ವರುಣ ವಿಧಾನಸಭಾ ಕ್ಷೇತ್ರದ ಸಿದ್ದರಾಮನಹುಂಡಿ ಸಮೀಪ ನಡೆದ ಪ್ರಕರಣದ ವರದಿ ಪ್ರಕಟಿಸಿರುವ ಸಂಬಂಧ ಮೈಸೂರಿನ ಪ್ರಾದೇಶಿಕ ದಿನಪತ್ರಿಕೆ ‘ಆಂದೋಲನ’ ಕುರಿತು ಸಂಸದ ಪ್ರತಾಪ್ ಸಿಂಹ ಅವರು ನೀಡಿರುವ ಅಸಂಬದ್ಧ ಹೇಳಿಕೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಖಂಡಿಸಿದೆ. ಪ್ರತಾಪ್ ಸಿಂಹ ಕ್ಷಮೆಯಾಚಿಸಬೇಕು ಆಗ್ರಹಿಸಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಪ್ರತಿಕ್ರಿಯೆ ಪಡೆದು ವರದಿ ಮಾಡಿದ ‘ಆಂದೋಲನ’ ದಿನಪತ್ರಿಕೆಯನ್ನು ಉಲ್ಲೇಖಿಸಿ ಪ್ರತಾಪ್ ಸಿಂಹ ಅವರು ಸುದ್ದಿಗೋಷ್ಠಿಯಲ್ಲಿ ‘ಪತ್ರಿಕೆ’ಯನ್ನು ಟಾರ್ಗೆಟ್ ಮಾಡಿ ಮಾತನಾಡಿರುವುದು ಖಂಡನೀಯ. ಈ ಬಗ್ಗೆ ಪ್ರತಾಪ್ ಸಿಂಹ ಅವರು ಕೂಡಲೇ ‘ಪತ್ರಿಕೆ’ಯ ಕ್ಷಮೆಯಾಚಿಸಬೇಕು ಎಂದು ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಟ್ವೀಟ್ ಮಾಡಿದ್ದಾರೆ.
ಏನಿದು ವಿವಾದ?
ಸಿದ್ದರಾಮನಹುಂಡಿಯಲ್ಲಿ ಗುರುವಾರ ಸಂಜೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದಿದೆ ಎನ್ನಲಾದ ಘರ್ಷಣೆ ಕುರಿತು ‘ಆಂದೋಲನ’ ವರದಿ ಪ್ರಕಟಿಸಿತ್ತು. ಪತ್ರಿಕೆಯು ವಾಸ್ತವಾಂಶಗಳನ್ನು ತಿರುಚಿ ಸುದ್ದಿ ಪ್ರಕಟಿಸಿದೆ ಎಂದು ಪ್ರತಾಪ್ ಆರೋಪಿಸಿದ್ದರು. ಸಂಸದರ ಹೇಳಿಕೆಯನ್ನು ಖಂಡಿಸಿ ‘ಆಂದೋಲನ’ ಮತ್ತೊಂದು ಟಿಪ್ಪಣಿಯನ್ನು ಪ್ರಕಟಿಸಿತ್ತು. ಜೊತೆಗೆ ತನ್ನ ವರದಿಗೆ ಬದ್ಧ ಎಂದು ಸ್ಪಷ್ಟಪಡಿಸಿತ್ತು.
‘ಆಂದೋಲನ’ ಹೇಳಿದ್ದೇನು?
“ಚುನಾವಣೆ ಸಂದರ್ಭದಲ್ಲಿ ವಿವಾದಗಳು, ವಾಗ್ವಾದಗಳು ಸಹಜ. ಆರೋಪಗಳು, ಆಪಾದನೆಗಳು, ಕೆಲವೊಮ್ಮೆ ಗಲಾಟೆಗಳು ಕೂಡ ನಡೆಯುತ್ತಿರುತ್ತವೆ. ಇಂಥ ಸಂದರ್ಭಗಳಲ್ಲಿ ಸಮಾಜದ ಸಾಮರಸ್ಯ ಕೆಡದಂತೆ ಕರ್ತವ್ಯ ನಿರ್ವಹಿಸಬೇಕಾಗಿರುವುದು ಜವಾಬ್ದಾರಿಯುತ ಸ್ಥಾನದಲ್ಲಿರುವ ಮಾಧ್ಯಮಗಳ ಹೊಣೆ. ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿ, ದಾಖಲಾತಿಗಳನ್ನು ಪರಿಶೀಲಿಸಿ, ಅಧಿಕಾರಿಗಳ ಹೇಳಿಕೆಗಳನ್ನು ತೆಗೆದುಕೊಂಡು ವಸ್ತುನಿಷ್ಠ ವರದಿಗಳನ್ನು ಪ್ರಕಟಿಸಬೇಕು.”
“ಈ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತುಕೊಂಡೇ ಸಿದ್ದರಾಮನಹುಂಡಿ ಘಟನೆ ವರದಿಯನ್ನು ‘ಆಂದೋಲನ’ ಪ್ರಕಟಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಅವರ ಹೇಳಿಕೆ ಹಾಗೂ ಘಟನಾವಳಿಯನ್ನು ಆಧರಿಸಿಯೇ ಈ ವರದಿ ಮಾಡಲಾಗಿದೆ.”
“ಆದರೆ, ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಈ ಸುದ್ದಿಯ ಜತೆ ಪ್ರಕಟವಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಹೇಳಿಕೆಯು ಅವರು ಕೊಟ್ಟಿರುವುದಿಲ್ಲ, ಅವರನ್ನು ಕೋಟ್ ಮಾಡಿ ‘ಆಂದೋಲನ’ ಸುಳ್ಳು ಸುದ್ದಿ ಮಾಡಿದೆ. ಇದನ್ನು ನೇರವಾಗಿ ಹೇಳುತ್ತಿದ್ದೇನೆ. ಐ ಡೋಂಟ್ ಕೇರ್ ಎಂದು ಪತ್ರಿಕೆಯ ಹೆಸರನ್ನು ಉಲ್ಲೇಖಿಸಿ ಆರೋಪ ಮಾಡಿದ್ದಾರೆ.”
“’ಆಂದೋಲನ’ ಮಾತ್ರವಲ್ಲ, ಬೇರೆ ಪತ್ರಿಕೆಗಳಲ್ಲೂ ಈ ವರದಿ ಪ್ರಕಟವಾಗಿದೆ. ಆದರೆ, ‘ಆಂದೋಲನ’ ದಿನಪತ್ರಿಕೆಯನ್ನು ಮಾತ್ರ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದರು ಗುರಿ ಮಾಡಿದ್ದಾರೆ. ಇದು ಸಂಸದರಿಗೆ ಶೋಭೆ ತರುವುದಿಲ್ಲ.”

ಪ್ರತಾಪ್ ಸಿಂಹ ಹೇಳಿದ್ದೇನು?
“ನಾನು ನಿಮಗೆ ಡೈರೆಕ್ಟ್ ಆಗಿ ಹೇಳ್ತಾ ಇದ್ದೇನೆ. ಮೊದಲು ಪೊಲೀಸ್ ಇಲಾಖೆಯವರನ್ನು ಕೇಳಿ, ಎಸ್ಪಿ ಅವರು ಮಾತನಾಡಿಯೇ ಇಲ್ಲ. ‘ಆಂದೋಲನ’ದಲ್ಲಿ ಬಂದಿರುವ ಸತ್ಯಕ್ಕೆ ದೂರವಾದ ಸುದ್ದಿಯನ್ನು ನೋಡಿ ಮಾತನಾಡಬೇಡಿ. ‘ಆಂದೋಲನ’ ಪತ್ರಿಕೆಯವರು ಆಗಾಗ ಪೊಲೀಸರನ್ನು ಕೋಟ್ ಮಾಡಿಕೊಂಡು ಈ ರೀತಿ ಸುಳ್ಳು ಸುದ್ದಿ ಬರೆಯುವುದನ್ನು ನಿಲ್ಲಿಸಬೇಕು. ನಾನು ಡೈರೆಕ್ಟ್ ಆಗಿ ಹೇಳ್ತಾ ಇದ್ದೇನೆ. ನಾನು ಬೆಳಿಗ್ಗೆ ಎಸ್ಪಿ ಬಳಿ ಯಾಕೆ ಈ ರೀತಿ ಸ್ಟೇಟ್‌ಮೆಂಟ್ ಕೊಟ್ಟಿದ್ದೀರಿ ಎಂದು ಮಾತಾಡ್ಡೆ. ನಾನು ಸ್ಟೇಟ್‌ಮೆಂಟ್ ಕೊಟ್ಟಿಲ್ಲ. ಹಿಂದೇನೂ ‘ಆಂದೋಲನ’ದಲ್ಲಿ ಒಂದು ವರದಿ ಇದೇ ರೀತಿ ಆಗಿದೆ ಎಂದು ತಿಳಿಸಿದ್ದಾರೆ. ಸೋ ಐ ಪರ್ಟಿಕ್ಯುಲರ್ಲಿ ನೇಮಿಂಗ್ ದಿ ನ್ಯೂಸ್ ಪೇಪರ್, ಅಂಡ್ ಐ ಡೋಂಟ್ ಕೇರ್” ಎಂದು ಸಂಸದ ಪ್ರತಾಪ ಸಿಂಹ ಪತ್ರಿಕೆಯನ್ನು ಟೀಕಿಸಿದ್ದರು.

ದಿವಂಗತ ರಾಜಶೇಖರ ಕೋಟಿಯವರು ಸ್ಥಾಪಿಸಿದ ಆಂದೋಲನ ದಿನಪತ್ರಿಕೆಗೆ ಐವತ್ತು ವರ್ಷಗಳ ಇತಿಹಾಸವಿದೆ. ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಜಿಲ್ಲೆಯಲ್ಲಿ ಪ್ರಸರಣವನ್ನು ಹೊಂದಿರುವ ‘ಆಂದೋಲನ’, ದಲಿತ, ಆದಿವಾಸಿ, ರೈತ, ಕೂಲಿಕಾರ್ಮಿಕ ಮತ್ತು ಭಾಷಾ ಚಳವಳಿಗಳಿಗೆ ಬೆನ್ನೆಲುಬಾಗಿ ನಿಂತ ಇತಿಹಾಸವನ್ನು ಹೊಂದಿದೆ. ಪ್ರಗತಿಪರ ವಿಚಾರಧಾರೆ ಹಾಗೂ ಸೌಹಾರ್ದ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಆಂದೋಲನ ಮಹತ್ತರವಾದ ಕೆಲಸಗಳನ್ನು ಮಾಡುತ್ತಾ ಬಂದಿದೆ.
ಇದನ್ನೂ ಓದಿರಿ: ಜೆಡಿಎಸ್ ಅಭ್ಯರ್ಥಿಗೆ ಆಮಿಷ: ನಾಮಪತ್ರ ಅನರ್ಹತೆ ಭೀತಿಯಲ್ಲಿ ವಿ.ಸೋಮಣ್ಣ!


