ದಲಿತ-ಬಂಡಾಯ ಕವಿ, ಸಂಶೋಧಕ, ವಿಮರ್ಶಕ, ಸಂಘಟನಾಕಾರ, ಅನುವಾದಕಾರ ಲಕ್ಕೂರು ಆನಂದ ಅವರು ಮೇ 20ರಂದು ನಿಧನ ಹೊಂದಿದ್ದಾರೆ.
ಲಕ್ಕೂರು ಆನಂದ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ, ಆಂಧ್ರದ ಶ್ರೀ ಶ್ರೀ ಕಾವ್ಯ, ದೆಹಲಿಯ ದಲಿತ ಸಾಹಿತ್ಯ ಪರಿಷತ್ತು ಪ್ರಶಸ್ತಿ, ದು ನಿಂ ಬೆಳಗಲಿ ಪ್ರಶಸ್ತಿ, ವಿಭಾ ಸಾಹಿತ್ಯ ಪ್ರಶಸ್ತಿ, ಕಡೆಂಗೋಡ್ಲು ಶಂಕರಭಟ್ಟ ಪ್ರಶಸ್ತಿ, ಡಾ ತಿಪ್ಪೇರುದ್ರ ಸ್ವಾಮಿ ಪ್ರಶಸ್ತಿ ಲಭಿಸಿದೆ. ತಮಗೆ ಬಂದ ಪ್ರಶಸ್ತಿಗಳನ್ನು ಅವರು, ‘ರಾಜ್ಯದ ಎಲ್ಲಾ ದಮನಿತ ಸಮುದಾಯಗಳಿಗೆ’ ಅರ್ಪಿಸಿದ್ದಾರೆ.
ಊರಿಂದ ಊರಿಗೆ, ಇಪ್ಪತ್ತರ ಕಲ್ಲಿನ ಮೇಲೆ, ಬಟವಾಡೆಯಾಗದ ರಸೀತಿ, ಇತಿ ನಿನ್ನ ವಿಧೇಯನು, ಉರಿವ ಏಕಾಂತ ದೀಪ ಇವರ ಕವನ ಸಂಕಲನಗಳು. ಸ್ಮೃತಿ ಕಿಣಾನ್ತಂ, ಕೊನೆ ಬ್ರಾಹ್ಮಣ, ಆಕಾಶ ದೇವರ, ನಗ್ನ ಮುನಿಯ ಸಮಗ್ರ ಕಥೆಗಳು, ಅರುದ್ರ ಇವರ ಅನುವಾದಿತ ಕೃತಿಗಳು.
ಗುಲ್ಬರ್ಗ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕ ವಿಕ್ರಮ್ ವಿಸಾಜಿ ಘಟನೆ ಬಗ್ಗೆ ದುಃಖವನ್ನು ವ್ಯಕ್ತಪಡಿಸಿ ನಾನುಗೌರಿ.ಕಾಂ ಜೊತೆ ಮಾತನಾಡಿದ್ದು, ಲಕ್ಕೂರು ಆನಂದ ಅವರು ಗುಲ್ಬರ್ಗ ವಿವಿಯಲ್ಲಿ ಡಾ. ವಿಜಯ್ ಕುಮಾರ್ ಅವರ ಅಧೀನದಲ್ಲಿ ಪಿಹೆಚ್‌ಡಿ ಮಾಡುತ್ತಿದ್ದರು. ನಾವು ಘಟನಾ ಸ್ಥಳಕ್ಕೆ ತೆರಳಿದ್ದೆವು, ಮೃತದೇಹವನ್ನು ಇದೀಗ ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿದೆ. ಅವರು ಉತ್ತಮ ಕವಿ, ಉತ್ತಮ ಅನುವಾದಕ ಮತ್ತು ಅಮೋಘ ಪ್ರತಿಭೆಯನ್ನು ಹೊಂದಿದ್ದರು. ತೆಲಗು ಕವಿ ಚಲಂ ಅವರ ಪತ್ರಗಳನ್ನು ಉತ್ತಮವಾಗಿ ಅನುವಾದ ಮಾಡಿದ್ದರು, ಬಹಳ ಆತ್ಮೀಯರಾಗಿದ್ದರು, ಅವರ ಅಗಲಿಕೆಯಿಂದ ಅಪಾರ ನೋವು ಉಂಟಾಗಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ‘ಇತರರು ಇನ್ನೂ ಅನಿಶ್ಚಿತತೆಯ ಜೀವನದಲ್ಲಿ ಬಳಲುತ್ತಿದ್ದಾರೆ’: ಬಿಡುಗಡೆ ಬಳಿಕ ದುಃಖ ವ್ಯಕ್ತಪಡಿಸಿದ ಗೌತಮ್ ನವಲಾಖಾ


