ಉತ್ತರ ಪ್ರದೇಶದ ಫತೇಪುರ್‌ನಲ್ಲಿರುವ ಸುಮಾರು 180 ವರ್ಷ ಹಳೆಯ ನೂರಿ ಜಾಮಾ ಮಸೀದಿಯ ಒಂದು ಭಾಗವನ್ನು ಮಂಗಳವಾರ (ಡಿ.10) ಜಿಲ್ಲಾಡಳಿತ ಕೆಡವಿದೆ.
ಮಸೀದಿಯು ಪಕ್ಕದ ಬಂದಾ-ಫತೇಪುರ್ ರಸ್ತೆಯನ್ನು ಆಕ್ರಮಿಸಿಕೊಂಡಿತ್ತು. ಭಾಗಶಃ ಕೆಡವುವ ಮುನ್ನ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ತೆರವು ಕಾರ್ಯಾಚರಣೆ ವಿರುದ್ದ ಮಸೀದಿ ಸಮಿತಿ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ ನಡುವೆಯೇ ಈ ಬೆಳವಣಿಗೆ ನಡೆದಿದೆ.
“ಮಸೀದಿ ಸಮಿತಿ ಹೈಕೋರ್ಟ್‌ಗೆ ಅರ್ಜಿ ಹಾಕಿದೆ. ಆದರೆ, ಇನ್ನೂ ವಿಚಾರಣೆಗೆ ಪಟ್ಟಿಯಾಗಿಲ್ಲ. ಕೆಡವಲಾಗಿರುವ ಮಸೀದಿ ಕಟ್ಟಡವನ್ನು ಕಳೆದ ಮೂರು ವರ್ಷಗಳಲ್ಲಿ ನಿರ್ಮಿಸಲಾಗಿದೆ. ಮಸೀದಿಯ ಮುಖ್ಯ ಕಟ್ಟಡ ಯಥಾಸ್ಥಿತಿಯಲ್ಲಿದೆ” ಎಂದು ಫತೇಪುರ್ ಜಿಲ್ಲಾ ಹೆಚ್ಚುವರಿ ಮ್ಯಾಜಿಸ್ಟ್ರೇಟ್ (ಹಣಕಾಸು ಮತ್ತು ಕಂದಾಯ) ಅವಿನಾಶ್ ತ್ರಿಪಾಠಿ ಹೇಳಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ರಸ್ತೆಯನ್ನು ಅತಿಕ್ರಮಿಸಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸುವುದಾಗಿ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಕಳೆದ ಆಗಸ್ಟ್‌ನಲ್ಲಿ ವ್ಯಾಪಾರಿಗಳು, ಮನೆ ಮಾಲೀಕರು ಮತ್ತು ಮಸೀದಿ ಸಮಿತಿ ಸೇರಿದಂತೆ 139 ಜನರಿಗೆ ನೋಟಿಸ್ ನೀಡಿತ್ತು. ರಸ್ತೆಯನ್ನು ಅಭಿವೃದ್ದಿ ಮಾಡಿ, ಚರಂಡಿ ನಿರ್ಮಿಸಲು ಅತಿಕ್ರಮಣ ತೆರವು ಮಾಡಲಾಗಿದೆ” ಎಂದು ಅವಿನಾಶ್ ತ್ರಿಪಾಠಿ ತಿಳಿಸಿದ್ದಾರೆ.
“ಎಲ್ಲಾ ಕಟ್ಟಡಗಳ ಅತಿಕ್ರಮಣ ಭಾಗವನ್ನು ಗುರುತಿಸಿ ನೋಟಿಸ್ ನೀಡಲಾಗಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ಅವುಗಳನ್ನು ತೆರವುಗೊಳಿಸಲಾಗಿದೆ. ಮಸೀದಿ ಸಮಿತಿ ಕೂಡ ಮಸೀದಿಗೆ ಹೊಂದಿಕೊಂಡಿರುವ ಅಂಗಡಿಗಳ ಅತಿಕ್ರಮಣ ಭಾಗವನ್ನು ತೆರವುಗೊಳಿಸಿದೆ. ಮಸೀದಿಯ ಅತಿಕ್ರಮಣ ಭಾಗವನ್ನು ತೆರವು ಮಾಡುವುದಾಗಿ ಸಮಿತಿ ಭರವಸೆ ನೀಡಿತ್ತು. ಅವರು ತೆರವು ಮಾಡಿಲ್ಲ. ಹಾಗಾಗಿ, ಜಿಲ್ಲಾಡಳಿತ ತೆರವು ಮಾಡಿದೆ” ಎಂದು ಅವಿನಾಶ್ ತ್ರಿಪಾಠಿ ಹೇಳಿದ್ದಾರೆ.
“ಮಸೀದಿಯ ಅತಿಕ್ರಮಣ ಭಾಗವನ್ನು ಕೆಡವಿದ ಸಂದರ್ಭ ಪಿಡಬ್ಲ್ಯುಡಿ ಪೊಲೀಸರ ಸಹಾಯ ಕೋರಿತ್ತು. ಕಾನೂನು ಸುವ್ಯವಸ್ಥೆ ಕಾಪಾಡಲು ಸ್ಥಳದಲ್ಲಿ ಪೊಲೀಸರನ್ನು ನೇಮಕ ಮಾಡಲಾಗಿತ್ತು. ಮಸೀದಿ ಕೆಡವುವ ಸಂದರ್ಭದಲ್ಲಿ ಯಾವುದೇ ಪ್ರತಿಭಟನೆ ನಡೆದಿಲ್ಲ” ಎಂದು ಅವಿನಾಶ್ ತ್ರಿಪಾಠಿ ಹೇಳಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವಿವರಿಸಿದೆ.
ಮಸೀದಿ ಸಮಿತಿ ಹೇಳಿದ್ದೇನು?
ತೆರವು ಕಾರ್ಯಾಚರಣೆಗೆ ತಡೆ ಕೋರಿ ಮಸೀದಿ ಸಮಿತಿಯು ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಹೈಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 13ಕ್ಕೆ ನಿಗದಿಪಡಿಸಿತ್ತು. ಆದರೆ, ನ್ಯಾಯಾಲಯದ ವಿಚಾರಣೆಗೆ ಮೊದಲೇ ಮಸೀದಿಯನ್ನು ಭಾಗಶಃ ಕೆಡವಲಾಗಿದೆ. ಮಸೀದಿಯು 180 ವರ್ಷಗಳಷ್ಟು ಹಳೆಯದಾಗಿದೆ. ಹಿಂಬದಿಯ ಗೋಡೆಗಳನ್ನು ಕೆಡವುದರಿಂದ ಮುಖ್ಯ ಕಟ್ಟಡಕ್ಕೆ ಹಾನಿಯಾಗಲಿದೆ. ನ್ಯಾಯಾಲಯದ ವಿಚಾರಣೆಗಾಗಿ ಕಾಯುವಂತೆ ನಾವು ಮನವಿ ಮಾಡಿದ್ದೆವು, ಆದರೆ, ಜಿಲ್ಲಾಡಳಿತ ನಮ್ಮ ಮಾತನ್ನು ಕೇಳಲಿಲ್ಲ ಎಂದು ಮಸೀದಿಯ ಉಸ್ತುವಾರಿ ಹೇಳಿದ್ದಾರೆ.
ಇದನ್ನೂ ಓದಿ : ವಿಹೆಚ್‌ಪಿ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ವಿವಾದಾತ್ಮಕ ಭಾಷಣ : ಮಾಹಿತಿ ಕೇಳಿದ ಸುಪ್ರೀಂ ಕೋರ್ಟ್


