ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 197(1) ಅಡಿಯಲ್ಲಿ ಸರ್ಕಾರಿ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲು ಸರ್ಕಾರದ ಪೂರ್ವಾನುಮತಿ ಅಗತ್ಯವಾಗಿದ್ದು, ಇದೆ ನಿಯಮ ಮನಿ ಲಾಂಡರಿಂಗ್ ತಡೆ ಕಾಯ್ದೆ ( PMLA ) ಯ ಮನಿ ಲಾಂಡರಿಂಗ್ ಪ್ರಕರಣಗಳಿಗೂ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ಬುಧವಾರ ಲೈವ್ ಲಾ ವರದಿ ಮಾಡಿದೆ.
ಮಾಜಿ ಐಎಎಸ್ ಅಧಿಕಾರಿಗಳಾದ ಬಿಭು ಪ್ರಸಾದ್ ಆಚಾರ್ಯ ಮತ್ತು ಆದಿತ್ಯನಾಥ್ ದಾಸ್ ವಿರುದ್ಧ ದಾಖಲಿಸಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ರದ್ದುಗೊಳಿಸಿದ ತೆಲಂಗಾಣ ಹೈಕೋರ್ಟ್‌ನ ತೀರ್ಪನ್ನು ನ್ಯಾಯಮೂರ್ತಿ ಅಭಯ್ ಓಕಾ ಮತ್ತು ನ್ಯಾಯಮೂರ್ತಿ ಅಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠವು ಎತ್ತಿ ಹಿಡಿದಿದೆ. ಇಬ್ಬರು ಮಾಜಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಪೂರ್ವಾನುಮತಿ ಪಡೆದಿಲ್ಲ ಎಂದು ಪೀಠ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಜೊತೆಗೆ ನಡೆಸಿದ ಪಿತೂರಿಯಲ್ಲಿ ಆಚಾರ್ಯ ಅವರು ಇಂದೂ ಟೆಕ್ಜೋನ್ ಪ್ರೈವೇಟ್ ಲಿಮಿಟೆಡ್‌ಗೆ ವಿಶೇಷ ಆರ್ಥಿಕ ವಲಯ ಯೋಜನೆಗಾಗಿ 250 ಎಕರೆ ಭೂಮಿಯನ್ನು ಕಾನೂನುಬಾಹಿರವಾಗಿ ಮಂಜೂರು ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿತ್ತು. ಹಣ ಅಕ್ರಮ ವರ್ಗಾವಣೆಯಲ್ಲಿ ಪರೋಕ್ಷವಾಗಿ ಭಾಗಿಯಾಗಿರುವ ಆರೋಪ ಕೂಡಾ ಆಚಾರ್ಯ ಅವರ ಮೇಲಿದೆ. PMLA
ಜೊತೆಗೆ ಆಗ ತೆಲಂಗಾಣದ ನೀರಾವರಿ ಮತ್ತು ಸಿಎಡಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ದಾಸ್ ಅವರು ಕಾಗ್ನಾ ನದಿಯಿಂದ ಇಂಡಿಯಾ ಸಿಮೆಂಟ್ ಲಿಮಿಟೆಡ್‌ಗೆ ಹೆಚ್ಚುವರಿ 10 ಲಕ್ಷ ಲೀಟರ್ ನೀರನ್ನು ಅಕ್ರಮವಾಗಿ ಹಂಚಿಕೆ ಮಾಡಲು ಜಗನ್ಮೋಹನ್ ರೆಡ್ಡಿ ಅವರೊಂದಿಗೆ ಸಂಚು ರೂಪಿಸಿದ್ದರು ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
2019ರ ಜನವರಿ 21 ರಂದು ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ಇಲ್ಲದಿರುವುದನ್ನು ಸೂಚಿಸಿದ್ದ ತೆಲಂಗಾಣ ಹೈಕೋರ್ಟ್ ಮೊಕದ್ದಮೆಯನ್ನು ರದ್ದುಗೊಳಿಸಲು ಅನುಮತಿ ನೀಡಿತ್ತು. ಆದರೆ ಈ ತೀರ್ಪಿನ ವಿರುದ್ಧ ಜಾರಿ ನಿರ್ದೇಶನಾಲಯವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಮನಿ ಲಾಂಡರಿಂಗ್ ತಡೆ ಕಾಯಿದೆಯ 71ನೇ ಸೆಕ್ಷನ್, ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೇರಿದಂತೆ ಇತರ ಕಾನೂನುಗಳಿಗಿಂತ ಆದ್ಯತೆ ಇವೆ ಎಂದು ಅದು ವಾದಿಸಿದೆ. ಆದರೆ ನ್ಯಾಯಾಲಯವು ಜಾರಿ ನಿರ್ದೇಶನಾಲಯದ ಈ ವಾದವನ್ನು ನಿರಾಕರಿಸಿದೆ.


