ಹೆತ್ತ ತಾಯಿ ಮೇಲೆ ಎರಡು ಬಾರಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ದೆಹಲಿಯ ಹೌಜ್ ಖಾಝಿ ಪ್ರದೇಶದಲ್ಲಿ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರನ್ನು ಭೇಟಿಯಾಗಿ ದೂರು ಸಲ್ಲಿಸಿದ ಸಂತ್ರಸ್ತೆ ತಾಯಿ, ತನ್ನ ಮಗ ಕೋಣೆಯಲ್ಲಿ ಕೂಡಿ ಹಾಕಿ ಬುರ್ಖಾ ಕಳಚುವಂತೆ ಒತ್ತಾಯಿಸಿ ಥಳಿಸಿದ್ದಾನೆ. ಅಲ್ಲದೆ, ಎರಡು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ.
“ದಶಕಗಳ ಹಿಂದೆ ನೀನು ವಿವಾಹೇತರ ಸಂಬಂಧ ಹೊಂದಿದ್ದೆ. ಅದಕ್ಕಾಗಿ ನಿನ್ನನ್ನು ಶಿಕ್ಷಿಸುತ್ತೀದ್ದೇನೆ” ಎಂದ ಮಗ ತನ್ನ ಮೇಲೆ ದೌರ್ಜನ್ಯ ನಡೆಸಿದ್ದಾನೆ” ಎಂದು 65 ವರ್ಷದ ತಾಯಿ ಆರೋಪಿಸಿದ್ದಾರೆ.
ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ ಪ್ರಕಾರ, ಆಕೆ ನಿವೃತ್ತ ಸರ್ಕಾರಿ ನೌಕರನಾಗಿರುವ ತನ್ನ ಪತಿ, ಮಗಳು ಮತ್ತು ಆರೋಪಿ ಮಗನ ಜೊತೆ ದೆಹಲಿಯ ಹೌಜ್ ಖಾಝಿ ಪ್ರದೇಶದಲ್ಲಿ ವಾಸಿಸುತ್ತಿದ್ದು, ಆಕೆಯ ದೊಡ್ಡ ಮಗಳು ಪಕ್ಕದಲ್ಲೇ ತನ್ನ ಗಂಡನ ಜೊತೆ ಪ್ರತ್ಯೇಕ ಮನೆ ಮಾಡಿದ್ದಾರೆ.
ಜುಲೈ 17ರಂದು, ಮಹಿಳೆ, ಆಕೆಯ ಪತಿ ಮತ್ತು ಕಿರಿಯ ಮಗಳು ಸೌದಿ ಅರೇಬಿಯಾಗೆ ಉಮ್ರಾ ಯಾತ್ರೆ ತೆರಳಿದ್ದರು. ಎಂಟು ದಿನಗಳ ನಂತರ, ಅವರು ಇನ್ನೂ ಸೌದಿಯಲ್ಲೇ ಇದ್ದಾಗ ಆರೋಪಿಯು ತನ್ನ ತಂದೆಗೆ ಪದೇ ಪದೇ ಕರೆ ಮಾಡಿ ದೆಹಲಿಗೆ ಮರಳುವಂತೆ ಒತ್ತಾಯಿಸಿದ್ದ.
ತನ್ನ ತಂದೆ ತಾಯಿಗೆ ವಿಚ್ಚೇದನ ನೀಡಬೇಕೆಂದು ಆತ ಬಯಸಿದ್ದ. ಇದಕ್ಕೆ ಆತ, ತನ್ನ ತಂಗಿ ಹುಟ್ಟುವ ಮೊದಲು ತಂದೆ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ತಾಯಿ ಪರ ಪುರುಷರೊಂದಿಗೆ ದೈಹಿಕ ಸಂಬಂಧ ಹೊಂದುತ್ತಿದ್ದರು ಎಂದು ಕಾರಣ ಕೊಟ್ಟಿದ್ದ.
ಆಗಸ್ಟ್ 1ರಂದು ಕುಟುಂಬವು ಸೌದಿ ಅರೇಬಿಯಾದಿಂದ ಮನೆಗೆ ಮರಳಿದಾಗ ಆರೋಪಿ ಮಗ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಮನೆಯ ಕೋಣೆಯಲ್ಲಿ ಕೂಡಿ ಹಾಕಿ ಬುರ್ಖಾ ಕಳಚುವಂತೆ ಒತ್ತಾಯಿಸಿ ಥಳಿಸಿದ್ದಾನೆ.ಆತ ತನ್ನ ಪತಿಗೆ ತನ್ನನ್ನು ಕೆಡಿಸಿದ್ದಾಗಿ ಹೇಳಿದ್ದಾನೆ ಎಂದು ಸಂತ್ರಸ್ತೆ ಮಹಿಳೆ ಆರೋಪಿಸಿದ್ದಾರೆ.
ಪೊಲೀಸರ ಪ್ರಕಾರ, ಆಗಸ್ಟ್ 11ರಂದು ಆರೋಪಿಯು ತನ್ನ ತಾಯಿಯೊಂದಿಗೆ ಖಾಸಗಿಯಾಗಿ ಮಾತನಾಡಬೇಕೆಂದು ಕುಟುಂಬ ಸದಸ್ಯರಿಗೆ ತಿಳಿಸಿದ್ದ. ಬಳಿಕ ಆಕೆಯನ್ನು ಮನೆಯ ಕೋಣೆಯಲ್ಲಿ ಕೂಡಿ ಹಾಕಿ ಅತ್ಯಾಚಾರ ಎಸಗಿದ್ದಾನೆ. ತಾಯಿ ಎಷ್ಟು ಬೇಡಿಕೊಂಡರೂ ಕೇಳದ ಆತ, “ದಶಕಗಳ ಹಿಂದೆ ಮಾಡಿದ ತಪ್ಪಿಗೆ ಶಿಕ್ಷಿಸುತ್ತಿದ್ದೇನೆ” ಎಂದು ದೌರ್ಜನ್ಯ ನಡೆಸಿದ್ದಾನೆ.
ಇದರಿಂದ ಭಯಭೀತರಾಗಿದ್ದ ಮಹಿಳೆ ಆರಂಭದಲ್ಲಿ ತನ್ನ ಹಿರಿಯ ಮಗಳ ಮನೆಯಲ್ಲಿ ಆಶ್ರಯ ಪಡೆದಿದ್ದರು. ಪರಿಸ್ಥಿತಿ ಹದಗೆಟ್ಟಾಗ ಮನೆಗೆ ಹಿಂತಿರುಗಿದ್ದರು.
ಆಗಸ್ಟ್ 14ರಂದು ಆರೋಪಿ ತನ್ನ ತಾಯಿ ಮಲಗಿದ್ದ ಕೋಣೆಗೆ ನುಗ್ಗಿ ಮತ್ತೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಮರುದಿನ, ಮಹಿಳೆ ತನ್ನ ಕಿರಿಯ ಮಗಳಿಗೆ ವಿಷಯ ತಿಳಿಸಿದ್ದು, ಪೊಲೀಸರನ್ನು ಸಂಪರ್ಕಿಸುವಂತೆ ಒತ್ತಾಯಿಸಿದ್ದಾರೆ.
ಬಳಿಕ ಮಗಳು ತಾಯಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಸಹೋದರ ವಿರುದ್ದ ದೂರು ದಾಖಲಿಸಿದ್ದಾರೆ. ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 64 (ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಬಿಹಾರದಲ್ಲಿ ‘ವೋಟರ್ ಅಧಿಕಾರ್’ ಯಾತ್ರೆಗೆ ಚಾಲನೆ ನೀಡಿದ ರಾಹುಲ್ ಗಾಂಧಿ: ದೇಶದಾದ್ಯಂತ ಮತಗಳ್ಳನ ನಡೆದಿದೆ ಎಂದು ಆರೋಪ


