ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆಪ್ತ ಕಾರ್ಯದರ್ಶಿ ಮತ್ತು ಗಾಂಧಿ ಕುಟುಂಬದ ದೀರ್ಘಕಾಲದ ಸಹಾಯಕ ಪಿಪಿ ಮಾಧವನ್ (73) ಸೋಮವಾರ (ಡಿ.16) ಹೃದಯಾಘಾತದಿಂದ ನಿಧನರಾದರು.
ವರದಿಗಳ ಪ್ರಕಾರ, ಮಾಧವನ್ ಅವರು ಸೋಮವಾರ ಹಠಾತ್ ಕುಸಿದು ಬಿದ್ದಿದ್ದು, ಅವರನ್ನು ತಕ್ಷಣ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮಾಧವನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾಗ ಲೋಕಸಭೆ ಸಂಸದರು ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾಗಿರುವ ಕೆ.ಸಿ ವೇಣುಗೋಪಾಲ್ ಮತ್ತು ಪ್ರಿಯಾಂಕಾ ಗಾಂಧಿ ಅಲ್ಲಿ ಉಪಸ್ಥಿತರಿದ್ದರು.
ಮಾಧವನ್ ಅವರ ಅಂತ್ಯಕ್ರಿಯೆ ಇಂದು (ಡಿ.17) ಅವರ ಹುಟ್ಟೂರಾದ ಕೇರಳದ ತ್ರಿಶೂರ್‌ನಲ್ಲಿ ನೆರವೇರಲಿದ್ದು, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದಾರೆ.
ಮಾಜಿ ಕೇಂದ್ರ ಸರ್ಕಾರಿ ಉದ್ಯೋಗಿಯಾಗಿದ್ದ ಮಾಧವನ್, 1984ರಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾದಾಗಿನಿಂದ ಗಾಂಧಿ ಕುಟುಂಬದ ಜೊತೆಗಿದ್ದರು. ಅಂದಿನಿಂದ ಅವರು ಎಲ್ಲಾ ಏರು-ಪೇರುಗಳ ಸಮಯದಲ್ಲಿ ಗಾಂಧಿ ಕುಟುಂಬಕ್ಕೆ ಬೆನ್ನೆಲುಬಾಗಿದ್ದರು. ದೆಹಲಿಯ 10 ಜನಪತ್ ಕಾಂಪೌಂಡ್‌ನ ಗಾಂಧಿ ಕುಟುಂಬದ ನಿವಾಸದಲ್ಲಿ ಕಿರಿಯರಿಂದ ಹಿರಿಯರವರೆಗೆ ಮಾಧವನ್ ಎಲ್ಲರಿಗೂ ವಿಶ್ವಾಸನೀಯ ವ್ಯಕ್ತಿಯಾಗಿದ್ದರು.
“ಸಿಪಿಪಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ದೀರ್ಘಾವಧಿಯ ವೈಯಕ್ತಿಕ ಸಹಾಯಕರಾದ ಪಿ ಪಿ ಮಾಧವನ್ ಅವರ ದುರಂತ ನಿಧನವನ್ನು ನಾವು ತೀವ್ರ ದುಃಖ ಮತ್ತು ನೋವಿನಿಂದ ಘೋಷಿಸುತ್ತಿದ್ದೇವೆ. ಅವರು ರಾಜೀವ್ ಗಾಂಧಿಯವರ ಜೊತೆ ಸೇರಿದಂತೆ ದಶಕಗಳ ಕಾಲ ಪಕ್ಷಕ್ಕೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದಾರೆ. ಅವರು ತಮ್ಮ ಸೇವೆ ಮತ್ತು ಸಮರ್ಪಣೆಗಾಗಿ ಸದಾ ಸ್ಮರಣೀಯರು” ಎಂದು ಮಾಧವನ್ ನಿಧನ ಕುರಿತು ಕೆ.ಸಿ ವೇಣುಗೋಪಾಲ್ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ : ಲೋಕಸಭೆಯಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆ’ ಮಂಡನೆ ಸಾಧ್ಯತೆ : ಸಂಸದರಿಗೆ ವಿಪ್ ಜಾರಿ ಮಾಡಿದ ಬಿಜೆಪಿ, ಕಾಂಗ್ರೆಸ್


