ಜುಲೈ 1, 2024 ರಿಂದ ಜಾರಿಗೆ ಬರಲಿರುವ ಹೊಸ ಕ್ರಿಮಿನಲ್ ಕಾನೂನುಗಳನ್ನು ತಡೆಹಿಡಿಯಲು ಮತ್ತು ವಿವಿಧ ದೋಷಗಳಿರುವ ಕಾರಣ ಅವುಗಳ ಕಾರ್ಯಸಾಧ್ಯತೆಯನ್ನು ನಿರ್ಣಯಿಸಲು ತಜ್ಞರ ಸಮಿತಿ ರಚಿಸುವಂತೆ ನಿರ್ದೇಶನ ನೀಡಲು ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಹೊಸ ಕ್ರಿಮಿನಲ್ ಕಾನೂನುಗಳು ಹಿಂದಿನ ಕಾನೂನುಗಳಿಂತ ದೊಡ್ಡ ಬದಲಾವಣೆಗಳನ್ನು ತರುವುದಿಲ್ಲ. ಬದಲಾಗಿ, ಇದು ನಾಗರಿಕರಲ್ಲಿ ಗೊಂದಲವನ್ನು ಉಂಟು ಮಾಡುತ್ತದೆ. ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡುತ್ತದೆ ಮತ್ತು ಜನರ ಮೂಲಭೂತ ಹಕ್ಕುಗಳನ್ನು ತಡೆಯುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಭಾರತೀಯ ಕಾನೂನುಗಳನ್ನು ವಸಾಹತುಶಾಹಿಗೊಳಿಸುವುದು ಹೊಸ ಕ್ರಿಮಿನಲ್ ಕಾನೂನುಗಳ ಮುಖ್ಯ ಉದ್ದೇಶವಾಗಿದೆ. ಹಳೆಯ ಕಾನೂನುಗಳನ್ನೇ ಪುನಾರವರ್ತನೆ ಮಾಡಿ ಹೆಸರು ಮಾತ್ರ ಬದಲಿಸಲಾಗಿದೆ. ಇದು ವಿವರಣೆಗಳಿಲ್ಲದೆ ಪೊಲೀಸರಿಗೆ ಹೆಚ್ಚುವರಿ ಅಧಿಕಾರವನ್ನು ನೀಡುತ್ತದೆ. ಭಯದಿಂದ ಜನರನ್ನು ಆಳಲು ಮತ್ತು ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲು ಸಹಾಯ ಮಾಡುತ್ತದೆ ಎಂದು ವಿವರಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತೆ-2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ಮತ್ತು ಭಾರತೀಯ ಸಾಕ್ಷಿ ಅಧಿನಿಯ-2023 ಎಂದು ಹೆಸರಿಸಲಾದ ಮೂರು ಹೊಸ ತಿದ್ದುಪಡಿ ಕ್ರಿಮಿನಲ್ ಕಾನೂನುಗಳನ್ನು ಡಿಸೆಂಬರ್ 2023 ರಲ್ಲಿ ಸಂಸತ್ತು ಅಂಗೀಕರಿಸಿದೆ.
ಕಾನೂನುಗಳ ಶೀರ್ಷಿಕೆಯು ನಿಖರವಾಗಿಲ್ಲ. ಶಾಸನ ಮತ್ತು ಅದರ ಉದ್ದೇಶಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಹಲವಾರು ಸದಸ್ಯರನ್ನು ಅಮಾನತುಗೊಳಿಸಿ, ಅವರ ಅಭಿಪ್ರಾಯಗಳಿಗೆ ಮನ್ನಣೆ ನೀಡದೆ, ಯಾವುದೇ ಚರ್ಚೆಗೆ ಒಳಪಡಿಸದೆ ಸಂಸತ್ತಿನಲ್ಲಿ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಲಾಗಿದೆ. ಈ ಮೂಲಕ ಅಕ್ರಮವೆಸಗಲಾಗಿದೆ ಎಂದು ಅರ್ಜಿದಾರರು ಉಲ್ಲೇಖಿಸಿದ್ದಾರೆ.
ಹೊಸ ಕಾನೂನುಗಳು ವಕೀಲರ ಮೇಲೆ ಪ್ರಭಾವ ಬೀರುತ್ತದೆ. ಅವರಿಗೆ ಹಲವು ಸವಾಲುಗಳನ್ನು ಒಡ್ಡುತ್ತದೆ ಎಂದೂ ಅರ್ಜಿಯಲ್ಲಿ ಹೇಳಲಾಗಿದೆ.
ವಕೀಲರಾದ ಸಂಜೀವ್ ಮಲ್ಹೋತ್ರಾ ಮತ್ತು ಕುನ್ವರ್ ಸಿದ್ಧಾರ್ಥ ಅವರ ಮೂಲಕ ಅಂಜಲಿ ಪಟೇಲ್ ಮತ್ತು ಛಾಯಾ ಅವರು ಪಿಐಎಲ್ ಸಲ್ಲಿಸಿದ್ದಾರೆ. ಅರ್ಜಿಯು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ರ ಅಂಶಗಳನ್ನು ಎತ್ತಿ ತೋರಿಸಿದೆ. ಸುರಕ್ಷಾ ಸಂಹಿತೆ 15 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಅವಕಾಶ ನೀಡುತ್ತದೆ. ಪೊಲೀಸರು 15 ದಿನಗಳ ಕಸ್ಟಡಿಯನ್ನು ಮುಗಿಸದಿದ್ದರೆ, ಇಡೀ ಅವಧಿಗೆ ಜಾಮೀನು ನಿರಾಕರಣೆಗೆ ಕಾರಣವಾಗಬಹುದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಸುರಕ್ಷಾ ಸಂಹಿತೆ ಬಂಧನದ ಸಮಯದಲ್ಲಿ ಕೈ ಕೋಳಗಳ ಬಳಕೆಗೆ ಅವಕಾಶ ನೀಡುತ್ತದೆ. ಕೈ ಕೋಳಗಳನ್ನು ಬಳಸುವ ಅಧಿಕಾರವು ಆರೋಪಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸಬಹುದು. ಕಸ್ಟಡಿಯಿಂದ ತಪ್ಪಿಸಿಕೊಂಡ ಅಭ್ಯಾಸ ಇರುವ ಅಥವಾ ಪುನರಾವರ್ತಿತ ಅಪರಾಧಿ ಮತ್ತು ಅತ್ಯಾಚಾರ, ಆಸಿಡ್ ದಾಳಿ, ಸಂಘಟಿತ ಅಪರಾಧ, ಆರ್ಥಿಕ ಅಪರಾಧಗಳು, ಸಾರ್ವಭೌಮತ್ವ, ಏಕತೆ ಹಾಗೂ ಭಾರತದ ಸಮಗ್ರತೆಗೆ ಅಪಾಯವನ್ನುಂಟುಮಾಡುವ ಕೃತ್ಯಗಳಂತಹ ಅಪರಾಧಗಳ ಆರೋಪಿಗಳನ್ನು ಬಂಧಿಸಲು ಮಾತ್ರ ಕೈ ಕೋಳವನ್ನು ಬಳಸಬಹುದು. ಸುರಕ್ಷಾ ಸಂಹಿತೆ ಸುಪ್ರೀಂ ಕೋರ್ಟ್‌ನ ತೀರ್ಪುಗಳು ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತದೆ” ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ : ಪ್ರಶ್ನೆ ಪತ್ರಿಕೆ ಸೋರಿಕೆ, ನೇಮಕಾತಿ ಹಗರಣದಲ್ಲಿ ಭಾಗಿಯಾದ ಕಂಪನಿಗೆ ಹಲವು ಗುತ್ತಿಗೆಗಳನ್ನು ನೀಡುತ್ತಿರುವ ಬಿಜೆಪಿ ಸರ್ಕಾರಗಳು: ವರದಿ


