ಹಿಮಾಚಲ ಪ್ರದೇಶದ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಕಾಂಗ್ರೆಸ್ ಸರ್ಕಾರವನ್ನು ಹಣಬಲದ ಮೂಲಕ ಪತನಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಂಪೂರ್ಣ ಪ್ರಯತ್ನ ನಡೆಸಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಕಾಂಗ್ರಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆನಂದ್ ಶರ್ಮಾ ಪರ ಚಂಬಾದಲ್ಲಿ ಪ್ರಚಾರ ನಡೆಸುತ್ತಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, “ಕಾಂಗ್ರೆಸ್ 55 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಶ್ರೀಮಂತ ಪಕ್ಷವಾಗಲು ಸಾಧ್ಯವಾಗಲಿಲ್ಲ” ಎಂದು ಹೇಳಿದರು.
“ಮತ್ತೊಂದೆಡೆ, ಬಿಜೆಪಿ ಕೇವಲ 10 ವರ್ಷಗಳಲ್ಲಿ ವಿಶ್ವದ ಅತ್ಯಂತ ಶ್ರೀಮಂತ ಪಕ್ಷವಾಗಿದೆ. ಭ್ರಷ್ಟಾಚಾರ ಮತ್ತು ಹಣ ಬಲದ ಮೂಲಕ ರಾಜ್ಯದಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಮೋದಿ ಸರ್ವಪ್ರಯತ್ನ ನಡೆಸಿದ್ದಾರೆ” ಎಂದು ಪ್ರಿಯಾಂಕಾ ಗಾಂಧಿ ರ್ಯಾಲಿಯಲ್ಲಿ ಹೇಳಿದರು.
“ಅಂತಹ ನಾಯಕ ನಿಮಗೆ ಬೇಕೇ” ಎಂದು ಜನರನ್ನು ಪ್ರಶ್ನಿಸಿದ ಅವರು, “ಯಾವುದೇ ಬೆಲೆ ತೆತ್ತಾದರೂ ಅಧಿಕಾರ ಹಿಡಿಯುವುದೇ ಬಿಜೆಪಿ ನಾಯಕರ ಉದ್ದೇಶವಾಗಿದ್ದು, ಭ್ರಷ್ಟಚಾರ, ಹಣಬಲ, ಶಾಸಕರಿಗೆ ಲಂಚ ನೀಡಿ ದೇವರ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುವ ಉದ್ದೇಶವಿದೆ” ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ತಮ್ಮ ಭಾಷಣದ ಸಮಯದಲ್ಲಿ, ಕಾಂಗ್ರೆಸ್ ನಾಯಕಿ ರಾಜ್ಯದೊಂದಿಗೆ ಅವರ ಬಾಂಧವ್ಯದ ಬಗ್ಗೆ ಮಾತನಾಡಿದರು.
“ನನ್ನ ಹೃದಯ ಹಿಮಾಚಲ ಪ್ರದೇಶದಲ್ಲಿದೆ. ಇದು ಸುಂದರವಾದ ರಾಜ್ಯ, ಸಂಸ್ಕೃತಿ ಮತ್ತು ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದೆ. ಹಿಮಾಚಲ ಪ್ರದೇಶದಿಂದ ದೇಶವು ಕಲಿಯಬೇಕು” ಎಂದು ಅವರು ಹೇಳಿದರು.
ಇದನ್ನೂ ಓದಿ; ಆರೋಗ್ಯದ ಆಧಾರದ ಮೇಲೆ ಮಧ್ಯಂತರ ಜಾಮೀನು ವಿಸ್ತರಿಸುವಂತೆ ಸುಪ್ರೀಂ ಮೆಟ್ಟಿಲೇರಿದ ಕೇಜ್ರಿವಾಲ್


