ಮಣಿಪುರದ ವಿಚಾರದಲ್ಲಿ ಪ್ರಧಾನಿ ಮೋದಿಯವರ ವೈಫಲ್ಯ ಅಕ್ಷಮ್ಯ, ಒಪ್ಪುವಂತದಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
ಎಕ್ಸ್‌ನಲ್ಲಿ ಸುದೀರ್ಘ ಪೋಸ್ಟ್ ಹಾಕಿ ಪ್ರಧಾನಿ ಮೋದಿ ಹಾಗೂ ಒಕ್ಕೂಟ ಸರ್ಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಮಣಿಪುರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಪಕ್ಷದ ಕೆಲ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಮಣಿಪುರದ ಮಾಜಿ ರಾಜ್ಯಪಾಲೆ ಅನುಸೂಯಾ ಉಯಿಕೆ ಅವರು ಅಲ್ಲಿನ ಜನರ ಪರ ಧ್ವನಿ ಎತ್ತಿದ್ದಾರೆ. “ಸಂಘರ್ಷ ಪೀಡಿತ ರಾಜ್ಯದ ಜನರು ಅಸಮಾಧಾನಗೊಂಡಿದ್ದಾರೆ ಮತ್ತು ದುಃಖಿತರಾಗಿದ್ದಾರೆ. ಪ್ರಧಾನಿ ಮೋದಿಯವರನ್ನು ಭೇಟಿಯಾಗಬೇಕೆಂದು ಅವರು ಬಯಸಿದ್ದಾರೆ” ಎಂದು ಹೇಳಿದ್ದಾರೆ ಎಂಬುವುದಾಗಿ ಖರ್ಗೆ ಬರೆದುಕೊಂಡಿದ್ದಾರೆ.
“ಮಣಿಪುರದಲ್ಲಿ ಹಿಂಸಾಚಾರ ಅವ್ಯಾಹತವಾಗಿ ಮುಂದುವರಿದಿದ್ದರೂ, ಮೋದಿ-ಶಾ ಸಹಭಾಗಿತ್ವದ ಪರಿಣಾಮಗಳನ್ನು ಜನರು ಅನುಭವಿಸುತ್ತಿದ್ದರೂ, ಕಳೆದ 16 ತಿಂಗಳಲ್ಲಿ ಪ್ರಧಾನಿ ಮೋದಿಯವರು ಒಂದೇ ಒಂದು ಸೆಕೆಂಡ್ ಅನ್ನು ಕೂಡ ಮಣಿಪುರದಲ್ಲಿ ಕಳೆದಿಲ್ಲ. ಮಣಿಪುರದ ಬಿಜೆಪಿ ಸಿಎಂ ರಾಜ್ಯಕ್ಕೆ ಸೇನೆಯನ್ನು ಆಹ್ವಾನಿಸಿದ್ದಾರೆ. ಈ ಮೂಲಕ ತನ್ನ ಸ್ಥಾನದ ಅಸಮರ್ಥತೆಯನ್ನು ನಾಚಿಕೆಯಿಲ್ಲದೆ ತೋರ್ಪಡಿಸಿದ್ದಾರೆ” ಎಂದು ಖರ್ಗೆ ಕಿಡಿಕಾರಿದ್ದಾರೆ.
PM Modi's abject failure in Manipur is unforgivable.
1. Former Manipur Governor, Anusuiya Uikey ji has echoed the voice of the people of Manipur. She said that people of the strife-torn state are upset and sad, for they wanted PM Modi to visit them.
In the past 16 months, PM…
— Mallikarjun Kharge (@kharge) September 9, 2024
“ಏಕೀಕೃತ ಕಮಾಂಡ್ ಮಣಿಪುರದಲ್ಲಿ ಭದ್ರತಾ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದೆ. ಪ್ರಸ್ತುತ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು, ರಾಜ್ಯ ಭದ್ರತಾ ಸಲಹೆಗಾರರು ಮತ್ತು ಭಾರತೀಯ ಸೇನೆಯ ತಂಡವು ಅಲ್ಲಿನ ಭದ್ರತೆ ನೋಡಿಕೊಳ್ಳುತ್ತಿದೆ. ಪ್ರಧಾನಮಂತ್ರಿಯವರಂತೆಯೇ, ಕೇಂದ್ರ ಗೃಹ ಸಚಿವರೂ ಕೂಡ ಮಣಿಪುರದಲ್ಲಿ ಭದ್ರತೆಯನ್ನು ಖಾತ್ರಿಪಡಿಸುವ ತಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನು ಬಿಟ್ಟುಕೊಟ್ಟಿದ್ದಾರೆ. ರಾಜ್ಯಗಳ ಚುನಾವಣಾ ರ್‍ಯಾಲಿಗಳಲ್ಲಿ ಅವರು ನಿರತರಾಗಿದ್ದಾರೆ” ಎಂದು ಹೇಳಿದ್ದಾರೆ.
“ಡ್ರೋನ್ ಮತ್ತು ರಾಕೆಟ್-ಚಾಲಿತ ಗ್ರೆನೇಡ್ ದಾಳಿಗಳು ಪ್ರಾರಂಭವಾಗಿವೆ. ಇದು ಈಗ ರಾಷ್ಟ್ರೀಯ ಭದ್ರತೆಯ ಬೆದರಿಕೆಯಾಗಿ ಬದಲಾಗಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಬಿಜೆಪಿ ರಾಜೀನಾಮೆ ನಾಟಕವಾಡುತ್ತಿದೆ” ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷದ ವತಿಯಿಂದ ನಾಲ್ಕು ಬೇಡಿಕೆಗಳನ್ನು ಮಲ್ಲಿಕಾರ್ಜುನ ಖರ್ಗೆ ಒಕ್ಕೂಟ ಸರ್ಕಾರದ ಮುಂದಿಟ್ಟಿದ್ದಾರೆ. ಅವುಗಳು ಹೀಗಿವೆ…
1.ಮಣಿಪುರ ಸಿಎಂ ತಕ್ಷಣವೇ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು
2. ಕೇಂದ್ರ ಸರ್ಕಾರ ಸೂಕ್ಷ್ಮ ಭದ್ರತಾ ಪರಿಸ್ಥಿತಿಯ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ರಾಜ್ಯ ಪಡೆಗಳ ಸಹಾಯದಿಂದ ಎಲ್ಲಾ ರೀತಿಯ ದಂಗೆಕೋರ ಗುಂಪುಗಳನ್ನು ದಮನ ಮಾಡಬೇಕು.
3. ಜನಾಂಗೀಯ ಹಿಂಸಾಚಾರದ ತನಿಖೆಗೆ ಆಯೋಗ ರಚಿಸಬೇಕು ಮತ್ತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ಮಾಡಬೇಕು. ಹಿಂಸಾಚಾರದ ತನಿಖೆ ನಡೆಸುತ್ತಿರುವ ಸಿಬಿಐ, ಎನ್‌ಐಎ ಮತ್ತು ಇತರ ಏಜೆನ್ಸಿಗಳನ್ನು ಮೋದಿ ಸರ್ಕಾರ ದುರುಪಯೋಗಪಡಿಸಿಕೊಳ್ಳಬಾರದು.
4. ರಾಜಕೀಯ ಪಕ್ಷಗಳು, ಪ್ರತಿನಿಧಿಗಳು ಮತ್ತು ಸಮುದಾಯಗಳ ಸದಸ್ಯರ ಸಮಿತಿ ಮಂಡಳಿ ರಚಿಸಬೇಕು. ಮಣಿಪುರದಲ್ಲಿ ಶಾಂತಿ ಸ್ಥಾಪಿಸಿ, ಸಹಜ ಸ್ಥಿತಿಯನ್ನು ಮರಳಿ ತರಬೇಕು. ಈ ಪ್ರಯತ್ನಗಳು ತಕ್ಷಣ ಪ್ರಾರಂಭಿಸಬೇಕು.
ರಾಜ್ಯದಲ್ಲಿ ಹಿಂಸಾಚಾರ ಕೊನೆಗೊಳಿಸಲು ಮೋದಿಯವರು ಏಕೆ ಮುಂದಾಗುತ್ತಿಲ್ಲ ಎಂದು ರಾಜ್ಯದ ಜನತೆ ಕೇಳುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಇದನ್ನೂ ಓದಿ : ದೇಶದ ರಾಜಕೀಯದಲ್ಲಿ ಪ್ರೀತಿ, ಗೌರವ, ನಮ್ರತೆ ಕಾಣೆಯಾಗಿದೆ: ರಾಹುಲ್ ಗಾಂಧಿ


