ಕೇಂದ್ರದ ಮಾಜಿ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರನ್ನು ಮಣಿಪುರಕ್ಕೆ ಮತ್ತು ನಿವೃತ್ತ ಸೇನಾ ಮುಖ್ಯಸ್ಥ ಹಾಗೂ ಕೇಂದ್ರದ ಮಾಜಿ ಸಚಿವ ವಿ.ಕೆ ಸಿಂಗ್ ಅವರನ್ನು ಮಿಝೋರಾಂ ರಾಜ್ಯಪಾಲರನ್ನಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ (ಡಿ.24) ನೇಮಿಸಿದ್ದಾರೆ.
ಮಿಝೋರಾಂ ರಾಜ್ಯಪಾಲರಾಗಿದ್ದ ಡಾ.ಹರಿ ಬಾಬು ಕಂಬಂಪತಿ ಅವರನ್ನು ಒಡಿಶಾಕ್ಕೆ, ಬಿಹಾರದ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಕೇರಳಕ್ಕೆ, ಕೇರಳದ ರಾಜ್ಯಪಾಲರಾಗಿದ್ದ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಬಿಹಾರದ ರಾಜ್ಯಪಾಲರಾಗಿ ವರ್ಗಾವಣೆ ಮಾಡಿದ್ದಾರೆ.
ಒಡಿಶಾ ರಾಜ್ಯಪಾಲ ರಘುಬರ್ ದಾಸ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ಅಂಗೀಕರಿಸಿದ್ದು, ಅವರ ಸ್ಥಾನಕ್ಕೆ ಮಿಝೋರಾಂ ರಾಜ್ಯಪಾಲರಾಗಿದ್ದ ಡಾ ಹರಿ ಬಾಬು ಕಂಬಂಪತಿ ಅವರನ್ನು ನೇಮಕ ಮಾಡಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ಹಿಂಸಾಚಾರ ಪೀಡಿತವಾಗಿರುವ ಮಣಿಪುರದ ರಾಜ್ಯಪಾಲೆ ಅನುಸೂಯ ಉಯಿಕೆ ಅವರನ್ನು ಬದಲಾಯಿಸಿ, ಆ ಸ್ಥಾನಕ್ಕೆ ಅಜಯ್ ಕುಮಾರ್ ಭಲ್ಲಾ ಅವರನ್ನು ನೇಮಿಸಿದ್ದಾರೆ.
ಕೇರಳದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರದ ನಡುವೆ ನಿರಂತರ ಸಂಘರ್ಷ ನಡೆಯುತ್ತಿತ್ತು. ಸತತ ಎರಡನೇ ವರ್ಷವೂ ರಾಜ್ಯಪಾಲರು ಏರ್ಪಡಿಸಿದ್ದ ಕ್ರಿಸ್‌ಮಸ್ ಸಮಾರಂಭಕ್ಕೆ ಸಿಎಂ ಗೈರಾಗಿದ್ದರು. ಈ ಬೆನ್ನಿಗೆ ರಾಜ್ಯಪಾಲರ ವರ್ಗಾವಣೆಯಾಗಿದೆ. ಇದರಿಂದ ರಾಜಭವನ ಮತ್ತು ಸಿಎಂ ಕಚೇರಿ ನಡುವಿನ ಕಿತ್ತಾಟಕ್ಕೆ ಬ್ರೇಕ್ ಬಿದ್ದಂತಾಗಿದೆ. ಹೊಸ ರಾಜ್ಯಪಾಲರು ಯಾವ ರೀತಿ ಸರ್ಕಾರದೊಂದಿಗೆ ಸಮನ್ವಯ ಸಾಧಿಸಲಿದ್ದಾರೆ ಎಂಬುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ : ಚಳಿಗಾಲದ ಅಧಿವೇಶನ ರದ್ದುಗೊಳಿಸಿದ ಮಣಿಪುರ ಸರ್ಕಾರ; ‘ಸಂವಿಧಾನ ನಿಯಮ ಉಲ್ಲಂಘಿಸಿಲ್ಲ’ ಎಂದ ಕಾನೂನು ಸಚಿವ


