ಪ್ರಯಾಗ್‌ರಾಜ್: ಆಜಾದ್ ಸಮಾಜ್ ಪಕ್ಷದ ಮುಖ್ಯಸ್ಥ ಹಾಗೂ ಸಂಸದ ಚಂದ್ರಶೇಖರ್ ಆಜಾದ್ ಇಸೋಟಾ ಗ್ರಾಮಕ್ಕೆ ಭೇಟಿ ನೀಡದಂತೆ ಪೊಲೀಸರು ತಡೆದಿದ್ದೇ ಪ್ರಯಾಗ್‌ರಾಜ್‌ನಲ್ಲಿ ಭಾರಿ ಘರ್ಷಣೆಗಳು ಭುಗಿಲೇಳಲು ಕಾರಣವಾಯಿತು. ಈ ಘಟನೆಗಳ ವೇಳೆ ನಡೆದ ವಿಧ್ವಂಸಕ ಕೃತ್ಯಗಳ ಆರೋಪದಡಿ ಉತ್ತರ ಪ್ರದೇಶ ಪೊಲೀಸರು 67 ಜನರನ್ನು ಬಂಧಿಸಿದ್ದು, ಎಂಟು ಅಪ್ರಾಪ್ತ ವಯಸ್ಕರನ್ನು ವಶಕ್ಕೆ ಪಡೆದಿದ್ದಾರೆ.
ಕರ್ಛನಾ ಪ್ರದೇಶದ ಇಸೋಟಾ ಗ್ರಾಮದಲ್ಲಿ ಸುಟ್ಟು ಕರಕಲಾದ ದಲಿತ ವ್ಯಕ್ತಿ ದೇವಿ ಶಂಕರ್ ಅವರ ಕುಟುಂಬವನ್ನು ಭೇಟಿಯಾಗಲು ಸಂಸದ ಚಂದ್ರಶೇಖರ್ ಆಜಾದ್‌ಗೆ ಪೊಲೀಸರು ನಿರ್ಬಂಧ ವಿಧಿಸಿದ್ದರು. ನೆರೆಯ ಕೌಶಂಬಿ ಜಿಲ್ಲೆಯ ಅತ್ಯಾಚಾರ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗುವುದಕ್ಕೂ ತಡೆ ಒಡ್ಡಿದ ಜಿಲ್ಲಾಡಳಿತ, ಕಾನೂನು ಸುವ್ಯವಸ್ಥೆ ಕಾರಣ ನೀಡಿತ್ತು. ಈ ನಿರಾಕರಣೆಯ ಬೆನ್ನಲ್ಲೇ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು.
ಆಜಾದ್ ಭೇಟಿ ರದ್ದಾದ ಸುದ್ದಿ ತಿಳಿಯುತ್ತಿದ್ದಂತೆ ಕೆರಳಿದ ಸಂಸದರ ಬೆಂಬಲಿಗರು, ಸುಮಾರು ಎರಡು ಗಂಟೆಗಳ ಕಾಲ ಉದ್ರಿಕ್ತರಾಗಿ ವರ್ತಿಸಿದ್ದಾರೆ. ಅವರು ವಿಧ್ವಂಸಕ ಕೃತ್ಯ, ಬೆಂಕಿ ಹಚ್ಚುವಿಕೆ, ಡಜನ್‌ಗೂ ಹೆಚ್ಚು ವಾಹನಗಳಿಗೆ ಹಾನಿ ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೆ, ಗುಂಪು ಕಲ್ಲು ತೂರಾಟದಿಂದ ಎರಡು ಪೊಲೀಸ್ ವಾಹನಗಳನ್ನು ಜಖಂ ಮಾಡಿದೆ ಎಂದು ಪೊಲೀಸರು ವರದಿ ಮಾಡಿದ್ದಾರೆ.
ಘಟನೆ ಬೆನ್ನಲ್ಲೇ 53 ಹೆಸರಿಸಿದ ಹಾಗೂ 500ಕ್ಕೂ ಹೆಚ್ಚು ಅಜ್ಞಾತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ, ಗಲಭೆಕೋರರ ಬಂಧನಕ್ಕೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಹಿಂಸಾಚಾರ ಪೀಡಿತ ಪ್ರದೇಶಗಳಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳು ಬೀಡುಬಿಟ್ಟಿದ್ದು, ಪರಿಸ್ಥಿತಿ ತಿಳಿಗೊಳಿಸಲು ಶ್ರಮಿಸುತ್ತಿದ್ದಾರೆ. ಉಪ ಪೊಲೀಸ್ ಆಯುಕ್ತ (ಯಮುನಾಪರ್) ವಿವೇಕ್ ಚಂದ್ರ ಯಾದವ್, ಘಟನೆಯಲ್ಲಿ ಭಾಗಿಯಾದವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಮತ್ತು ಗ್ಯಾಂಗ್‌ಸ್ಟರ್ ಕಾಯ್ದೆ ಅಡಿ ಕಠಿಣ ಕ್ರಮ ನಿಶ್ಚಿತ ಎಂದಿದ್ದಾರೆ. ಸಾರ್ವಜನಿಕ ಆಸ್ತಿಗೆ ಆದ ನಷ್ಟದ ಪರಿಹಾರವನ್ನು ಆರೋಪಿಗಳಿಂದಲೇ ವಸೂಲಿ ಮಾಡಲಾಗುವುದು. ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಮೂಲಕ ಇತರರ ಗುರುತಿಸುವಿಕೆ ಕಾರ್ಯ ಭರದಿಂದ ಸಾಗಿದೆ.
ಇದೇ ವೇಳೆ, ಕರ್ಛನಾದ ಗಲಭೆಗಳಲ್ಲಿ ತಮ್ಮ ಕಾರ್ಯಕರ್ತರ ಪಾತ್ರವಿಲ್ಲ ಎಂದು ಚಂದ್ರಶೇಖರ್ ಆಜಾದ್ ಸ್ಪಷ್ಟಪಡಿಸಿದ್ದಾರೆ. ಆಜಾದ್ ಸಮಾಜ್ ಪಕ್ಷದ ರಾಜ್ಯಾಧ್ಯಕ್ಷ ಸುನಿಲ್ ಕುಮಾರ್ ಚಿತ್ತೋಡ್ ಸಹ ಈ ಆರೋಪಗಳನ್ನು ಬಲವಾಗಿ ನಿರಾಕರಿಸಿದ್ದು, ಹಿಂಸಾಚಾರದಲ್ಲಿ ಭಾಗಿಯಾದವರಿಗೆ ಪಕ್ಷದ ಸಂಬಂಧವಿಲ್ಲ ಎಂದಿದ್ದಾರೆ. “ಇದು ನಮ್ಮ ಚಳುವಳಿಯನ್ನು ದೂಷಿಸಲು ಮಾಡಿದ ಯೋಜಿತ ಪಿತೂರಿ” ಎಂದು ಪಕ್ಷವು ಬಲವಾಗಿ ಪ್ರತಿಪಾದಿಸಿದೆ.
‘ಕೊನೆ ಉಸಿರಿನವರೆಗೂ ಹೋರಾಡುತ್ತೇನೆ’: ಸುಪ್ರೀಂ ಮೊರೆ ಹೋಗಲು ಮುಂದಾದ ನಜೀಬ್ ತಾಯಿ


