ರೈತರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿ ಕೊಡಿಸಲಾಗದಿದ್ದರೆ ರಾಜಕೀಯ ತೊರೆಯುತ್ತೇನೆ ಎಂಬ ತಮ್ಮ ಆಶ್ವಾಸನೆಯನ್ನು ಹರಿಯಾಣ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಖಟ್ಟರ್ ಗುರುವಾರವು ಪುನರುಚ್ಛರಿಸಿದ್ದಾರೆ. ಕೇಂದ್ರದ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸುತ್ತಿರುವ ರಾಜ್ಯದ ರೈತರಿಂದ ಪ್ರತಿಭಟನೆಗಳನ್ನು ಎದುರಿಸುತ್ತಿರುವ ಖಟ್ಟರ್, ಐದು ಸ್ಥಳೀಯ ಚುನಾವಣೆಯಲ್ಲಿ ಮೂರನ್ನು ಸೋತ ನಂತರ ಈ ಹೇಳಿಕೆ ನೀಡಿದ್ದಾರೆ.
ಹರಿಯಾಣದಲ್ಲಿ ಎಂಎಸ್‌ಪಿ ಮುಂದುವರಿಕೆಗೆ ನಾವು ಬದ್ಧರಾಗಿದ್ದೇವೆ. ಯಾರಾದರೂ ಎಂಎಸ್‌ಪಿ ವ್ಯವಸ್ಥೆಯನ್ನು ಕೊನೆಗಾಣಿಸಲು ಪ್ರಯತ್ನಿಸಿದರೆ ತಾನು ರಾಜಕೀಯ ತೊರೆಯುತ್ತೇನೆ ಎಂದು ಅವರು ಹೇಳಿದ್ದಾಗಿ ಎಎನ್‌ಐ ಉಲ್ಲೇಖಿಸಿದೆ.
ಇದನ್ನೂ ಓದಿ: ಹರಿಯಾಣ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿ ಮೈತ್ರಿಕೂಟಕ್ಕೆ ಭಾರಿ ಮುಖಭಂಗ
ಈ ಹೇಳಿಕೆಯನ್ನು ಸ್ಥಳೀಯ ಸಂಸ್ಥೆ ಚುನಾವಣೆಗೂ ಮೊದಲು ಕೂಡಾ ಖಟ್ಟರ್ ನೀಡಿದ್ದರು. ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲ ಕೂಡ, ಎಂಎಸ್‌ಪಿ ವ್ಯವಸ್ಥೆಯನ್ನು ರದ್ದು ಮಾಡುವುದಿಲ್ಲ ಎಂದು ಪ್ರತಿಭಟನಾನಿರತ ರೈತರಿಗೆ ಆಶ್ವಾಸನೆ ನೀಡುತ್ತಾ ಬಂದಿದ್ದಾರೆ. ನಾನು ಅಧಿಕಾರದಲ್ಲಿರುವವರೆಗೆ ಎಂಎಸ್‌ಪಿ ಉಳಿಸಿಕೊಳ್ಳಲು ಯತ್ನಿಸುತ್ತೇನೆ. ಅದು ಸಾಧ್ಯವಾಗದೇ ಹೋದರೆ ಅಂದೇ ಹುದ್ದೆಯಿಂದ ಕೆಳಗಿಳಿಯುತ್ತೇನೆ ಎಂದು ಅವರು ಹೇಳುತ್ತ ಬಂದಿದ್ದರು.
ಮೂರರಲ್ಲಿ ಎರಡು ಸೋಲು ಹಿಸಾರ್‌ನ ಉಕಲಾನಾ ಮತ್ತು ರೆವರಿಯ ಧರುಹೆರಾಗಳಲ್ಲಿ ಘಟಿಸಿದ್ದು, ಇವೆರಡೂ ದುಷ್ಯಂತ್ ಅವರ ಪ್ರಾಬಲ್ಯದ ಪ್ರದೇಶಗಳಾಗಿವೆ. ಬಿಜೆಪಿ ಮತ್ತು ಮಿತ್ರಪಕ್ಷ ಜೆಜೆಪಿ ಸೊನಾಪತ್ ಮತ್ತು ಅಂಬಾಲಾದಲ್ಲೂ ಚುನಾವಣೆಯಲ್ಲಿ ಸೋಲು ಅನುಭವಿಸಿವೆ.
ಇದನ್ನೂ ಓದಿ: ರೈತ ಹೋರಾಟ: ರಾಜಸ್ಥಾನ-ಹರಿಯಾಣ ಗಡಿಯಲ್ಲಿನ ಬ್ಯಾರಿಕೇಡ್‌ಗಳನ್ನು ಮುರಿದು ಮುನ್ನುಗ್ಗಿದ ರೈತರು
ಅಂಬಾಲಾದ ಬಿಜೆಪಿ ಶಾಸಕ ಅಸೀಮ್ ಗೊಯಲ್, ಈ ಚುನಾವಣೆಯಲ್ಲಿ ಎಲ್ಲರೂ ಬಿಜೆಪಿ ವಿರುದ್ಧ ಒಂದಾಗಿದ್ದರು ಎಂದು ಬುಧವಾರ ಹೇಳಿದ್ದಲ್ಲದೇ, ರೈತರ ಪ್ರತಿಭಟನೆ ಪಕ್ಷಕ್ಕೆ ಹಿನ್ನಡೆ ಮಾಡಿದೆ ಎಂದು ಒಪ್ಪಿಕೊಂಡಿದ್ದರು. ಸರ್ಕಾರ ಒಳ್ಳೆಯ ಕೆಲಸ ಮಾಡಿದಾಗ ಅದನ್ನು ತಡೆಯಲು ವಿಪಕ್ಷದವರು ಕೈ ಜೋಡಿಸುತ್ತಾರೆ. ಹರಿಯಾಣದಲ್ಲಿ ಇದೇ ಸಂಭವಿಸುತ್ತಿದೆ. ವಿಪಕ್ಷಗಳ ಅಜೆಂಡಾ ಅರ್ಥರಹಿತವಾದದ್ದು ಮತ್ತು ಅವರಿಗೆ ಯಾವುದೇ ಗುರಿಯೂ ಇಲ್ಲ. ಬಿಜೆಪಿ ತಡೆಯುವುದೇ ಅವರ ಉದ್ದೇಶ. ಮೊದಲು ಬಿಜೆಪಿ ತಡೆಯೋಣ, ನಂತರ ನಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳೋಣ ಎಂಬ ನಿಲುವನ್ನು ಅವರು ಹೊಂದಿದ್ದಾರೆ ಎಂದು ಅಸೀಮ್ ಹೇಳಿದ್ದರು.
ಹೊಸ ಕಾನೂನುಗಳಿಂದ ದೊಡ್ಡ ಕಾರ್ಪೋರೇಟ್ ಕಂಪನಿಗಳು ಸಾಂಪ್ರದಾಯಿಕ ಬೆಳೆ ಮಾರುಕಟ್ಟೆಗಳನ್ನು ನಾಶ ಮಾಡಿ ತಮ್ಮನ್ನು ಶೋಷಿಸಲಿವೆ ಎಂದು ರೈತರು ಆತಂಕಗೊಂಡಿದ್ದಾರೆ. ಹೊಸ ಕಾಯ್ದೆಗಳು ಈಗಿರುವ ವ್ಯವಸ್ಥೆಯನ್ನು ಕೊನೆಗಾಣಿಸುವ ಉದ್ದೇಶ ಹೊಂದಿಲ್ಲ, ಬದಲಿಗೆ ರೈತರಿಗೆ ತಮ್ಮ ಬೆಳೆ ಮಾರಲು ಹೆಚ್ಚಿನ ಅವಕಾಶ ನೀಡುತ್ತವೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸುತ್ತ ಬಂದಿದೆ. ಬುಧವಾರ ಕೇಂದ್ರ ಮತ್ತು ರೈತರ ನಡುವೆ ಆರನೇ ಸುತ್ತಿನ ಮಾತುಕತೆ ಯಶಸ್ವಿಯಾಗಿಲ್ಲ.
ಇದನ್ನೂ ಓದಿ: ಹರಿಯಾಣ ಸಿಎಂಗೆ ಕಪ್ಪು ಬಾವುಟ ಪ್ರದರ್ಶಿಸಿದ ರೈತರ ಮೇಲೆ ದಾಖಲಾಯ್ತು ಗಲಭೆ, ಕೊಲೆಯತ್ನದ ಕೇಸ್!


