕಿದ. ಆಕಾಶ ಮಲ್ಲಿಗೆ ಗಿಡದಡಿ ಕುಳಿತ ಪುಟ್ಟ ದೇವತೆ ಪಾರಿವಾಳದ ಮರಿಯನ್ನು ತನ್ನ ಉಡಿಯ ಹೂವಿನಲ್ಲಿ ಅಡಗಿಸಿಟ್ಟುಕೊಂಡು ಅದರ ಬೆನ್ನತ್ತಿ ಬಂದ ಸಾವನ್ನು ಓಡಿಸಿದ್ದಳು. ನಂತರ ಅಲ್ಲಿಂದೆದ್ದು ಹೋಗುವಾಗ ಪಾರಿವಾಳವನ್ನು ಎದೆಗವಚಿಕೊಂಡೇ ಹೋಗಿದ್ದಳು. ಅಂತಹುದೇ ಆಕಾಶ ಮಲ್ಲಿಗೆಯ ಮರದಡಿ ಕುಳಿತು ಆತ್ಮಕ್ಕೆ ತಾಕುವಷ್ಟು ತನ್ಮಯಳಾಗಿ ಹಾಡುತ್ತಿದ್ದ ಸಾರಾ ತನ್ನ ಪ್ರೇಮದ ಪಾರಿವಾಳವನ್ನು ಸಾವಿನಿಂದ ಪಾರುಮಾಡಿದವಳು ಅದೇಕೆ ನಂತರ ಅದನ್ನು ಎದೆಗವಚಿಕೊಳ್ಳದೇ ಬಿಟ್ಟುಹೋದಳು ಎನ್ನುವುದು ಅರ್ಥವಾಗಲಿಲ್ಲ. ಹಾಗೆಯೇ ಸಾವಿನ ನೆರಳು ಕವಿದುಕೊಳ್ಳುತ್ತಿರುವ ಕಾಲದಲ್ಲಿ ಅವನು ಎಷ್ಟೋ ವರ್ಷಗಳ ಹಿಂದಿನ ತನ್ನ ಪ್ರೇಮದ ನೆರಳನ್ನು ಮತ್ತೆ ಹುಡುಕುವುದ ಕಂಡು ಮನಸ್ಸು ಭಾರವಾಯಿತು.

– ಅಮರೇಂದ್ರ ಹೊಲ್ಲಂಬಳ್ಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...