Homeಅಂಕಣಗಳುಪತ್ರ ಚಳವಳಿಯಿಂದ ಕೊಟ್ಟೂರು ಕೆರೆ ಉಳಿಸಿ ಅಭಿಯಾನದತ್ತ ಅಂಚೆ ಕೊಟ್ರೇಶ್

ಪತ್ರ ಚಳವಳಿಯಿಂದ ಕೊಟ್ಟೂರು ಕೆರೆ ಉಳಿಸಿ ಅಭಿಯಾನದತ್ತ ಅಂಚೆ ಕೊಟ್ರೇಶ್

- Advertisement -
- Advertisement -

ಎಲೆಮರೆ-29

ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಕೊಟ್ಟೂರೇಶ್ವರ ಕಾಲೇಜಿನಲ್ಲಿ ನಾನು ಪದವಿ ಓದುವಾಗ ಸಾಹಿತಿಗಳಾದ ಲಿಂಗಾರೆಡ್ಡಿ ಶೇರಿ, ಎಸ್.ಡಿ.ಈರಗಾರ, ನಾಗನಗೌಡ, ಶಿವನಗುತ್ತಿ ದಂಪತಿಗಳು, ಹೆಚ್.ಎಂ.ನಿರಂಜನ್, ಸತೀಶ್ ಪಾಟೀಲ್, ಸಿದ್ಧು ದೇವರಮನಿ, ಪದ್ಮಾ ಜಾಗಟಗೆರೆ ಮೊದಲಾದವರು `ಬಯಲು ಸಾಹಿತ್ಯ ವೇದಿಕೆ’ ರೂಪಿಸುತ್ತಿದ್ದರು. ಪ್ರತಿ ತಿಂಗಳ ಉಪನ್ಯಾಸದ ಕೊನೆಗೆ ಕವಿತೆ ಓದುವ ಅವಕಾಶವಿತ್ತು. ನಾನು ಕವಿತೆ ಓದಲೆಂದೇ ಹೋಗುತ್ತಿದ್ದೆ. ಹೀಗೆ ಕವಿತೆ ಓದುವವರಲ್ಲಿ ಚುಟುಕು ಓದಿ ನಗಿಸುತ್ತಿದ್ದವರು ಅಂಚೆ ಕೊಟ್ರೇಶ್.

ಕೊಟ್ಟೂರಿನ ಪ್ರಾಧ್ಯಾಪಕಿ ನಿರ್ಮಲಾ ಶಿವನಗುತ್ತಿ ಅವರ ಮುಂದಾಳತ್ವದಲ್ಲಿ ಮಧ್ಯಮವರ್ಗದ ಮಹಿಳೆಯರು ತಮ್ಮ ಕ್ರಿಯಾಶೀಲತೆಯ ತೋರ್ಪಡಿಕೆಗಾಗಿ, ಸಾಮಾಜಿಕ ಕಳಕಳಿಯ ಸ್ಪಂದನೆಗಾಗಿ ಕಟ್ಟಿಕೊಂಡಿರುವ ಕ್ರಿಯೇಟಿವ್ ಲೇಡಿಸ್ ಕ್ಲಬ್ಬಿದೆ. ಈ ಕ್ಲಬ್ಬಿನಲ್ಲಿ ಕೊಟ್ರೇಶ್ ಅವರ ಕವಿತೆಗಳ ಅಭಿಮಾನಿ ಬಳಗ ದೊಡ್ಡದಿದೆ. ಹೀಗಾಗಿ ನನ್ನನ್ನೂ ಒಳಗೊಂಡಂತೆ ಗಂಭೀರ ಕಾವ್ಯ ಬರೆಯುವವರಿಗೆ ಕೊಟ್ರೇಶರ ಜನಪ್ರಿಯತೆಯ ಬಗ್ಗೆ ಹೊಟ್ಟೆಕಿಚ್ಚಿತ್ತು. ಹೀಗೆ ಹಾಸ್ಯ ಪ್ರವೃತ್ತಿಯ, ನಗುಮೊಗದ ಕೊಟ್ರೇಶ್ ಸಾಮಾಜಿಕ ವಿದ್ಯಮಾನಗಳಿಗೆ ಪ್ರತಿರೋಧ ದಾಖಲಿಸುತ್ತಿದ್ದುದು ವೈರುಧ್ಯದಂತೆ ಕಾಣುತ್ತಿತ್ತು.

ಅಂಚೆ ಇಲಾಖೆಯಲ್ಲಿ ಕೆಲಸ ಮಾಡುವ ಕೊಟ್ರೇಶ್ ಸಮಾಜಿಕ ಅವ್ಯವಸ್ಥೆಯ ಕುರಿತು ಕಛೇರಿ ಒಳಗಿಂದಲೇ ತಣ್ಣನೆ ಪ್ರತಿರೋಧ ದಾಖಲಿಸುವ ಮಾದರಿ ಕಂಡುಕೊಂಡಿದ್ದರು. ಕೆಲಕಾಲ ಬಯಲು ಸಾಹಿತ್ಯ ವೇದಿಕೆಯ ಅಧ್ಯಕ್ಷರಾಗಿಯೂ ಸಕ್ರಿಯವಾಗಿದ್ದರು. ಸಮಾನಾಸಕ್ತರು ಪ್ರತಿ ವರ್ಷವೂ ಆಯಾ ಕಾಲದ ಬಿಕ್ಕಟ್ಟುಗಳ ಸಂವಾದಕ್ಕಾಗಿ ರೂಪಿಸುವ ನಾವುನಮ್ಮಲ್ಲಿ ಕಾರ್ಯಕ್ರಮದ ರುವಾರಿಗಳಲ್ಲೊಬ್ಬರು. ಸಾಲು ಸಾಲು ರಜೆಗಳು ಬಂದಾಗ ಅಂಚೆ ಕಛೇರಿ ತೆಗೆದು ಸಾಮಾನ್ಯ ಜನರಿಗೆ ಸೇವೆ ಒದಗಿಸುವಿಕೆಯೂ ಕೊಟ್ರೇಶ್ ಅವರ ಮತ್ತೊಂದು ನಡೆ. ಅಂಚೆ ನೌಕರರ ಮುಷ್ಕರಗಳಲ್ಲಿ ಮುಂಚೂಣಿಯ ನಾಯಕತ್ವ ವಹಿಸುತ್ತಾರೆ. ಉತ್ತರ ಕರ್ನಾಟಕದ ಹಳ್ಳಿಗಳು ನೆರೆಬಂದು ಕಷ್ಟದಲ್ಲಿದ್ದಾಗ ಕೊಟ್ಟೂರಿನ ಧಾನಿಗಳಿಂದ ಹಣ, ವಸ್ತು ಪರಿಕರಗಳನ್ನು ಸಂಗ್ರಹಿಸಿ ಸಂತ್ರಸ್ಥರಿಗೆ ಪರಿಹಾರ ಹಂಚುವಲ್ಲಿಯೂ ಸಕ್ರಿಯವಾಗಿದ್ದರು.

ಎಂ.ಎಂ.ಕಲ್ಬುರ್ಗಿ ಅವರ ಕೊಲೆಯಾದಾಗ ಕೊಟ್ರೇಶ್ ಕೊಲೆಯನ್ನು ವಿರೋಧಿಸಿ ಉಪವಾಸ ಧರಣಿ ಕೂತಿದ್ದರು. ರಸ್ತೆಬದಿಯಲ್ಲಿ ಕಲ್ಬುರ್ಗಿಯವರ ಮಾರ್ಗ ಸಂಪುಟಗಳನ್ನು ಓದುತ್ತಾ ಎಲ್ಲರ ಗಮನಸೆಳೆದಿದ್ದರು. ಅಂದು ಕೆಲಸಂಗಾತಿಗಳು ಕೊಟ್ರೇಶ್ ಅವರ ಉಪವಾಸವನ್ನು ಅಂತ್ಯಗೊಳಿಸಿದಾಗ, ಕಲ್ಬುರ್ಗಿಯವರ ಬಗ್ಗೆ ನಾನೂ ನಾಲ್ಕು ಮಾತಾಡಿದ್ದೆ. ಗೌರಿ ಲಂಕೇಶ್ ಕೊಲೆಯನ್ನು ವಿರೋಧಿಸಿ ಸೆಪ್ಟಂಬರ್ 9, 2017 ರಿಂದ ಸೆಪ್ಟಂಬರ್ 5, 2018 ರವರೆಗೆ ದಿನಕ್ಕೊಂದು ಪತ್ರದಂತೆ ಒಂದು ವರ್ಷ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ತನಿಖೆ ತೀವ್ರಗೊಳಿಸುವ ಬಗ್ಗೆ ಪತ್ರ ಬರೆದಿದ್ದರು. ಹೀಗೆ ಜಿಂದಾಲ್‍ಗೆ ಭೂಮಿ ನೀಡುವುದನ್ನು ವಿರೋಧಿಸಿ, ಕೊಟ್ಟೂರು ಕೆರೆಗೆ ನೀರು ತರಲು ಒತ್ತಾಯಿಸಿ, ನೀಟ್ ಪರೀಕ್ಷೆಯಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಬೇಕೆಂದೂ ಪತ್ರ ಚಳವಳಿ ಮಾಡಿದ್ದಾರೆ. ಈಚೆಗೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಗಿಡ ಬೆಳೆಸುವ ಕಾನೂನು ತರಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಹೀಗೆ ಪ್ರಸಕ್ತ ಸಂಗತಿಗಳ ಗಮನಸೆಳೆಯಲು ನೂರಕ್ಕೂ ಹೆಚ್ಚು ಪತ್ರ ಚಳವಳಿ ಮಾಡಿದ್ದಾರೆ.

ಕೊಟ್ರೇಶ್ ಅವರು ರಾಜ್ಯದ ಗಮನಸೆಳೆದದ್ದು ಕೊಟ್ಟೂರು ಕೆರೆಗೆ ಮರುಜೀವ ನೀಡಿದ ಒಂದು ಯಶಸ್ವಿ ಅಭಿಯಾನದ ಕಾರಣಕ್ಕೆ. ಇದೊಂದು ಸಾಹಸಗಾಥೆಯಂತಿದೆ. 2017ರ ಫೆಬ್ರವರಿಯಲ್ಲಿ ಕೊಟ್ಟೂರೇಶ್ವರನ ತೇರು ಮುಗುಚಿ ಇಡೀ ಊರಿಗೆ ಊರೇ ಮಂಕಾಗಿತ್ತು. ಊರನ್ನು ಚಿವುಟಿದರೆ ರಕ್ತ ಬರದಂತೆ ಮರಗಟ್ಟಿತ್ತು. ಇಂತಹ ಸಂದರ್ಭದಲ್ಲಿ ಕೊಟ್ರೇಶ್ ಒಮ್ಮೆ ಕೆರೆದಡಕ್ಕೆ ವಾಕ್ ಹೋದಾಗ ಕೆರೆಯನ್ನು ಆವರಿಸಿದ ಜಾಲಿ ದಂಗುಬಡಿಸುತ್ತದೆ. ಅರೆ ನನ್ನೂರಿಗೆ ಇರುವುದೊಂದೆ ನೀರಿನ ಮೂಲವಿದು, ಇದು ಜಾಲಿಮಯವಾಗಿದೆಯಲ್ಲ, ಏನಾದರೂ ಮಾಡಬೇಕು ಅಂದುಕೊಳ್ಳುತ್ತಾರೆ. ಆರಂಭಕ್ಕೆ ಕೊಟ್ರೇಶ್ ಕೊಡಲಿ ನೀರು ಬುತ್ತಿ ಕಟ್ಟಿಕೊಂಡು ಹೋಗಿ ಜಾಲಿ ಕಡಿಯಲು ನಿಲ್ಲುತ್ತಾರೆ. ಹೀಗೆ 15 ದಿನ ಒಬ್ಬರೇ ಕಡಿದಾಗ, ಇದು ತನ್ನೊಬ್ಬನಿಂದಾಗದ ಕೆಲಸ, ಏನಾದರೂ ಮಾಡಿ ಜನರ ಗಮನ ಸೆಳೆಯಬೇಕೆಂದು ಫೋಟೋ ಸಮೇತ ಫೇಸ್‍ಬುಕ್ ನಲ್ಲಿ ಪೋಸ್ಟ್ ಹಾಕುತ್ತಾರೆ.

ಸಂಜೆಗೆ ಮೊಬೈಲ್ ಅಂಗಡಿ ಅಶೋಕ್, ಕುಮಾರ್ ಕುಲಕರ್ಣಿ ಬಟಾರಂಗಡಿ ನಭಿ ಕೊಟ್ರೇಶ್ ಹತ್ತಿರ ಚರ್ಚಿಸಿ ಜೆಸಿಬಿಯಿಂದ ಜಾಲಿಯ ಬುಡಸಮೇತ ತೆಗೆಸೋಣ ಎಂದು ಚರ್ಚಿಸುತ್ತಾರೆ. ಜೆಸಿಬಿಯ ಒಂದೊಂದು ತಾಸಿನ ಖರ್ಚನ್ನು ಒಬ್ಬೊಬ್ಬರು ಭರಿಸುವ ಯೋಚನೆ ಮಾಡುತ್ತಾರೆ. ಈ ಸಂಗತಿ ಬಾಯಿಂದ ಬಾಯಿಗೆ ಹಬ್ಬಿ 25 ತಾಸಿನ ಸಹಾಯಕ್ಕೆ ಮುಂದುವರಿಯುತ್ತದೆ. ಈ ಚರ್ಚೆಯ ಮರುದಿನ ಎಲ್ಲರೂ ಮಾಯವಾಗುತ್ತಾರೆ. ಇದೇನು ಆಗೋ ಮಾತಲ್ಲ ಅನ್ನಿಸಿ ಕೊಟ್ರೇಶ್ ಎಂದಿನಂತೆ ಒಬ್ಬರೆ ಕೆರೆಯಂಗಳಕ್ಕೆ ನಡೆಯುತ್ತಾರೆ. ಈ ಕುರಿತು ಪತ್ರಕರ್ತ ದೇವರಮನಿ ಸುರೇಶ್ ವಿಜಯಕರ್ನಾಟಕದಲ್ಲಿ ಒಂದು ವರದಿ ಮಾಡುತ್ತಾರೆ. ಇದಕ್ಕೆ ಸ್ಪಂದಿಸಿ 100 ತಾಸಿನ ಜೆಸಿಬಿ ಕೆಲಸಕ್ಕೆ ಹಣ ಹೊಂದಿಕೆಯಾಗುತ್ತದೆ. ಇದರಿಂದ ಮೂರು ಎಕರೆ ಜಾಲಿ ಬಯಲಾಗುತ್ತೆ. ಮತ್ತೆ ಕೆಲಸ ಅರ್ಧಕ್ಕೆ ನಿಲ್ಲುತ್ತೆ.

ಕೊನೆಗೆ ಕೊಟ್ರೇಶ್ ಇದ್ದೊಂದು ಸೈಟ್ ಮಾರಿ ಕೆಲಸ ಮುಂದುವರಿಸುವ ಬಗ್ಗೆ ಹೇಳಿಕೊಳ್ಳುತ್ತಾರೆ. ಈ ವಿಷಯ ತಿಳಿದು ಎಪಿಎಂಸಿ ಗಣೇಶಪ್ಪ 50 ಸಾವಿರ ಕೊಡುವುದಾಗಿ ಘೋಷಿಸುತ್ತಾರೆ. ನಾಗರಕಟ್ಟೆ ರಾಜಣ್ಣ ಹಿಟಾಚಿ ನೆರವು ಒದಗಿಸುತ್ತಾರೆ. ಈ ಮಧ್ಯೆ ಜೈನ ಸಮುದಾಯ ಸಹಾಯಕ್ಕೆ ನಿಲ್ಲುತ್ತದೆ. ಉಳಿದಂತೆ ಕೊಟ್ಟೂರಿನ ವಾಣಿಜ್ಯ ವ್ಯಾಪಾರ ಸಮುದಾಯ ಸಂಘಟನೆಗಳಲ್ಲಿ ಕೊಟ್ರೇಶ್ ಮತ್ತವರ ತಂಡ ಸಹಾಯ ಕೋರುತ್ತಾರೆ. ಇದೆಲ್ಲ ಒಟ್ಟಾಗಿ ಹಿದಿನಾಲ್ಕು ಲಕ್ಷ ಸಂಗ್ರಹವಾಗುತ್ತದೆ. ಮತ್ತೆ ಹತ್ತು ಜೆಸಿಬಿಗಳು ಹಗಲು ರಾತ್ರಿ ಕೆಲಸ ಮಾಡುತ್ತವೆ. ಈ ಮಧ್ಯೆ ಜಿಲ್ಲಾಧಿಕಾರಿ ಆದಿತ್ಯ ಬಿಸ್ವಾಸ್ ಮೊದಲು ಸಾರ್ವಜನಿಕರೆ ಅಭಿವೃದ್ಧಿ ಕಾರ್ಯ ಕೈಗೊಂಡದ್ದಕ್ಕೆ ಗದರಿದಂತೆ ಮಾಡಿ ನೆರವಾಗುವ ಭರವಸೆ ನೀಡಿ, ಉದ್ಯೋಗಖಾತ್ರಿ ಕೆಲಸ ಕೆರೆಯಲ್ಲಿ ನಡೆಯುವಂತೆ ಆದೇಶಿಸುತ್ತಾರೆ. ಎಪಿಎಂಸಿ ಗಣೇಶಪ್ಪ ಕೆರೆ ಅಂಗಳಕ್ಕೆ ಬಂದು ಕೆಲಸವನ್ನು ಗಮನಿಸುತ್ತಾರೆ.

ಈ ಸುದ್ದಿ ಎಲ್ಲಾ ಟಿವಿ, ಪತ್ರಿಕೆಗಳಲ್ಲಿ ಪ್ರಸಾರವಾಗುತ್ತಲೂ ಕೊಟ್ಟೂರಿನ ಶಾಸಕರಾದ ಭೀಮಾನಾಯ್ಕ್ ಒಳಗೊಂಡಂತೆ ಎಲ್ಲಾ ರಾಜಕೀಯ ಪಕ್ಷದ ನಾಯಕರುಗಳೂ, ಊರಿನ ಹಿರಿಯರೂ ಕೆರೆ ಅಂಗಳಕ್ಕೆ ಧಾವಿಸುತ್ತಾರೆ. ಒಮ್ಮೆ ಸಾಹಿತಿ ಕುಂ.ವೀರಭದ್ರಪ್ಪರೂ ಬರುತ್ತಾರೆ. ಚಾನುಕೋಟಿ ಮಠದ ಸ್ವಾಮೀಜಿ ಕೆರೆ ಅಂಗಳ ಕೆಲಸದ ಕೊನೆತನಕ ಊಟ ಟಿಫಿನ್ ಟೀ ವಿತರಿಸುತ್ತಾರೆ. ಇನ್ನು ಕೆರೆಯ ನೀರಿನ ಮೂಲಗಳನ್ನು ಹುಡುಕುತ್ತ ಕೆರೆಗೆ ಹೊಂದಿಕೊಂಡಂತೆ ಎಂಟತ್ತು ಕಿಲೋಮೀಟರ್ ಹಳ್ಳಿಗಳಿಂದ ಹರಿದು ಬರುತ್ತಿದ್ದ ಮುಚ್ಚಿಹೋಗಿದ್ದ ಹಳ್ಳಗಳನ್ನು ಬಯಲು ಮಾಡಲಾಗುತ್ತದೆ.

2017 ರ ಫೆಬ್ರವರಿ 26 ರಂದು ಕೊಟ್ರೇಶ್ ಅವರ ವಯಕ್ತಿಕ ಆಸಕ್ತಿಯಿಂದ ಶುರುವಾದ ನಮ್ಮೂರ ಕೆರೆ ಉಳಿಸಿ ಅಭಿಯಾನ, ಇಡೀ ಕೊಟ್ಟೂರಿನ ಜನತೆಯನ್ನು ಒಳಗೊಂಡು ಸಮೂಹಿಕವಾಗುತ್ತದೆ. ಮೊದಲ ಹಂತದ ಕೆಲಸ ಜೂನ್ ಹೊತ್ತಿಗೆ ಮುಗಿಯುತ್ತದೆ. ಅದೇ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಗೆ ಮುಕ್ಕಾಲು ಕೆರೆ ತುಂಬುತ್ತದೆ. ಇಡೀ ಊರಿಗೆ ಊರೆ ಹಬ್ಬದಂತೆ ಇದನ್ನು ಸಂಭ್ರಮಿಸುತ್ತದೆ. 1890 ರಲ್ಲಿ ಕಟ್ಟಿದ ಈ ಕೆರೆ ಬಳ್ಳಾರಿ ಜಿಲ್ಲೆಯಲ್ಲಿ ಮೂರನೆ ದೊಡ್ಡ ಕೆರೆಯಾಗಿದ್ದು 852 ಎಕರೆ ವಿಸ್ತಾರ ಹೊಂದಿ, ಸುತ್ತಣ ನಾಲ್ಕು ಸಾವಿರ ಎಕರೆಗೆ ನೀರಾವರಿಯಾಗುತ್ತದೆ. ಇದೀಗ ಕೆರೆ ಏರಿಯಲ್ಲಿ ಗಿಡ ನೆಡುವ ಕಾರ್ಯವನ್ನು ಸರಕಾರ ಕೈಗೊಂಡಿದೆ. ಹೀಗೆ ಅಂಚೆ ಕಛೇರಿಯ ಒಳಗೆ ಕೂತು ಪತ್ರ ಚಳವಳಿ ಮಾಡುತ್ತಿದ್ದ ಕೊಟ್ರೇಶ್ ಬೀದಿಗೆ ಬಂದು ಸಾರ್ವಜನಿಕ ಕೆರೆ ಉಳಿಸಿ ಚಳವಳಿ ರೂಪಿಸಿದ್ದು ನಿಜಕ್ಕೂ ಮಾದರಿಯಾಗಿದೆ. ಇದು ಹತ್ತಾರು ಊರುಗಳಲ್ಲಿ ಕೆರೆ ಉಳಿಸಿ ಅಭಿಯಾನಕ್ಕೂ ಪ್ರೇರಣೆಯಾಯಿತು.

ಅಂಚೆ ಕೊಟ್ರೇಶ್ ರಂಗಭೂಮಿ ಕಲಾವಿದ ಕೂಡ. ಕೊಟ್ಟೂರೇಶ್ವರ ಕಲಾ ರಂಗದ ಸಕ್ರಿಯ ಕಲಾವಿದ. ಕೊಟ್ಟೂರು ಕಲಾಕೇಂದ್ರದ ಚಟುವಟಿಕೆಗಳಲ್ಲೂ ಇವರ ಶ್ರಮವಿದೆ. 2015 ರಲ್ಲಿ ಮುಂಬೈ ಕನ್ನಡ ಸಂಘ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ರಂಗ ನಿರ್ದೇಶಕ ಶ್ರೀಕಾಂತ್ ನಿರ್ದೇಶನದ ರವೀಂದ್ರನಾಥ ಠಾಗೂರ್ ಅವರ `ಕಾಲಾಯಾತ್ರ’ ನಾಟಕದ ಬಂಗಾರಶೆಟ್ಟಿ ಪಾತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಗಿರೀಶ್ ಕಾರ್ನಾಡ್ ಅವರ ತುಘಲಕ್ ನಾಟಕದಲ್ಲಿ ಶಿಯಾಬುದ್ದೀನ್ ಮತ್ತು ಆಜಂ ಪಾತ್ರ, ಕುಂವಿಯವರ ಮಾತೇ ಜೋತಿರ್ಲಿಂಗಪ್ಪಾಜಿ ನಾಟಕದ ಕೊಟ್ರೇಶ್ ಹಾಗೂ ಮರಿಬಸಪ್ಪನ ಪಾತ್ರದಲ್ಲಿ, ಲಂಕೇಶರ ಸಂಕ್ರಾಂತಿ ನಾಟಕದ ಉಜ್ಜನ ಪಾತ್ರದಲ್ಲಿ, ಆನಂದ ಋಗ್ವೇದಿಯ ಉರ್ವಿಯಲ್ಲಿ ಮಯ, ರಕ್ತರಾತ್ರಿಲ್ಲಿ ಅಶ್ವತ್ತಾಮನ ಪಾತ್ರದಲ್ಲಿ ನಟಿಸಿದ್ದಾರೆ.

ಕೊಟ್ರೇಶ್ ಅವರ ಈ ಎಲ್ಲಾ ಚಟುವಟಿಕೆಗಳ ಹಿಂದಣ ಶಕ್ತಿ ಅವರ ಸಂಗಾತಿ ಬ್ಯೂಟೀಶಿಯನ್ ಅರುಣಾ. ಇವರೂ ಕೂಡ ಕ್ರಿಯೇಟಿವ್ ಲೇಡಿಸ್ ಕ್ಲಬ್ಬಿನ ಸಕ್ರಿಯ ಸದಸ್ಯೆ. ಹೀಗೆ ಕೊಟ್ರೇಶ್ ಅಂಚೆ ನೌಕರರಾಗಿದ್ದೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗುವ ಕ್ರಿಯಾಶೀಲತೆ ಇತರರಿಗೆ ಮಾದರಿಯಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅಂಚೆ ಕೊಟ್ರೇಶ್ ಮತ್ತು ಅವರ ಸ್ನೇಹಿತರು ಕೂಡಿ ಕೊಟ್ಟೂರು ಕೆರೆಯ ಪುನರುಜ್ಜೀವನಕ್ಕೆ ಕೈಗೊಂಡಿರುವುದು ಊರಿಗೆ,ಊರು ಜನರಿಗೆ ಜೀವ ತುಂಬಿದಂತೆ. ನಾನೂ ಕೊಟ್ಟೂರಿನವನೇ. ಅಂಚೆ ಮೂಲಕ ಮಾಡುವುದಲ್ಲದೆ ಆನ್ಲೈನ್ ಮೂಲಕ ಸರ್ಕಾರವನ್ನು ಬಡಿದೆಬ್ಬಿಸುವ ಕೆಲಸ ಮಾಡಿದರೆ ಇನ್ನೂ ಉತ್ತಮ. ಇದರಿಂದ ಎಲ್ಲಾ ಕಡೆ ಹರಡಿರುವ ಕೊಟ್ಟೂರಿನ ಜನ ಇದಕ್ಕೆ ಕೈ ಗೂಡುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...