ವಸತಿ ನಿಲಯದಲ್ಲಿ ದಲಿತ ಹೆಣ್ಣುಮಗಳೊಬ್ಬಳಿಗೆ ಹೆರಿಗೆಯಾಗಿದ್ದು, ಈ ಕುರಿತು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಅಧಿಕಾರಿಯೊಬ್ಬರು ಅವಹೇಳನಕಾರಿಯಾಗಿ ವಾಟ್ಸಾಪ್‌ನಲ್ಲಿ ಪ್ರತಿಕ್ರಿಯಿಸಿದ್ದು ಆಕ್ರೋಶಕ್ಕೆ ಗುರಿಯಾಗಿದೆ.
ವಿದ್ಯಾರ್ಥಿನಿಯೊಬ್ಬಳಿಗೆ ವಸತಿನಿಲಯದಲ್ಲಿ ಹೆರಿಗೆಯಾಗಿರುವ ಸುದ್ದಿಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಜಯರಾಮ್ ‘ಮಜಾ ಮಾಡಿ ಗೌಡ್ರೆ’ ಎಂದು ವಾಟ್ಸಾಪ್‌ನಲ್ಲಿ ಪ್ರತಿಕ್ರಿಯಿಸಿ ದಲಿತ ಹೆಣ್ಣು ಮಗಳಿಗೆ ಅವಹೇಳನ ಮಾಡಿದ್ದಾರೆ ಎಂದು ದಲಿತ ಸಂಘಟನೆಗಳ ಐಕ್ಯತಾ ಚಾಲನಾ ಸಮಿತಿ ಆರೋಪಿಸಿದೆ. ಪೊಲೀಸರು ಈ ಆರೋಪವನ್ನು ಅಲ್ಲಗೆಳೆದಿದ್ದಾರೆ.
ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿರುವ ಸಮಿತಿಯ ಮುಖಂಡರಾದ ದಂಟರಮಕ್ಕಿ ಶ್ರೀನಿವಾಸ್, ಅಂಗಡಿ ಚಂದ್ರು, ಮರ್ಲೆ ಅನ್ನಯ್ಯ ಪೊಲೀಸ್ ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ದಲಿತರಿಗೆ ವಸತಿ ನಿಲಯದಲ್ಲೂ ರಕ್ಷಣೆ ಇಲ್ಲದಂತಾಗಿದೆ. ವಿದ್ಯಾರ್ಥಿನಿ ಪಿಯುಸಿ ಓದುತ್ತಿದ್ದಾಳಷ್ಟೆ. ಪ್ರಕರಣ ಹೊರ ಬರದಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ವಾರ್ಡನ್ ಹಲವು ಪ್ರಯತ್ನ ನಡೆಸಿದ್ದಾರೆ. ಇದೊಂದು ಆಘಾತಕಾರಿ ವಿಷಯವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ದಲಿತ ಹೆಣ್ಣು ಮಗಳಿಗೆ ಹೆರಿಗೆಯಾಗಿದೆ ಎಂಬ ಸುದ್ದಿಯನ್ನು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ ವಾಟ್ಸಾಪ್ ಗ್ರೂಪ್‌ನಲ್ಲಿ ಪಿಎಸ್‌ಐ ರನ್ನಗೌಡ ಅವರು ಹಂಚಿಕೊಂಡಿದ್ದರು. ಇದಕ್ಕೆ ಠಾಣೆಯ ಪಿಐ ಜಯರಾಮ್, ‘ಮಜಾ ಮಾಡಿ ಗೌಡ್ರೆ’ ಎಂದು ಪ್ರತಿಕ್ರಿಯಿಸಿ ನಂತರ ಡಿಲೀಟ್ ಮಾಡಿದ್ದಾರೆ. ದಲಿತ ಹೆಣ್ಣು ಮಗಳ ಬಗ್ಗೆ ಪೊಲೀಸರು ಹಗುರವಾಗಿ ನೀಚತನದಿಂದ ಮಾತನಾಡಿದ್ದಾರೆ. ರಕ್ಷಣೆ ಕೊಡಬೇಕಾದ ಇವರೇ ಹೀಗೆ ಮಾಡಿದರೆ ಹೇಗೆ?” ಎಂದು ಪ್ರಶ್ನಿಸಿದ್ದಾರೆ.
“ವಾಟ್ಸಾಪ್ ಗ್ರೂಪ್‌ನಲ್ಲಿ ಪೊಲೀಸರಿಬ್ಬರು ದಲಿತ ಹೆಣ್ಣು ಮಗಳ ಬಗ್ಗೆ ಕೆಟ್ಟದಾಗಿ ಚರ್ಚಿಸಿದ ವಿಷಯವನ್ನು ಅನಾಮಧೇಯ ವ್ಯಕ್ತಿಯೊಬ್ಬರು ದಲಿತ ಸಂಘಟನೆಗಳ ಮುಖಂಡರ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್ ಕಳುಹಿಸಿದ್ದಾರೆ. ದಲಿತ ಹೆಣ್ಣು ಮಗಳಿಗೆ ಅವಹೇಳನ ಮಾಡಿದ ಪಿಐ ಜಯರಾಮ್ ಹಾಗೂ ಪಿಎಸ್ಐ ರನ್ನಗೌಡ ಇಬ್ಬರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಲಾಗಿದೆ” ಎಂದು ತಿಳಿಸಿದ್ದಾರೆ.
“ಪ್ರಕರಣವನ್ನು ವಿಳಂಬ ಅಥವಾ ಮುಚ್ಚಿ ಹಾಕಲು ಪ್ರಯತ್ನಿಸಿದ್ದಲ್ಲಿ, ಒಂದು ವಾರದ ನಂತರ ಎಲ್ಲಾ ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಸೇರಿಸಿಕೊಂಡು ಜಿಲ್ಲೆಯಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು” ಎಂದು ಐಕ್ಯತಾ ಸಮಿತಿ ಎಚ್ಚರಿಕೆ ನೀಡಿದೆ.
ಮಿಸ್ ಆಗಿ ಗ್ರೂಪ್‌ನಲ್ಲಿ ಮೆಸೇಜ್ ಮಾಡಿದ್ದೇನೆ: ಅಧಿಕಾರಿ ಜಯರಾಮ್
ಈ ಕುರಿತು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿರುವ ಪಿಐ ಜಯರಾಮ್, “ನನ್ನ ಮೇಲೆ ಸುಳ್ಳು ಆರೋಪಗಳು ಬಂದಿವೆ. ನಾನು ಆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿಲ್ಲ” ಎಂದರು.
“ಪಿಎಸ್‌ಐ ರನ್ನಗೌಡ ಅವರು ನನಗೆ ವೈಯಕ್ತಿಕವಾಗಿ ಹಲವಾರು ತಮಾಷೆಯ ಸಂದೇಶಗಳನ್ನು ಕಳುಹಿಸುತ್ತಾರೆ. ಆ ದಿನ ಕೂಡ ನನಗೆ ಅವರು ವೈಯಕ್ತಿಕವಾಗಿ ಒಂದು ತಮಾಷೆ ವೀಡಿಯೊ ಕಳುಹಿಸಿದ್ದರು. ನಾನು ಅವರಿಗೆ ವೈಯಕ್ತಿಕವಾಗಿ ಪ್ರತಿಕ್ರಿಯಿಸುವಾಗ ಗೊತ್ತಾಗದೆ ಗ್ರೂಪ್‌ನಲ್ಲಿ ಪ್ರತಿಕ್ರಿಯೆ ನೀಡಿದೆ. ನಮ್ಮ ಗ್ರೂಪ್‌ನಲ್ಲೇ ಇದ್ದ ನನಗಾಗದವರು ಇದನ್ನು ತಿರುಚಿ ಅಪಪ್ರಚಾರ ಮಾಡಿದ್ದಾರೆ” ಎಂದು ತಿಳಿಸಿದ್ದಾರೆ.
“ತಪ್ಪಾಗಿ ಗ್ರೂಪ್‌ನಲ್ಲಿ ಮೆಸೇಜ್ ಹೋಗಿರುವುದು ಗೊತ್ತಾದ ತಕ್ಷಣ ಆ ಸಂದೇಶವನ್ನು ಡಿಲೀಟ್ ಮಾಡಿದೆ. ಇದನ್ನೇ ಯಾರೋ ಎತ್ತಿಕೊಂಡು ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ನಿಜವಾಗಿಯೂ ಆ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ” ಎಂದು ಹೇಳಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ದಲಿತ ವಿದ್ಯಾರ್ಥಿನಿಗೆ ಹೆರಿಗೆಯಾದ ಕುರಿತು ವರದಿಯಾದಾಗ ದಲಿತ ಸಂಘಟನೆಗಳು ಸಮಾಜ ಕಲ್ಯಾಣ ಇಲಾಖೆ ಮತ್ತು ವಾರ್ಡನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು.
“ಹಾಸ್ಟೆಲ್ನಲ್ಲಿದ್ದುಕೊಂಡು ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಗೆ ಹೆರಿಗೆಯಾಗಿದೆ. ಆದರೆ ಈ ವಿಚಾರವನ್ನು ಹೊರಬರಲು ಬಿಡದೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ಹಾಸ್ಟೆಲ್ ವಾರ್ಡನ್ ಮುಚ್ಚಿ ಹಾಕಿದ್ದಾರೆ. ವಿಷಯ ತಿಳಿದಾಗ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯನ್ನು ಪ್ರಶ್ನಿಸಿದೆವು. ವಿದ್ಯಾರ್ಥಿನಿ ಹೊಟ್ಟೆಗೆ ಬಟ್ಟೆ ಕಟ್ಟಿಕೊಳ್ಳುತ್ತಿದ್ದಳು. ಹಾಗಾಗಿ ಗೊತ್ತಾಗಿಲ್ಲ ಎಂದು ಬೇಜವಾಬ್ದಾರಿಯಿಂದ ಹೇಳಿದ್ದಾರೆ” ಎಂದು ಟೀಕಿಸಿದ್ದವು. ಯುವತಿಯನ್ನು ಮನೆಗೆ ಕಳಿಸಿ ಹುಡುಗನ ವಿರುದ್ಧ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿತ್ತು.


