ಪ್ರಧಾನಿ ಮೋದಿ ಇ-ರುಪಿ (ಎಲೆಕ್ಟ್ರಾನಿಕ್ ವೋಚರ್ ಆಧಾರಿತ ಡಿಜಿಟಲ್ ಪಾವತಿ) ವ್ಯವಸ್ಥೆಗೆ ಸೋಮವಾರ ಚಾಲನೆ ನೀಡಿದ್ದಾರೆ. e-RUPI ಡಿಜಿಟಲ್ ಪಾವತಿಯಾಗಿದ್ದು, ನಗದುರಹಿತ ಸಾಧನವಾಗಿದೆ. ಇದನ್ನು ಕ್ಯೂಆರ್ ಕೋಡ್ ಅಥವಾ ಎಸ್‌ಎಂಎಸ್ ಸ್ಟ್ರಿಂಗ್ ಮೂಲಕ ಹಣವನ್ನು ಸ್ವೀಕೃತಿದಾರರ ಮೊಬೈಲ್ ಫೋನ್‌ಗಳಿಗೆ ವರ್ಗಾಯಿಸಬಹುದು.
ಬಳಕೆದಾರರು ಕಾರ್ಡ್, ಡಿಜಿಟಲ್ ಪಾವತಿ ಅಪ್ಲಿಕೇಶನ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್‌ಗೆ ಹೋಗದೆಯೇ ಸೇವಾ ಪೂರೈಕೆದಾರರಿಂದ ವೋಚರ್ ಅನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.
ಇದನ್ನು ರಾಷ್ಟ್ರೀಯ ಪಾವತಿಗಳ ನಿಗಮವು (National Payment Corporation of India – NPCI) ತನ್ನ ಏಕೀಕೃತ ಪಾವತಿ ಇಂಟರ್ಫೇಸ್ (UPI) ವೇದಿಕೆಯ ಮೂಲಕ ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದೆ.
ಇದನ್ನೂ ಓದಿ: ಪೆಗಾಸಸ್ ತನಿಖೆಗೆ ಆಗ್ರಹಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್!
ಪ್ರಧಾನಮಂತ್ರಿ ಕಚೇರಿ(ಪಿಎಂಒ)ಯು ಇತ್ತೀಚೆಗೆ ನೀಡಿದ ಹೇಳಿಕೆಯಲ್ಲಿ ಇ-ರುಪಿ ಅನ್ನು ತಾಯಿ ಮತ್ತು ಮಕ್ಕಳ ಕಲ್ಯಾಣ ಯೋಜನೆ, ಔಷಧಗಳು ಮತ್ತು ರೋಗನಿರ್ಣಯಗಳ ಪೂರೈಕೆ, ಟಿಬಿ ನಿರ್ಮೂಲನೆ ಕಾರ್ಯಕ್ರಮಗಳು, ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಗಳ ಅಡಿಯಲ್ಲಿ ಔಷಧಗಳು ಮತ್ತು ಪೌಷ್ಠಿಕಾಂಶಗಳನ್ನು ಒದಗಿಸುವ ಯೋಜನೆಗಳ ಅಡಿಯಲ್ಲಿ ಸೇವೆಗಳನ್ನು ನೀಡಲು ಮತ್ತು ರಸಗೊಬ್ಬರ ಸಹಾಯಧನ ಸೇರಿದಂತೆ ಇತರ ಪ್ರಮುಖ ಯೋಜನೆಗಳಲ್ಲಿ ಬಳಸಬಹುದು ಎಂದು ಹೇಳಿದೆ.
ಖಾಸಗಿ ವಲಯವೂ ಸಹ ಈ ಡಿಜಿಟಲ್ ವೋಚರ್‌ಗಳನ್ನು ತಮ್ಮ ಉದ್ಯೋಗಿಗಳ ಕಲ್ಯಾಣ ಮತ್ತು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮಗಳ ಭಾಗವಾಗಿ ಬಳಸಿಕೊಳ್ಳಬಹುದು ಎಂದು ಪಿಎಂಒ ತಿಳಿಸಿದೆ.
ಇ-ರುಪಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಮೋದಿ, ಸರ್ಕಾರದಿಂದ ನೇರ ಲಾಭ ವರ್ಗಾವಣೆ (ಡಿಬಿಟಿ) ಯೋಜನೆಯನ್ನು ಬಲಪಡಿಸುವಲ್ಲಿ ಇ-ರುಪಿ ವೋಚರ್ ಪ್ರಮುಖ ಪಾತ್ರ ವಹಿಸಲಿದೆ. ಎಲ್ಲರಿಗೂ ಉದ್ದೇಶಿತ, ಪಾರದರ್ಶಕ ಮತ್ತು ಸೋರಿಕೆ ರಹಿತ ವಿತರಣೆಯನ್ನು ಖಾತ್ರಿಪಡಿಸಿಕೊಳ್ಳಲು ಇ-ರೂ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆಗಸ್ಟ್ 5 ರಂದು ಬಿಜೆಪಿ ಸೇರಲಿರುವ ಉಚ್ಚಾಟಿತ ಬಿಎಸ್‌ಪಿ ಶಾಸಕ ಎನ್. ಮಹೇಶ್
ತಂತ್ರಜ್ಞಾನವನ್ನು ಬಡವರಿಗೆ ಸಹಾಯ ಮಾಡುವ ಸಾಧನವಾಗಿ ಬಳಸಲಾಗುತ್ತಿದೆ. ಡಿಬಿಟಿಯಲ್ಲಿ ತಂತ್ರಜ್ಞಾನವು ಪಾರದರ್ಶಕತೆಯನ್ನು ತರುತ್ತಿದೆ ಎಂದು ಅವರು ಹೇಳಿದ್ದಾರೆ.
ತಂತ್ರಜ್ಞಾನ ಅಳವಡಿಕೆ ಕುರಿತು ಮಾತನಾಡಿದ ಮೋದಿ, ಭಾರತವು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಮುನ್ನುಗ್ಗುತ್ತಿದೆ ಎಂಬುದನ್ನು ಜಗತ್ತಿಗೆ ತೋರಿಸುತ್ತಿದೆ. ಸೇವೆಗಳ ವಿತರಣೆಯಲ್ಲಿ ಆವಿಷ್ಕಾರಗಳು ಅಥವಾ ತಂತ್ರಜ್ಞಾನದ ಬಳಕೆಯಲ್ಲಿ ಭಾರತವು ಜಾಗತಿಕ ನಾಯಕ ಸ್ಥಾನಕ್ಕೇರಲು ಸಮರ್ಥವಾಗಿದೆ ಎಂದು ಹೇಳಿದ್ದಾರೆ.
ಕಳೆದ 6-7 ವರ್ಷಗಳಲ್ಲಿ ದೇಶದಾದ್ಯಂತ ಡಿಜಿಟಲ್ ಮೂಲಸೌಕರ್ಯ ಮತ್ತು ಡಿಜಿಟಲ್ ವಹಿವಾಟು ಕ್ಷೇತ್ರದಲ್ಲಾದ ಕೆಲಸವನ್ನು ಇಂದು ವಿಶ್ವವು ಶ್ಲಾಘಿಸುತ್ತಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಎಲ್‌ಪಿಜಿ, ಪಡಿತರ, ಪಿಂಚಣಿ ಸೇರಿದಂತೆ 300 ಯೋಜನೆಗಳ ಪ್ರಯೋಜನಗಳನ್ನು ನೇರವಾಗಿ ಫಲಾನುಭವಿಗಳಿಗೆ ಒದಗಿಸಲು ಸರ್ಕಾರವು ನೇರ ಲಾಭ ವರ್ಗಾವಣೆಯನ್ನು ಬಳಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಆಗಸ್ಟ್ 5 ರಂದು ಬಿಜೆಪಿ ಸೇರಲಿರುವ ಉಚ್ಚಾಟಿತ ಬಿಎಸ್‌ಪಿ ಶಾಸಕ ಎನ್. ಮಹೇಶ್


