ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರಿಗೆ ಸಚಿವ ಸಂಪುಟ ದರ್ಜೆ ಸ್ಥಾನಮಾನ ನೀಡಿ ವಿವಿಧ ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಕೆಯಾಗಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ (ಕೆಸ್‌ಪಿಸಿಬಿ) ಕೆಲಸ ಮಾಡುತ್ತಿರುವ ಬೆಂಗಳೂರು ನಗರದ ನಿವಾಸಿ ಸೂರಿ ಪಾಯಲ ಅವರು ಪಿಐಎಲ್ ಸಲ್ಲಿಸಿದ್ದಾರೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ.ಐ.ಅರುಣ್ ಅವರನ್ನೊಳಗೊಂಡ ವಿಭಾಗೀಯ ಪೀಠ ಗುರುವಾರ (ಫೆ13) ಪಿಐಎಲ್ ವಿಚಾರಣೆಯನ್ನು ಫೆಬ್ರವರಿ 21ಕ್ಕೆ ಮುಂದೂಡಿದೆ.
ಅರ್ಜಿದಾರರ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿರಿಯ ವಕೀಲ ಸಾಯಿ ದೀಪಕ್ ಅವರು, “ಶಾಸಕರು, ವಿಧಾನಪರಿಷತ್ ಸದಸ್ಯರನ್ನು ನಿಗಮ-ಮಂಡಳಿಗಳಿಗೆ ನೇಮಕ ಮಾಡಿರುವುದು ಸಮಸ್ಯೆಯಲ್ಲದಿದ್ದರೂ, ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡುತ್ತಿರುವುದು ಸಾಂವಿಧಾನಿಕ ನಿಬಂಧನೆಗಳ ಉಲ್ಲಂಘನೆಯಾಗಿದೆ” ಎಂದು ವಾದಿಸಿದ್ದಾರೆ.
“ಅರ್ಜಿದಾರರಿಗೆ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರನ್ನು ನಿಗಮ-ಮಂಡಳಿ ಹುದ್ದೆಗಳಿಗೆ ನೇಮಕ ಮಾಡುವುದರಿಂದ ಯಾವುದೇ ಸಮಸ್ಯೆ ಇಲ್ಲ” ಎಂದಿದ್ದಾರೆ.
“ಸಂವಿಧಾನದ ವಿಧಿ 164 (1ಎ) ಅಡಿಯಲ್ಲಿ ಶಾಸಕಾಂಗ ಸಭೆಯ ಒಟ್ಟು ಸದಸ್ಯರಲ್ಲಿ ಕೇವಲ 15 ಪ್ರತಿಶತದಷ್ಟು ಮಂದಿಗೆ ಮಾತ್ರ ಸಂಪುಟ ದರ್ಜೆಯ ಸ್ಥಾನಮಾನ ನೀಡಬೇಕು. ಕರ್ನಾಟಕಕ್ಕೆ ಸಂಬಂಧಿಸಿದಂತೆ 34 ಜನರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಬಹುದು. ಸಚಿವ ಸಂಪುಟದಲ್ಲಿ ಈಗಾಗಲೇ 33 ಸದಸ್ಯರಿದ್ದಾರೆ” ಎಂದು ವಕೀಲ ಸಾಯಿ ದೀಪಕ್ ಹೇಳಿದ್ದಾರೆ.
ಅರ್ಜಿದಾರರು ತನ್ನ ಅರ್ಜಿಯಲ್ಲಿ ಆರ್‌ವಿ ದೇಶಪಾಂಡೆ, ಎ.ಎಸ್ ಪೊನ್ನಣ್ಣ, ವಿನಯ್ ಕುಲಕರ್ಣಿ, ಎನ್.ಎ ಹ್ಯಾರಿಸ್ ಮತ್ತು ಇತರರು ಸೇರಿದಂತೆ 42 ಜನರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ ನೇಮಕ ಮಾಡಿರುವುದನ್ನು ಉಲ್ಲೇಖಿಸಿದ್ದಾರೆ. ಅವರ ನೇಮಕಾತಿಗಳನ್ನು ರದ್ದುಗೊಳಿಸಲು ನಿರ್ದೇಶನ ನೀಡುವಂತೆ ಕೋರಿದ್ದಾರೆ. ಈ ಶಾಸಕರು ಮತ್ತು ಪರಿಷತ್ ಸದಸ್ಯರು ನಿಗಮ-ಮಂಡಳಿಗಳ ಅಧ್ಯಕ್ಷರಾಗಿ, ಮುಖ್ಯಮಂತ್ರಿಯ ಕಾನೂನು ಸಲಹೆಗಾರರಾಗಿ, ಮುಖ್ಯಮಂತ್ರಿಯ ಸಲಹೆಗಾರರಾಗಿ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಗಳಾಗಿ ಮತ್ತು ನವದೆಹಲಿ ವಿಶೇಷ ಪ್ರತಿನಿಧಿಯಾಗಿ ಹುದ್ದೆಗಳನ್ನು ಹೊಂದಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಈ ಎಲ್ಲಾ ಹುದ್ದೆಗಳಿಗೆ ಸಂಪುಟ ದರ್ಜೆಯ ಸ್ಥಾನಮಾನ ಮತ್ತು ಸಂಬಂಧಿತ ಸವಲತ್ತುಗಳು ನೀಡುವ ಮೂಲಕ ಸಂವಿಧಾನದ ವಿಧಿ 102 (ಲಾಭದಾಯಕ ಹುದ್ದೆ ಹೊಂದಿರುವ ಸದಸ್ಯರನ್ನು ಅನರ್ಹಗೊಳಿಸುವುದು) ಮತ್ತು ವಿಧಿ 191 (ಲಾಭದಾಯಕ ಹುದ್ದೆ)ರಲ್ಲಿ ಪ್ರತಿಪಾದಿಸಲಾದ ನಿಬಂಧನೆಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಹುದ್ದೆಗಳಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡುವುದು ಮಂತ್ರಿ ಮಂಡಳಿಯ ಗಾತ್ರವನ್ನು ನಿರ್ಬಂಧಿಸುವ ವಿಧಿ 164 (1ಎ) ಮತ್ತು ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 10ರ ಉಲ್ಲಂಘನೆಯಾಗಿದೆ. ಇದು ಸರ್ಕಾರದ ಅಡಿಯಲ್ಲಿ ಲಾಭದಾಯಕ ಹುದ್ದೆ ಹೊಂದಿರುವ ಸದಸ್ಯರನ್ನು ಅನರ್ಹಗೊಳಿಸುತ್ತದೆ ಎಂದು ಹೇಳಲಾಗಿದೆ.
“ಅಧ್ಯಕ್ಷರಾಗಿ ನೇಮಕಗೊಂಡ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಹೆಚ್ಚಾಗಿ ಬೆಂಗಳೂರಿನ ಹೊರಗೆ ವಾಸಿಸುವುದರಿಂದ ಅವರ ಕ್ಷೇತ್ರದ ಕರ್ತವ್ಯಗಳನ್ನು ನಿರ್ವಹಿಸುವುದು ಅಪ್ರಾಯೋಗಿಕವಾಗುತ್ತದೆ. ಹೆಚ್ಚಿನ ಪ್ರಯಾಣ ಸಮಸ್ಯೆಗಳು ಎರಡೂ ಹುದ್ದೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗದಂತೆ ಮಾಡುತ್ತದೆ. ನೇಮಕಾತಿಗಳು ಮತ್ತು ಈ ಸದಸ್ಯರಿಗೆ ನೀಡಲಾಗುವ ಹೆಚ್ಚುವರಿ ಸವಲತ್ತುಗಳು ನೀಡುವುದು ಶಾಸಕಾಂಗ ಪ್ರಕ್ರಿಯೆ ಮೇಲಿನ ಸಾರ್ವಜನಿಕರ ನಂಬಿಕೆ ಕ್ಷೀಣಿಸುವಂತೆ ಮಾಡುತ್ತದೆ” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಮೈಕ್ರೋ ಫೈನಾನ್ಸ್ ದೌರ್ಜನ್ಯ ತಡೆಗೆ ಕಾನೂನು ಜಾರಿ : ಮುಖ್ಯಾಂಶಗಳು ಇಲ್ಲಿದೆ


