ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 2024ರ ಮಾರ್ಚ್‌ನಲ್ಲಿ ದಾಖಲಾದ ಪೋಕ್ಸೊ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಬಂಧಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಬಾಲಕಿಯ ಸಹೋದರನ ಮನವಿ ಮೇರೆಗೆ ವಕೀಲ ಎಸ್ ಬಾಲನ್ ಅವರು ಜೂನ್ 10 ರಂದು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಮುಂದಿನ ವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಫೆಬ್ರವರಿ 2ರಂದು ಬೆಂಗಳೂರಿನ ಸಂಜಯನಗರದ ತಮ್ಮ ಮನೆಯಲ್ಲಿ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಯಡಿಯೂರಪ್ಪ ಮೇಲಿದೆ. ಈ ಸಂಬಂಧ ಬಾಲಕಿಯ ತಾಯಿ ಮಾರ್ಚ್ 14 ರಂದು ಯಡಿಯೂರಪ್ಪ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನ್ಯಾಯ ಕೊಡಿಸುವಂತೆ ಕೋರಿ ಬಾಲಕಿ ಮತ್ತು ಆಕೆಯ ತಾಯಿ ಯಡಿಯೂರಪ್ಪ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಯಡಿಯೂರಪ್ಪ ಅವರೇ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
“ಎರಡು ಪ್ರಮುಖ ಬೇಡಿಕೆಗಳೊಂದಿಗೆ ರಿಟ್ ಅರ್ಜಿ ಸಲ್ಲಿಸಿರುವುದಾಗಿ ವಕೀಲ ಬಾಲನ್ ತಿಳಿಸಿದ್ದಾರೆ. ತನಿಖೆಯು ಬಹಳ ನಿಧಾನ ಗತಿಯಲ್ಲಿ ಸಾಗುತ್ತಿದೆ. ಆದ್ದರಿಂದ ನಾವು ಸ್ಥಿತಿ ವರದಿಯನ್ನು ಕೇಳಿದ್ದೇವೆ. ಅಲ್ಲದೆ ಯಡಿಯೂರಪ್ಪ ಅವರನ್ನು ಬಂಧಿಸುವಂತೆಯೂ ಕೇಳಿರುವುದಾಗಿ ಹೇಳಿದ್ದಾರೆ” ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 164ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಬಾಲಕಿಯ ಹೇಳಿಕೆಯನ್ನು ಈಗಾಗಲೇ ದಾಖಲಿಸಲಾಗಿದೆ ಎಂದು ರಿಟ್ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಬಾಲಕಿಯ ತಾಯಿ ಏಪ್ರಿಲ್ 29 ರಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರಿಗೆ ಪತ್ರ ಬರೆದು ಯಡಿಯೂರಪ್ಪ ಅವರನ್ನು ಬಂಧಿಸುವಂತೆ ಮನವಿ ಮಾಡಿದ್ದರು.
ಆದರೆ, ಎರಡು ತಿಂಗಳ ನಂತರವೂ, ಯಡಿಯೂರಪ್ಪ ವಿರುದ್ಧದ ತನಿಖೆಯು ಸಿಆರ್‌ಪಿಸಿಯ ಸೆಕ್ಷನ್ 2 (ಹೆಚ್) ಅಡಿಯಲ್ಲಿ ವ್ಯಾಖ್ಯಾನಿಸಲ್ಪಟ್ಟಂತೆ ಪ್ರಗತಿಯಾಗಿಲ್ಲ. ಸೆಕ್ಷನ್ 41 (ಎ) ಅಡಿಯಲ್ಲಿ ಅವರಿಗೆ ನೋಟಿಸ್ ಕೂಡ ನೀಡಿಲ್ಲ. ಆದ್ದರಿಂದ ನ್ಯಾಯಾಲದ ಮೊರೆ ಹೋಗುವುದರ ಹೊರತು ಬೇರೆ ಪರಿಹಾರವಿರಲಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಯಡಿಯೂರಪ್ಪ ವಿರುದ್ಧದ ದೂರಿನ ಸಂಬಂಧ ಅಪ್ರಾಪ್ತ ಬಾಲಕಿಯ ತಾಯಿ ಮೇ 27 ರಂದು ವಕೀಲ ಬಾಲನ್ ಅವರನ್ನು ಭೇಟಿಯಾಗಬೇಕಿತ್ತು. ಆದರೆ, ಉಸಿರಾಟದ ತೊಂದರೆಯಿಂದ ಅವರು ಮೇ 26ರಂದು ಬೆಂಗಳೂರಿನ ನ್ಯಾನೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಈ ಸಾವಿನ ಸುತ್ತವೂ ಹಲವು ಅನುಮಾನಗಳು ವ್ಯಕ್ತವಾಗಿದ್ದು, ತನಿಖೆಗೆ ಅಗ್ರಹಿಸಿ ಜನವಾದಿ ಮಹಿಳಾ ಸಂಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಮೇ 27ರಂದು ದೂರು ದಾಖಲಿಸಿದೆ.
ಇದನ್ನೂ ಓದಿ : ಯಡಿಯೂರಪ್ಪ ವಿರುದ್ಧ ಪೋಕ್ಸೋ ದೂರು ದಾಖಲಿಸಿದ್ದ ಮಹಿಳೆ ದಿಢೀರ್ ಸಾವು: ತನಿಖೆಗೆ ಆಗ್ರಹಿಸಿದ ಜನವಾದಿ ಮಹಿಳಾ ಸಂಘಟನೆ


