Homeಮುಖಪುಟಕನ್ನಡಿಗರು ಹೆಚ್ಚೆಚ್ಚು ಬ್ಯಾಂಕ್ ಉದ್ಯೋಗ ಪಡೆಯಲೆಂಬ ಕನಸೊತ್ತ ಪ್ರವೀಣ್

ಕನ್ನಡಿಗರು ಹೆಚ್ಚೆಚ್ಚು ಬ್ಯಾಂಕ್ ಉದ್ಯೋಗ ಪಡೆಯಲೆಂಬ ಕನಸೊತ್ತ ಪ್ರವೀಣ್

- Advertisement -
- Advertisement -

ಎಲೆಮರೆ-31

* ಅರುಣ್ ಜೋಳದಕೂಡ್ಲಿಗಿ.

ಒಮ್ಮೆ ರಹಮತ್ ತರೀಕೆರೆ ಸರ್ ಪ್ರೀತೀಶ ಎನ್ನುವವರು ಬರೆದ `ಸಂಕಲ್ಪ’ ಕಾದಂಬರಿ ಓದುವಂತೆ ಸಲಹೆ ನೀಡಿದರು. ಈ ಕಾದಂಬರಿಯನ್ನು ಓದಿದಾಗ ಹಿಂದು ಮುಸ್ಲಿಂ ಅಂತರ್ ಧರ್ಮಿಯ ಪ್ರೇಮಿಗಳ ಸಂಕಷ್ಟದ ಕಥನ ಡಿಸ್ಟರ್ಬ್ ಮಾಡುವಂತಿತ್ತು. ಈ ಪ್ರೀತೀಶ್ ಯಾರು ಎಂದು ಹುಡುಕಿದಾಗ ತಿಳಿದದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಹುಟ್ಟಿ ಬೆಳೆದ ಪ್ರವೀಣ ಎಂದು. ಆಗ ಪ್ರವೀಣ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಮೇನೇಜರ್ ಆಗಿ ಮಾಲ್ಡೀವ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಹೀಗೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಸ್ವಲ್ಪ ದಿನಕ್ಕೆ ಮಾಲ್ಡೀವ್ಸ್ ನಿಂದ ನೇರ ಚಳ್ಳಕೆರೆಗೆ ವರ್ಗವಾಗಿ ಬಂದರು. ಆ ನಂತರ ಚಳ್ಳಕೆರೆಯಲ್ಲಿ ನಾನು ಮತ್ತು ಗೆಳೆಯ ಶ್ರೀನಿವಾಸರಾಜು ದೊಡ್ಡೇರಿ ತೀರಾ ಖಾಸಾ ಗೆಳೆಯರಾಗಿ ಒಡನಾಡಿಗಳಾದೆವು.

ಪ್ರವೀಣ ನ್ಯಾಯಾಲಯದಲ್ಲಿ ಆರು ವರ್ಷ ಕೆಲಸಮಾಡಿ, ನಂತರ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ 2005 ರಿಂದ 2015 ರತನಕ ಹತ್ತು ವರ್ಷ ದುಡಿದರು. 2015 ರಲ್ಲಿ ಪ್ರವೀಣ ಅವರಿಗೆ ಚಳ್ಳಕೆರೆಯಿಂದ ಮುಂಬೈಗೆ ವರ್ಗವಾಯಿತು. ಆದರೆ ಅವರು ಮುಂಬೈ ಬದಲಿಗೆ ಬೆಳಗಾವಿಗೆ ವರ್ಗವಾಗಲು ಕೇಳಿಕೊಂಡರು. ಕೊನೆಗೆ ಮುಂಬೈನಿಂದ ಬೆಂಗಳೂರಿಗೆ ವರ್ಗಾವಣೆ ಬದಲಾಯಿತು. ಬ್ಯಾಂಕ್ ನೌಕರಿ ಬೇಸರ ತರಿಸದಿದ್ದರೂ, ಮೊದಲಿನಿಂದಲೂ ಸ್ವಂತದ್ದೇನಾದರೂ ಮಾಡಬೇಕು, ಅದರಲ್ಲೂ ಪಾಠ ಮಾಡಬೇಕೆಂಬ ಟೀಚಿಂಗ್ ಫ್ಯಾಕಲ್ಟಿಯ ಕನಸಿದ್ದ ಪ್ರವೀಣ ಬೆಳಗಾವಿಗೆ ವರ್ಗಾವಣೆ ಮಾಡದ್ದನ್ನು ಮುಂದೆ ಮಾಡಿ ರಾಜಿನಾಮೆ ನೀಡಿದರು. ಈ ದಿಡೀರ್ ನಿಲುವಿನಿಂದ ಸ್ನೇಹಿತರಾದ ನಮಗೆ ಸಹಜ ಆತಂಕವಾಗಿ ಬೇಡವೆಂದು ಸಲಹೆ ನೀಡಿದೆವು. ಆದರೆ ಪ್ರವೀಣ ಅವರ ದೃಢ ನಿಶ್ಚಯದ ಮುಂದೆ ನಾವು ಸೋತೆವು.

2015 ರಲ್ಲಿ ಬೆಳಗಾವಿಯಲ್ಲಿ ಕೆಲವು ಗೆಳೆಯರೊಡಗೂಡಿ ಬ್ಯಾಂಕ್ ಕೋಚಿಂಗಿಗಾಗಿಯೇ `ಡೆಸ್ಟಿನ್’ ಎನ್ನುವ ಸಂಸ್ಥೆ ತೆರೆದರು. ವಿಶೇಷವಾಗಿ ಕನ್ನಡಿಗರು ಹೆಚ್ಚೆಚ್ಚು ಬ್ಯಾಂಕ್ ಉದ್ಯೋಗಿಗಳಾಗಬೇಕು ಎನ್ನುವ ಕನಸು ಕಟ್ಟಿದರು. ಬ್ಯಾಂಕ್ ಪರೀಕ್ಷೆಯನ್ನೆ ಮುಖ್ಯವಾಗಿಸಿಕೊಂಡು ಸೆಪ್ಟಂಬರ್ 27, 2017 ರಿಂದ ’Praveen Banking Coach’ ಯೂಟ್ಯೂಬ್ ಚಾನಲ್ ತೆರೆದು ಉಚಿತವಾಗಿ ಕ್ಲಾಸ್ ಕೊಡುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳು ವ್ಯಾಪಾರದ ಸರಕಾಗಿರುವ ಈ ಸಂದರ್ಭದಲ್ಲಿ ಉಚಿತವಾಗಿ ಕನ್ನಡಿಗರಿಗೆ ಬ್ಯಾಂಕ್ ಪರೀಕ್ಷೆ ಸಿದ್ಧತೆಗೆ ಯೂಟ್ಯೂಬ್ ತರಗತಿ ನಡೆಸುತ್ತಿರುವುದು ನಿಜಕ್ಕೂ ಮಹತ್ವದ್ದು. ಇದೀಗ 6800 ಜನ ಯೂಟ್ಯೂಬ್ ಚಂದಾದಾರರಾಗಿದ್ದು, ಈತನಕ 121 ವೀಡಿಯೋಗಳನ್ನು ಯೂಟ್ಯೂಬ್‌ಗೆ ಅಪ್ಲೋಡ್ ಮಾಡಿದ್ದು, ಈತನ 135895 ರಷ್ಟು ವೀಕ್ಷಣೆಗಳಾಗಿವೆ. ಸಾವಿರಾರು ಕನ್ನಡದ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.

ಪ್ರವೀಣ ಮಾತನಾಡುತ್ತಾ ’ನಾನು ಬ್ಯಾಂಕ್‌ನಲ್ಲಿದ್ದಾಗ ಸರ್ಕಾರದ ಪ್ರಾಯೋಜಕತ್ವದಲ್ಲಿ ಉಚಿತ ಪರೀಕ್ಷಾ ತರಬೇತಿ ಕೇಂದ್ರದಲ್ಲಿ ಪಾಠ ಮಾಡುವ ಅವಕಾಶ ಸಿಕ್ಕಿತು. ಆ ಅನುಭವ ಬೋಧನೆಯನ್ನೆ ವೃತ್ತಿ ಮಾಡಿಕೊಳ್ಳುವ ಕನಸಿಗೆ ನೀರೆರೆಯಿತು. ಬ್ಯಾಂಕ್ ಮೇನೇಜರ್ ಹುದ್ದೆಯ ರಾಜಿನಾಮೆಗೆ ಇದೂ ಕಾರಣವಾಯಿತು. ಬ್ಯಾಂಕ್ ಉದ್ಯೋಗಗಳೆಂದರೆ ಉತ್ತರಭಾರತದವರ ಕಬ್ಜಾ ಎನ್ನುವಂತಾಗಿರುವಾಗ ಕನ್ನಡಿಗರು ಬ್ಯಾಂಕ್ ಉದ್ಯೋಗಗಳಲ್ಲಿ ಹೆಚ್ಚೆಚ್ಚು ಸೇರುವಂತಾಗಬೇಕೆಂಬ ಹಂಬಲದಲ್ಲಿ ಡೆಸ್ಟಿನ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದೆವು. ವಿಶೇಷವಾಗಿ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ದೂರದ ಊರುಗಳಿಂದ ನಗರಕ್ಕೆ ಬಂದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ಪಡೆಯಲಾಗುವುದಿಲ್ಲ. ಅಂತವರಿಗೆ ಮೊಬೈಲಿನಲ್ಲೆ ಯೂಟೂಬ್ ನೋಡಲು ಸಾಧ್ಯವಿರುವ ಕಾರಣ ಹೆಚ್ಚೆಚ್ಚು ಉಪಯೋಗವಾಗಲಿ ಎಂದು ತರಗತಿಯ ವೀಡಿಯೋಗಳನ್ನು ಯೂಟ್ಯೂಬ್‌ಗೆ ಅಪ್ಲೋಡ್ ಮಾಡುತ್ತಿದ್ದೇನೆ’ ಎನ್ನುತ್ತಾರೆ.

ಮುಂದುವರಿದು `ಬ್ಯಾಂಕಿಂಗ್ ಪರೀಕ್ಷೆಗಳು ಪಾರದರ್ಶಕವಾಗಿರುತ್ತವೆ. ಪ್ರಯತ್ನ ಪ್ರತಿಭೆ ಇದ್ದರೆ ಕೆಲಸ ಕಟ್ಟಿಟ್ಟ ಬುತ್ತಿ. ಇದಕ್ಕಾಗಿ ಯಾವುದೇ ವಶೀಲಿಬಾಜಿಯ ಅಗತ್ಯವಿಲ್ಲ. ಆಸಕ್ತ ಯುವಕ ಯುವತಿಯರು ಯೂಟೂಬ್ ನೋಡಿಯೆ ಪರೀಕ್ಷೆಯನ್ನು ಪಾಸು ಮಾಡಬಹುದು. ಇಲ್ಲಿ ಕೆಲವೊಂದು ಕಾನ್ಸೆಪ್ಟ್‌ಗಳನ್ನು ಅರ್ಥಮಾಡಿಕೊಂಡು ತರ್ಕಬದ್ಧವಾಗಿ ವಿಶ್ಲೇಷಣೆ ಮಾಡಬೇಕು. ಈ ಪರೀಕ್ಷೆಯಲ್ಲಿನ ಬಹುಪಾಲು ಪ್ರಶ್ನೆಗಳು ನಿತ್ಯ ಜೀವನದಲ್ಲಿ ಎದುರಾದ ಸಮಸ್ಯೆಗಳನ್ನೆ ಆಧರಿಸಿರುತ್ತವೆ. ಅವುಗಳನ್ನು ಅನ್ವಯಿಸಿಕೊಂಡು ಉತ್ತರಿಸುವ ಕೌಶಲ್ಯ ವೃದ್ಧಿಸಿಕೊಳ್ಳಬೇಕು. ಅಭ್ಯಾರ್ಥಿಯು ನಿತ್ಯವೂ ಒಂದು ಪ್ರಶ್ನೆಪತ್ರಿಕೆ ಬಿಡಿಸಿ, ಅದನ್ನು ವಿಶ್ಲೇಷಣೆ ಮಾಡಿ ಸ್ವಂತ ಸಾಮರ್ಥ್ಯ ಮತ್ತು ವೈಫಲ್ಯಗಳನ್ನು ಅರ್ಥಮಾಡಿಕೊಳ್ಳಬೇಕು. ಕೆಲವು ಗಣಿತ ಸೂತ್ರಗಳನ್ನು ಕರಗತ ಮಾಡಿಕೊಳ್ಳಬೇಕು. ಪರೀಕ್ಷಾ ದೃಷ್ಠಿಯಿಂದ ದಿನ ಪತ್ರಿಕೆ ಓದಬೇಕು. ದಿನವೂ ಕನಿಷ್ಠ ಹತ್ತು ಇಂಗ್ಲೀಷ್ ಪದಗಳನ್ನು ಕಲಿಯಬೇಕು ಹೀಗೆ ಕನಿಷ್ಠ ಒಂದು ವರ್ಷ ಸತತ ಅಭ್ಯಾಸ ಮಾಡಿದರೆ ನೌಕರಿ ಹುಡುಕಿಕೊಂಡು ಬರುತ್ತದೆ’ ಎನ್ನುವುದು ಪ್ರವೀಣ ಅವರ ದೃಢ ನಿಲುವು.

ಪ್ರವೀಣ ಕೇವಲ ಬ್ಯಾಂಕ್ ಪರೀಕ್ಷೆಗಳ ತರಬೇತುದಾರ ಮಾತ್ರವಲ್ಲ. ಆತನೊಬ್ಬ ಸೂಕ್ಷ್ಮ ಸಂವೇದನೆಯ ಕನ್ನಡದ ಕವಿ ಕತೆಗಾರ. ಮೊದಲೆ ಉಲ್ಲೇಖಿಸಿದಂತೆ 2012 ರಲ್ಲಿ ಪ್ರೀತೀಶ ಎನ್ನುವ ಹೆಸರಲ್ಲಿ `ಸಂಕಲ್ಪ’ ಎನ್ನುವ ಕಾದಂಬರಿ ಪ್ರಕಟಿಸಿದ್ದರು. ಅಂತರ್ ಧರ್ಮೀಯ ಪ್ರೇಮವಿವಾಹಕ್ಕೆ ಸಂಬಂಧಿಸಿದ ಈ ಕಾದಂಬರಿ ಅಷ್ಟು ಚರ್ಚೆಗೆ ಒಳಗಾಗಲಿಲ್ಲ. ನಮನ್ ಮತ್ತು ತಮನ್ನಾ ಪರಸ್ಪರ ಪ್ರೇಮಿಸಿ, ಲಗ್ನವಾಗಲು ನಿರ್ಧರಿಸಿದಾಗ ಪ್ರೇಮಿಗಳಿಗೆ ಸಹಜವಾಗಿ ಕುಟುಂಬದ ಹಿರಿಯರು ಅಡ್ಡಿ ಮಾಡುತ್ತಾರೆ. ಗೆಳೆಯರ ಬೆಂಬಲ ದೊರೆಯುತ್ತದೆ. ಅಂತರ್ ಧರ್ಮೀಯ ಮದುವೆಯೊಂದರ ಸಿನಿಮೀಯವಲ್ಲದ ನೈಜ ಸಂಕಷ್ಟಗಳನ್ನು ಸಮುದಾಯಗಳ ಮನಸ್ಥಿತಿಯನ್ನು ಹೊಸ ತಲೆಮಾರಿನ ಬಿಕ್ಕಟ್ಟನ್ನು ಈ ಕಾದಂಬರಿ ಅತ್ಯಂತ ಸೂಕ್ಷ್ಮವಾಗಿ ಕಟ್ಟಿಕೊಡುತ್ತದೆ.

ಪ್ರೊ.ರಹಮತ್ ತರೀಕೆರೆಯವರು ಈ ಕಾದಂಬರಿ ಕುರಿತಂತೆ `ಪ್ರಸ್ತುತ ಕಾದಂಬರಿಯ ಕಥಾನಾಯಕ ಹಾಗೂ ನಾಯಕಿಯರು ಪ್ರೇಮ ಮಾಡಿದ್ದಕ್ಕಾಗಿ ಕುಟುಂಬದವರಿಂದ ಬೇಟೆಯಾಡಲ್ಪಟ್ಟು ದಿಕ್ಕೆಟ್ಟು ಅಲೆಯುತ್ತಾರೆ. ಅವರ ಬಾಯಿಂದ ನಿಟ್ಟುಸಿರುಗಳಂತೆ ಹೊರಡುವ ಸರಳವಾದ ಅನುಭವದ ಮಾತುಗಳು ತಾತ್ವಿಕ ಗಹನತೆ ಪಡೆದಿವೆ. ಇವು ಸಮಾಜದಲ್ಲಿ ಸಹಜವಾಗಿ ನೆಲೆಸಿರುವ ಕ್ರೌರ್ಯ ಮತ್ತು ಅಸಂಗತತೆಯನ್ನು ಬಯಲುಗೊಳಿಸುತ್ತದೆ. ವಿಭಿನ್ನ ಧರ್ಮಕ್ಕೆ ಸೇರಿದ ಸಹಪಾಠಿಗಳು ಮತ್ತು ಗೆಳೆಯರು ಒಂದೆಡೆ ಕೂತು ಮಾತಾಡುವುದನ್ನೂ ಅಪರಾಧವೆಂದು ಭಾವಿಸಿ, ಬಡಿದುಹಾಕುತ್ತಿರುವ ಸನ್ನಿವೇಶ, ಕರಾವಳಿ ಕರ್ನಾಟಕದಲ್ಲಿ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಇಂತಹ ಕೃತಿಗಳಿಗೆ ಕೇವಲ ಕಲಾತ್ಮಕ ಮೌಲ್ಯವಲ್ಲ, ಸಾಂಸ್ಕೃತಿಕ ಮಹತ್ವವೂ ಇದೆ. ಈ ಕಾರಣದಿಂದ ಕೆಲವು ಹಿರಿಯ ಮತೀಯವಾದಿ ಲೇಖಕರು ಹೊಸೆಯುತ್ತಿರುವ ನಂಜಿನ ಕಥನಗಳಿಗೆ ಕೊಟ್ಟ ಉತ್ತರದಂತೆ ಈ ಕೃತಿ ತೋರುತ್ತದೆ. ಇಲ್ಲಿನ ಕಥನವು ಜೀವನಪ್ರೀತಿಯಿಂದ ಪ್ರಾಮಾಣಿಕ ಅನುಭವದಿಂದ ಹಾಗೂ ಲವಲವಿಕೆಯ ನಿರೂಪಣೆಯಿಂದ ಸೆಳೆಯುತ್ತದೆ. ಜನ ತಮ್ಮ ಜಾತಿಧರ್ಮಗಳ ಚೌಕಟ್ಟುಗಳನ್ನು ಮೀರಿ ಬದುಕುವ ಪರಿಯನ್ನು ಉರ್ದುವಿನ ಮಂಟೂ ಮತ್ತು ಅಮೃತಾಪ್ರೀತಂ ಬರೆಹಗಳು ಶೋಧಿಸಿವೆ. ಅವುಗಳಂತೆ ಈ ಕಾದಂಬರಿ ಕೂಡ ಕೇವಲ ಮನುಷ್ಯರಾಗಿ ಬದುಕಿದ ಜನರ ಕತೆಯನ್ನು ಕಟ್ಟಿ ತೋರಿಸುತ್ತದೆ’ ಎಂದು ಅಭಿಪ್ರಾಯ ಪಡುತ್ತಾರೆ.

ಪ್ರವೀಣ ಅವರ ಕಥಾ ಸಂಕಲನ `ವ್ಯೂಹಗನ್ನಡಿ’ 2017 ರಲ್ಲಿ ಪ್ರಕಟವಾಗಿದೆ. ಹತ್ತು ಕಥೆಗಳ ಈ ಸಂಕಲನ ಬದುಕಿನ ತಲ್ಲಣಗಳ ಶೋಧದಂತಿದೆ. ಕೆ.ವಿ ತಿರುಮಲೇಶ್ ಅವರು `ಇವು ಸೋತವರ ಕಥೆಗಳು, ನಿಜಕ್ಕೂ ಯಾಕೆ ಸೋತವರ ಬಗ್ಗೆ ಬರೆಯಬೇಕೆಂದರೆ, ಅವರಾರು ಬೇಕೆಂದೆ ಸೋತಿರುವುದಿಲ್ಲ, ಸೋಲು ಅವರ ಪರಿಸ್ಥಿತಿಯಾಗಿರುತ್ತದೆ. ಸೋತವರಲ್ಲಿ ದುಗುಡ, ಖಿನ್ನತೆ, ಕ್ರೋಧ, ಮೌನ, ಪ್ರತಿಭಟನೆ ಎಲ್ಲವೂ ಇರುತ್ತದೆ. ಇಂತಹ ಪಾತ್ರಗಳನ್ನು ವ್ಯೂಹಗನ್ನಡಿಯಲ್ಲಿ ಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ’ಎನ್ನುತ್ತಾರೆ. ಇಲ್ಲಿನ ಕಾಡುವ ಕತೆಗಳನ್ನು ಹೊಸ ತಲೆಮಾರಿನ ಕತೆಗಾರರು ಓದಬೇಕು.

`ಬಾನ ಸಮುದ್ರಕೆ ಗಾಳನೋಟ’ ಎನ್ನುವ ಕವಿತಾ ಸಂಕಲನವನ್ನು ಪ್ರವೀಣ ಈಚೆಗೆ ಪ್ರಕಟಿಸಿದ್ದಾರೆ. ನಾನು ಈಚೆಗೆ ಓದಿದ ಕವಿತಾ ಸಂಕಲನಗಳಲ್ಲಿ ಮನಸ್ಸೊಳಗೆ ಇಳಿದು ಕಲಕಿದ ಕವಿತೆಗಳ ಸಂಕಲನವಿದು. ಕವಿತೆ ಬರೆಯುವ ಕೌಶಲ ಸಿದ್ಧಿಸಿದರೆ ಸಾಕು ತರಾವರಿ ಪದ್ಯಗಳ ಹೊಸೆದು ಗುಡ್ಡೆಹಾಕಿ ದೊಡ್ಡ ದೊಡ್ಡ ಪ್ಲೆಕ್ಸ್ ಗಳಲ್ಲಿ ಕವಿತೆಗಿಂತ ತಮ್ಮದೇ ಫೋಟೋಗಳ ಮೆರವಣಿಗೆ ಮಾಡಿಕೊಳ್ಳುವ ಹೊಸ ತಲೆಮಾರಿನ ಕೆಲವು ಕವಯಿತ್ರಿ/ಕವಿಗಳ ಮಧ್ಯೆ ಕವಿ ಪ್ರವೀಣ ಮತ್ತು ಆತನ ‘ಬಾನ ಸಮುದ್ರಕೆ ಗಾಳನೋಟ’ ಸಂಕಲನ ಭಿನ್ನವಾಗಿ ನಿಲ್ಲುತ್ತವೆ.
ಸೂಕ್ಷ್ಮ ಕವಿಯೊಬ್ಬ ತನ್ನೆದುರಿನ ಮನುಷ್ಯತ್ವವಿಲ್ಲದ ಅಮಾನುಷ ನಡೆಗಳ ನೋಡುತ್ತಲೇ ಒಳಗೊಳಗೆ ಕುದ್ದು ಬೇಯುತ್ತಾ ಆವಿಯಾಗುತ್ತಾನೆ. ಆ ಆವಿಯೆ ಸುರುಳಿ ಸುತ್ತಿಕೊಂಡು ಅಕ್ಷರವಾಗಿ ಒಂದು ಆಕಾರ ಪಡೆಯುತ್ತದೆ. ಆ ಆಕಾರಗಳೆ ಕವಿತೆಗಳಾಗಿವೆ. ಈ ಕಾಲದಲ್ಲಿ ನಾನು ಬದುಕಿದ್ದೆ ಎನ್ನುವ ಸಾಕ್ಷಿಗಾಗಿ ನನ್ನ ದನಿಯನ್ನು ದಾಖಲಿಸುವ ಜರೂರಿಗಾಗಿ ಈ ಸಂಕಲನ ಪ್ರಕಟಿಸುತ್ತಿರುವೆ ಎನ್ನುವ ಕವಿಯ ಮಾತು ಇಡೀ ಕವಿತೆಗಳ ಒಳ ಧ್ವನಿಯಾಗಿದೆ. ಕವಿತೆಗಳ ಓದುತ್ತಾ ಹೋದಂತೆ ಅಬ್ಬರವಿಲ್ಲದ ಮೆಲುದನಿಯಲ್ಲೇ ಒಡಲುರಿಯ ಝಳ ನಮ್ಮನ್ನು ತಾಕುತ್ತದೆ. ಈ ಕವಿತಾ ಸಂಕಲನಕ್ಕೆ ಮುನ್ನುಡಿ ಬರೆವ ಹೆಚ್.ಎಸ್.ರಾಘವೇಂದ್ರರಾವ್ ಅವರು `ಹೊರಗೆ ತಣ್ಣಗೆ ಕಾಣಿಸುವ, ಒಳಗೆ ತಳಮಳಿಸುವ ಅಗ್ನಿಪರ್ವತದಲ್ಲಿ ಇಣುಕಿ ನೋಡಿದಂತಾಯಿತು’ ಎಂದು ಬರೆಯುತ್ತಾರೆ. 2019 ರ ಪ್ರಜಾವಾಣಿ ದೀಪಾವಳಿ ಸ್ಪರ್ಧೆಯಲ್ಲಿ ಪ್ರವೀಣ ಅವರ `ಲಕ್ಷಾಂತರ ಬತ್ತಿ’ ಕವಿತೆಗೆ ಮೊದಲ ಬಹುಮಾನ ಬಂದಿತ್ತು. ತೀರಾ ಈಚೆಗೆ ಕೊರೋನ ಲಾಕ್ ಡೌನ್ ಆರಂಭಕ್ಕೆ ಫೇಸ್ ಬುಕ್ ಲೈವ್ ಕವಿಗೋಷ್ಠಿಯನ್ನು ಭಿನ್ನವಾಗಿ ಸಂಯೋಜಿಸಿ ಗಮನಸೆಳೆದಿದ್ದರು.

ಪ್ರವೀಣ ಸ್ಪರ್ಧಾತ್ಮಕ ಪರೀಕ್ಷೆಗಳಿಗಳ ಸಿದ್ಧತೆಗಾಗಿ `ಓದು ಕಲಿಕೆ, ಜ್ಞಾಪಕ ಶಕ್ತಿಯ ತಂತ್ರಗಳು’ ಎನ್ನುವ ಪುಸ್ತಕವನ್ನೂ ಬರೆದಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ಇಚ್ಚಿಸಿದ ಕಾಲೇಜುಗಳಲ್ಲಿ `ಮೋಟಿವೇಷನ್’ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಪ್ರವೀಣ ಮತ್ತವರ ಗೆಳೆಯರ ಬಳಗ ಹುಟ್ಟುಹಾಕಿದ `ದೋಸ್ತಿ ಖಾತೆ’ ಮೂಲಕ 2016 ರಲ್ಲಿ ಬೆಳಗಾವಿಯಲ್ಲಿ ಸಮಕಾಲೀನ ಕಥಾವಾಚನವನ್ನು ಆಯೋಜಿಸಿದ್ದರು. ಬೆಳಗಾವಿ ಸೀಮೆಯ ಕನ್ನಡವನ್ನು ಮಿರ್ಜಿ ಅಣ್ಣಾರಾಯ, ಸುನಂದಾ ಬೆಳಗಾಂವಕರ್, ರಂಶಾ ಲೋಕಾಪುರ, ರಾಘವೇಂದ್ರ ಪಾಟೀಲ, ಡಿ.ಎಸ್.ಚೌಗಲೆ, ಪಿ.ಮಂಜುನಾಥ ಮುಂತಾದವರು ಬಳಸಿದಂತೆ ಪ್ರವೀಣ ಕೂಡ ತಮ್ಮ ಕತೆ-ಕಾದಂಬರಿಗಳಲ್ಲಿ ಬೆಳಗಾವಿ ನುಡಿಗಟ್ಟನ್ನು ಹಿಡಿದಿದ್ದಾರೆ. ಬ್ಯಾಂಕ್ ಮೇನೇಜರ್ ಹುದ್ದೆಯ ಸುಖದ ಬದುಕಿನಿಂದ ಕೆಳಗಿಳಿದು ಇದೀಗ ತುಸು ಕಷ್ಟದಲ್ಲಿ ಬದುಕನ್ನು ನಡೆಸುತ್ತಿದ್ದಾರೆ. ಸಂಕಲ್ಪ ಕಾದಂಬರಿಯ ನಾಯಕ ಸ್ವತಃ `ಪ್ರವೀಣ್’ ಅಂತರ್ ಧರ್ಮೀಯ ವಿವಾಹದ ಸಂಕಷ್ಟವನ್ನು ಸ್ವತಃ ಎದುರಿಸಿ ಗೆದ್ದಿದ್ದಾರೆ. ಪ್ರವೀಣನ ಈ ಎಲ್ಲಾ ಪ್ರಯೋಗದ ಹಿಂದೆ ಒಲವಿನ ಸಂಗಾತಿ ಶಾಬಾನ ಅವರ ಸಹನೆ ಮತ್ತು ಪ್ರೇರಣೆಯಿದೆ. ಮಗ ಸಲೀಲನ ಜತೆ ಇದೀಗ ಬೆಳಗಾವಿಯಲ್ಲಿ ನೆಲೆಸಿದ ಪ್ರವೀಣನ ಕನಸುಗಳು ಈಡೇರಲಿ.

ಆಸಕ್ತರು ಯೂಟ್ಯೂಬ್‌ನಲ್ಲಿ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ. 


ಇದನ್ನೂ ಓದಿ: ನೂರಾರು ವಿದ್ಯಾರ್ಥಿಗಳಿಗೆ ದಾರಿದೀಪವಾದ ಹಾಸ್ಟೆಲ್ ವಾರ್ಡನ್ ಬಿ.ಹೆಚ್.ಚಂದ್ರಪ್ಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...