ಎಲ್ಗರ್ ಪರಿಷದ್ ಪ್ರಕರಣದ ಆರೋಪದಲ್ಲಿ ಸಿಲುಕಿರುವ ಕವಿ, ಹೋರಾಟಗಾರ ವರವರರಾವ್ ಅವರ ಜಾಮೀನು ವಿಸ್ತರಣೆ ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಮುಂದೂಡಿದ್ದು, ಅಕ್ಟೋಬರ್ 13ರಂದು ವಿಚಾರಣೆ ನಡೆಯಲಿದೆ. ಅಕ್ಟೋಬರ್ 14ರವರೆಗೆ ತಲೊಜಾ ಜೈಲಿನ ಅಧಿಕಾರಿಗಳ ಮುಂದೆ ವರವರ ರಾವ್ ಹಾಜರಾಗುವ ಅಗತ್ಯವಿಲ್ಲ ಎಂದು ಕೋರ್ಟ್ ಶುಕ್ರವಾರ ತಿಳಿಸಿದೆ.
ವೈದ್ಯಕೀಯ ಚಿಕಿತ್ಸೆಯ ಕಾರಣದಿಂದಾಗಿ 82 ವರ್ಷ ವಯಸ್ಸಿನ ರಾವ್ ಅವರಿಗೆ ಆರು ತಿಂಗಳು ಮಧ್ಯಂತರ ಜಾಮೀನನ್ನು ಫೆ.22ರಂದು ಹೈಕೋರ್ಟ್ ನೀಡಿತ್ತು. ಸೆಪ್ಟೆಂಬರ್ 5ರಂದು ನ್ಯಾಯಾಂಗ ಬಂಧನಕ್ಕೆ ಮರಳುವಂತೆ ನಿರ್ಧರಿಸಲಾಗಿತ್ತು.
ಜಾಮೀನು ವಿಸ್ತರಣೆ ಮಾಡಿ, ಹೈದ್ರಾಬಾದ್‌ನ ತಮ್ಮ ಮನೆಯಲ್ಲಿ ಉಳಿಯಲು ಅವಕಾಶ ಕೋರಿ ರಾವ್ ಅವರು ತಮ್ಮ ವಕೀಲರಾದ ಆರ್.ಸತ್ಯನಾರಾಯಣನ್ ಮತ್ತು ಹಿರಿಯ ವಕೀಲ ಆನಂದ್ ಗ್ರೋವರ್ ಮೂಲಕ ಅರ್ಜಿ ಸಲ್ಲಿಸಿದ್ದರು.
ಸಮಯದ ಕೊರತೆಯಿಂದಾಗಿ ವಿಚಾರಣೆಯನ್ನು ಜಸ್ಟೀಸ್ ಎಸ್.ಎಸ್.ಶಿಂಧೆ ಮತ್ತು ಎನ್.ಜೆ.ಜಾಮದಾರ್ ಅವರಿದ್ದ ಪೀಠವು ಮುಂದೂಡಿದ್ದು, ಅಕ್ಟೋಬರ್ 14ರವರೆಗೂ ಶರಣಾಗುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಇದನ್ನೂ ಓದಿ: ಪಾದ್ರಿ ಸ್ಟಾನ್ ಸ್ವಾಮಿ ಸಾವು: ಭಾರತದ ಮುಖ್ಯ ನ್ಯಾಯಾಧೀಶರಿಗೊಂದು ಬಹಿರಂಗ ಪತ್ರ


