ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ಖುಲ್ದಾಬಾದ್‌ನಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬ್ ಸಮಾಧಿ ಕೆಡವಲು ಮತ್ತು ರಾಷ್ಟ್ರೀಯ ಸ್ಮಾರಕಗಳ ಪಟ್ಟಿಯಿಂದ ಸಮಾಧಿಯನ್ನು ಕೈಬಿಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಆದೇಶಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.
ಕೇತನ್ ತಿರೋಡ್ಕರ್ ಎಂಬಾತ ಪಿಐಎಲ್ ಸಲ್ಲಿಸಿದ್ದು, ಕೆಲವು ಪುರಾತನ ಸ್ಮಾರಕಗಳನ್ನು ರಾಷ್ಟ್ರೀಯ ಪ್ರಾಮುಖ್ಯತೆ ಎಂದು ಗೊತ್ತುಪಡಿಸುವ ಎಎಸ್‌ಐ ಕಾಯ್ದೆ-1958ರ ವಿಭಾಗ 3ರೊಂದಿಗೆ ಔರಂಗಜೇಬ್ ಸಮಾಧಿ ಹೊಂದಿಕೆಯಾಗುವುದಿಲ್ಲ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.
ಔರಂಗಜೇಬ್ ಸಮಾಧಿಯು 14 ನೇ ಶತಮಾನದ ಚಿಸ್ತಿ ಪಂಥದ ಸೂಫಿ ಸಂತ ಶೈಖ್ ಝೈನುದ್ದೀನ್ ಅವರ ದರ್ಗಾ ಸಂಕೀರ್ಣದಲ್ಲಿದೆ. ಹತ್ತಿರದಲ್ಲಿ ಔರಂಗಜೇಬ್ ಅವರ ಪುತ್ರರಲ್ಲಿ ಒಬ್ಬರಾದ ಹೈದರಾಬಾದ್‌ನ ಮೊದಲ ನಿಝಾಮ್ ಆಸಫ್ ಜಾ I ಮತ್ತು ಅವರ ಮಗ ನಾಸಿರ್ ಜಂಗ್ ಅವರ ಸಮಾಧಿಗಳಿವೆ. ಈ ಸಮಾಧಿಗಳನ್ನೂ ಕೆಡವಲು ಅರ್ಜಿಯಲ್ಲಿ ಕೋರಲಾಗಿದೆ.
“ಒಂದು ನಿರ್ದಿಷ್ಟ ಪ್ರದೇಶ ಅಥವಾ ಗುಂಪಿನ ಬದಲು, ಇಡೀ ದೇಶಕ್ಕೆ ಮೌಲ್ಯಯುತವಾದದ್ದನ್ನು ರಾಷ್ಟ್ರೀಯ ಪ್ರಾಮುಖ್ಯತೆ ಎನ್ನಲಾಗುತ್ತದೆ. ಏಕೆಂದರೆ, ಅದು ಇಡೀ ರಾಷ್ಟ್ರದ ಮೇಲೆ ಪರಿಣಾಮ ಬೀರುತ್ತದೆ. ಈ ಪರಿಣಾಮವನ್ನು ಭವಿಷ್ಯದ ಪೀಳಿಗೆ ಸಕಾರಾತ್ಮಕ ರೀತಿಯಲ್ಲಿ ಅರ್ಥಮಾಡಿಕೊಳ್ಳಬೇಕು” ಎಂದು ಅರ್ಜಿದಾರ ಕೇತನ್ ತಿರೋಡ್ಕರ್ ಪರವಾಗಿ ಅರ್ಜಿ ಸಲ್ಲಿಸಿರುವ ವಕೀಲ ರಾಜಭಾವು ಚೌಧರಿ ಹೇಳಿದ್ದಾರೆ.
“ಔರಂಗಜೇಬ್ ಸಮಾಧಿ ರಾಷ್ಟ್ರೀಯ ಸ್ಮಾರಕವಾಗಿದ್ದು, ರಾಷ್ಟ್ರೀಯ ಮಹತ್ವವನ್ನು ಸೂಚಿಸುತ್ತದೆ ಎಂಬುದು ಸ್ವಯಂ ಮಾಡಿಕೊಂಡ ಅವಮಾನ.ಭಾರತದಲ್ಲಿ ಚೆಂಗಿಸ್ ಖಾನ್, ಮೊಹಮ್ಮದ್ ಘೋರಿ ಅಥವಾ ರಾಜ ಅಲೆಕ್ಸಾಂಡರ್‌ನಂತಹ ವ್ಯಕ್ತಿಗಳಿಗೆ ನಾವು ಎಂದಿಗೂ ಸ್ಮಾರಕಗಳನ್ನು ಸ್ಥಾಪಿಸಿಲ್ಲ” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ನ್ಯಾಯಾಲಯವು ಸೂಕ್ತ ಸಮಯದಲ್ಲಿ ಅರ್ಜಿಯನ್ನು ವಿಚಾರಣೆ ನಡೆಸಲಿದೆ.
ನಾಗ್ಪುರ ಗಲಭೆ | ‘ಹೂಕೋಸು’ ಮೂಲಕ ಮುಸ್ಲಿಮರ ಹತ್ಯಾಕಾಂಡಕ್ಕೆ ಕರೆ ನೀಡುತ್ತಿರುವ ಬಿಜೆಪಿ ಪರ ಬಲಪಂಥೀಯರು!


