ರಾಜಕೀಯ ಪಕ್ಷಗಳು 2,000 ರೂ.ಗಿಂತ ಕಡಿಮೆ ‘ಅನಾಮಧೇಯ’ ನಗದು ದೇಣಿಗೆಗಳನ್ನು ಸ್ವೀಕರಿಸಲು ಅವಕಾಶ ನೀಡುವ ಆದಾಯ ತೆರಿಗೆ ಕಾಯ್ದೆಯ ನಿಬಂಧನೆಯ ಸಿಂಧುತ್ವವನ್ನು ಪ್ರಶ್ನಿಸಿದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ (ನವೆಂಬರ್ 24) ಕೇಂದ್ರ ಸರ್ಕಾರ, ಚುನಾವಣಾ ಆಯೋಗ ಮತ್ತು ಇತರರಿಂದ ಪ್ರತಿಕ್ರಿಯೆ ಕೋರಿದೆ.
ಈ ಪಾರದರ್ಶಕತೆ ಕೊರತೆಯು ಚುನಾವಣಾ ಪ್ರಕ್ರಿಯೆಯ ಪರಿಶುದ್ಧತೆಯನ್ನು ಹಾಳು ಮಾಡುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಏಕೆಂದರೆ ಯಾರು ಯಾವ ರಾಜಕೀಯ ಪಕ್ಷಕ್ಕೆ ಹಣ ಕೊಟ್ಟಿದ್ದಾರೆ, ಆ ದಾನಿಗಳು ಯಾರು, ಅವರ ಉದ್ದೇಶ ಏನು ಎಂಬ ಮಾಹಿತಿಯನ್ನು ಮತದಾರರಿಗೆ ಸಂಪೂರ್ಣವಾಗಿ ಮರೆ ಮಾಚಿದಂತಾಗುತ್ತದೆ. ಇದರಿಂದ ಮತದಾರರು ತಮ್ಮ ಮತವನ್ನು ಹಾಕುವಾಗ ತರ್ಕಬದ್ಧವಾಗಿ, ಬುದ್ಧಿವಂತಿಕೆಯಿಂದ ಮತ್ತು ಸಂಪೂರ್ಣ ಮಾಹಿತಿ ಆಧರಿಸಿ ನಿರ್ಧಾರ ತೆಗೆದುಕೊಳ್ಳುವ ಅವಕಾಶವೇ ಇಲ್ಲವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ಅರ್ಜಿಯಲ್ಲಿ ವಾದಿಸಲಾಗಿದೆ.
ಯಾವುದೇ ರಾಜಕೀಯ ಪಕ್ಷವನ್ನು ನೋಂದಣಿ ಮಾಡುವಾಗ ಮತ್ತು ಅದಕ್ಕೆ ಚಿಹ್ನೆ ಹಂಚಿಕೆ ಮಾಡುವಾಗ ನಗದು ರೂಪದಲ್ಲಿ ಯಾವುದೇ ದೇಣಿಗೆ ಪಡೆಯದಂತೆ ನಿರ್ದೇಶನ ನೀಡಲು ಚುನಾವಣಾ ಆಯೋಗಕ್ಕೆ ಸೂಚಿಸುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಅರ್ಜಿಯನ್ನು ನಾಲ್ಕು ವಾರಗಳ ನಂತರ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಹೇಳಿದೆ.
ಅರ್ಜಿಯನ್ನು ಕೈಗೆತ್ತಿಕೊಂಡ ಪೀಠ, ಆರಂಭದಲ್ಲಿ ನೀವು ಹೈಕೋರ್ಟ್‌ಗೆ ಏಕೆ ಹೋಗಿಲ್ಲ ಎಂದು ಅರ್ಜಿದಾರ ಖೇಮ್ ಸಿಂಗ್ ಭಾಟಿ ಮತ್ತು ವಕೀಲೆ ಸ್ನೇಹಾ ಕಲಿತಾ ಪರ ಹಾಜರಿದ್ದ ಹಿರಿಯ ವಕೀಲ ವಿಜಯ್ ಹನ್ಸಾರಿಯಾ ಅವರನ್ನು ಕೇಳಿದೆ ಎಂದು ವರದಿಯಾಗಿದೆ.
ಇದಕ್ಕೆ ಉತ್ತರಿಸಿದ ವಕೀಲ ಹನ್ಸಾರಿಯಾ, ಈ ಅರ್ಜಿಯು ದೇಶದಾದ್ಯಂತ ಇರುವ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅವುಗಳಿಗೆ ಬರುವ ನಿಧಿಗೆ ಸಂಬಂಧಿಸಿದೆ ಎಂದು ತಿಳಿಸಿದ್ದಾರೆ.
ನಂತರ, ಅರ್ಜಿಯನ್ನು ಆಲಿಸಲು ಒಪ್ಪಿಕೊಂಡ ನ್ಯಾಯಪೀಠ, ಚುನಾವಣಾ ಆಯೋಗ, ಕೇಂದ್ರ ಸರ್ಕಾರ ಮತ್ತು ಬಿಜೆಪಿ ಕಾಂಗ್ರೆಸ್ ಸೇರಿದಂತೆ ಹಲವಾರು ರಾಜಕೀಯ ಪಕ್ಷಗಳು ಹಾಗೂ ಇತರರಿಗೆ ನೋಟಿಸ್ ಜಾರಿ ಮಾಡಿದೆ.
1961ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 13Aನ ಷರತ್ತು (ಡಿ) ಅನ್ನು ಅಸಾಂವಿಧಾನಿಕ ಎಂದು ರದ್ದುಗೊಳಿಸುವಂತೆ ಮತ್ತು ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌ನ 2024 ರ ತೀರ್ಪನ್ನು ಉಲ್ಲೇಖಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ರಾಜಕೀಯ ಪಕ್ಷಗಳು ತಮಗೆ ಯಾವುದೇ ಮೊತ್ತದ ಹಣವನ್ನು ಪಾವತಿಸುವ ವ್ಯಕ್ತಿಯ ಹೆಸರು ಮತ್ತು ಇತರ ಎಲ್ಲಾ ವಿವರಗಳನ್ನು ಬಹಿರಂಗಪಡಿಸಬೇಕು ಮತ್ತು ರಾಜಕೀಯ ನಿಧಿಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಯಾವುದೇ ಮೊತ್ತವನ್ನು ನಗದು ರೂಪದಲ್ಲಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ನಿರ್ದೇಶನ ನೀಡಬೇಕು ಎಂಬುವುದಾಗಿ ಅರ್ಜಿದಾರರು ಕೋರಿದ್ದಾರೆ ಎಂದು ವಕೀಲ ಜಯೇಶ್ ಕೆ ಉನ್ನಿಕೃಷ್ಣನ್ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ತಿಳಿಸಲಾಗಿದೆ.
1961ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 13A ರಾಜಕೀಯ ಪಕ್ಷಗಳ ಆದಾಯಕ್ಕೆ ಸಂಬಂಧಿಸಿದ ವಿಶೇಷ ನಿಬಂಧನೆಗೆ ಸಂಬಂಧಿಸಿದೆ.
ಸೆಕ್ಷನ್ 13A ರಾಜಕೀಯ ಪಕ್ಷಗಳಿಗೆ ಸೆಕ್ಯುರಿಟಿಗಳ ಮೇಲಿನ ಬಡ್ಡಿ, ಮನೆ ಆಸ್ತಿಯಿಂದ ಬರುವ ಆದಾಯ ಅಥವಾ ಇತರ ಮೂಲಗಳಿಂದ ಬರುವ ಆದಾಯ ಮತ್ತು ಸ್ವಯಂಪ್ರೇರಿತ ಕೊಡುಗೆಗಳ ಮೂಲಕ ಪಡೆಯುವ ಯಾವುದೇ ಆದಾಯವನ್ನು ಒಟ್ಟು ಆದಾಯದ ಲೆಕ್ಕಾಚಾರದಿಂದ ವಿನಾಯಿತಿ ನೀಡಿದೆ.


