ಬಿಜೆಪಿ ಶಾಸಕ ಮುನಿರತ್ನ ನಡೆಸಿದ್ದಾರೆ ಎನ್ನಲಾದ ಹನಿಟ್ರ್ಯಾಪ್‌ಗೆ ಸಹಕರಿಸಿದ ಆರೋಪದ ಮೇಲೆ ಬೆಂಗಳೂರಿನ ಹೆಬ್ಬಗೋಡಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಅಯ್ಯಣ್ಣ ರೆಡ್ಡಿ ಅವರನ್ನು ಸಿಐಡಿ ವಿಶೇಷ ತನಿಖಾ ದಳ (ಎಸ್‌ಐಟಿ)ದ ಪೊಲೀಸರು ಗುರುವಾರ (ನ.14) ಬಂಧಿಸಿ, ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗಲೇ ಎಸ್‌ಐಟಿ ಅಧಿಕಾರಿಗಳು ಅಯ್ಯಣ್ಣ ರೆಡ್ಡಿಅವರನ್ನು ಬಂಧಿಸಿದ್ದಾರೆ. ಬಳಿಕ, ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಪಡೆದಿದ್ದಾರೆ.
ಹನಿಟ್ರ್ಯಾಪ್‌ಗೆ ಇನ್‌ಸ್ಪೆಕ್ಟರ್ ನೆರವು ನೀಡಿದ್ದರು. ಅಲ್ಲದೆ, ಪ್ರಕರಣದ ಆರೋಪಿಗಳು ಕೆಲ ರಾಜಕಾರಣಿಗಳಿಗೆ ಏಡ್ಸ್ ಚುಚ್ಚುಮದ್ದು ಪ್ರಯೋಗಿಸಲು ಸಂಚು ರೂಪಿಸಿದ್ದು ಗೊತ್ತಿದ್ದರೂ, ಮಾಹಿತಿ ಮುಚ್ಚಿಟ್ಟಿದ್ದರು ಎಂದು ವರದಿಯಾಗಿದೆ.
ಮುನಿರತ್ನ ವಿರುದ್ದದ ಅತ್ಯಾಚಾರ, ಹನಿಟ್ರ್ಯಾಪ್ ಪ್ರಕರಣದ ಸಂತ್ರಸ್ತೆ ಮತ್ತು ಬಿಬಿಎಂಪಿ ಸದಸ್ಯ ವೇಲುನಾಯ್ಕರ್ ಅವರನ್ನು ಕೆಲ ದಿನಗಳ ಹಿಂದೆ ಎಸ್‌ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಇನ್‌ಸ್ಪೆಕ್ಟರ್ ಒಳಸಂಚು ರೂಪಿಸಿದ್ದ ಬಗ್ಗೆ ಮಾಹಿತಿ ಪಡೆದಿದ್ದರು. ಆ ಮಾಹಿತಿ ಆಧರಿಸಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಪ್ರಕರಣದ ಹಿನ್ನೆಲೆ : ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ದ ಬಿಬಿಎಂಪಿ ಗುತ್ತಿಗೆದಾರನಿಗೆ ಜಾತಿ ನಿಂದನೆ, ಅತ್ಯಾಚಾರ, ಹನಿಟ್ರ್ಯಾಪ್ ಸೇರಿದಂತೆ ಹಲವು ಆರೋಪಗಳಿವೆ. ಈ ಎಲ್ಲಾ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರ ಎಸ್ಐಟಿ ರಚಿಸಿದೆ.
ಬಿಬಿಎಂಪಿ ಗುತ್ತಿಗೆದಾರನಿಗೆ ಲಂಚಕ್ಕೆ ಬೇಡಿಕೆಯಿಟ್ಟು ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಸೆಪ್ಟೆಂಬರ್ 14ರಂದು ಮುನಿರತ್ನ ಅವರನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಮುನಿರತ್ನ, ಸೆಪ್ಟೆಂಬರ್ 20ರಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಮುನಿರತ್ನ ಜೈಲಿನಿಂದ ಹೊರಬರುತ್ತಿದ್ದಂತೆ ಅಲ್ಲೇ ಕಾದು ಕುಳಿತಿದ್ದ ರಾಮನಗರ ಜಿಲ್ಲೆ ಕಗ್ಗಲೀಪುರ ಠಾಣೆಯ ಪೊಲೀಸರು, ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧಿಸಿದ್ದರು. ಈ ಪ್ರಕರಣದಲ್ಲಿ ಅಕ್ಟೋಬರ್ 15ರಂದು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಹಾಗಾಗಿ, ಪ್ರಸ್ತುತ ಮುನಿರತ್ನ ಬಿಡುಗಡೆಯಾಗಿದ್ದಾರೆ. ಅವರ ವಿರುದ್ದದ ಪ್ರಕರಣಗಳ ತನಿಖೆ ಚುರುಕುಗೊಂಡಿದೆ.
ಇದನ್ನೂ ಓದಿ : ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ | ನವೆಂಬರ್ 20 ರಂದು ರಾಜ್ಯದಾದ್ಯಂತ ಮದ್ಯ ಮಾರಾಟ ಬಂದ್; ಪ್ರತಿಭಟನೆ


