ಪೂರ್ವ ಅಫ್ಘಾನಿಸ್ತಾನದಲ್ಲಿ ಸೋಮವಾರ (ಸೆ.1) ಸಂಭವಿಸಿದ ಭೂಕಂಪದಲ್ಲಿ ಸುಮಾರು 500 ಜನರು ಸಾವನ್ನಪ್ಪಿದ್ದಾರೆ ಮತ್ತು 1000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ಸರ್ಕಾರಿ ಪ್ರಸಾರಕ ರೇಡಿಯೋ ಟೆಲಿವಿಷನ್ ಅಫ್ಘಾನಿಸ್ತಾನ್ (ಆರ್‌ಟಿಎ) ಮೂಲಗಳನ್ನು ಉಲ್ಲೇಖಿಸಿ livemint.com ವರದಿ ಮಾಡಿದೆ.
ಕಾಬೂಲ್‌ನಲ್ಲಿರುವ ತಾಲಿಬಾನ್ ನೇತೃತ್ವದ ಆರೋಗ್ಯ ಅಧಿಕಾರಿಗಳು ದೇಶದ ದೂರದ ಪ್ರದೇಶಗಳನ್ನು ತಲುಪಲು ಕೆಲಸ ಮಾಡುತ್ತಿದ್ದಾರೆ. ಅಲ್ಲಿನ ಪರಿಸ್ಥಿತಿ ತಿಳಿದುಕೊಂಡು ಸಾವು-ನೋವು ಮತ್ತು ಆಸ್ತಿ-ಪಾಸ್ತಿ ಹಾನಿಯ ಕುರಿತು ಅಧಿಕೃತ ಮಾಹಿತಿಯನ್ನು ನೀಡುತ್ತೇವೆ ಎಂಬುವುದಾಗಿ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ಬಿಬಿಸಿ ಸುದ್ದಿ ಸಂಸ್ಥೆ 600 ಜನರು ಸಾವಿಗೀಡಾಗಿದ್ದಾರೆ ಎಂದು ವರದಿ ಮಾಡಿದೆ. ಇನ್ನೂ ಕೆಲ ಮಾಧ್ಯಮಗಳು 250ರಿಂದ 300 ಜನರು ಅಸುನೀಗಿದ್ದಾಗಿ ಹೇಳಿದೆ.
ಭೂಕಂಪದಿಂದ ಕುನಾರ್ ಪ್ರಾಂತ್ಯದಲ್ಲಿ ಮೂರು ಗ್ರಾಮಗಳು ನೆಲಸಮವಾಗಿವೆ. ಕುನಾರ್‌ನ ನುರ್ಗಲ್, ಚಾವ್ಕೇ ಮತ್ತು ವಾಟಪುರ್ ಜಿಲ್ಲೆಗಳು ಹೆಚ್ಚು ಹಾನಿಗೊಳಗಾಗಿವೆ ಎಂದು ಅಫ್ಘಾನಿಸ್ತಾನದ ಸುದ್ದಿ ಸಂಸ್ಥೆ ಬಖ್ತರ್ ವರದಿ ಮಾಡಿದೆ.
ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರದೇಶದ ಗಡಿಗೆ ರಕ್ಷಣಾ ತಂಡಗಳು ಧಾವಿಸಿವೆ. ಅಲ್ಲಿ ಭೂಮಿಯ 10 ಕಿಮೀ (6 ಮೈಲಿ) ಆಳದಲ್ಲಿ ಸಂಭವಿಸಿದ ಮಧ್ಯರಾತ್ರಿಯ ಭೂಕಂಪದಿಂದ ಮಣ್ಣು ಮತ್ತು ಕಲ್ಲಿನ ಮನೆಗಳು ನೆಲಸಮಗೊಂಡಿವೆ ಎಂದು ವರದಿ ಹೇಳಿದೆ.
ಭೂಕಂಪದಿಂದ ದೇಶದ ಪೂರ್ವ ಪ್ರಾಂತ್ಯಗಳಲ್ಲಿ ಜೀವ ಮತ್ತು ಆಸ್ತಿಪಾಸ್ತಿ ಹಾನಿಯಾಗಿದ್ದು, ರಕ್ಷಣಾ ಕಾರ್ಯಗಳು ನಡೆಯುತ್ತಿವೆ ಎಂದು ತಾಲಿಬಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ಜಲಾಲಾಬಾದ್‌ನ ಪೂರ್ವ ಈಶಾನ್ಯಕ್ಕೆ ಸುಮಾರು 27 ಕಿಲೋಮೀಟರ್ (17 ಮೈಲು) ದೂರದಲ್ಲಿ ಮಧ್ಯರಾತ್ರಿ 6.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ವರದಿ ಮಾಡಿದೆ.
ಕಾಬೂಲ್ ಮತ್ತು ನೆರೆಯ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಸುಮಾರು 370 ಕಿಲೋಮೀಟರ್ (230 ಮೈಲು) ದೂರದಲ್ಲಿ ಹಲವಾರು ಸೆಕೆಂಡುಗಳ ಕಾಲ ಕಂಪನದ ಅನುಭವವಾಗಿದೆ ಎಂದು ಎಎಫ್‌ಪಿ ವರದಿ ತಿಳಿಸಿದೆ.
ಮೊದಲ ಭೂಕಂಪದ ನಂತರ, ಆ ಪ್ರದೇಶದಲ್ಲಿ 30 ನಿಮಿಷಗಳ ಅವಧಿಯಲ್ಲಿ ಮೂರು ಅಥವಾ ನಾಲ್ಕು ಕಂಪನಗಳು ಸಂಭವಿಸಿವೆ. ಅವುಗಳ ತೀವ್ರತೆ 4 ರಿಂದ 5 ರವರೆಗೆ ಇತ್ತು ಎಂದು ವರದಿ ಹೇಳಿದೆ.
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಭೂಮಿಯ ಎಂಟು ಕಿಲೋಮೀಟರ್ ಆಳದಲ್ಲಿ ಸಂಭವಿಸಿದ ಭೂಕಂಪದ ಕೇಂದ್ರಬಿಂದು ನಂಗರ್ಹಾರ್ ಪ್ರಾಂತ್ಯದ ಜಲಾಲಾಬಾದ್ ನಗರದಿಂದ 27 ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿದೆ.
ಅಫ್ಘಾನಿಸ್ತಾನವು ಆಗಾಗ್ಗೆ ಭೂಕಂಪಗಳಿಗೆ ತುತ್ತಾಗುತ್ತಿದೆ, ವಿಶೇಷವಾಗಿ ಹಿಂದೂ ಕುಶ್ ಪರ್ವತ ಶ್ರೇಣಿಯಲ್ಲಿ, ಯುರೇಷಿಯನ್ ಮತ್ತು ಇಂಡಿಯನ್ ಟೆಕ್ಟೋನಿಕ್ ಪ್ಲೇಟ್‌ಗಳ ಜಂಕ್ಷನ್ ಬಳಿ ಭೂಮಿ ಕಂಪಿಸುತ್ತಿವೆ.
ನಂಗರ್‌ಹಾರ್ ಪ್ರಾಂತ್ಯವು ಶುಕ್ರವಾರದಿಂದ ಶನಿವಾರದವರೆಗೆ ರಾತ್ರಿಯಿಡೀ ಪ್ರವಾಹಕ್ಕೆ ತುತ್ತಾಗಿದ್ದು, ಐದು ಜನರು ಸಾವನ್ನಪ್ಪಿದ್ದಾರೆ. ಕೃಷಿ ಮತ್ತು ಆಸ್ತಿಪಾಸ್ತಿ ನಾಶವಾಗಿದೆ ಎಂದು ಪ್ರಾಂತೀಯ ಅಧಿಕಾರಿಗಳು ತಿಳಿಸಿದ್ದಾರೆ.
‘ಭಾರತೀಯರ ವೆಚ್ಚದಲ್ಲಿ ‘ಬ್ರಾಹ್ಮಣರು’ ಲಾಭ ಗಳಿಸುತ್ತಿದ್ದಾರೆ’: ಶ್ವೇತಭವನ ಸಲಹೆಗಾರ ನವರೊ


