ದೇಶದಲ್ಲಿ ಕೊರೊನಾ ಪ್ರಕರಣಗಳು ಮತ್ತು ಓಮಿಕ್ರಾನ್ ರೂಪಾಂತಕ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿಯ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟ ಹಿರಿಯರಿಗೂ ಇಂದಿನಿಂದ (ಜ.10) ಮೂರನೇ ಲಸಿಕೆ ಅಥವಾ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಘೋಷಿಸಿದ್ದರು.
ಇಂದಿನಿಂದ ಆರಂಭವಾಗುತ್ತಿರುವ ಲಸಿಕಾ ಅಭಿಯಾನದಲ್ಲಿ ಸುಮಾರು 5.75 ಕೋಟಿ ಜನರು ಮೂರನೇ ಡೋಸ್ ತೆಗೆದುಕೊಳ್ಳಲು ಅರ್ಹರಾಗಿದ್ದಾರೆ. ಇದರಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ 2.75 ಕೋಟಿ, 1 ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು 2 ಕೋಟಿ ಮುಂಚೂಣಿ ಕಾರ್ಯಕರ್ತರು ಸೇರಿದ್ದಾರೆ.
ಮುನ್ನೆಚ್ಚರಿಕೆಯ ಲಸಿಕೆ ಡೋಸ್‌ಗಳಿಗೆ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಅರ್ಹರು ನೇರವಾಗಿ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಬಹುದು ಅಥವಾ ಯಾವುದೇ ಲಸಿಕೆ ಕೇಂದ್ರಕ್ಕೆ ತೆರಳಬಹುದು. ಇನ್ನು ಎಲ್ಲಾ ವಯಸ್ಕರಿಗೆ ಬೂಸ್ಟರ್ ಡೋಸ್‌ಗಳನ್ನು ನೀಡುವ ಕುರಿತು ಇನ್ನೂ ಯಾವುದೇ ನಿರ್ಧಾರವಾಗಿಲ್ಲ.
ಇದನ್ನೂ ಓದಿ: ಉತ್ತರಾಖಂಡ ಕೊರೊನಾ ಆತಂಕ: ಜ.16 ರ ವರೆಗೆ ರಾಜಕೀಯ ರ್‍ಯಾಲಿ, ಶಾಲೆಗಳು ಬಂದ್
ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಇತರ ದೀರ್ಘಕಾಲದ ಕಾಯಿಲೆಗಳನ್ನು ಹೊಂದಿರುವ 60 ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮ ವೈದ್ಯರ ಸಲಹೆಯ ಮೇರೆಗೆ “ಮುನ್ನೆಚ್ಚರಿಕೆ ಡೋಸ್” ಅನ್ನು ಪಡೆಯುವ ಆಯ್ಕೆಯನ್ನು ಹೊಂದಿರುತ್ತಾರೆ.
ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದ 9 ತಿಂಗಳ ನಂತರ ಮಾತ್ರ ಬೂಸ್ಟರ್ ಶಾಟ್‌ಗಳನ್ನು ಪಡೆಯಬಹುದು. ಮೊದಲು ತಾವು ಯಾವ ಎರಡು ಡೋಸ್ ಲಸಿಕೆ ಪಡೆದಿರುತ್ತಾರೋ ಅದೇ ಲಸಿಕೆಯನ್ನೆ ಮೂರನೇ ಡೋಸ್ ಆಗಿ ನೀಡಲಾಗುತ್ತದೆ. ಕೋವಿಶೀಲ್ಡ್ ಪಡೆದವರಿಗೆ ಕೋವಿಶೀಲ್ಡ್. ಕೋವಾಕ್ಸಿನ್ ಪಡೆದವರಿಗೆ ಕೋವಾಕ್ಸಿನ್ ಲಸಿಕೆ ನೀಡಲಾಗುತ್ತದೆ.
“ದೇಶವನ್ನು ಸುರಕ್ಷಿತವಾಗಿಡುವಲ್ಲಿ ಕೊರೊನಾ ವಾರಿಯರ್ಸ್, ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿಯ ಕಾರ್ಯಕರ್ತರು ಭಾರಿ ಕೊಡುಗೆ ನೀಡಿದ್ದಾರೆ. ಆದ್ದರಿಂದ, ಮುನ್ನೆಚ್ಚರಿಕೆಯ ದೃಷ್ಟಿಯಿಂದ, ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರಿಗೆ ಮುನ್ನೆಚ್ಚರಿಕೆ ಡೋಸ್ ಅನ್ನು ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ” ಎಂದು ಪ್ರಧಾನಿ ಮೋದಿ ಡಿಸೆಂಬರ್ 25 ರಂದು ಹೇಳಿದ್ದರು.
ಆದರೆ ಈಗಾಗಲೇ, ಓಮಿಕ್ರಾನ್ ಮತ್ತು ಕೋವಿಡ್ ದೇಶದಲ್ಲಿ ಉಲ್ಬಣಗೊಂಡಿದ್ದು, ಅನೇಕ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಸೋಂಕಿಗೆ ತುತ್ತಾಗಿದ್ದಾರೆ. ಅವರಲ್ಲಿ ಹಲವರು ಎರಡನೇ ಬಾರಿಗೆ ಕೊರೊನಾಗೆ ತುತ್ತಾಗಿದ್ದಾರೆ.


