ಅಜ್ಮೀರ್ ದರ್ಗಾ ಉರೂಸ್‌ಗೆ ಪ್ರಧಾನಿ ನರೇಂದ್ರ ಮೋದಿ ಚಾದರ್ ಅರ್ಪಿಸುವುದನ್ನು ತಡೆಯುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಸೂಫಿ ಸಂತ ಖ್ವಾಜಾ ಮುಯೀನುದ್ದೀನ್ ಹಸನ್ ಚಿಸ್ತಿ ಅವರ 814ನೇ ಉರೂಸ್ ಕಾರ್ಯಕ್ರಮ ಡಿಸೆಂಬರ್ 22 ರಿಂದ 30ರವರೆಗೆ ನಡೆಯಲಿದೆ.
ಸಂಪ್ರದಾಯದಂತೆ ಪ್ರಧಾನಿ ಮೋದಿ ಪರವಾಗಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಈ ಬಾರಿ ಅಜ್ಮೀರ್ ದರ್ಗಾಗೆ ಚಾದರ್ ಅರ್ಪಿಸಲಿದ್ದಾರೆ.
ಇದನ್ನು ತಡೆಯುವಂತೆ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಸುಪ್ರೀಂ ಕೋರ್ಟ್‌ನ ರಜಾಕಾಲದ ಪೀಠದ ಮುಂದೆ ತುರ್ತು ಅರ್ಜಿ ಸಲ್ಲಿಸಲಾಗಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
“ಅಜ್ಮೀರ್ ದರ್ಗಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಾದರ್ ಅರ್ಪಿಸುವುದಕ್ಕೆ ತಡೆಯಾಜ್ಞೆ ನೀಡಬೇಕೆಂದು ನಾವು ಕೋರುತ್ತಿದ್ದೇವೆ. ಸಂಕಟ್ ಮೋಚನ್ ಮಂದಿರಕ್ಕೆ ಸಂಬಂಧಿಸಿದ ನಮ್ಮ ಅರ್ಜಿ ಬಾಕಿ ಇದೆ” ಎಂದು ಅರ್ಜಿದಾರರ ಪರ ವಕೀಲರು ಕೋರಿದ್ದಾರೆ.
ಆದರೆ, ಸಿಜೆಐ ಕಾಂತ್ ಈ ಮನವಿಯನ್ನು ತಿರಸ್ಕರಿಸಿದ್ದಾರೆ. ಹಾಗಾಗಿ, ಇಂದು ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆ ಇಲ್ಲ ಎಂದು ವರದಿ ಹೇಳಿದೆ.
ಈ ವರ್ಷದ ಆರಂಭದಲ್ಲಿ ಅಜ್ಮೀರ್ ನ್ಯಾಯಾಲಯದಲ್ಲೂ ಇದೇ ರೀತಿಯ ಅರ್ಜಿಯನ್ನು ಸಲ್ಲಿಸಲಾಗಿತ್ತು.
ಆ ಅರ್ಜಿಯನ್ನು ಹಿಂದೂ ಸೇನಾದ ಆಗಿನ ಅಧ್ಯಕ್ಷ ವಿಷ್ಣು ಗುಪ್ತಾ ಸಲ್ಲಿಸಿದ್ದರು. ಇದೇ ವಿಷ್ಣು ಗುಪ್ತಾ, ಶಿವ ಮಂದಿರ ಕೆಡವಿ ಅಜ್ಮೀರ್ ದರ್ಗಾ ನಿರ್ಮಿಸಲಾಗಿದೆ ಎಂದು ಆರೋಪಿಸಿ ಅಜ್ಮೀರ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಯ ನ್ಯಾಯಾಲಯದಲ್ಲಿ ಬಾಕಿ ಇದೆ.
‘ವಿವಾದಿತ ನಿರ್ಮಾಣಕ್ಕೆ ಅಥವಾ ಸ್ಥಳಕ್ಕೆ ಚಾದರ್ ಕಳುಹಿಸುವ ಮೂಲಕ ಕೇಂದ್ರ ಸರ್ಕಾರ ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ನ್ಯಾಯಯುತ ವಿಚಾರಣೆಯ ಹಕ್ಕನ್ನು ದುರ್ಬಲಗೊಳಿಸುತ್ತಿದೆ ಎಂದು ವಿಷ್ಣು ಗುಪ್ತಾ ವಾದಿಸಿದ್ದಾರೆ.
ಕೇಂದ್ರ ಸರ್ಕಾರ, ಎಐಸಿಸಿ ಸೇರಿದಂತೆ ಆಡಳಿತ, ಪಕ್ಷಗಳು ಮತ್ತು ಗಣ್ಯ ವ್ಯಕ್ತಿಗಳು ಅಜ್ಮೀರ್ ದರ್ಗಾ ಉರೂಸ್‌ಗೆ ಚಾದರ್ ಅರ್ಪಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.


