ಮೈಕ್ರೋ ಫೈನಾನ್ಸ್ ಕಂಪೆನಿಗಳು ಅಥವಾ ಇತರೆ ಖಾಸಗಿ ಹಣಕಾಸು ಸಂಸ್ಥೆಗಳು / ವ್ಯಕ್ತಿಗಳು ಸಾಲ ವಸೂಲಿಯ ನೆಪದಲ್ಲಿ ಬಡ, ಮಧ್ಯಮ ವರ್ಗದ ಜನರಿಗೆ ನೀಡುತ್ತಿರುವ ಕಿರುಕುಳ, ಮಾನಸಿಕ ಹಿಂಸೆ ಮತ್ತು ದೌರ್ಜನ್ಯದಂತಹ ಅಮಾನವೀಯ, ಕಾನೂನು ಬಾಹಿರ ಕ್ರಮಗಳ ಮೇಲೆ ನಿಯಂತ್ರಣ ಹಾಗೂ ನಿರ್ಬಂಧ ಹೇರುವ ಉದ್ದೇಶದಿಂದ ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಮೂಲಕ ಹೊಸ ಕಾನೂನು ಜಾರಿ ಮಾಡಿದೆ.
ಕರ್ನಾಟಕ ಕಿರು (Micro)ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಆಧ್ಯಾದೇಶ-2025ಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಬುಧವಾರ (ಫೆ.12) ಸಹಿ ಹಾಕಿದ್ದಾರೆ. ಈ ಬೆನ್ನಲ್ಲೇ ಸರ್ಕಾರ ರಾಜ್ಯಪತ್ರ (ಗೆಜೆಟ್ ನೋಟಿಫಿಕೇಶನ್) ಹೊರಡಿಸಿ ಕಾನೂನು ಜಾರಿಗೊಳಿಸಿದೆ.
ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ತಡೆಯಲಾರದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜನರು ಮನೆಗಳನ್ನೇ ತೊರೆದಿದ್ದರು. ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಹಾಗಾಗಿ, ಜನವರಿ 30ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಗ್ರಿವಾಜ್ಞೆ ಮೂಲಕ ಹೊಸ ಕಾನೂನು ಜಾರಿಗೊಳಿಸಲು ಸರ್ಕಾರ ನಿರ್ಧರಿಸಿತ್ತು.
ಬಳಿಕ ಸುಗ್ರಿವಾಜ್ಞೆಯನ್ನು ರಾಜ್ಯಪಾಲರ ಸಹಿಗಾಗಿ ಕಳುಹಿಸಿತ್ತು. ಆದರೆ, ಮೂರು ಕಾರಣಗಳನ್ನು ನೀಡಿ ರಾಜ್ಯಪಾಲರು ಸುಗ್ರಿವಾಜ್ಞೆ ತಿರಸ್ಕರಿಸಿದ್ದರು. ಈ ವಿಚಾರವನ್ನು ಫೆ.7ರಂದು ಸರ್ಕಾರ ತಿಳಿಸಿತ್ತು.
ನಂತರ ರಾಜ್ಯಪಾಲರು ಕೋರಿದ ವಿವರಣೆಯೊಂದಿಗೆ ಸರ್ಕಾರ ಮೈಕ್ರೋ ಫೈನಾನ್ಸ್‌ಗೆ ಸಂಬಂಧಿಸಿದ ಸುಗ್ರಿವಾಜ್ಞೆಯನ್ನು ಮತ್ತೆ ರಾಜಭವನಕ್ಕೆ ಕಳುಹಿಸಿತ್ತು. ಅದಕ್ಕೆ ರಾಜ್ಯಪಾಲರು ಸಹಿ ಹಾಕಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಬುಧವಾರ (ಫೆ.12) ಮಾಹಿತಿ ನೀಡಿದೆ. ರಾಜ್ಯಪಾಲ ಸಹಿ ಬಿದ್ದ ತಕ್ಷಣ ಸರ್ಕಾರ ಕಾನೂನು ಜಾರಿ ಮಾಡಿದೆ.
ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಆಧ್ಯಾದೇಶ 2025 ಅಥವಾ ಮೈಕ್ರೋ ಫೈನಾನ್ಸ್ ಕಾನೂನಿನ ಮುಖ್ಯಾಂಶಗಳು ಹೀಗಿವೆ :
- ಮೈಕ್ರೋ ಫೈನಾನ್ಸ್ ಸುಗ್ರಿವಾಜ್ಞೆ 12 ಫೆಬ್ರವರಿ 2025ರಂದು ಕಾನೂನಾಗಿ ಜಾರಿಗೆ ಬಂದಿದೆ.
- ಸುಗ್ರಿವಾಜ್ಞೆಯು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಮತ್ತು ಇತರೆ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಲೇವಾದೇವಿಗಾರರು ನೀಡುವ ಹೆಚ್ಚಿನ ಬಡ್ಡಿ ದರಗಳಿಂದ ಸಾಲಗಾರರಿಗೆ ಆಗುವ ಹೊರೆ ಮತ್ತು ಬಲವಂತದ ವಸೂಲಾತಿ ಕ್ರಮಗಳಿಂದ ಆಗುವ ಕಿರುಕುಳಗಳನ್ನು ನಿಯಂತ್ರಿಸುವ ಉದ್ದೇಶ ಹೊಂದಿದೆ.
- ಇದರಿಂದ ವಿಶೇಷವಾಗಿ ದುರ್ಬಲರು, ಮಹಿಳೆಯರು ಮತ್ತು ರೈತರು, ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಮರುಪಾವತಿ ವಿಷಯದಲ್ಲಿ ಕಿರುಕುಳಗಳನ್ನು ತಪ್ಪಿಸಲು ಸಹಾಯಕವಾಗಿರುತ್ತದೆ.
- ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲಗಾರರಿಂದ ಯಾವುದೇ ಭದ್ರತೆ ಪಡೆಯುವಂತಿಲ್ಲ ಎಂದು ಹೊಸ ಕಾನೂನಿನಲ್ಲಿ ಆದೇಶಿಸಲಾಗಿದೆ.
- ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಗ್ರಾಹಕರಿಗೆ ವಿಧಿಸುವ ಬಡ್ಡಿದರದ ಬಗ್ಗೆ ಪಾರದರ್ಶಕವಾಗಿ ಸಾಲಗಾರರಿಗೆ ಲಿಖಿತ ರೂಪದಲ್ಲಿ ತಿಳಿಸುವಂತೆ ಆದೇಶಿಸಲಾಗಿದೆ.
- ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನೋಂದಾಯಿತವಲ್ಲದ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಮಾತ್ರ ಈ ಸುಗ್ರಿವಾಜ್ಞೆ ಅನ್ವಯವಾಗುತ್ತದೆ.
- ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನೋಂದಾಯಿತ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಅಂದಾಜು ರೂ. 60,000 ಕೋಟಿ ಸಾಲವನ್ನು ಸುಮಾರು 1.09 ಕೋಟಿ ಸಾಲಗಾರರು ಪಡೆದಿದ್ದು, ನೋಂದಣಿಯಾಗದ ಸಂಸ್ಥೆಗಳಿಂದ ಸಾಲ ಪಡೆದವರ ಮಾಹಿತಿ ವಿವರವಾಗಿ ಇಲ್ಲವಾದರೂ ಅಂದಾಜು ರೂ. 40,000 ಕೋಟಿ ಸಾಲ ಪಡೆದಿರುವರು ಎಂದು ಅಂದಾಜಿಸಲಾಗಿದೆ.
- ಆಯಾ ಜಿಲ್ಲೆಗಳಲ್ಲಿ ವ್ಯವಹರಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಜಿಲ್ಲಾಧಿಕಾರಿಗಳಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಸದರಿ ಸಂಸ್ಥೆಗಳು ತಾವು ವಿಧಿಸುವ ಬಡ್ಡಿದರ, ಸಾಲಗಾರರ ಮಾಹಿತಿ, ಸುಸ್ಥಿ ಸಾಲಗಳ ವಿವರ ಮುಂತಾದವುಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕಾಗಿರುತ್ತದೆ.
- ಆಯಾ ಜಿಲ್ಲೆಗಳಲ್ಲಿ ವ್ಯವಹರಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಜಿಲ್ಲಾಧಿಕಾರಿಗಳಿಗೆ ತ್ರೈಮಾಸಿಕ ಮತ್ತು ವಾರ್ಷಿಕ ವ್ಯವಹಾರದ ವಿವರಗಳನ್ನು ಸಲ್ಲಿಸಬೇಕು. ಸದರಿ ಮಾಹಿತಿಯನ್ನು ಸಲ್ಲಿಸದಿದ್ದಲ್ಲಿ, 6 ತಿಂಗಳ ಜೈಲು ಶಿಕ್ಷೆ ಅಥವಾ ರೂ.10,000 ಗಳಿಗೆ ವಿಸ್ತರಿಸಬಹುದಾದ ದಂಡ ಅಥವಾ ಇವೆರಡನ್ನೂ ವಿಧಿಸಲಾಗುತ್ತದೆ
- ವಿವಾದಗಳನ್ನು ಇತ್ಯರ್ಥ್ಯ ಪಡಿಸುವುದಕ್ಕಾಗಿ ಒಂಬುಡ್ಸ್ ಪರ್ಸನ್‌ಗಳನ್ನು ಸರ್ಕಾರವು ಅಧಿಸೂಚನೆಯ ಮೂಲಕ ನೇಮಕ ಮಾಡಬಹುದು.
ಬಲವಂತದ ವಸೂಲಿ ಕೈಗೊಂಡಲ್ಲಿ ಜೈಲು, ದಂಡ
- ಬಲವಂತದ ವಸೂಲಿ ಕ್ರಮಗಳನ್ನು ಕೈಗೊಂಡಲ್ಲಿ, ಯಾವುದೇ ವ್ಯಕ್ತಿಯೂ ವಿಚಾರಣೆಗೆ ಒಳಪಡುತ್ತಾರೆ ಮತ್ತು 10 ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಯ ಜೈಲು ಶಿಕ್ಷೆ ಹಾಗೂ ರೂ. 5 ಲಕ್ಷಗಳವರೆಗೆ ವಿಸ್ತರಿಸಬಹುದಾದ ದಂಡಕ್ಕೆ ಗುರಿಯಾಗುತ್ತಾರೆ.
- ಈ ಅಪರಾಧಗಳು ಸಂಜ್ಞೇಯ ಅಪರಾಧ/ ಜಾಮೀನು ರಹಿತ (Cognizable / Non Bailable) ಆಗಿರುತ್ತವೆ. ಯಾವುದೇ ಪೋಲೀಸ್ ಅಧಿಕಾರಿ ಇಂತಹ ಪ್ರಕರಣಗಳನ್ನು ನೋಂದಣಿ ಮಾಡಿಕೊಳ್ಳುವುದು ನಿರಾಕರಿಸಲಾಗುವುದಿಲ್ಲ.
- ಪೋಲೀಸ್ ಉಪ ಅಧೀಕ್ಷಕರ (DySP) ದರ್ಜೆಗೆ ಕಡಿಮೆಯಿಲ್ಲದ ಅಧಿಕಾರಿಯು ಸ್ವತ: (Suomoto) ಪ್ರಕರಣವನ್ನು ದಾಖಲಿಸಬಹುದು.
- ಸರ್ಕಾರವು ಕಾಲಕಾಲಕ್ಕೆ ಈ ಸುಗ್ರಿವಾಜ್ಞೆ ಅನುಷ್ಠಾನಕ್ಕಾಗಿ ನಿರ್ದೇಶನಗಳನ್ನು ನೀಡುವ ಅಧಿಕಾರ ಹೊಂದಿರುತ್ತದೆ.
ಈ ಸುಗ್ರಿವಾಜ್ಞೆಯಿಂದ ಭಾರತೀಯ ರಿಸರ್ವ್ ಬ್ಯಾಂಕ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನೋಂದಾಯಿತವಲ್ಲದ ಮೈಕ್ರೋ ಫೈನಾನ್ಸ್ ಸಂಸ್ಥೆಗಳಲ್ಲಿ ಆರ್ಥಿಕ ಶಿಸ್ತು ಹೆಚ್ಚುತ್ತದೆ ಮತ್ತು ಸಾಲಗಾರರಿಗೆ ಕಿರುಕುಳ, ಬಲವಂತದ ವಸೂಲಿ ಕ್ರಮಗಳಿಂದ ಮುಕ್ತಿ ದೊರೆಯುತ್ತದೆ ಎಂದು ಸರ್ಕಾರ ಹೇಳಿದೆ.
ಮೈಕ್ರೋ ಫೈನಾನ್ಸ್ ಕಿರುಕುಳ ವಿರೋಧಿ ಕಾನೂನು ಜಾರಿಗೆ – ಸಿದ್ದರಾಮಯ್ಯ ಘೊಷಣೆ