ಸೂಫಿ ಸಂತ ಖ್ವಾಜಾ ಮುಈನುದ್ದೀನ್ ಚಿಸ್ತಿ ಅವರ ಅಜ್ಮೀರ್ ದರ್ಗಾದ ಉರೂಸ್ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಚಾದರ್ ದರ್ಗಾಕ್ಕೆ ಅರ್ಪಿಸದಂತೆ ತಾತ್ಕಾಲಿಕ ತಡೆ ನೀಡಲು ಕೋರಿ ಇಂದು (ಜ.4) ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.
ಅಜ್ಮೀರ್ ದರ್ಗಾ ಶಿವ ದೇವಸ್ಥಾನವೆಂದು ಪ್ರತಿಪಾದಿಸಿ ಹಿಂದುತ್ವವಾದಿ ಸಂಘಟನೆ ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತ ಅಜ್ಮೀರ್ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿ ವಿಚಾರಣೆಯ ಹಂತದಲ್ಲಿದೆ. ಅದೇ ವಿಷ್ಣು ಗುಪ್ತಾ ಈಗ ಚಾದರ್ ಅರ್ಪಣೆಗೆ ತಡೆ ಕೋರಿದ್ದಾರೆ.
ಅಜ್ಮೀರ್ ದರ್ಗಾ ದೇವಸ್ಥಾವೆಂದು ಪ್ರತಿಪಾದಿಸಿದ ಅರ್ಜಿ ನ್ಯಾಯಾಲಯದಲ್ಲಿದೆ. ಅದು ದರ್ಗವೋ ದೇವಸ್ಥಾನವೋ ಎಂಬುವುದನ್ನು ನ್ಯಾಯಾಲಯ ಇನ್ನೂ ತೀರ್ಮಾನಿಸಿಲ್ಲ. ಈ ಹಂತದಲ್ಲಿ ಕೇಂದ್ರ ಸರ್ಕಾರ ಚಾದರ್ ಅರ್ಪಿಸುವುದು ‘ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ನ್ಯಾಯಯುತ ವಿಚಾರಣೆಯ ಹಕ್ಕನ್ನು ದುರ್ಬಲಗೊಳಿಸುತ್ತದೆ’. ಅದು ದರ್ಗಾವೇ ಎಂದು ಖಚಿತಪಡಿಸದಂತಾಗುತ್ತದೆ ಎಂದು ಅರ್ಜಿದಾರ ವಿಷ್ಣುಗುಪ್ತಾ ಹೇಳಿದ್ದಾರೆ.
#JustIn | An application has been filed before a court in #Ajmer seeking a temporary injunction to prevent the offering of a Chadar at the #AjmerSharifDargah on behalf of Prime Minister Narendra Modi (@narendramodi) tomorrow. pic.twitter.com/6kgElHYPN4
— Live Law (@LiveLawIndia) January 3, 2025
ಪ್ರತಿವರ್ಷ ಅಜ್ಮೀರ್ ಉರೂಸ್‌ಗೆ ಕೇಂದ್ರ ಸರ್ಕಾರದಿಂದ ಚಾದರ್ ಅರ್ಪಿಸುವುದು ಸಂಪ್ರದಾಯ. ಈ ವರ್ಷ 813ನೇ ಉರೂಸ್ ಸಮಾರಂಭಕ್ಕೆ ಚಾದರ್ ಅರ್ಪಿಸುವ ಮೂಲಕ ಪ್ರಧಾನಿ ಮೋದಿ ಅದನ್ನು ಮುಂದುವರಿಸಿದ್ದಾರೆ.
ಈ ಹಿಂದೆ ದೇಶದ ಎಲ್ಲಾ ಪ್ರಧಾನ ಮಂತ್ರಿಗಳು ಅಜ್ಮೀರ್ ದರ್ಗಾದ ಉರೂಸ್‌ಗೆ ಚಾದರ್ ಅರ್ಪಿಸಿದ್ದಾರೆ. 2014ರಲ್ಲಿ ಮೋದಿಯವರು ಪ್ರಧಾನಿಯಾದ ಬಳಿಕವೂ ಆ ಸಂಪ್ರದಾಯ ಮುಂದುವರೆದಿದೆ.
ಅಜ್ಮೀರ್‌ನ ಖ್ವಾಜಾ ಮುಈನುದ್ದೀನ್ ಚಿಸ್ತಿ ದರ್ಗಾವನ್ನು ಭಗವಾನ್ ಶ್ರೀ ಸಂಕಟ್‌ಮೋಚನ್ ಮಹಾದೇವ ದೇವಸ್ಥಾನ ಎಂದು ಪ್ರತಿಪಾದಿಸಿ ವಿಷ್ಣುಗುಪ್ತ ಅಜ್ಮೀರ್ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯನ್ನು ವಿಚಾರಣೆ ನಡೆಸುವುದಾಗಿ 2024ರ ನವೆಂಬರ್‌ನಲ್ಲಿ ನ್ಯಾಯಾಲಯ ಒಪ್ಪಿಕೊಂಡಿತ್ತು. ಅರ್ಜಿ ಸಂಬಂಧ ದರ್ಗಾ ಸಮಿತಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಗೆ ಸಮನ್ಸ್ ನೀಡುವಂತೆ ಸೂಚಿಸಿತ್ತು. ಮುಂದಿನ ವಿಚಾರಣೆಯನ್ನು ಡಿಸೆಂಬರ್ 20ಕ್ಕೆ ನಿಗದಿಪಡಿಸಿತ್ತು.
ಆದರೆ, ಡಿಸೆಂಬರ್ 12ರಂದು ಮಧ್ಯಂತರ ಆದೇಶ ನೀಡಿರುವ ಸುಪ್ರೀಂ ಕೋರ್ಟ್ ಮುಂದಿನ ಆದೇಶದವರೆಗೆ ಮಸೀದಿಗಳ ಸಮೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಮಧ್ಯಂತರ ಅಥವಾ ಅಂತಿಮ ಆದೇಶಗಳನ್ನು ನೀಡದಂತೆ ದೇಶದ ಎಲ್ಲಾ ನ್ಯಾಯಾಲಯಗಳಿಗೆ ಸೂಚಿಸಿದೆ.
ಇದನ್ನೂ ಓದಿ : ಅಜ್ಮೀರ್ ಉರೂಸ್‌ಗೆ ಚಾದರ್ ಅರ್ಪಿಸಿದ ಪ್ರಧಾನಿ ಮೋದಿ


