ಜೂನ್ 12 ರಂದು ನಡೆದ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಪೈಲಟ್ ದೋಷ ಅಥವಾ ಕಾಕ್‌ಪಿಟ್ ಗೊಂದಲ ಕಾರಣ ಎಂದು ಉಲ್ಲೇಖಿಸಿ ವರದಿ ಮಾಡಿದ ‘ದಿ ವಾಲ್ ಸ್ಟ್ರೀಟ್ ಜರ್ನಲ್’ ಮತ್ತು ‘ರಾಯಿಟರ್ಸ್’ ಸುದ್ದಿ ಸಂಸ್ಥೆಗಳಿಗೆ ಭಾರತೀಯ ಪೈಲಟ್‌ಗಳ ಒಕ್ಕೂಟ (ಎಫ್‌ಐಪಿ) ಲೀಗಲ್ ನೋಟಿಸ್ ನೀಡಿದೆ ಎಂದು ವರದಿಯಾಗಿದೆ.
ಪೈಲಟ್ ದೋಷದಿಂದಾಗಿ ಅಪಘಾತ ಸಂಭವಿಸಿದೆ ಎಂಬುವುದನ್ನು ಯಾವುದೇ ಪುರಾವೆಗಳಿಲ್ಲದೆ ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ ಎಂದು ಪೈಲಟ್‌ಗಳ ಒಕ್ಕೂಟ ನೋಟಿಸ್‌ನಲ್ಲಿ ತಿಳಿಸಿದೆ.
ಎರಡು ಮಾಧ್ಯಮ ಸಂಸ್ಥೆಗಳ ವರದಿಗಳನ್ನು ಪೈಲಟ್‌ಗಳ ಸಂಘಟನೆ ಪಕ್ಷಪಾತದಿಂದ ಕೂಡಿದ್ದು ಮತ್ತು ಪರಿಶೀಲಿಸದ ವರದಿ ಎಂದು ಟೀಕಿಸಿವೆ. ಈ ಸಂಬಂಧ ಕ್ಷಮೆ ಯಾಚಿಸುವಂತೆ ಫಾರ್ಮಲ್ ಲೀಗಲ್ ನೋಟಿಸ್‌ನಲ್ಲಿ ಒತ್ತಾಯಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ದುರಂತದ ಕಾರಣದ ಬಗ್ಗೆ ತನಿಖೆ ನಡೆಯುತ್ತಿರುವಾಗ ಈ ರೀತಿಯ ವರದಿ ಪ್ರಕಟಿಸಿರುವುದು ಬೇಜವಾಬ್ದಾರಿಯನ್ನು ಎಂದು ಎತ್ತಿ ತೋರಿಸಿದೆ. ಮಾಧ್ಯಮಗಳು ಪತ್ರಿಕೋದ್ಯಮದ ಸಮಗ್ರತೆಯನ್ನು ಎತ್ತಿಹಿಡಿಯಬೇಕು ಮತ್ತು ಸಾರ್ವಜನಿಕರನ್ನು ದಾರಿ ತಪ್ಪಿಸುವ ತಪ್ಪು ಮಾಹಿತಿಯನ್ನು ಹರಡುವುದನ್ನು ತಪ್ಪಿಸಬೇಕು ಎಂದು ಒಕ್ಕೂಟ ಹೇಳಿದೆ.
“ಇಂತಹ ಊಹಾತ್ಮಕ ವಿಷಯಗಳ ಪ್ರಕಟಣೆಯು ಅತ್ಯಂತ ಬೇಜವಾಬ್ದಾರಿಯಿಂದ ಕೂಡಿದ್ದು, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗದ ಮೃತ ಪೈಲಟ್‌ಗಳ ಖ್ಯಾತಿಗೆ ಗಂಭೀರ ಮತ್ತು ಸರಿಪಡಿಸಲಾಗದ ಹಾನಿಯನ್ನುಂಟುಮಾಡಿದೆ. ಈ ಮೂಲಕ ರಾಯಿಟರ್ಸ್ ದುಃಖಿತ ಕುಟುಂಬಗಳಿಗೆ ಅನಗತ್ಯ ತೊಂದರೆಯನ್ನುಂಟುಮಾಡಿದೆ. ಅಲ್ಲದೆ, ಅಪಾರ ಒತ್ತಡ ಮತ್ತು ಸಾರ್ವಜನಿಕ ಜವಾಬ್ದಾರಿಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಪೈಲಟ್ ಭ್ರಾತೃತ್ವದ ನೈತಿಕತೆಯನ್ನು ಕುಗ್ಗಿಸಿದೆ” ಎಂದು ಲೀಗಲ್ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಈ ಅಪಘಾತವು ಸಾರ್ವಜನಿಕರ ಗಮನವನ್ನು ಸೆಳೆದಿದ್ದರೂ, “ವಿಶೇಷವಾಗಿ ಆಧಾರರಹಿತ ಸಂಗತಿಗಳ ಆಧಾರದ ಮೇಲೆ ಭಾರತೀಯ ವಾಯುಯಾನ ಉದ್ಯಮದ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಅಥವಾ ತಲ್ಲಣವನ್ನು ಸೃಷ್ಟಿಸುವ ಸಮಯ ಇದಲ್ಲ” ಎಂದು ಒಕ್ಕೂಟದ ಒತ್ತಿ ಹೇಳಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಮಾಧ್ಯಮಗಳು ಊಹಾಪೋಹಗಳಿಂದ ದೂರವಿರುವಂತೆ ಮನವಿ ಮಾಡಿದೆ.
ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಇತ್ತೀಚೆಗೆ ಬಿಡುಗಡೆ ಮಾಡಿದ ಪ್ರಾಥಮಿಕ ವರದಿಯಲ್ಲಿ, ಅಹ್ಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ವಿಮಾನದ ಇಂಜಿನ್‌ಗಳ ಇಂಧನ ನಿಯಂತ್ರಣ ಸ್ವಿಚ್‌ಗಳು ಡಿಕ್ಕಿ ಹೊಡೆಯುವ ಕೆಲವೇ ಕ್ಷಣಗಳ ಮೊದಲು “ರನ್” ನಿಂದ “ಕಟ್ಆಫ್”ಗೆ ತಿರುಗಿತ್ತು. ಇದರಿಂದ ಎರಡೂ ಇಂಜಿನ್‌ಗಳಿಗೆ ಇಂಧನ ಪೂರೈಕೆ ಕಡಿತಗೊಂಡಿತ್ತು ಎಂದು ಹೇಳಿತ್ತು. ಇಂಧನ ಸ್ವಿಚ್‌ಗಳ ಕುರಿತು ಪೈಲಟ್‌ಗಳ ನಡುವಿನ ಸಂಭಾಷಣೆಯನ್ನುಉಲ್ಲೇಖಿಸಿದ್ದ ವರದಿಯು, “ಒಬ್ಬ ಪೈಲಟ್ ಸ್ಚಿಚ್ ಯಾರು ಕಟ್‌ಆಫ್ ಮಾಡಿತ್ತು ಎಂದು ಕೇಳಿದಾಗ, ಮತ್ತೊಬ್ಬರು ಪೈಲಟ್ ನನಗೆ ಗೊತ್ತಿಲ್ಲ” ಎಂದು ಹೇಳಿದ್ದಾರೆ” ಎಂದಿತ್ತು.
ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ (ಎನ್‌ಟಿಎಸ್‌ಬಿ) ಮುಖ್ಯಸ್ಥರು ಏರ್ ಇಂಡಿಯಾ ವಿಮಾನ ಅಪಘಾತದ ತನಿಖೆಯ ವಿವರಗಳನ್ನು ವರದಿ ಮಾಡುವಾಗ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದರು. ಇತ್ತೀಚಿನ ಅಂತಾರಾಷ್ಟ್ರೀಯ ಮಾಧ್ಯಮ ವರದಿಗಳು ಅಕಾಲಿಕವಾಗಿವೆ ಮತ್ತು ಸರಿಯಾದ ತನಿಖಾ ಸಂದರ್ಭವನ್ನು ಹೊಂದಿಲ್ಲ ಎಂದು ಹೇಳಿದ್ದರು.
ಎಂವಿಎ ಒಗ್ಗಟ್ಟಿನ ಬಗ್ಗೆ ಪ್ರಶ್ನಿಸಿದ ಉದ್ಧವ್ ಠಾಕ್ರೆ: ಮೈತ್ರಿಕೂಟದಿಂದ ನಿರ್ಗಮಿಸುವ ಮುನ್ಸೂಚನೆ?


