ಜನವರಿ 5, 2022ರಂದು ಪ್ರಧಾನಿ ನರೇಂದ್ರ ಮೋದಿಯವರ ಪಂಜಾಬ್ ಭೇಟಿ ವೇಳೆ ಸಂಭವಿಸಿದ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಫಿರೋಝ್‌ಪುರ ಜಿಲ್ಲೆಯ ಭಾರತಿ ಕಿಸಾನ್ ಯೂನಿಯನ್ (ಕ್ರಾಂತಿಕಾರಿ) ಮತ್ತು ಕ್ರಾಂತಿಕಾರಿ ಪೆಂಡು ಮಝ್ದೂರ್ ಯೂನಿಯನ್‌ನ 25 ಸದಸ್ಯರ (ರೈತರ) ವಿರುದ್ಧ ಬಂಧನ ವಾರೆಂಟ್ ಜಾರಿಯಾಗಿದೆ ಎಂದು ವರದಿಯಾಗಿದೆ.
ಫಿರೋಝ್‌ಪುರದಲ್ಲಿ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಬೇಕಿದ್ದ ಪ್ರಧಾನಿ ನರೇಂದ್ರ ಮೋದಿ, ಪಿಯರೇನಾ ಫ್ಲೈಓವರ್‌ನಲ್ಲಿ ರೈತರು ಪ್ರತಿಭಟನೆ ಹಮ್ಮಿಕೊಂಡಿದ್ದ ಕಾರಣ ಕೆಲ ಹೊತ್ತು ರಸ್ತೆಯಲ್ಲೇ ಬಾಕಿ ಆಗಿದ್ದರು. ಬಳಿಕ ಅವರು ಹಿಂದಿರುಗಿದ್ದರು.
ಈ ಘಟನೆ ಸಂಬಂಧ ಜನವರಿ 6, 2022ರಂದು ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 283 (ಸಾರ್ವಜನಿಕ ದಾರಿಯಲ್ಲಿ ಅಡಚಣೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಇದು ಜಾಮೀನು ನೀಡಬಹುದಾದ ಅಪರಾಧವಾಗಿದೆ.
ನಂತರ ದುರ್ಬಲ ಎಫ್‌ಐಆರ್ ಬಗ್ಗೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ, ಪ್ರಕರಣದ ತನಿಖೆಗೆ ಮೂವರು ಸದಸ್ಯರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿತ್ತು. ಆ ತಂಡದ ತನಿಖೆಯ ಆಧಾರದ ಮೇಲೆ, ಐಪಿಸಿ ಸೆಕ್ಷನ್ 307 (ಕೊಲೆ ಯತ್ನ), 353 (ಸಾರ್ವಜನಿಕ ಸೇವಕನ ಮೇಲೆ ಹಲ್ಲೆ), 341 (ಸಂಯಮ ಮೀರಿ ವರ್ತಿಸುವುದು), 186 (ಕರ್ತವ್ಯಕ್ಕೆ ಅಡ್ಡಿ), 149 (ಅಕ್ರಮ ಸಭೆ) ಮತ್ತು ರಾಷ್ಟ್ರೀಯ ಹೆದ್ದಾರಿ ಕಾಯ್ದೆಯ 8-ಬಿ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಹೆಚ್ಚುವರಿ ಆರೋಪಗಳನ್ನು ಹೊರಿಸಲಾಗಿದೆ.
ಭಾರತಿ ಕಿಸಾನ್ ಯೂನಿಯನ್ (ಬಿಕೆಯು) ಕ್ರಾಂತಿಕಾರಿಯ ಪ್ರಧಾನ ಕಾರ್ಯದರ್ಶಿ ಬಲದೇವ್ ಸಿಂಗ್ ಝಿರಾ ಮತ್ತು ಕ್ರಾಂತಿಕಾರಿ ಪೆಂಡು ಮಝ್ದೂರ್ ಒಕ್ಕೂಟದ ಇತರ ಸದಸ್ಯರು ಮತ್ತು ನಾಯಕರು ಸೇರಿದಂತೆ 26 ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆದಾಗ್ಯೂ, ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಆರೋಪಿಗಳಲ್ಲಿ ಒಬ್ಬರಾದ ಮೇಜರ್ ಸಿಂಗ್ ನಿಧನರಾಗಿದ್ದು, 25 ವ್ಯಕ್ತಿಗಳು ಬಂಧನದ ಭೀತಿಯಲ್ಲಿದ್ದಾರೆ.
ಜನವರಿ 3,2025ರಂದು ಫಿರೋಝ್‌ಪುರ ನ್ಯಾಯಾಲಯ ಹೊರಡಿಸಿದ ಬಂಧನ ವಾರೆಂಟ್‌ಗಳ ಪ್ರಕಾರ, ಆರೋಪಿಗಳು ಅನೇಕ ಸಮನ್ಸ್ ಮತ್ತು ವಾರೆಂಟ್‌ಗಳನ್ನು ನೀಡಿದ್ದರೂ ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾಗಿದ್ದಾರೆ. ಜನವರಿ 22ರೊಳಗೆ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಕುಲ್‌ಗಢಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿಗೆ ಸೂಚಿಸಲಾಗಿದೆ.
ಫಿರೋಝ್‌ಪುರ ಪೊಲೀಸರು ಬಂಧನ ವಾರೆಂಟ್ ಹೊರಡಿಸಿರುವುದನ್ನು ದೃಢಪಡಿಸಿದ್ದಾರೆ. ಆರೋಪಿಗಳನ್ನು ಬಂಧಿಸುವ ಕಾರ್ಯ ನಡೆಯುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ಆರೋಪಿಗಳಲ್ಲಿ ಒಬ್ಬರಾದ ಪಿಯರೇನಾದ ಕಮಲ್‌ಜೀತ್ ಸಿಂಗ್ (37) ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಜನವರಿ 14 ರಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ವರೀಂದರ್ ಅಗರ್ವಾಲ್ ಅವರು ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಪಂಜಾಬ್ ಪೊಲೀಸರು ಆರೋಪಿಗಳಿಗೆ ಬಂಧನ ವಾರೆಂಟ್‌ಗಳನ್ನು ಕಳುಹಿಸುತ್ತಿದ್ದಾರೆ. ಅವರ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ, ತನಿಖೆಗೆ ಸಹಕರಿಸಲು ಕುಟುಂಬ ಸದಸ್ಯರ ಮೇಲೆ ಒತ್ತಡ ಹೇರುತ್ತಿದ್ದಾರೆ. ಪ್ರತಿಭಟನಾ ನಿರತ ರೈತರನ್ನು ಗುರಿಯಾಗಿಸಲು ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಇದನ್ನು ಮಾಡಲಾಗುತ್ತಿದೆ” ಎಂದು ಬಿಕೆಯು ಕ್ರಾಂತಿಕಾರಿಯ ಅಧ್ಯಕ್ಷ ಸುರ್ಜೀತ್ ಸಿಂಗ್ ಫುಲ್ ಆರೋಪಿಸಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.
“ರೈತರನ್ನು ಗುರಿಯಾಗಿಸಬೇಡಿ ಎಂದು ನಾವು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. ಮೇಲ್ಸೇತುವೆಯಲ್ಲಿ (ಪಿಯರೇನಾ ಫ್ಲೈಓವರ್) ಯಾವುದೇ ಘರ್ಷಣೆ ನಡೆದಿಲ್ಲವಾದ್ದರಿಂದ ಕೊಲೆ ಯತ್ನದ ಆರೋಪಗಳು ಆಧಾರರಹಿತವಾಗಿವೆ. ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕರೆಯ ಮೇರೆಗೆ ನಾವು ಪ್ರಧಾನಿಯವರ ಭೇಟಿಯ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದೆವು. ಎಫ್‌ಐಆರ್ ಮತ್ತು ನಂತರದ ಕ್ರಮವು ರೈತ ಒಕ್ಕೂಟದ ನಾಯಕರನ್ನು ಬೆದರಿಸಲು ಕೇಂದ್ರ ಸರ್ಕಾರದ ಒತ್ತಡದ ಪರಿಣಾಮವಾಗಿದೆ” ಎಂದು ಸುರ್ಜೀತ್ ಸಿಂಗ್ ಕಿಡಿಕಾರಿದ್ದಾರೆ.
ಜಾತ್ಯತೀತತೆ ಸಂರಕ್ಷಣೆಗೆ ಆರಾಧನಾ ಸ್ಥಳಗಳ ಕಾಯ್ದೆ ಅಗತ್ಯ : ಸುಪ್ರೀಂ ಮೊರೆ ಹೋದ ಕಾಂಗ್ರೆಸ್


