ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (SC/ST) ಅಭಿವೃದ್ಧಿಗಾಗಿ ಮೀಸಲಿಟ್ಟ ವಿಶೇಷ ಘಟಕ ಯೋಜನೆ (SCP) ಮತ್ತು ಬುಡಕಟ್ಟು ಉಪಯೋಜನೆ (TSP) ನಿಧಿಯನ್ನು ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳಿಗೆ ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಲು ವಕೀಲ ಹರಿರಾಮ್ ನಿರ್ಧರಿಸಿದ್ದಾರೆ.
ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹರಿರಾಮ್, ದಲಿತರ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೇ, ಈ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ವತಿಯಿಂದಲೇ ಮುಖ್ಯಮಂತ್ರಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು.
ಈ ಹಣ ದುರ್ಬಳಕೆ ವಿರೋಧಿಸಿ ಒಕ್ಕೂಟವು ಹಲವಾರು ಹಂತಗಳಲ್ಲಿ ಪ್ರತಿಭಟನೆಗಳನ್ನು ನಡೆಸಲು ಯೋಜಿಸಿದೆ.
* ಆಗಸ್ಟ್ 6ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ದಲಿತ ಸಚಿವರು ಮತ್ತು ಶಾಸಕರನ್ನು “ಕಂಡಲ್ಲಿ ಘೆರಾವ್” ಮಾಡುವ ಮೂಲಕ ಪ್ರತಿಭಟನೆ ಆರಂಭಿಸಲಾಗುವುದು.
* ಆಗಸ್ಟ್ 7 ರಂದು, ಅಭಿವೃದ್ಧಿ ನಿಗಮಗಳ ಮುಂದೆ ಏಕಕಾಲಕ್ಕೆ ತಮಟೆ ಚಳುವಳಿ ನಡೆಸಲಾಗುವುದು. ಇದಕ್ಕೆ ಕಾರಣ, ಪರಿಶಿಷ್ಟರ ಅಭಿವೃದ್ಧಿಗೆ ಅಗತ್ಯವಿರುವ ಹಣವನ್ನು ಬಿಡುಗಡೆ ಮಾಡದೇ ನಿಗಮಗಳನ್ನು ದಿವಾಳಿಗೊಳಿಸಲಾಗಿದೆ ಎಂದು ಒಕ್ಕೂಟ ಆರೋಪಿಸಿದೆ.
* ಆಗಸ್ಟ್ 18 ರಂದು, “ವಿಧಾನಸೌಧ ಚಲೋ” ಮೂಲಕ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ಇದೇ ವೇಳೆ, ಒಕ್ಕೂಟದ ಪದಾಧಿಕಾರಿ ಮುತ್ತುರಾಜ್ ಮಾತನಾಡಿ, ಆಗಸ್ಟ್ 8ರಂದು ಮತ ಕಳ್ಳತನದ ಆರೋಪಗಳ ಕುರಿತು ಪ್ರತಿಭಟಿಸಲು ಬೆಂಗಳೂರಿಗೆ ಆಗಮಿಸುತ್ತಿರುವ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ, ದಲಿತರ ಹಣ ಕಳ್ಳತನದ ಬಗ್ಗೆ ಮುಖ್ಯಮಂತ್ರಿಯನ್ನು ಹೊಣೆಗಾರರನ್ನಾಗಿ ಮಾಡುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಸದಸ್ಯರಾದ ಕೆ.ಎಂ.ಎನ್. ರಮೇಶ್, ಎಂ.ಎಸ್. ಜಗನ್ನಾಥ್, ದಲಿತ ರಮೇಶ್, ಮತ್ತು ಡಾ. ಅಶ್ವತ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಧರ್ಮಸ್ಥಳ ಶವ ಶೋಧ: ಪಾಯಿಂಟ್ ನಂ 11ರ ಸಮೀಪ ಅಸ್ಥಿಪಂಜರದ ಅವಶೇಷಗಳು ಪತ್ತೆ


