ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ 13 ಹಳ್ಳಿಗಳ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ಬುಧವಾರ (ಜೂ.25) ನಡೆದ ‘ದೇವನಹಳ್ಳಿ ಚಲೋ’ದ’ದಲ್ಲಿ ಭಾಗವಹಿಸಿದ್ದ ರೈತರನ್ನು ಬಂಧಿಸಿದ್ದನ್ನು ಪ್ರಶ್ನಿಸಲು ನಟ ಪ್ರಕಾಶ್ ರಾಜ್ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಆಗಮಿಸಿದ್ದರು. ಆದರೆ, ಸಿಎಂ ಭೇಟಿಗೆ ಪೊಲೀಸರು ಅವಕಾಶ ನಿರಾಕರಿಸಿದ್ದಾರೆ.
ಸಿಎಂ ಭೇಟಿಗೆ ಆಗಮಿಸಿದ್ದ ನಟ ಪ್ರಕಾಶ್ ರಾಜ್ ಮತ್ತು ಸಂಯುಕ್ತ ಹೋರಾಟ ಸಮಿತಿ ಸದಸ್ಯರನ್ನು ತಡೆದ ಪೊಲೀಸರು, ಕುಮಾರಕೃಪ ಗೆಸ್ಟ್‌ಹೌಸ್‌ಗೆ ಕರೆದೊಯ್ದಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಹದಿಮೂರು ಹಳ್ಳಿಗಳ ರೈತರ 1,777 ಎಕರೆ ಭೂಮಿಯನ್ನು ವಶಪಡಿಸಿಕೊಂಡು, ಕೆಐಎಡಿಬಿ ಮೂಲಕ ಕಾರ್ಪೊರೇಟ್ ಕಂಪನಿಗಳಿಗೆ ನೀಡಲು ರಾಜ್ಯ ಸರ್ಕಾರ 10 ಹಳ್ಳಿಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಿದೆ. ಸರ್ಕಾರದ ಏಕಪಕ್ಷೀಯ ನಿರ್ಧಾರದ ವಿರುದ್ಧ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಸಂಯುಕ್ತ ಹೋರಾಟ-ಕರ್ನಾಟಕ ದೇವನಹಳ್ಳಿ ಚಲೋ ಹೋರಾಟಕ್ಕೆ ಕರೆ ನೀಡಿತ್ತು.
ರೈತರು ಹಾಗೂ ಹೋರಾಟಗಾರರ ಬಂಧನ ಖಂಡಿಸುವ ಸಲುವಾಗಿ ಸಿಎಂ ಗೃಃ ಕಚೇರಿಗೆ ಆಗಮಿಸಿದ್ದ ನಟ ಪ್ರಕಾಶ್ ರಾಜ್, ಹಿರಿಯ ಹೋರಾಟಗಾರರು ಮತ್ತು ಸಾಹಿತಿಗಳು ಸೇರಿದಂತೆ ಚಿಂತಕರನ್ನು ಕುಮಾರಕೃಪಾ ಬಳಿ ತಡೆಯಲಾಗಿದೆ. ಬಹಳ ಹೊತ್ತಿನ ಮಾತುಕತೆ ಬಳಿಕ ಕಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗೆ ಅವಕಾಶ ನೀಡಿದ್ದಾರೆ ಎಂದು ತಿಳಿದುಬಂದಿದೆ.
ನಟ ಪ್ರಕಾಶ್ ರಾಜ್, ಕೆಎಸ್ ವಿಮಲಾ, ಸಿರಿಮನೆ ನಾಗರಾಜ್, ತಾರಾ, ಸುಷ್ಮಾ ಮತ್ತಿತರರು ಮುಖ್ಯಮಂತ್ರಿ ಅವರನ್ನು ಭೇಟಿಯಾಗಲು ಹೊರಟಿದ್ದಾರೆ.
ಇದನ್ನೂ ಓದಿ: ರೈತರ ಜೊತೆ ಇಲ್ಲೇ ಮಲಗುತ್ತೇನೆ, ಜೈಲಿಗೆ ಹಾಕುವುದಾದರೆ ಹಾಕಿ: ನಟ ಪ್ರಕಾಶ್ ರಾಜ್


