ಉತ್ತರ ಪ್ರದೇಶದ ಮಥುರಾದಲ್ಲಿ ದಲಿತ ಸಮುದಾಯದ ಮದುವೆ ಮೆರವಣಿಗೆಯ ಮೇಲೆ ಪ್ರಬಲ ಜಾತಿ ಗುಂಪು ದಾಳಿ ನಡೆಸಿದ್ದು, ವರನನ್ನು ಕುದುರೆಯಿಂದ ಬಲವಂತವಾಗಿ ಕೆಳಗಿಳಿಸಿದ್ದಾರೆ ಎಂದು ವರದಿಯಾಗಿದೆ. ಇಷ್ಟಕ್ಕೇ ಸುಮ್ಮನಾಗದ ಗುಂಪು, ‘ಮತ್ತೆ ಸವಾರಿ ಮಾಡಿದರೆ ಗುಂಡಿಕ್ಕಿ’ ಎಂದು ವರನಿಗೆ ಬೆದರಿಕೆ ಹಾಕಿದ್ದಾರೆ.
ಮಥುರಾ ಜಿಲ್ಲೆಯ ಭೂರೇಕಾ ಗ್ರಾಮದಲ್ಲಿ ದಲಿತ ಕುಟುಂಬದ ಮದುವೆ ಆಯೋಜನೆಯಾಗಿತ್ತು. ಡಿಜೆ ಜೊತೆಗೆ ಸಾಗುತ್ತಿದ್ದ ಮದುವೆ ಮೆರವಣಿಗೆ ಮೇಲೆ ಪ್ರಬಲಜಾತಿ ಪುರುಷರ ಗುಂಪೊಂದು ದಾಳಿ ನಡೆಸಿದೆ. ನಂತರ, ದಲಿತ ವರನನ್ನು ಕುದುರೆಯಿಂದ ಬಲವಂತವಾಗಿ ಕೆಳಗಿಸಿ ಬೆದರಿಕೆ ಹಾಕಿದ್ದಾರೆ. ವಿವಾಹಕ್ಕೆ ಆಗಮಿಸಿದ್ದ ಹಲವಾರು ಅತಿಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಜೆ ಸಂಗೀತ ಮತ್ತು ಕುದುರೆ ಮೆರವಣಿಗೆಯಿಂದ ಕುಪಿತಗೊಂಡ ಸವರ್ಣೀಯರು, ಮೆರವಣಿಗೆ ಮುಂದುವರಿದರೆ ವರ ಮತ್ತು ಇತರ ಅತಿಥಿಗಳಿಗಳ ಮೇಲೆ ಗುಂಡು ಹಾರಿಸಲಾಗುವುದು ಎಂದು ಜೀವ ಬೆದರಿಕೆ ಹಾಕಿದ್ದಾನೆ. “ಎಫ್ಐಆರ್ ದಾಖಲಿಸಲಾಗಿದೆ, ತನಿಖೆ ನಡೆಯುತ್ತಿದೆ” ಎಂದು ಹೇಳಿದ ಡಿಎಸ್‌ಪಿ (ಮಂತ್) ಗುಂಜನ್ ಸಿಂಗ್, ವರನನ್ನು ಬಲವಂತವಾಗಿ ಕುದುರೆಯಿಂದ ಇಳಿಸಲಾಗಿದೆ ಎಂಬ ಆರೋಪವನ್ನು ನಿರಾಕರಿಸಿದರು.
ವಧುವಿನ ಚಿಕ್ಕಪ್ಪ ಪುರಣ್ ಸಿಂಗ್ ಪೊಲೀಸರಿಗೆ ನೀಡಿದ ದೂರಿನಲ್ಲಿ, ಮಥುರಾದ ನವಲಿ ನಿವಾಸಿಗಳಾದ ಕೃಷ್ಣ, ಮನೀಶ್ ಕುಮಾರ್ ಮತ್ತು ಅಂಕುರ್ ಅವರನ್ನು ಪ್ರಮುಖ ಆರೋಪಿಗಳೆಂದು ಹೆಸರಿಸಿದ್ದಾರೆ.
“ಬುಧವಾರ ಮಧ್ಯಾಹ್ನ 12.30 ರ ಸುಮಾರಿಗೆ, ಮೂವರು, 20-25 ಅಪರಿಚಿತ ವ್ಯಕ್ತಿಗಳೊಂದಿಗೆ, ಮೆರವಣಿಗೆಯನ್ನು ನಿಲ್ಲಿಸಿ ಜಾತಿ ನಿಂದನೆ ಮಾಡಿದ್ದಾರೆ. ನಮ್ಮ ಕುಟುಂಬ ಸದಸ್ಯರ ಮೇಲೆ ಕೋಲುಗಳಿಂದ ಹಲ್ಲೆ ನಡೆಸಿದರು. ನಮ್ಮ ಮುಂದೆ ಡಿಜೆ ಮತ್ತು ಕುದುರೆ ಮೆರವಣಿಗೆ ನಡೆಸುವುದಕ್ಕೆ ನಿಮಗೆ ಧೈರ್ಯ ಹೇಗೆ ಬಂತು ಎಂದು ಅವರು ನಮ್ಮನ್ನು ಕೇಳಿದರು. ಅವರು ವರನನ್ನು ಕುದುರೆ ಮೇಲಿಂದ ಎಳೆದು, ಡಿಜೆಯನ್ನು ನಿಲ್ಲಿಸಿ, ಮೆರವಣಿಗೆ ನಿಲ್ಲಿಸದಿದ್ದರೆ ನಮ್ಮನ್ನು ಕೊಲ್ಲುತ್ತೇವೆ ಎಂದು ಹೇಳಿದರು. ನಾನು 112 ಸಂಖ್ಯೆಗೆ ಕರೆ ಮಾಡಿದೆ, ಪೊಲೀಸರು ಮೆರವಣಿಗೆ ಶಾಂತಿಯುತವಾಗಿ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಬಂದರು. ನಂತರ ಪೊಲೀಸ್ ರಕ್ಷಣೆಯಲ್ಲಿ, ವಿವಾಹ ಸಮಾರಂಭ ಹಾಗೂ ಔತಣಕೂಟ ನಡೆಸಲಾಯಿತು” ಎಂದರು.
ಗುರುವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಮೋಟಾರ್ ಸೈಕಲ್‌ಗಳಲ್ಲಿ ಕೋಲುಗಳು, ಪಿಸ್ತೂಲ್‌ಗಳು ಮತ್ತು ಚಾಕುಗಳೊಂದಿಗೆ ಗುಂಪು ಮರಳಿದೆ ಎಂದು ಆರೋಪಿಸಲಾಗಿದೆ. ಅವರು ಮನೆಗೆ ನುಗ್ಗಿ ವರನ ಕುಟುಂಬದ ಹಲವಾರು ಸದಸ್ಯರ ಮೇಲೆ ಹಲ್ಲೆ ನಡೆಸಿದರು. “ಅವರು ಜಾತಿ ನಿಂದನೆ ಮಾಡಿ ಥಳಿಸಿದರು. ಅವರು ನಮ್ಮ ಬಟ್ಟೆಗಳನ್ನು ಹರಿದು ಹಾಕಿ, ಹಾಸಿಗೆಗಳು ಮತ್ತು ಮೋಟಾರ್ ಸೈಕಲ್ ಸೇರಿದಂತೆ ಮನೆಯ ವಸ್ತುಗಳನ್ನು ಧ್ವಂಸಗೊಳಿಸಿದರು” ಎಂದು ಸಿಂಗ್ ಆರೋಪಿಸಿದ್ದಾರೆ.
“ನೌಝೀಲ್ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 191-2 (ಗಲಭೆ) ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆ ಸೇರಿದಂತೆ ಹಲವಾರು ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅನ್ವಯವಾಗುವ ಇತರ ಸೆಕ್ಷನ್‌ಗಳಲ್ಲಿ ಬಿಎನ್ಎಸ್ 76 (ಮಹಿಳೆಯ ಮೇಲೆ ಬಟ್ಟೆ ಎಳೆಯುವ ಅಥವಾ ಬೆತ್ತಲೆಯಾಗುವಂತೆ ಒತ್ತಾಯಿಸುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಮತ್ತು 333 (ಹಾನಿ, ಹಲ್ಲೆ ಅಥವಾ ತಪ್ಪು ಸಂಯಮವನ್ನು ಉಂಟುಮಾಡಲು ಸಿದ್ಧತೆಯ ನಂತರ ಮನೆಗೆ ಅತಿಕ್ರಮಣ) ಸೇರಿವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ತಮಿಳುನಾಡು| ಮಲಗುಂಡಿ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಮೂವರು ದಲಿತ ಯುವಕರು ಸಾವು, ಒಬ್ಬರ ಸ್ಥಿತಿ ಗಂಭೀರ