ಬಂಗಾಳ ಮತ್ತು ತಮಿಳುನಾಡು ಚುನಾವಣಾ ಗೆಲುವಿನಿಂದ ಹುಮ್ಮಸ್ಸಿನಲ್ಲಿರುವ ರಾಜಕೀಯ ತಂತ್ರಜ್ಞ, ಚುನಾವಣಾ ನಿಪುಣ ಪ್ರಶಾಂತ್ ಕಿಶೋರ್ ಇಂದು ಮುಂಬೈನಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ರವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಒಟ್ಟಿಗೆ ಊಟ ಮಾಡಿದ್ದಾರೆ. ಇದು 2024ರಲ್ಲಿ ನರೇಂದ್ರ ಮೋದಿ ವಿರುದ್ಧದ ವಿರೋಧ ಪಕ್ಷಗಳ ಪ್ರಬಲ ಮೈತ್ರಿಕೂಟಕ್ಕೆ ಸಿದ್ದತೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇದು ಸೌಜನ್ಯದ ಭೇಟಿ. ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಮತ್ತು ಡಿಎಂಕೆ ಪಕ್ಷಕ್ಕೆ ಬೆಂಬಲ ನೀಡಿದ ಎಲ್ಲಾ ಪಕ್ಷಗಳ ಮುಖಂಡರನ್ನು ಪ್ರಶಾಂತ್ ಕಿಶೋರ್ ಭೇಟಿಯಾಗಿ ಧನ್ಯವಾದ ತಿಳಿಸುತ್ತಿದ್ದಾರೆ ಅವರ ಐಪ್ಯಾಕ್ ತಂಡ ಹೇಳಿದೆ.
ಆದರೂ 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ನರೇಂದ್ರ ಮೋದಿ ಎದುರು ಪ್ರಬಲ ವಿರೋಧ ಪಕ್ಷಗಳ ಮೈತ್ರಿ ಸ್ಥಾಪಿಸುವ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದೆ ಎಂಬ ಉಹಾಪೋಹಗಳು ಹರಿದಾಡುತ್ತಿವೆ.
ತಾನು ಕೆಲಸ ಮಾಡಿದ್ದ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಬಂಗಾಳದಲ್ಲಿ ಟಿಎಂಸಿ ಭರ್ಜರಿ ಜಯಗಳಿಸುತ್ತಿದ್ದಂತೆ ಪ್ರಶಾಂತ್ ಕಿಶೋರ್ ತಾನು ಈ ಕ್ಷೇತ್ರ ತ್ಯಜಿಸುವುದಾಗಿ ಹೇಳಿದ್ದರು. “ಈಗ ನಾನು ಮಾಡುತ್ತಿರುವುದನ್ನು ಮುಂದುವರಿಸಲು ಬಯಸುವುದಿಲ್ಲ. ನಾನು ಸಾಕಷ್ಟು ಮಾಡಿದ್ದೇನೆ. ವಿರಾಮ ತೆಗೆದುಕೊಂಡು ಜೀವನದಲ್ಲಿ ಬೇರೆ ಏನಾದರೂ ಮಾಡುವ ಸಮಯ ಇದು. ನಾನು ಈ ಕ್ಷೇತ್ರವನ್ನು ತ್ಯಜಿಸಲು ಬಯಸುತ್ತೇನೆ” ಎಂದು ಅವರು ಹೇಳಿದ್ದರು.
ಪ್ರಶಾಂತ್ ಕಿಶೋರ್ ಈ ಕ್ಷೇತ್ರ ತ್ಯಜಿಸುವುದಾಗಿ ಹೇಳಿದ್ದರೂ, ಬಹಳಷ್ಟು ಜನರು ಅದನ್ನು ನಂಬಲು ಸಿದ್ದರಿಲ್ಲ. ಅವರು ಮತ್ತಷ್ಟು ಕೆಲಸ ಮಾಡಬೇಕೆಂದು ಬಯಸಿದ್ದಾರೆ. ಅಲ್ಲದೇ 2022ರಲ್ಲಿ ಅವರು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪರವಾಗಿ ಕೆಲಸ ಮಾಡುವುದಾಗಿ ಘೋಷಿಸಿದ್ದಾರೆ. ಇನ್ನು ಬಂಗಾಳ ಚುನಾವಣೆಯಲ್ಲಿ ಅವರನ್ನು ಇನ್ನಿಲ್ಲದಂತೆ ಕಾಡಿದ ಬಿಜೆಪಿ ವಿರುದ್ಧ 2024ರ ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡುವಂತೆ ಹಲವು ವಿರೋಧ ಪಕ್ಷಗಳು ಕೇಳಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಇವತ್ತಿನ ಶರದ್ ಪವಾರ್ ಜೊತೆಗಿನ ಭೇಟಿಗೆ ಮಹತ್ವ ಬಂದಿದೆ.
ಇನ್ನೊಂದೆಡೆ ಮಹಾರಾಷ್ಟ್ರ ಮೈತ್ರಿಯಲ್ಲಿ ಬಿರುಕಿನ ಲಕ್ಷಣಗಳು ಗೋಚರಿಸಿವೆಯೆಂದು ಹಲವು ಮಾಧ್ಯಮಗಳು ವರದಿ ಮಾಡಿವೆ.
ಶಿವಸೇನೆ ಮುಖ್ಯಸ್ಥ ಮತ್ತು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರು ಪ್ರಧಾನಿ ಮೋದಿಯನ್ನು ಭೇಟಿಯಾದ ಬೆನ್ನಲ್ಲೆ ಶಿವಸೇನೆ ಮುಖಂಡ ಮತ್ತು ರಾಜ್ಯಸಭಾ ಸಂಸದ ಸಂಜಯ್ ರಾವತ್, “ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶದ ಉನ್ನತ ನಾಯಕ” ಎಂದು ಹೊಗಳಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಈ ಭೇಟಿಯನ್ನು ಅರ್ಥೈಸಲಾಗುತ್ತಿದೆ.
ಇದನ್ನೂ ಓದಿ: ಅಲೋಪತಿ ವೈದ್ಯರು ದೇವದೂತರು, ಲಸಿಕೆ ಪಡೆಯುವೆ; ಯೂಟರ್ನ್ ಹೊಡೆದ ಬಾಬಾ ರಾಮ್‌ದೇವ್


