ಕೃತಕ ಬುದ್ಧಿಮತ್ತೆ (ಎಐ) ವ್ಯವಸ್ಥೆಗಳಿಗೆ, ವಿಶೇಷವಾಗಿ ನೈಜ ವ್ಯಕ್ತಿಗಳ ಸಂಶ್ಲೇಷಿತ ಚಿತ್ರಗಳು, ವಿಡಿಯೋಗಳು ಮತ್ತು ಆಡಿಯೊ ಅನುಕರಣೆಗಳನ್ನು ಸೃಷ್ಟಿಸುವ ಸಾಮರ್ಥ್ಯವಿರುವ ವ್ಯವಸ್ಥೆಗಳಿಗೆ ಸಮಗ್ರ ನಿಯಂತ್ರಕ ಮತ್ತು ಪರವಾನಗಿ ಚೌಕಟ್ಟನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ವಕೀಲೆ ಆರತಿ ಸಹಾ ಎಂಬವರು ಸಲ್ಲಿಸಿರುವ ಅರ್ಜಿಯಲ್ಲಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿ) ಮತ್ತು ದೂರಸಂಪರ್ಕ ಇಲಾಖೆ (ಡಿಒಟಿ) ಗೆ ಎಐ ತಂತ್ರಜ್ಞಾನಗಳ ಜವಾಬ್ದಾರಿಯುತ ಬಳಕೆಗಾಗಿ ಶಾಸನಬದ್ಧ ಕಾರ್ಯವಿಧಾನವನ್ನು ರೂಪಿಸಲು ಮತ್ತು ಮೆಟಾ ಪ್ಲಾಟ್‌ಫಾರ್ಮ್‌ಗಳು, ಗೂಗಲ್‌ನಂತಹ ಡಿಜಿಟಲ್ ಮಧ್ಯವರ್ತಿಗಳು ಅವುಗಳನ್ನು ಪಾಲಿಸಲು ಆದೇಶ ಹೊರಡಿಸುವಂತೆ ನ್ಯಾಯಾಲಯವನ್ನು ಕೋರಲಾಗಿದೆ.
ಅರ್ಜಿಯ ಪ್ರಕಾರ, ಡೀಪ್‌ಫೇಕ್‌ಗಳು ಎಂದು ಜನಪ್ರಿಯವಾಗಿ ಕರೆಯಲ್ಪಡುವ ಎಐ-ರಚಿತ ವಿಷಯದ ಅನಿಯಂತ್ರಿತ ಹರಡುವಿಕೆಯು ಗೌಪ್ಯತೆ, ಘನತೆ ಮತ್ತು ಖ್ಯಾತಿಯ ಗಂಭೀರ ಉಲ್ಲಂಘನೆಗೆ ಕಾರಣವಾಗಿದೆ. “ಧ್ವನಿಗಳು ಮತ್ತು ಚಿತ್ರಗಳನ್ನು ಕ್ಲೋನಿಂಗ್ ಮಾಡುವ ಸಾಮರ್ಥ್ಯವಿರುವ ಎಐ ಪರಿಕರಗಳ ಅನಿಯಂತ್ರಿತ ಬಳಕೆಯು ಈಗಾಗಲೇ ವ್ಯಕ್ತಿಗಳಿಗೆ ಅಪಾರ ಹಾನಿಯನ್ನುಂಟುಮಾಡಿದೆ ಮತ್ತು ಸಾರ್ವಜನಿಕ ನಂಬಿಕೆ, ಸಾಮಾಜಿಕ ಸಾಮರಸ್ಯ ಹಾಗೂ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯನ್ನು ಒಡ್ಡುತ್ತದೆ” ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಸೆಲೆಬ್ರಿಟಿಗಳು ಮತ್ತು ಪತ್ರಕರ್ತರು ಸೇರಿದಂತೆ ಸಾರ್ವಜನಿಕ ವ್ಯಕ್ತಿಗಳನ್ನು ಗುರಿಯಾಗಿಸಿಕೊಳ್ಳುವ ಡೀಪ್‌ಫೇಕ್ ಪ್ರಕರಣಗಳು ಇತ್ತೀಚೆಗೆ ಹೆಚ್ಚಳವಾಗಿದೆ. ದೆಹಲಿ ಮತ್ತು ಬಾಂಬೆ ಹೈಕೋರ್ಟ್‌ಗಳು ಇಂತಹ ಹಲವಾರು ಪ್ರಕರಣಗಳಲ್ಲಿ ಮಧ್ಯಂತರ ರಕ್ಷಣೆ ನೀಡಿವೆ. ಅಕ್ಷಯ್ ಕುಮಾರ್, ಕುಮಾರ್ ಸಾನು ಮತ್ತು ಪತ್ರಕರ್ತ ಸುಧೀರ್ ಚೌಧರಿ ಸೇರಿದ್ದಾರೆ ಹಲವರು ನ್ಯಾಯಾಲದಿಂದ ಪರಿಹಾರ ಪಡೆದಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಯುರೋಪಿಯನ್ ಯೂನಿಯನ್, ಯುನೈಟೆಡ್ ಸ್ಟೇಟ್ಸ್, ಚೀನಾ ಮತ್ತು ಸಿಂಗಾಪುರದಂತಹ ದೇಶಗಳು ಎಐ-ಜನರೇಟೆಡ್ ಕಂಟೆಂಟ್‌ನ ದುರ್ಬಳಕೆಯನ್ನು ತಡೆಗಟ್ಟಲು ರಿಸ್ಕ್-ಆಧಾರಿತ ವರ್ಗೀಕರಣ, ಲೇಬಲಿಂಗ್ ಮತ್ತು ಜಾರಿ ವ್ಯವಸ್ಥೆಗಳ ಮೂಲಕ ನಿಯಂತ್ರಕ ಚೌಕಟ್ಟನ್ನು ಜಾರಿಗೆ ತಂದಿವೆ ಎಂದಿರುವ ಅರ್ಜಿ, ಭಾರತದಲ್ಲಿ ಇಂತಹ ಕಾನೂನು ರಕ್ಷಣೆಗಳ ಕೊರತೆ ಇದೆ ಎಂದು ಹೇಳಿದೆ.
ಸರ್ಕಾರದ ನಿಷ್ಕ್ರಿಯತೆಯು ಸಂವಿಧಾನದ 14, 19 ಮತ್ತು 21 ನೇ ವಿಧಿಗಳ ಅಡಿಯಲ್ಲಿ ಖಾತ್ರಿಪಡಿಸಿದ ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಮೆಟಾ ಮತ್ತು ಗೂಗಲ್‌ನಂತಹ ವೇದಿಕೆಗಳು ಡೀಪ್‌ಫೇಕ್ ದುರುಪಯೋಗದ ದೂರುಗಳ ಮೇಲೆ ತ್ವರಿತವಾಗಿ ಕಾರ್ಯನಿರ್ವಹಿಸಲು ವಿಫಲವಾಗಿವೆ. ಇದರಿಂದಾಗಿ ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳು ನಿಷ್ಪರಿಣಾಮಕಾರಿಯಾಗಿವೆ ತಿಳಿಸಲಾಗಿದೆ.
ಗೌಪ್ಯತೆಗೆ ಸಂಬಂಧಿಸಿದಂತೆ ಜಸ್ಟೀಸ್ ಕೆ.ಎಸ್. ಪುಟ್ಟಸ್ವಾಮಿ (ನಿವೃತ್ತ) VS ಭಾರತ ಸರ್ಕಾರ ಮತ್ತು ಡಿಜಿಟಲ್ ಹಿಂಸೆಯನ್ನು ತಡೆಗಟ್ಟುವ ಬಗ್ಗೆ ತೆಹ್ಸೀನ್ ಎಸ್. ಪೂನಾವಾಲಾ VS ಭಾರತ ಸರ್ಕಾರದಂತಹ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿರುವ ಅರ್ಜಿದಾರರು, ಈಗ ಜನರ ಡಿಜಿಟಲ್ ಘನತೆಯನ್ನು ರಕ್ಷಿಸಲು ಮತ್ತು ಮುಂದಿನ ಹಾನಿಯನ್ನು ತಡೆಗಟ್ಟಲು ನ್ಯಾಯಾಂಗದ ಮಧ್ಯಸ್ಥಿಕೆ ಅತ್ಯಗತ್ಯ ಎಂದು ಹೇಳಿದ್ಧಾರೆ.
ಡೀಪ್‌ಫೇಕ್‌ಗಳು ಕ್ಷಣಗಳಲ್ಲಿ ಜೀವನ, ಖ್ಯಾತಿ ಮತ್ತು ಸಂಸ್ಥೆಗಳನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿವೆ ಎಂದು ಅರ್ಜಿಯಲ್ಲಿ ಒತ್ತಿ ಹೇಳಲಾಗಿದೆ. ಚುನಾವಣೆಗಳ ಮೇಲೆ ಪ್ರಭಾವ ಬೀರಲು, ಕೋಮು ಸಂಘರ್ಷವನ್ನು ಪ್ರಚೋದಿಸಲು ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಸಾರ್ವಜನಿಕ ನಂಬಿಕೆಯನ್ನು ದುರ್ಬಲಗೊಳಿಸಲು ಅವುಗಳನ್ನು ಆಯುಧಗಳಾಗಿ ಬಳಸಿಕೊಳ್ಳಬಹುದು ಎಂಬ ಆತಂಕವನ್ನು ಅರ್ಜಿದಾರರು ವ್ಯಕ್ತಪಡಿಸಿದ್ದಾರೆ.
‘ಉಪನಾಮದ ಕಾರಣಕ್ಕೆ ಸರ್ಫರಾಝ್ ಖಾನ್ ಆಯ್ಕೆಯಾಗಿಲ್ಲವೇ?’..ಗಂಭೀರ್ ವಿರುದ್ಧ ಶಮಾ ಮೊಹಮ್ಮದ್ ಆಕ್ರೋಶ


