ಸೋಮವಾರ (ಡಿಸೆಂಬರ್ 8) ರಾತ್ರಿ (ಭಾರತೀಯ ಕಾಲಮಾನ ಸಂಜೆ 7.45) ಈಶಾನ್ಯ ಜಪಾನ್‌ನಲ್ಲಿ ಸಂಭವಿಸಿದ 7.5 ತೀವ್ರತೆಯ ಪ್ರಬಲ ಭೂಕಂಪದಲ್ಲಿ ಕನಿಷ್ಠ 30 ಜನರು ಗಾಯಗೊಂಡಿದ್ದು, ಸಾವಿರಾರು ಜನರು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ ಎಂದು ವರದಿಯಾಗಿದೆ.
ಅವೋಮೋರಿ ಪ್ರದೇಶದ ಕರಾವಳಿಯಿಂದ ಸುಮಾರು 80 ಕಿ.ಮೀ ದೂರದಲ್ಲಿ ಭೂಮಿಯ 50 ಕಿ.ಮೀ (31 ಮೈಲಿ) ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ. ಆರಂಭದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿತ್ತು, ಈಗ ಅದನ್ನು ವಾಪಸ್ ಪಡೆಯಲಾಗಿದೆ. ಆದರೆ, ಸಮುದ್ರದಲ್ಲಿ ಸುಮಾರು 70 ಸೆಂ.ಮೀ (27 ಇಂಚು) ಎತ್ತರದ ಅಲೆಗಳು ಕಂಡುಬಂದಿವೆ ಎಂದು ಸುದ್ದಿ ಸಂಸ್ಥೆ ಬಿಬಿಸಿ ವರದಿ ಮಾಡಿದೆ.
ಭೂಕಂಪ ಹಿನ್ನೆಲೆ ಕೆಲವು ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಸಾವಿರಾರು ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿವೆ. ಮುಂದಿನ ದಿನಗಳಲ್ಲಿ ಇನ್ನೂ ಬಲವಾದ ಭೂಕಂಪ ಸಂಭವಿಸಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಕನಿಷ್ಠ ಒಂದು ವಾರದವರೆಗೆ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಭೂಕಂಪದ ಬಳಿಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಜಪಾನ್ ಪ್ರಧಾನಿ ಸನೈ ತಾಕೈಚಿ, “ಕೆಲ ದಿನಗಳ ಕಾಲ ಪ್ರತಿನಿತ್ಯ ಭೂಕಂಪ ಎದುರಿಸಲು ಸಿದ್ದರಾಗಿರಿ. ಮನೆ, ಕಚೇರಿಗಳ ಪೀಠೋಪಕರಣಗಳು ಹಾನಿಯಾಗದಂತೆ ಸುರಕ್ಷಿತವಾಗಿಡಿ. ಕಂಪನದ ಅನುಭ ಆದರೆ ತಕ್ಷಣ ಕಟ್ಟಡಗಳಿಂದ ಹೊರಗೆ ಓಡಿ” ಎಂದು ಹೇಳಿದ್ದಾರೆ.
ರಾಯಿಟರ್ಸ್ ಸುದ್ದಿ ಸಂಸ್ಥೆಯ ಪ್ರಕಾರ, ಸುಮಾರು 90,000 ನಿವಾಸಿಗಳನ್ನು ಸ್ಥಳಾಂತರಿಸಲು ಸರ್ಕಾರ ಆದೇಶ ನೀಡಿದೆ. ಅವೋಮೋರಿ ಪ್ರಿಫೆಕ್ಚರ್ ಸರ್ಕಾರ ಹೇಳಿದ ಪ್ರಕಾರ, ಸುಮಾರು 2,700 ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಪೂರ್ವ ಜಪಾನ್ ರೈಲ್ವೆ ಸಂಸ್ಥೆಯು ಈಶಾನ್ಯ ಕರಾವಳಿ ಭಾಗದ ಕೆಲವು ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ.
ಜಪಾನ್ ಸರ್ಕಾರವು ಪ್ರಧಾನ ಮಂತ್ರಿಯ ಬಿಕ್ಕಟ್ಟು ನಿರ್ವಹಣಾ ಕೇಂದ್ರದಲ್ಲಿ ಒಂದು ಪ್ರತಿಕ್ರಿಯೆ ಕಚೇರಿಯನ್ನು ಸ್ಥಾಪಿಸಿದೆ ಮತ್ತು ತುರ್ತು ತಂಡವನ್ನು ಸಿದ್ದಪಡಿಸಿದೆ ಎಂದು ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ ಮಿನೋರು ಕಿಹರಾ ಹೇಳಿದ್ದಾರೆ.
“ನಾವು ಹಾನಿಯನ್ನು ನಿರ್ಣಯಿಸಲು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಸೇರಿದಂತೆ ತುರ್ತು ವಿಪತ್ತು ಪ್ರತಿಕ್ರಿಯೆ ಕ್ರಮಗಳನ್ನು ಜಾರಿಗೆ ತರಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ” ಎಂದು ಅವರು ತಿಳಿಸಿದ್ದಾರೆ.
ಭೂಕಂಪದಿಂದ ತನ್ನ ಹಿಗಾಶಿಡೋರಿ ಮತ್ತು ಒನಗಾವಾ ಪರಮಾಣು ವಿದ್ಯುತ್ ಸ್ಥಾವರಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಜಪಾನಿನ ವಿದ್ಯುತ್ ಕಂಪನಿ ಟೊಹೊಕು ಎಲೆಕ್ಟ್ರಿಕ್ ಪವರ್ ಹೇಳಿದೆ. ನಿಷ್ಕ್ರಿಯಗೊಂಡ ಫುಕುಶಿಮಾ ಅಣುವಿದ್ಯುತ್ ಕೇಂದ್ರದಲ್ಲಿಯೂ ಭೂಕಂಪದಿಂದ ಯಾವುದೇ ತೊಂದರೆ ಕಂಡುಬಂದಿಲ್ಲ ಎಂದು ವರದಿಯಾಗಿದೆ.
ಮಾರ್ಚ್ 11, 2011ರಂದು ದೇಶದ ಪೂರ್ವ ಕರಾವಳಿಯಲ್ಲಿ 9.0 ತೀವ್ರತೆಯ ಭೂಕಂಪ ಸಂಭವಿಸಿದಾಗ ಫುಕುಶಿಮಾ ಅಣುವಿದ್ಯುತ್ ಸ್ಥಾವರಕ್ಕೆ ಹಾನಿಯಾಗಿತ್ತು. ಈ ಭೂಕಂಪ ಅತ್ಯಂತ ಶಕ್ತಿಶಾಲಿಯಾಗಿತ್ತು. ಪರಿಣಾಮ ಸಮುದ್ರದಲ್ಲಿ ಎದ್ದ ಸುನಾಮಿ ಅಲೆಗಳು ಹೊನ್ಶು ದ್ವೀಪವನ್ನು ಮುಳುಗಿಸಿತ್ತು. ಇದರಲ್ಲಿ ಸುಮಾರು 18 ಸಾವಿರ ಜನರು ಸಾವನ್ನಪ್ಪಿದ್ದರು.
ಜಪಾನ್ ವಿಶ್ವದ ಅತಿ ಹೆಚ್ಚು ಭೂಕಂಪ ಪೀಡಿತ ರಾಷ್ಟ್ರಗಳಲ್ಲಿ ಒಂದಾಗಿದೆ. ಜಪಾನ್ ಭೂಮಂಡಲದ ರಿಂಗ್ ಆಫ್ ಫೈರ್ ಪ್ರದೇಶದಲ್ಲಿದೆ. ಇಲ್ಲಿ ವರ್ಷಕ್ಕೆ ಸುಮಾರು 1,500 ಭೂಕಂಪನದ ಅನುಭವಗಳಾಗುತ್ತದೆ.


